ಪ್ರಧಾನಿ ನರೇಂದ್ರ ಮೋದಿ ಅವರನ್ನು ʼದೊಡ್ಡಣ್ಣʼ ಎಂದು ಸಂಬೋಧಿಸಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಅವರ ಜೊತೆಯಾಗಿ ಕೆಲಸ ಮಾಡಲು ಬಯಸುವುದಾಗಿ ಹೇಳಿದ್ದಾರೆ.
ದಿಲ್ಲಿ ಸರ್ಕಾರದ ಬಜೆಟ್ ಅನ್ನು ಕೇಂದ್ರ ಗೃಹ ಸಚಿವಾಲಯ ಅನುಮೋದಿಸಿದ ಬಳಿಕ ದಿಲ್ಲಿ ವಿಧಾನಸಭೆಯನ್ನು ಉದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, ʼಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವೆ ಯಾವುದೇ ಸಂಘರ್ಷ ಇಲ್ಲದಿದ್ದರೆ ದಿಲ್ಲಿ 10 ಪಟ್ಟು ಹೆಚ್ಚು ಅಭಿವೃದ್ಧಿ ಹೊಂದುತ್ತಿತ್ತು. ದಿಲ್ಲಿ ಸರ್ಕಾರ ಕೆಲಸ ಮಾಡಲು ಬಯಸುತ್ತದೆ, ಹೊರತು ಸಂಘರ್ಷವನ್ನಲ್ಲ. ನಾವು ತಿಕ್ಕಾಟದಿಂದ ಬೇಸತ್ತಿದ್ದೇವೆ, ಅದು ಯಾರಿಗೂ ಒಳಿತು ಮಾಡುವುದಿಲ್ಲ. ನಾವು ಪ್ರಧಾನಿಯವರೊಂದಿಗೆ ಜೊತೆಯಾಗಿ ಕೆಲಸ ಮಾಡಲು ಬಯಸುತ್ತೇವೆ, ನಮಗೆ ಯಾವುದೇ ಜಗಳ ಬೇಡʼ ಎಂದು ಹೇಳಿದ್ದಾರೆ.
‘ನೀವು ಹಿರಿಯ ಅಣ್ಣ, ನಾನು ಕಿರಿಯ ಸಹೋದರ. ನೀವು ನನ್ನನ್ನು ಬೆಂಬಲಿಸಿದರೆ, ನಾನೂ ನಿಮ್ಮನ್ನು ಬೆಂಬಲಿಸುತ್ತೇನೆ. ನೀವು ಕಿರಿಯ ಸಹೋದರನ ಹೃದಯವನ್ನು ಗೆಲ್ಲಲು ಬಯಸಿದರೆ, ಅವನನ್ನು ಪ್ರೀತಿಸಬೇಕು.ʼ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ದೆಹಲಿ ಸರ್ಕಾರದ ಬಜೆಟ್ ಅನ್ನು ಅನುಮೋದನೆಗಾಗಿ ಕೇಂದ್ರಕ್ಕೆ ಕಳುಹಿಸುವ ಅಭ್ಯಾಸವು ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೂಲ ರಚನೆಗೆ ವಿರುದ್ಧವಾಗಿದೆ ಎಂದು ಕೇಜ್ರಿವಾಲ್ ಹೇಳಿದರು. ಇದು ನ್ಯಾಯಾಲಯದಲ್ಲಿ”ಎರಡು ನಿಮಿಷಗಳ ಕಾಲ” ವೂ ಪರಿಶೀಲನೆಗೆ ನಿಲ್ಲುವುದಿಲ್ಲ ಎಂದು ಮುಖ್ಯಮಂತ್ರಿ ಹೇಳಿದರು.
“ಬಜೆಟ್ ಅನ್ನು ಇಂದು ಮಂಡಿಸಬೇಕಾಗಿತ್ತು. ಕೇಂದ್ರವು ಅದನ್ನು ನಿಲ್ಲಿಸಿತು. ನಾವು ಬಜೆಟ್‌ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡದೆ ಎಂಎಚ್‌ಎ ಪ್ರಶ್ನೆಗೆ ಉತ್ತರಿಸಿದ್ದೇವೆ ಮತ್ತು ಅವರು ಈಗ ಅದನ್ನು ಅನುಮೋದಿಸಿದ್ದಾರೆ. ನಾನು ತಲೆಬಾಗಬೇಕೆಂದು ಅವರು ಬಯಸಿದ್ದರು. ಇದು ಅವರ ಅಹಂಕಾರವಲ್ಲದೆ ಬೇರೇನೂ ಅಲ್ಲ” ಎಂದು ಅವರು ಹೇಳಿದರು. .
ದೆಹಲಿ ಸರ್ಕಾರದ ಬಜೆಟ್‌ಗೆ ಕೇಂದ್ರದ ಆಕ್ಷೇಪಣೆ ಸಂಪ್ರದಾಯಕ್ಕೆ ಹೊರತಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು. “ಇದು ಮೊದಲ ಬಾರಿಗೆ ಸಂಭವಿಸಿದೆ.” ಎಂದು ಅವರು ಹೇಳಿದ್ದಾರೆ.
“ಇದು ಸಂವಿಧಾನದ ಮೇಲಿನ ದಾಳಿಯಾಗಿದೆ. ಕೇಂದ್ರ ಸರ್ಕಾರವು ರಾಜ್ಯ ಸರ್ಕಾರದ ಬಜೆಟ್ ಮಂಡನೆಯನ್ನು ತಡೆದು ನಿಲ್ಲಿಸುವ ಪರಿಸ್ಥಿತಿಯನ್ನು ಬಿಆರ್ ಅಂಬೇಡ್ಕರ್ ಕೂಡ ಯೋಚಿಸಿರಲಿಲ್ಲ” ಎಂದು ಕೇಜ್ರಿವಾಲ್ ಹೇಳಿದರು.