ಮಸೀದಿಗೆ ಜಾಗ ದಾನ ನೀಡಿದ ಸಿಖ್ ವ್ಯಕ್ತಿ: ಮಸೀದಿಯಲ್ಲಿ ಕಾರ್ಯಕ್ರಮ ಆಯೋಜಿಸಿದ ಗುರುದ್ವಾರ

ಕೋಮು‌‌ ಸಂಘರ್ಷಗಳು, ಪ್ರಚೋದನೆಗಳು ಮತ್ತು ವಿಭಿನ್ನ ಕೋಮಿನ ಜನರ ಮೇಲೆ ವಿನಾಕಾರಣ ಹಲ್ಲೆ, ಕೊಲೆ ನಡೆಯುವ ವಿದ್ಯಮಾನಗಳ ನಡುವೆ ಪಂಜಾಬಿನ‌ ಎರಡು ಜಿಲ್ಲೆಗಳು ಕೋಮುಸಾಮರಸ್ಯವನ್ನು ಉತ್ತೇಜಿಸುವಂತಹ ಘಟನೆಗೆ ಸಾಕ್ಷಿಯಾಗಿವೆ. ಸ್ವಾಭಿಮಾನಕ್ಕೆ, ಕೆಚ್ಚೆದೆಗೆ ಹಠಕ್ಕೆ ಉದಾಹರಣೆಯಾಗಿ ನಿಲ್ಲುವ ಪಂಜಾಬಿಗರು, ಪರಸ್ಪರ ಅಪನಂಬಿಕೆಯ ಮಧ್ಯೆ ಬದುಕುತ್ತಿರುವ ಇಡೀ ಭಾರತಕ್ಕೆ ಸಾಮರಸ್ಯದ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ.

ಐತಿಹಾಸಿಕ ಪಟ್ಟಣವಾದ ಮಲೆರ್ಕೊಟ್ಲಾವನ್ನು ಇತ್ತೀಚೆಗೆ ಪಂಜಾಬ್‌ನ 23 ನೇ ಜಿಲ್ಲೆಯಾಗಿ ರೂಪಿಸಲಾಗಿದೆ. ಹೊಸದಾಗಿ ರೂಪುಗೊಂಡ ಈ ಮಲೆರ್ಕೊಟ್ಲಾ ಜಿಲ್ಲೆಯಲ್ಲಿ, ಸಿಖ್ ವ್ಯಕ್ತಿಯೊಬ್ಬರು ಮಸೀದಿ ನಿರ್ಮಿಸಲು ಏಳು ಮುಸ್ಲಿಂ ಕುಟುಂಬಗಳಿಗೆ ತಮ್ಮ ಪೂರ್ವಜರ ಭೂಮಿಯನ್ನು ದಾನ ಮಾಡಿದ್ದಾರೆ. ಮೊಗಾ ಜಿಲ್ಲೆಯಲ್ಲಿ ಸಿಖ್ಖರು ಸ್ಥಳೀಯ ಗುರುದ್ವಾರದ ಬಾಗಿಲು ತೆರೆದು ಮುಸ್ಲಿಮರಿಗೆ ಹತ್ತಿರದ ಮಸೀದಿಯ ಅಡಿಪಾಯ ಹಾಕುವ ಸಮಾರಂಭವನ್ನು ಆಯೋಜಿಸಲು ಸಹಾಯ ಮಾಡಿದ್ದಾರೆ.

ಮೊಗಾ ಜಿಲ್ಲೆಯ ಭಲೂರು ಗ್ರಾಮದ ಸರ್ಪಂಚ್ ಪಲಾ ಸಿಂಗ್ ಅವರು ‘ದಿ ವೈರ್’ ಜೊತೆ ಮಾತನಾಡುತ್ತಾ, ಜೂನ್ 13 ರಂದು ಈ ಗ್ರಾಮದ ಮುಸ್ಲಿಮರು ಶತಮಾನಗಳಷ್ಟು ಹಳೆಯದಾದ, ಶಿಥಿಲಗೊಂಡ ಮಸೀದಿಯನ್ನು ಪುನರ್ನಿರ್ಮಿಸಲು ಅಡಿಪಾಯ ಹಾಕಲು ಪ್ರಾರಂಭಿಸಿದಾಗ ಮಳೆ ಸುರಿಯಲು ಪ್ರಾರಂಭಿಸಿತು. ಮಸೀದಿಯ ಆವರಣವು ಸುಮಾರು 1.5 ಎಕರೆ ಪ್ರದೇಶದಲ್ಲಿದ್ದು ಅಲ್ಲಿನ ಸಿಖ್ಖರು ಸಮಾರಂಭವನ್ನು ಆಯೋಜಿಸಲು ನೆರವಾಗಿದ್ದಾರೆ ಎಂದಿದ್ದಾರೆ.

