ಬೆಂಗಳೂರು (Bengaluru): ಲೋಕಸಭೆ ಚುನಾವಣೆ (Loksabha Election) ಅಭ್ಯರ್ಥಿ ಆಯ್ಕೆ ವಿಚಾರವಾಗಿ ಇಂದಿನ ಪಟ್ಟಿಯಲ್ಲಿ ಇನ್ನಷ್ಟು ಹೆಸರು ಪ್ರಕಟವಾಗಬೇಕಿತ್ತು. 11ರಂದು ಸ್ಕ್ರೀನಿಂಗ್ ಕಮಿಟಿ ಸಭೆ ನಂತರ ಆ ಹೆಸರುಗಳು ಅಂತಿಮವಾಗಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (D.K.Shivakumar) ತಿಳಿಸಿದರು.
ಸದಾಶಿವನಗರ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸ್ಥಳೀಯ ಶಾಸಕರು, ಮುಖಂಡರ ಜತೆ ಚರ್ಚೆ ಮಾಡಿದಾಗ ಅವರು ಯಾರ ಹೆಸರನ್ನ ಪ್ರಸ್ತಾಪ ಮಾಡಿರುತ್ತಾರೋ ಹಾಗೂ ನಮ್ಮ ಸಮೀಕ್ಷೆಗಳ ಆಧಾರದ ಮೇಲೆ ನಾವು ಅಭ್ಯರ್ಥಿ ಆಯ್ಕೆ ಮಾಡಿದ್ದೇವೆ. 11ರಂದು ನಡೆಯಲಿರುವ ಸಭೆ ನಂತರ ಮತ್ತಷ್ಟು ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಮಾಡಲಾಗುವುದು ಎಂದರು.
17 ಕ್ಷೇತ್ರಗಳಿಗೆ ನೀವು ಪಟ್ಟಿ ತೆಗೆದುಕೊಂಡು ಹೋಗಿದ್ದೀರಿ ಎಂದು ಕೇಳಿದಾಗ, ನಾನು ಎಷ್ಟು ಪಟ್ಟಿ ತೆಗೆದುಕೊಂಡು ಹೋಗಿದ್ದೆ ಎಂಬುದು ಮುಖ್ಯವಲ್ಲ. ಇದು ನನ್ನ ಪಕ್ಷ ಅಲ್ಲ. ನಮ್ಮ ಹೈಕಮಾಂಡ್ ನಾಯಕರು ಈ ಬಗ್ಗೆ ತೀರ್ಮಾನ ಮಾಡುತ್ತಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjuna Kharge), ಸೋನಿಯಾ ಗಾಂಧಿ (Sonia Gandhi), ಕೆ.ಸಿ. ವೇಣುಗೋಪಾಲ್ (K.C.Venugopal), ರಾಹುಲ್ ಗಾಂಧಿ (Rahul Gandhi) ಸೇರಿದಂತೆ ಅನೇಕ ನಾಯಕರು ಚರ್ಚೆ ಮಾಡುತ್ತಾರೆ. ನಾವು ಕೇವಲ ಅಭ್ಯರ್ಥಿಗಳ ಹೆಸರನ್ನು ಪ್ರಸ್ತಾಪ ಮಾಡುತ್ತೇವೆ ಅಷ್ಟೇ. ನಮ್ಮ ಪಕ್ಷದ ಸಿಇಸಿ ಸಮಿತಿ ಸದಸ್ಯರು ಅವರದೇ ಆದ ಮೂಲಗಳಿಂದ ಮಾಹಿತಿ ಪಡೆದುಕೊಂಡಿರುತ್ತಾರೆ. ಇವರೆಲ್ಲ ಸೇರಿ ಚರ್ಚೆ ಮಾಡಿ ತೀರ್ಮಾನ ಮಾಡುತ್ತಾರೆ ಎಂದು ತಿಳಿಸಿದರು.
ಈಗ ಪ್ರಕಟವಾಗಿರುವ 7 ಕ್ಷೇತ್ರಗಳ ಪೈಕಿ ಎಷ್ಟರಲ್ಲಿ ಗೆಲ್ಲುವ ಸಾಧ್ಯತೆ ಇದೆ ಎಂದು ಕೇಳಿದಾಗ, “ಎಲ್ಲಾ ಕ್ಷೇತ್ರಗಳಲ್ಲೂ ಗೆಲ್ಲುತ್ತೇವೆ ಎಂದು ತಿಳಿಸಿದರು.
#karnataka #bengaluru #loksabhaelection #congress #dkshivakumar