ಬಡವರ ಕಿಸಿಯಿಂದು ಕಿತ್ತು ಮೋದಿ ಸರ್ಕಾರ ಆಡಳಿತ ನಡೆಸುತ್ತಿದೆ. ಈಗಾಗಲೇ ತೆರಿಗೆ, ದರ ಏರಿಕೆ, ದಿನ ಬಳಕೆಯ ಮೇಳಿನ ತೆರಿಗೆ ಹೀಗೆ ಹತ್ತು ಹಲವು ರೀತಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಜನ ಸಾಮಾನ್ಯರ ಬಳಿಯಿಂದ ʻಕಾನೂನಾತ್ಮಕವಾಗಿ ವಸೂಲಿʼ ಮಾಡಿಕೊಳ್ಳುತ್ತಿದೆ. ಇದರ ಜೊತೆಗೆ ಇದೀಗ ಮತ್ತೆ ಹೊಸ ಹೊಸ ರೂಪದಲ್ಲಿ ಹಣ ಪೀಕುಲು ಮುಂದಾಗಿದೆ ಕೇಂದ್ರ ಸರ್ಕಾರ. ಈ ಕೊರೋನಾದಂಥಾ ದುರಿತ ಕಾಲದಲ್ಲಿ ಸರ್ಕಾರ ತನ್ನ ಬೊಕ್ಕಸ ತುಂಬಿಸಿಕೊಳ್ಳಲು ಬಡ ಮತ್ತು ಮಧ್ಯಮ ವರ್ಗದ ಜನರನ್ನು ಆರ್ಥಿಕವಾಗಿ ಹಿಂಡಿ ಹಿಪ್ಪೆ ಮಾಡಿ ಹಾಕುತ್ತಿದೆ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ ಸದ್ಯ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ನೂರು ದಾಟಿದೆ. ಶ್ರೀ ಸಾಮಾನ್ಯರಿಗೆ ಕೊರೋನಾ ಬರೆ ಮೇಲೆ ಕೇಂದ್ರ ಸರ್ಕಾರ ಇದೀಗ ಮತ್ತೆ ದರ ಏರಿಕೆಯ ಕೆಂಡಕಾಯಿಸಿ ಉಯ್ಯುತ್ತಿದೆ.
- ತೈಲ ಬೆಲೆ ಏರಿಕೆ
ಬೆಂಗಳೂರಿನಲ್ಲಿ ಪೆಟ್ರೋಲ್ ದರ ಒಂದು ಲೀಟರ್ಗೆ ಈಗ ಸರಾಸರಿ ₹105 ಇದ್ದು, ಇದರಲ್ಲಿ ₹65 ರಿಂದ ₹67 ರಷ್ಟು ತೆರಿಗೆ ರೂಪದಲ್ಲಿದೆ. ಜನ ಸಾಮಾನ್ಯರು ಸಂಚಾರಕ್ಕಾಗಿ ದ್ವಿಚಕ್ರ ವಾಹನಗಳನ್ನೇ ಅವಲಂಬಿಸಿದ್ದಾರೆ. ಇಂಧನ ಬೆಲೆ ಏರಿಕೆಯಿಂದ ಬಸ್ಸು ಅಥವಾ ಟ್ಯಾಕ್ಸಿಗಳ ಪ್ರಯಾಣ ದರವೂ ಏರಿಕೆಯಾಗಿದೆ. ರೈಲು ದರವೂ ಇದಕ್ಕೆ ಹೊರತಾಗಿಲ್ಲ. ಟಿಕೆಟ್ ದರವನ್ನು ಅಲ್ಪ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ. ಆಯ್ದ ರೈಲ್ವೆ ನಿಲ್ದಾಣಗಳಲ್ಲಿ ಪ್ಲಾಟ್ಫಾರಂ ಟಿಕೆಟ್ ದರವನ್ನು ₹10 ರಿಂದ ₹ 50 ಕ್ಕೆ ನಿಗದಿ ಮಾಡಲಾಗಿದೆ. ಕಳೆದ ಎರಡು ವರ್ಷಗಳಲ್ಲಿ ಬೆಲೆ ಏರಿಕೆ ಶೇ 100 ರಿಂದ ಶೇ 200 ರಷ್ಟು ಆಗಿದೆ. ಇನ್ನೊಂದು ಕಡೆ ಹಣದುಬ್ಬರದಿಂದ ದಿನ ಬಳಕೆಯ ವಸ್ತುಗಳ ಬೆಲೆ ಗಗನಕ್ಕೆ ಏರಿದೆ. ಖಾದ್ಯತೈಲ ಬೆಲೆ ಪ್ರತಿ ಲೀಟರ್ಗೆ ₹80 ರಿಂದ ₹90 ಇದ್ದದ್ದು, ₹190 ರಿಂದ ₹230 ರವರೆಗೆ ತಲುಪಿದೆ. ಅಡುಗೆ ಅನಿಲದ ಸಿಲಿಂಡರ್ ದರ ಈಗ ಸುಮಾರು ₹859 ತಲುಪಿದೆ. ಮದ್ಯದ ಮೇಲಿನ ತೆರಿಗೆ ಶೇ 80 ರಿಂದ ಶೇ 130 ರಷ್ಟು ಏರಿಕೆಯಾಗಿದೆ. ಇವೆಲ್ಲವೂ ಜನ ಸಾಮಾನ್ಯರಿಗೆಗಾಯದ ಮೇಲೆ ಬರೆ ಹಾಕಿದಂತಾಗಿದೆ.
- ಆಸ್ತಿ ತೆರಿಗೆ ಹೆಚ್ಚಳ
ಬೆಂಗಳೂರು ಸೇರಿ ವಿವಿಧ ನಗರಗಳು ಮತ್ತು ಪಟ್ಟಣಗಳಲ್ಲಿ ಆಸ್ತಿ ತೆರಿಗೆಯನ್ನು ಹೆಚ್ಚಿಸಲಾಗಿದೆ. ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಕೆಲವೆಡೆ ತೆರಿಗೆ ಏರಿಕೆ ಜಾರಿಯಾಗಿದ್ದರೆ, ಇನ್ನೂ ಕೆಲವು ಕಡೆ ಪರಿಷ್ಕರಣೆ ಅನುಷ್ಠಾನ ಹಂತದಲ್ಲಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಧೀನದ ನಿವೇಶನದಾರರಿಗೆ, ಅರ್ಜಿ ಶುಲ್ಕದಿಂದ ಖಾತಾ ಶುಲ್ಕದವರೆಗೆ ಹತ್ತು ಹಲವು ಶುಲ್ಕಗಳನ್ನು ಬಿಡಿಎ ಹೆಚ್ಚಳ ಮಾಡಿದೆ. ವಿವಿಧ ಅಳತೆಗಳ ನಿವೇಶನಗಳ ಖಾತಾ ಶುಲ್ಕ 2020ಕ್ಕಿಂತ ಹಿಂದಿನ ದರಕ್ಕೆ ಹೋಲಿಸಿದರೆ ದುಪ್ಪಟ್ಟಾಗಿದೆ. ಅರ್ಜಿ ಶುಲ್ಕ ಹಾಗೂ ನೋಂದಣಿ ಶುಲ್ಕಗಳನ್ನು ಎರಡೂವರೆ ಪಟ್ಟು ಹೆಚ್ಚಿಸಲಾಗಿದೆ. ನಿವೇಶನ ಮಂಜೂರಾಗಿ ಐದು ವರ್ಷ ಕಳೆದ ಬಳಿಕವೂ ವಸತಿ ನಿರ್ಮಿಸದವರ ಖಾಲಿ ನಿವೇಶನಗಳಿಗೆ ವಿಧಿಸುವ ದಂಡದ ಶುಲ್ಕವನ್ನೂ ಶೇ 50ರಷ್ಟು ಹೆಚ್ಚಳ ಮಾಡಲಾಗಿದೆ.

