ಬೀದರ್: ‘ಒಳಮೀಸಲಾತಿ ಜಾರಿಗೊಳಿಸಬೇಕೆಂದು ಆಗ್ರಹಿಸಿ ಡಿ. 14ರಂದು ಜಿಲ್ಲೆಯ ಎಲ್ಲ ಶಾಸಕರ ಮನೆ ಎದುರು ತಮಟೆ ಚಳವಳಿ ನಡೆಸಲಾಗುವುದು. ಡಿ. 16ರಂದು ಬೆಳಗಾವಿಯ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲಾಗುವುದು’ ಎಂದು ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿಯ ರಾಜ್ಯ ಕಾರ್ಯಾಧ್ಯಕ್ಷ ಫರ್ನಾಂಡಿಸ್ ಹಿಪ್ಪಳಗಾಂವ್ ತಿಳಿಸಿದ್ದಾರೆ.
ದೇಶದಲ್ಲಿ ಎಲ್ಲಕ್ಕಿಂತ ಮೊದಲು ಒಳಮೀಸಲಾತಿ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಪಕ್ಷ ಭರವಸೆ ನೀಡಿತ್ತು. ಆದರೆ, ಕೊಟ್ಟ ಮಾತಿನಂತೆ ನಡೆದುಕೊಳ್ಳದೇ ಪರಿಶಿಷ್ಟ ಜಾತಿಯ 101 ಜಾತಿಗಳಲ್ಲಿ ಬಹುಸಂಖ್ಯಾತ ಸಮುದಾಯವಾದ ಮಾದಿಗ ಸಮಾಜವನ್ನು ಅವಮಾನ ಮಾಡಿದೆ ಎಂದಿದ್ದಾರೆ.
ಆಗಸ್ಟ್ 1ರಂದು ಸುಪ್ರೀಂಕೋರ್ಟ್ ಮಾದಿಗ ಸಮುದಾಯದ ಮೂರು ದಶಕಗಳ ಬೇಡಿಕೆಯಾಗಿದ್ದ ಒಳ ಮೀಸಲಾತಿ ಜಾರಿಗೊಳಿಸುವಂತೆ ಐತಿಹಾಸಿಕವಾದ ತೀರ್ಪು ನೀಡಿದೆ. ಈಗಾಗಲೇ ಹರಿಯಾಣ ಹಾಗೂ ಪಂಜಾಬ್ ಸರ್ಕಾರಗಳು ಒಳ ಮೀಸಲಾತಿ ಜಾರಿಗೊಳಿಸಿವೆ.ಆದರೆ, ರಾಜ್ಯದ ಕಾಂಗ್ರೆಸ್ ನೇತೃತ್ವದ ಸರ್ಕಾರ ಹಿಂದೇಟು ಹಾಕುತ್ತಿದೆ ಎಂದು ಮಂಗಳವಾರ ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.