ಸರ್ಪಂಚ್ ಪಲಾ ಸಿಂಗ್

“ಮಳೆ ಬರಲು ಪ್ರಾರಂಭಿಸುತ್ತಿದ್ದಂತೆ ಗ್ರಾಮದ ಮುಸ್ಲಿಮರು ಗುರುದ್ವಾರ ಶ್ರೀ ಸತ್ಸಂಗ್ ಸಾಹಿಬ್ ಅವರನ್ನು ಸಂಪರ್ಕಿಸಿದರು. ಅಲ್ಲಿ ಅವರು ಕಲ್ಲು ಹಾಕುವ ಸಮಾರಂಭವನ್ನು ನಡೆಸಿದರು. ಕೆಲವೇ ನಿಮಿಷಗಳಲ್ಲಿ ಒಟ್ಟುಗೂಡಿದ ಗ್ರಾಮಸ್ಥರು ‘ಲಂಗಾರ್’ ಸೇರಿದಂತೆ ಎಲ್ಲಾ ಅಗತ್ಯ ವ್ಯವಸ್ಥೆಗಳನ್ನು ಮಾಡಿದರು ಮತ್ತು ಈ ಸಂದರ್ಭದಲ್ಲಿ 2 ಲಕ್ಷ ರೂ.ಗಳಷ್ಟು ಹಣವನ್ನು ಮಸೀದಿಗಾಗಿ ಸಂಗ್ರಹಿಸಿದರು ”ಎಂದು ಪಾಲಾ ಸಿಂಗ್ ಹೇಳಿದ್ದಾರೆ.

ಮುಸ್ಲಿಂ ಕುಟುಂಬಗಳು ಮಸೀದಿಯನ್ನು ಪುನರ್ನಿರ್ಮಿಸಲು ಬಹಳ ಸಮಯದಿಂದ ಪ್ರಯತ್ನಿಸುತ್ತಿದ್ದಾರೆ ಎಂದೂ ಅವರು ಹೇಳಿದ್ದಾರೆ. ಮಸೀದಿಯ ಮೂಲದ ಬಗ್ಗೆ ಹೆಚ್ಚು ತಿಳಿದುಬಂದಿಲ್ಲವಾದರೂ, ಭಾರತ ವಿಭಜನೆಗೆ ಮುಂಚೆಯೇ ಈ ಮಸೀದಿ‌ ಅಸ್ತಿತ್ವದಲ್ಲಿತ್ತು ಎಂದು ಹಳ್ಳಿಗಳು ನಂಬಿವೆ.

“ದೇಶ ವಿಭಜನೆಯ ಸಮಯದಲ್ಲಿ ಪಂಜಾಬ್ ಒಂದು ಭೀಕರ ದುರಂತವನ್ನು ಕಂಡಿದೆ ಮತ್ತು ಜನರು ತಮ್ಮ ಪ್ರೀತಿಪಾತ್ರರಿಂದ ಶಾಶ್ವತವಾಗಿ ಬೇರ್ಪಟ್ಟರು. ಪ್ರೀತಿ ಮತ್ತು ಸಹೋದರತ್ವದ ಹಂಚಿಕೆಯ ಬಂಧವನ್ನು ಮರಳಿ ಪಡೆಯಲು ನಾವು ಬಯಸುತ್ತೇವೆ. ಈ ದೇಶದಲ್ಲಿ ಕೋಮು ದ್ವೇಷವನ್ನು ನೋಡುವುದು ನೋವುಂಟು ಮಾಡುತ್ತದೆ. ನಾವೂ ಸಹ ಅಲ್ಪಸಂಖ್ಯಾತರ ಮೇಲೆ ದಾಳಿ ಮಾಡಿದರೆ ಭಾರತ ಮತ್ತು ಪಾಕಿಸ್ತಾನದ ನಡುವಿನ ವ್ಯತ್ಯಾಸವೇನು? ” ಎಂದು ಪಾಲಾ ಸಿಂಗ್ ವಿಷಾದದಿಂದ ಕೇಳುತ್ತಾರೆ.