- ದುಬಾರಿ ನೀರಿನ ಕರ
ರಾಜ್ಯದ ವಿವಿಧ ನಗರಗಳಲ್ಲಿ ನೀರಿನ ಶುಲ್ಕದ ಪ್ರಮಾಣ 2019 ಕ್ಕೆ ಹೋಲಿಸಿದರೆ ಈ ವರ್ಷ ₹20 ರಿಂದ ₹120 ರಷ್ಟು ಹೆಚ್ಚು ಮೊತ್ತವನ್ನು ಪಾವತಿಸಬೇಕಾಗಿದೆ. ಜಲ ಜೀವನ್ ಮಿಷನ್ ಪೂರ್ಣ ಅನುಷ್ಠಾನಗೊಂಡರೆ, ಈಗ ನೀಡುತ್ತಿರುವ ನೀರಿನ ಕರ ದುಪ್ಪಟ್ಟಾಗಲಿದೆ.
- ವಿದ್ಯುತ್ ದರ ಏರಿಕೆ
ಸದ್ಯ ಪ್ರತಿ ತಿಂಗಳು ₹150ರಿಂದ ₹300 ರವರೆಗೆ ಕಡಿಮೆ ವಿದ್ಯುತ್ ಶುಲ್ಕ ಬರುತ್ತಿದೆ. ಆದರೆ, ಅಕ್ಟೋಬರ್ನಿಂದ ವಿದ್ಯುತ್ದರವೂ ಏರಿಕೆಯಾಗಲಿದೆ. ಪ್ರತಿ 25 ವರ್ಷಗಳ ಅವಧಿಗೆ ಎಸ್ಕಾಂಗಳು ವಿದ್ಯುತ್ ಉತ್ಪಾದನಾ ಕಂಪನಿಗಳೊಂದಿಗೆ ಖರೀದಿ ಒಪ್ಪಂದ ಮಾಡಿಕೊಳ್ಳುತ್ತವೆ. ಈ ಒಪ್ಪಂದದ ದರದ ಜೊತೆಗೆ ವ್ಯತ್ಯಾಸದ ಮೊತ್ತವು ಪ್ರತಿ ತ್ರೈಮಾಸಿಕ ಅವಧಿಗೆ ಹೆಚ್ಚುತ್ತಾ ಹೋಗುತ್ತದೆ. ವಿದ್ಯುತ್ ಖರೀದಿ ದರವು 2019ರಲ್ಲಿ ₹5.63 ಇತ್ತು. 2020ಕ್ಕೆ ಇದು ₹5.91ಕ್ಕೆ ಏರಿತ್ತು. 2021ರಲ್ಲಿ ₹5.78ರಂತೆ ಎಸ್ಕಾಂಗಳು ವಿದ್ಯುತ್ ಖರೀದಿ ಮಾಡಿವೆ. ಕೋವಿಡ್ ಅವಧಿಯಲ್ಲಿ ವಿದ್ಯುತ್ ಬಳಕೆ ಕಡಿಮೆ ಆಗಿದ್ದರಿಂದ ಖರೀದಿ ದರವೂ ಕಡಿಮೆ ಆಗಿದೆ. ಜೊತೆಗೆ, ವ್ಯತ್ಯಾಸದ ಮೊತ್ತವೂ ಕಡಿಮೆ ಆಗಿರುವುದರಿಂದ ಬಳಕೆದಾರರಿಗೆ ಪ್ರತಿ ಯುನಿಟ್ಗೆ 50 ಪೈಸೆ ಉಳಿತಾಯವಾಗುತ್ತಿದೆ. ಆದರೆ ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿಯೇ ಎರಡು ಬಾರಿ ವಿದ್ಯುತ್ ದರ ಏರಿಕೆ ಮಾಡಲಾಗಿದೆ. 2020ರ ನವೆಂಬರ್ 4ರಂದು ಪ್ರತಿ ಯುನಿಟ್ಗೆ 40 ಪೈಸೆ, 2021ರ ಜೂನ್ 9ರಂದು 30 ಪೈಸೆ ಸೇರಿ ಒಟ್ಟು ಪ್ರತಿ ಯುನಿಟ್ಗೆ 70 ಪೈಸೆ ಏರಿಕೆ ಮಾಡಲಾಗಿದೆ. ಅಕ್ಟೋಬರ್ ಹೊತ್ತಿಗೆ ಇದು ಮತ್ತಷ್ಟು ಏರಿಕೆಯಾಗಲಿದೆ.
