ಕೋವಿಡ್ ಸಂದರ್ಭದಲ್ಲಿ ಜೀವದ ಹಂಗು ತೊರೆದು ಸೇವೆ ಸಲ್ಲಿಸಿದ್ದ ತಮಿಳುನಾಡಿನ 1,800 ವೈದ್ಯಕೀಯ ಸಿಬ್ಬಂದಿಗಳು ಈಗ ಕೆಲಸವನ್ನು ಕಳೆದುಕೊಳ್ಳುವ ಆತಂಕಕ್ಕೆ ಒಳಗಾಗಿದ್ದಾರೆ. ತಮಿಳುನಾಡಿನಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾದ ಕಾರಣ, ಸರ್ಕಾರವು ‘ಅಮ್ಮಾ ಮಿನಿ ಕ್ಲೀನಿಕ್’ ಸೇವೆಯನ್ನು ಮುಚ್ಚಲು ನಿರ್ಧರಿಸಿದೆ. ಇದರಿಂದಾಗಿ ಸಾವಿರಾರು ಸಿಬ್ಬಂದಿಗಳು ನಿರುದ್ಯೋಗಿಗಳಾಗಲಿದ್ದಾರೆ.
ಕೋವಿಡ್ ಮೊದಲ ಅಲೆಯ ಬಳಿಕ ಈ ಹುದ್ದೆಗಳನ್ನು ಭರ್ತಿ ಮಾಡಲಾಗಿತ್ತು. ಅಂದಿನ ಎಡಪ್ಪಾಡಿ ಪಳನಿಸ್ವಾಮಿ ನೇತೃತ್ವದ ಎಐಎಡಿಎಂಕೆ ಸರ್ಕಾರವು 2020ರ ಸೆಪ್ಟೆಂಬರ್ ತಿಂಗಳಿನಿಂದ ಡಿಸೆಂಬರ್ ವರೆಗೆ ಸುಮಾರು 2,000 ಅಮ್ಮಾ ಕ್ಲೀನಿಕ್’ಗಳಲ್ಲಿ ಸೇವೆ ಸಲ್ಲಿಸಲು ವೈದ್ಯಕೀಯ ಸಿಬ್ಬಂದಿಗಳಿಗೆ ನೌಕರಿ ನೀಡಿತ್ತು. ಈ ಸಿಬ್ಬಂದಿಗಳು ಕೋವಿಡ್ ಸಂಬಂಧಿತ ಹಲವು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ್ದರು. ಐಸಿಯು ಕೇಂದ್ರ, ಫೀವರ್ ಕ್ಲೀನಿಕ್, ಸ್ವಾಬ್ ಸಂಗ್ರಹ, ಲಸಿಕಾಕರಣ ಹೀಗೆ ಎಲ್ಲಾ ಕಡೆಗಳಲ್ಲಿಯೂ ಇವರು ಸೇವೆ ಸಲ್ಲಿಸಿದ್ದರು. ಕೋವಿಡ್ ಎರಡನೇ ಅಲೆಯಿಂದ ದೇಶವೇ ನಲುಗಿ ಹೋದ ಸಂದರ್ಭದಲ್ಲಿ ಈ ಸಿಬ್ಬಂದಿಗಳು ಹಗಲಿರುಳೆನ್ನದೇ ಸೇವೆ ಸಲ್ಲಿಸಿದ್ದರು.
ಈಗ ಕೋವಿಡ್ ಕರಿನೆರಳು ದೇಶದಿಂದಲೇ ಮಾಯವಾಗುತ್ತಿರುವ ಸಂದರ್ಭದಲ್ಲಿ, ಡಿಎಂಕೆ ಸರ್ಕಾರವು ಈ ಸಿಬ್ಬಂದಿಗಳ ಸೇವೆಯನ್ನು ಮೊಟಕುಗೊಳಿಸಲು ನಿರ್ಧರಿಸಿದೆ. ಆದರೆ, ಕಳೆದ ಸುಮಾರ ಹದಿನಾರು ತಿಂಗಳು ಸೇವೆ ಸಲ್ಲಿಸಿದ ವೈದ್ಯರಿಗೆ ಯಾವುದೇ ಭದ್ರತೆ ನೀಡದೇ ಸರ್ಕಾರ ನಿರ್ಧಾರ ಕೈಗೊಂಡಿರುವುದು ಟೀಕೆಗೆ ಕಾರಣವಾಗಿದೆ.