ಇಂಥದ್ದೊಂದು ಅಪರೂಪದ ಪ್ರಕರಣಕ್ಕೆ ಗ್ರಾಮ ಪಾತ್ರವಾದ ಮೇಲೂ ಹಳ್ಳಿಗರು ತಾವು ವಿಶೇಷವಾದದ್ದನ್ನು ಮಾಡಿದ್ದೇವೆ ಎಂದು ಭಾವಿಸುವುದಿಲ್ಲ ಎಂದು ಅಬರು ಒತ್ತಿಹೇಳುತ್ತಾರೆ. “ನಮ್ಮ ಸಮಾಜದ ಭಾಗವಾಗಿ ಮುಸ್ಲಿಮರು ತಮ್ಮ ಧಾರ್ಮಿಕ ಆಚರಣೆಗಳ ಪ್ರಕಾರ ಪ್ರಾರ್ಥನೆ ಸಲ್ಲಿಸುವ ಹಕ್ಕು‌ ಹೊಂದಿದ್ದಾರೆ ”ಎಂದು ಅವರು ಹೇಳಿದ್ದಾರೆ.

ಸಮಾರಂಭದಲ್ಲಿ ಪಾಲ್ಗೊಂಡ ಗ್ರಾಮಸ್ಥರಲ್ಲೊಬ್ಬರಾದ ಅನ್ವರ್ ಖಾನ್, ಮಸೀದಿಯ ಇತಿಹಾಸ ಮತ್ತು ಹಿನ್ನೆಲೆಯ ಬಗ್ಗೆ ಅವರಿಗೆ ತಿಳಿದಿಲ್ಲವಾದ್ದರಿಂದ ಈ‌ ಮಸೀದಿಗೆ ‘ಮೊಹಮ್ಮದಿ ಮಸೀದಿ’ ಎಂದು ಹೆಸರಿಡಲಾಗಿದೆ. “ನಾವು 2008 ರಿಂದಲೂ ಈ ಮಸೀದಿಯನ್ನು ಪುನರ್ನಿರ್ಮಿಸಲು ಯೋಜಿಸುತ್ತಿದ್ದೇವೆ. ಇದು ಪರಿತ್ಯಕ್ತ ಪ್ರದೇಶವಾಗಿದ್ದು ನಾವು ಹಣದ ಕೊರತೆಯನ್ನೂ ಎದುರಿಸುತ್ತಿದ್ದೇವೆ ಆದರೆ ಗ್ರಾಮಸ್ಥರ ಸಹಾಯದಿಂದ ನಾವು ಈಗ ಅದನ್ನು ನಿರ್ಮಿಸಲು ಸಾಧ್ಯವಾಗುತ್ತದೆ” ಎಂದು ಹೇಳಿದರು.

ಇನ್ನು ಹೊಸದಾಗಿ ರಚಿಸಲ್ಪಟ್ಟ ಮಲೆರ್ಕೊಟ್ಲಾ ಜಿಲ್ಲೆಯು15 ನೇ ಶತಮಾನದ ಸೂಫಿ ಸಂತ ಶೇಖ್ ಸದ್ರುದ್ದೀನ್-ಇ-ಜಹಾನ್‌ ಅಥವಾ ಹೈದರ್ ಶೇಖ್‌‌ರ ಕರ್ಮ ಭೂಮಿ. ಪಟ್ಟಣದ ಮಧ್ಯಭಾಗದಲ್ಲಿರುವ ಅವರ ಸಮಾಧಿ ಅಂತರ್‌ಧರ್ಮ ನಂಬಿಕೆಯ ಜೀವಂತ ಉದಾಹರಣೆಯಾಗಿದೆ. ಹಳ್ಳಿಗರು ಸೂಫಿ ಸಂತನ ದೈವಿಕ ಶಕ್ತಿಗಳಲ್ಲಿ ದೃಢ ನಂಬಿಕೆಯುಳ್ಳವರಾಗಿದ್ದು ಹೆಚ್ಚಿನ ಸಂಖ್ಯೆಯ ಹಿಂದೂಗಳು ಮತ್ತು ಸಿಖ್ಖರು ಸಮಾಧಿಗೆ ನಮಸ್ಕರಿಸುವುದು ನಿತ್ಯವೂ ಕಂಡುಬರುತ್ತದೆ.