- ರೈಲು ಪ್ರಯಾಣ ದರ ಹೆಚ್ಚಳ
ರೈಲು ಪ್ರಯಾಣ ದರವನ್ನು ಘೋಷಣೆ ಮಾಡಿ ನೇರವಾಗಿ ಏರಿಕೆ ಮಾಡದಿದ್ದರೂ ಪರೋಕ್ಷವಾಗಿ ಪ್ರಯಾಣಿಕರ ಜೇಬಿಗೆ ಕೈ ಹಾಕಿದೆ. ಪ್ಯಾಸೆಂಜರ್ ರೈಲುಗಳನ್ನು ಎಕ್ಸ್ಪ್ರೆಸ್ ರೈಲುಗಳಾಗಿ, ಎಕ್ಸ್ಪ್ರೆಸ್ ರೈಲುಗಳನ್ನು ಸೂಪರ್ ಫಾಸ್ಟ್ ಎಕ್ಸ್ಪ್ರೆಸ್ ರೈಲುಗಳಾಗಿ ಪರಿವರ್ತಿಸಲಾಗಿದೆ. 200 ಕಿಲೋ ಮೀಟರ್ಗೂ ಹೆಚ್ಚಿನ ದೂರ ಸಂಚರಿಸುವ ಪ್ಯಾಸೆಂಜರ್ ರೈಲುಗಳನ್ನು ಹೀಗೆ ಮಾರ್ಪಡಿಸಿ ಶೇ 30ರಷ್ಟು ದರ ಏರಿಕೆ ಮಾಡಲಾಗಿದೆ. ಕೋವಿಡ್ ಸಂದರ್ಭದಲ್ಲಿ ಕೆಲವೆಡೆಗೆ ವಿಶೇಷ ರೈಲುಗಳ ಸಂಚಾರ ಆರಂಭಿಸಲಾಗಿತ್ತು. ಬೇರೆ ರೈಲುಗಳಿಗೆ ಹೋಲಿಸಿದರೆ ಅವುಗಳಲ್ಲಿನ ಪ್ರಯಾಣ ದರ ಶೇ 30ರಷ್ಟು ಹೆಚ್ಚಿದೆ. ಹೊರ ರಾಜ್ಯಗಳ ರೈಲುಗಳಲ್ಲೂ ಪರೋಕ್ಷವಾಗಿ ಪ್ರಯಾಣ ದರ ಏರಿಕೆಯಾಗಿದೆ. ಇನ್ನೊಂದೆಡೆ ನಿಲ್ದಾಣ ಪ್ರವೇಶಕ್ಕೆ (Platform Ticket) ಕೋವಿಡ್ ಸಂದರ್ಭದಲ್ಲಿ ₹50 ದರ ನಿಗದಿ ಮಾಡಲಾಗಿತ್ತು. ಈಗ ಮತ್ತೆ ₹10ಕ್ಕೆ ಇಳಿಸಲಾಗಿದೆ. 58 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಶೇ 50ರಷ್ಟು ಮತ್ತು 60 ವರ್ಷ ಮೇಲ್ಪಟ್ಟಪುರುಷರಿಗೆ ಪ್ರಯಾಣ ದರದಲ್ಲಿ ಶೇ 40ರಷ್ಟು ರಿಯಾಯಿತಿ ಇತ್ತು. ಆದರೆ, ಈಗ ಅದನ್ನು ಹಿಂಪಡೆಯಲಾಗಿದೆ.