“2021ರ ಫೆಬ್ರವರಿ 26ರಂದು ನಾನು ಸೇವೆಗೆ ಸೇರಿಕೊಂಡಿದ್ದೆ. ಬಹುತೇಕ ಅಮ್ಮಾ ಮಿನಿ ಕ್ಲೀನಿಕ್’ಗಳಲ್ಲಿ ನಮಗೆ ಕೆಲಸ ಇರುತ್ತಿತ್ತು. ಆದರೆ, ಎರಡನೇ ಅಲೆಯ ಸಂದರ್ಭದಲ್ಲಿ ಪರಿಸ್ಥಿತಿ ಬದಲಾಯಿತು. ಸುಮಾರು 30%ದಷ್ಟು ಮಿನಿ ಕ್ಲೀನಿಕ್ ಸಿಬ್ಬಂದಿಗಳು ಚೆನ್ನೈನ ದೊಡ್ಡ ದೊಡ್ಡ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸಬೇಕಾಯಿತು. ಈಗ ಸರ್ಕಾರವು ನಾವು ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ನಮ್ಮ ಹುದ್ದೆಗಳನ್ನು ಖಾಯಂಗೊಳಿಸಬೇಕಾಗಿದೆ. ಕೆಲವು ತಿಂಗಳ ಹಿಂದೆ ರಾಜ್ಯದ ಆರೋಗ್ಯ ಸಚಿವರು ಹೊಸ ಯೋಜನೆಯನ್ನು ಜಾರಿಗೊಳಿಸುವ ಭರವಸೆ ನೀಡಿದ್ದರು. ಆ ಯೋಜನೆಯಡಿ ನಮ್ಮನ್ನು ಖಾಯಂ ನೌಕರರಾಗಿ ಸೇರಿಸಿಕೊಳ್ಳುವುದಾಗಿ ಹೇಳಿದ್ದರು. ಈಗ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಹೊಸ ಯೋಜನೆಗೆ ಹಣ ಮೀಸಲಿಡಲು ಸಾಧ್ಯವಿರದ ಕಾರಣ ಯೋಜನೆಯನ್ನು ಆರಂಭಿಸಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾರೆ,” ಎಂದು 29 ವರ್ಷದ ವೈದ್ಯರೊಬ್ಬರು ಅಳಲು ತೋಡಿಕೊಂಡಿದ್ದಾರೆ.
ಈ ಕುರಿತಾಗಿ ಸರ್ಕಾರಕ್ಕೆ ಈಗಾಗಲೇ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಲಿಲ್ಲ. ಗುತ್ತಿಗೆಯ ನಿಯಮಗಳ ಪ್ರಕಾರ ಈ ಸಿಬ್ಬಂದಿಗಳ ಸೇವಾ ಅವಧಿ ಕಳೆದ ವರ್ಷದ ಡಿಸೆಂಬರ್ ಕೊನೆಗೇ ಮುಗಿದಿದ್ದರೂ, ಓಮಿಕ್ರಾನ್ ಲಗ್ಗೆ ಇಟ್ಟ ಕಾರಣ ಮಾರ್ಚ್ ಕೊನೆಯವರೆಗೆ ಸೇವಾ ಅವಧಿಯನ್ನು ಮುಂದೂಡಲಾಗಿತ್ತು. ಆದರೆ, ಮಾರ್ಚ್ ಬಳಿಕ ಈ ವೈದ್ಯರ ಭವಿಷ್ಯ ಅಯೋಮಯವಾಗಿದೆ.
ತಮಿಳುನಾಡಿಸ ವಯದ್ಯಕೀಯ ಕ್ಷೇತ್ರದಲ್ಲಿ ಯಾವುದೇ ಹುದ್ದೆಗಳು ಖಾಲಿ ಇಲ್ಲದ ಕಾರಣ ಎಂ ಆರ್ ಬಿ ಪರಿಕ್ಷೆಯನ್ನು ನಡೆಸುತ್ತಿಲ್ಲ. ಹೀಗಾಗಿ ಈಗಿರುವ ವೈದ್ಯರನ್ನೂ ಖಾಯಂಗೊಳಿಸಲು ಸಾಧ್ಯವಿಲ್ಲ ಎಂದು ಸರ್ಕಾರ ಹೇಳಿರುವುದು, ಸುಮಾರು ಎರಡು ವರ್ಷಗಳಿಂದ ನಿದ್ದೆಗೆಟ್ಟು ಕೋವಿಡ್ ಕೇಂದ್ರಗಳಲ್ಲಿ ಸೇವೆ ಸಲ್ಲಿಸಿದ ವೈದ್ಯರಿಗೆ ಆಘಾತವನ್ನು ಉಂಟುಮಾಡಿದೆ.