ಈ ಜಿಲ್ಲೆಯಲ್ಲಿ ಮುಸ್ಲಿಮರು ಬಹುಸಂಖ್ಯೆಯಲ್ಲಿದ್ದು ನವೆಂಬರ್ 26, 2020 ರಲ್ಲಿ ರೈತರ ಪ್ರತಿಭಟನೆ ಪ್ರಾರಂಭವಾದಾಗಿನಿಂದಲೂ ಜಿಲ್ಲೆಯ ಮುಸ್ಲಿಮರು ಸಿಂಗ್ ಗಡಿಯಲ್ಲಿ ಲಂಗಾರ್ ಆಯೋಜಿಸುತ್ತಿದ್ದಾರೆ. ಪಂಜಾಬ್, ಹರಿಯಾಣ ಮತ್ತು ದೆಹಲಿಯ ಹೆಚ್ಚಿನ ಸಂಖ್ಯೆಯ ಮುಸ್ಲಿಮರು ಜನವರಿ 26 ರಂದು ದೆಹಲಿಯಲ್ಲಿ ‘ಟ್ರಾಕ್ಟರ್ ಪೆರೇಡ್’ನಲ್ಲಿ ಭಾಗವಹಿಸಿದ್ದರು.

2019 ಮತ್ತು 2020 ರಲ್ಲಿ ನಡೆದ ಪೌರತ್ವ ವಿರೋಧಿ ತಿದ್ದುಪಡಿ ಕಾಯ್ದೆ (ಸಿಎಎ) ಪ್ರತಿಭಟನೆಯ ಸಂದರ್ಭದಲ್ಲಿ, ಮಲೆರ್ಕೊಟ್ಲಾದ ಮುಸ್ಲಿಮರ ನಿಯೋಗವು ಅಕಾಲ್ ತಕ್ತ್ ಕಾರ್ಯಕಾರಿ ಮುಖ್ಯಸ್ಥ ಗಿಯಾನಿ ಹರ್ಪ್ರೀತ್ ಸಿಂಗ್ ಅವರನ್ನು ಭೇಟಿ ಮಾಡಲು ಸ್ವರ್ಣ ಮಂದಿರಕ್ಕೆ ಭೇಟಿ ನೀಡಿದ್ದರು. ನಿಯೋಗ ಹೊರಬಂದಾಗ ನಮಾಜಿನ ಸಮಯವಾಗಿತ್ತು ಮತ್ತು ಅವರು ಟೆಂಪಲ್ ಪ್ಲಾಜಾದಲ್ಲಿ ಪ್ರಾರ್ಥನೆ ಸಲ್ಲಿಸಿದ್ದರು. ಗೋಲ್ಡನ್ ಟೆಂಪಲ್‌ನಲ್ಲಿ ಮುಸ್ಲಿಮರು ಪ್ರಾರ್ಥನೆ ಸಲ್ಲಿಸುತ್ತಿರುವ ಫೋಟೋಗಳು ಮತ್ತು ವಿಡಿಯೋ ಆ ಸಮಯದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಸಾಕಷ್ಟು ಸದ್ದು ಮಾಡಿತ್ತು.

ಮಲೆರ್ಕೊಟ್ಲಾ ಜಿಲ್ಲೆಯ ಜಿತ್ವಾಲ್ ಕಲಾನ್ ಗ್ರಾಮದ ರೈತ ಜಗ್ಮೆಲ್ ಸಿಂಗ್ ಮಸೀದಿ ನಿರ್ಮಾಣಕ್ಕಾಗಿ ಏಳು ಮುಸ್ಲಿಂ ಕುಟುಂಬಗಳಿಗೆ ತನ್ನ ಪೂರ್ವಜರ ಭೂಮಿಯನ್ನು (ಆರು ಬಿಸ್ವಾ) ದಾನ ಮಾಡಿದ್ದಾರೆ. ಜಗ್ಮೆಲ್ ಅವರ ಕುಟುಂಬವು ರೋಶನ್ ಖಾನ್ ಎಂಬವರ ಕುಟುಂಬದ ದೀರ್ಘಕಾಲದ ಸ್ನೇಹಿತರು. ಈ ಸ್ನೇಹ ಮೂರು ತಲೆಮಾರುಗಳಿಂದ ಅಸ್ತಿತ್ವದಲ್ಲಿದೆ. ಮಸೀದಿಗೆ ಭೂಮಿಯನ್ನು ದಾನ ಮಾಡುವುದು ಸುದ್ದಿಯಾಗಲಿದೆ ಎಂದು ತನಗೆ ತಿಳಿದಿರಲಿಲ್ಲ ಎನ್ನುತ್ತಾರೆ ಜಗ್ಮೆಲ್.