- ಟೋಲ್ ದರ ಭಾರಿ ಹೆಚ್ಚಳ
ಟೋಲ್ ರಸ್ತೆಗಳಲ್ಲಿ ಸುಂಕ ಸಂಗ್ರಹ ಈಗ ಫಾಸ್ಟ್ಟ್ಯಾಗ್ ಮೂಲಕ ಆನ್ಲೈನ್ನಲ್ಲೇ ನಡೆಯುತ್ತಿದೆ. ಇಲ್ಲಿ ವಾಹನ ಸವಾರರ ಕಣ್ಕಟ್ಟಿ ಹೆಚ್ಚಿನ ಸುಂಕ ಸಂಗ್ರಹಿಸಲಾಗುತ್ತಿದೆ. ವಾಹನಗಳ ಮಾಲೀಕರು ಫಾಸ್ಟ್ಟ್ಯಾಗ್ಗೆ ರೀಚಾರ್ಜ್ ಮಾಡಿಕೊಂಡಿದ್ದರೆ ಸುಂಕ ಸಂಗ್ರಹ ಕೇಂದ್ರ ದಾಟುವಾಗ ನಿಗದಿಯಷ್ಟೇ ದರ ಪಾವತಿಯಾಗುತ್ತದೆ. ಎಷ್ಟು ಪಾವತಿಯಾಗಿದೆ ಎಂಬುದನ್ನು ತಕ್ಷಣಕ್ಕೆ ವಾಹನ ಚಾಲಕರು ನೋಡಿಕೊಳ್ಳುವುದಿಲ್ಲ. ಇದರ ದುರ್ಲಾಭವನ್ನು ಸುಂಕ ಸಂಗ್ರಹ ಕಂಪನಿಗಳು ಮಾಡಿಕೊಳ್ಳುತ್ತಿವೆ ಎಂಬ ಆರೋಪವೂ ಸಾರ್ವಜನಿಕ ವಲಯದಲ್ಲಿದೆ. ₹40 ದರ ಇದ್ದ ಕಡೆ ₹50 ಅಥವಾ ₹55 ಪಾವತಿ ಮಾಡಿಕೊಳ್ಳಲಾಗುತ್ತದೆ ಎಂಬ ಆರೋಪಗಳಿವೆ. ಫಾಸ್ಟ್ಟ್ಯಾಗ್ ಹೊಸ ಪದ್ಧತಿ ಜಾರಿಗೆ ತಂದ ಮೇಲೆ, ಫಾಸ್ಟ್ಟ್ಯಾಗ್ ಇಲ್ಲದೇ ಇರುವವರು, ರೀಚಾರ್ಜ್ ಆಗದೇ ಇರುವವರಿಂದ ನಿಗದಿತ ದರಕ್ಕಿಂತ ದುಪ್ಪಟ್ಟು ದರ ಪಡೆಯಲಾಗುತ್ತಿದೆ.

- ದಿನ ಬಳಕೆಯ ಪದಾರ್ಥಗಳ ಬೆಲೆ ಗಗನಕ್ಕೆ
ಇದೇ ವರ್ಷದ ಆರಂಭದಲ್ಲಿ ದಿಢೀರನೇ ದಿನ ಬಳಕೆಯ ವಸ್ತುಗಳ ಬೆಲೆ ಗಗನಕ್ಕೇರಿತ್ತು. ಸಗಟು ಮಾರುಕಟ್ಟೆಗಿಂತ ಚಿಲ್ಲರೆ ಮಾರುಕಟ್ಟೆಯಲ್ಲಿ ವಿವಿಧ ಪದಾರ್ಥಗಳ ಬೆಲೆ ಹೆಚ್ಚಾಗಿಯೆ ಇದೆ. ಒಂದೊಂದು ಅಂಗಡಿಯಲ್ಲಿ, ಒಂದೊಂದು ಸರಕು ಅಥವಾ ಉತ್ಪನ್ನದ ಬೆಲೆಯಲ್ಲಿ ₹5ರಿಂದ ₹10ರವರೆಗೆ ವ್ಯತ್ಯಾಸವಿದೆ. ಸಗಟು ಮಾರುಕಟ್ಟೆಯಲ್ಲಿ ಕಡಲೆಬೇಳೆ ಕೆ.ಜಿ. ರೂ. 80, ಕಡಲೆಕಾಳು ಕೆ.ಜಿ. ರೂ. 80, ಹೆಸರು ಕಾಳು ಕೆ.ಜಿ. ರೂ. 100, ಹೆಸರು ಬೇಳೆ ಕೆ.ಜಿ. ರೂ. 140, ತೊಗರಿ ಬೇಳೆ ಕೆ.ಜಿ. ರೂ. 110, ಮೈಸೂರು ಬೇಳೆ ಕೆ.ಜಿ. ರೂ. 110, ಶೇಂಗಾ ಕೆ.ಜಿ. ರೂ. 120, ಹುರಿಗಡಲೆ ಕೆ.ಜಿ. ರೂ. 90, ಉದ್ದಿನ ಬೇಳೆ ಕೆ.ಜಿ. ರೂ. 140, ಅಲಸಂದೆ ರೂ. 80-100ಕ್ಕೆ ಮಾರಾಟ ಮಾಡಲಾಗುತ್ತಿದೆ. ವಿವಿಧ ಬೇಳೆ ಕಾಳುಗಳ ಬೆಲೆಯಲ್ಲಿ ಶೇ.10ರಿಂದ 20ರಷ್ಟು ಬೆಲೆ ಏರಿಕೆಯಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಸರಕು-ಸಾಗಣೆ ದರ ಹೆಚ್ಚಳದ ನೆಪದಲ್ಲಿ ಅಡುಗೆ ಎಣ್ಣೆ ಬೆಲೆಯನ್ನು ₹160ರಿಂದ ₹170ಕ್ಕೆ ಏರಿಸಲಾಗಿದೆ. ಪ್ರತಿ ಕೆ.ಜಿ. ಟೊಮೆಟೊ ದರವನ್ನು ₹20 ರಿಂದ ₹30ಕ್ಕೆ ಏರಿಸಲಾಗಿದೆ. ಬೆಳ್ಳುಳ್ಳಿ ₹100 ರಿಂದ ₹120, ಆಲೂಗಡ್ಡೆ ₹35 ರಿಂದ ₹40, ತೊಗರಿ ಬೇಳೆ ₹115ರಿಂದ ₹120, ಉದ್ದಿನ ಬೇಳೆ ₹125, ಹೆಸರು ಬೇಳೆ ₹100, ಕಡಲೆ ಬೇಳೆ ₹100, ಹೆಸರುಕಾಳು ₹115, ಕಡ್ಲೆಕಾಳು ₹60 ಹಾಗೂ ಬಟಾಣಿ ಕೆಜಿಗೆ ₹150ರವರೆಗೂ ಏರಿದೆ. ಈಗಷ್ಟೇ ಗ್ಯಾಸ್ ಬೆಲೆಯನ್ನು 25 ರೂ ಹೆಚ್ಚಿಸಲಾಗಿದೆ ಶೀಘ್ರದಲ್ಲೇ ದೇಶಾಂದ್ಯಾಂತ ಗಯಾಸ್ ಬೆಲೆ 1000 ರುಪಾಯಿ ಗಡಿ ದಾಟಲಿದೆ.
ಇದೀಗ ಮತ್ತೆ ವಿದ್ಯುತ್ ದರ, ನೀರಿನ ಕರ, ಹೀಗೆ ನೂರೆಂಟು ದರಗಳನ್ನು ಕೇಂದ್ರ ಸದ್ದಿಲ್ಲದೆ ಮಾಡಲು ಹೊರಟಿದೆ. ಮೋದಿ ಸರ್ಕಾರದ ಈ ಅವಧಿಯಲ್ಲಿ ಆಮ್ ಆದ್ಮಿ ನಿಜಕ್ಕೂ ಬಸವಳಿದು ಹೋಗಿದ್ದಾನೆ ಎನ್ನುವುದಕ್ಕೆ ಇದಕ್ಕಿಂತ ಸಾಕ್ಷ್ಯಗಳು ಬೇರೆ ಬೇಕೇ.?