ತನ್ನ ಈ ಕಾರ್ಯಕ್ಕೆ ಪಂಜಾಬ್ ಮತ್ತು ವಿದೇಶಗಳಲ್ಲಿನ ಜನರಿಂದ ಹೃದಯಸ್ಪರ್ಶಿ ಪ್ರತಿಕ್ರಿಯೆಗಳನ್ನು ಸಲ್ಲಿಸಿದ್ದಾರೆ ಎಂದು ಸಂತೋಷಪಡುವ ಜಗ್ಮೆಲ್ “ಕೆಲವೇ ದಿನಗಳಲ್ಲಿ, ಫೋಟೋಗಳನ್ನು ಮತ್ತು ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ ಮತ್ತು ನನಗೆ ಕರೆಗಳು ಬರುತ್ತಿವೆ. ಈ ಕಾರ್ಯವನ್ನು ನಿರ್ವಹಿಸಲು ಮತ್ತು ಮಾನವೀಯತೆಗೆ ಸೇವೆ ಸಲ್ಲಿಸಲು ಸರ್ವಶಕ್ತನು ನಮ್ಮನ್ನು ಆರಿಸಿಕೊಂಡಿದ್ದಾನೆ ಎಂದು ನನ್ನ ಕುಟುಂಬವು ಭಾವಿಸಿಕೊಂಡಿದೆ”ಎಂದು ಅವರು ಹೇಳಿದ್ದಾರೆ.

ಜಗ್ಮೆಲ್ ಅವರ ಸ್ನೇಹಿತರಾಗಿರುವ ರೋಶನ್ ಖಾನ್ ಅವರು ಈ ಇಷ್ಟು ವರ್ಷಗಳಲ್ಲಿ ಅವರು ರೋಡಿವಾಲ್ ಗ್ರಾಮದ ಮಸೀದಿಗೆ ಪ್ರಾರ್ಥನೆ ಸಲ್ಲಿಸಲು ಹೋಗುತ್ತಿದ್ದರು ಎಂದು ಹೇಳಿದ್ದಾರೆ. ಇನ್ನು ಮುಂದೆ ಹತ್ತಿರದಲ್ಲೇ ಕಟ್ಟಲ್ಪಡುವ ಮಸೀದಿಗೆ ಹೋಗಬಹುದು ಎಂದು ಅವರು ಹೇಳಿದ್ದಾರೆ.

“ನನಗೆ ಸಿಖ್ ಮತ್ತು ಹಿಂದೂ ಸ್ನೇಹಿತರಿದ್ದಾರೆ. ನಮ್ಮ ಜೀವನವು ಚಿಕ್ಕದಾಗಿದೆ, ಹೋರಾಟದಿಂದ ನಾವು ಏನು ಗಳಿಸಲು ಸಾಧ್ಯ? ಧರ್ಮವು ಈಗಾಗಲೇ ಸಾಕಷ್ಟು ವಿಭಜನೆಯನ್ನು ಸೃಷ್ಟಿಸಿದೆ, ನಾವು ಹೋರಾಟವನ್ನು ನಿಲ್ಲಿಸಬೇಕು ”ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಕಳೆದ ವರ್ಷ ರಾಷ್ಟ್ರವ್ಯಾಪಿ ಲಾಕ್ ಡೌನ್ ಸಮಯದಲ್ಲಿ, ಮಲೆರ್ಕೋಟ್ಲಾದ ಮುಸ್ಲಿಮರು ಗೋಲ್ಡನ್ ಟೆಂಪಲ್ ಅಧಿಕಾರಿಗಳಿಗೆ 330 ಕ್ವಿಂಟಾಲ್ ಗೋಧಿಯನ್ನು ದಾನ ಮಾಡಿರುಬುದಮ್ಮುದು ಇಲ್ಲಿ ಉಲ್ಲೇಖಿಸಲೇಬೇಕು. ಸಿಖ್ ಮುಸ್ಲಿಂ ಸಂಜಾ ಫೌಂಡೇಶನ್ ಗೋಲ್ಡನ್ ಟೆಂಪಲ್ಗೆ ಗೋಧಿ ದಾನ ಮಾಡುವ ಮೂಲಕ ಬಡ ಮತ್ತು ವಲಸೆ ಕಾರ್ಮಿಕರಿಗೆ ಸಹಾಯ ಮಾಡಲು ಮಾಡಿತ್ತು.

Please follow and like us:

Related articles

Share article

Stay connected

Latest articles

Please follow and like us: