ಸಂಕ್ರಾಂತಿ ಸಮೀಪಿಸುತ್ತಿದೆ. ಬದಲಾವಣೆಯ ಗಾಳಿ ಬೀಸತೊಡಗಿದೆ. ಈ ಮನ್ವಂತರದ ಪರ್ವಕ್ಕೆ ರಾಜ್ಯ ರಾಜಕಾರಣ ಕೂಡ ಹೊರತಾಗಿಲ್ಲ!
ಹೌದು, ರಾಜ್ಯದ ಬಿಜೆಪಿ ಸರ್ಕಾರದ ನಾಯಕತ್ವ ಬದಲಾವಣೆಯ ಚರ್ಚೆಯನ್ನು ಇತ್ತೀಚಿನ ಹುಬ್ಬಳ್ಳಿ ಕಾರ್ಯಕಾರಿಣಿ ಕೆಲಮಟ್ಟಿಗೆ ಬದಿಗೆ ಸರಿಸಲು ಯಶಸ್ವಿಯಾಗಿದ್ದರೂ, ಪಕ್ಷದೊಳಗಿನ ಅಸಮಾಧಾನ ಮತ್ತು ಅಧಿಕಾರದ ಪೈಪೋಟಿಯನ್ನು ತಹಬದಿಗೆ ತರಲು ವಿಫಲವಾಗಿದೆ. ಕಾರ್ಯಕಾರಿಣಿಯ ವೇದಿಕೆಯ ಮಗ್ಗುಲಲ್ಲೇ ಸಚಿವ ಸ್ಥಾನ ಆಕಾಂಕ್ಷಿಗಳು ಮತ್ತು ಹಿರಿಯ ನಾಯಕರೇ ಸಂಪುಟ ಪುನರ್ ರಚನೆಯ ಬಗ್ಗೆ ಬಹಿರಂಗ ಹೇಳಿಕೆ ನೀಡುವ ಮೂಲಕ ಈ ಅಂಶವನ್ನು ಸಾಕ್ಷೀಕರಿಸಿದ್ದಾರೆ.
ಸಂಪುಟದಲ್ಲಿರುವ ಹಿರಿಯರು, ಅದರಲ್ಲೂ ಈಗಾಗಲೇ ಮೂರು ನಾಲ್ಕು ಬಾರಿ ಸಚಿವರಾಗಿ ಆಯಕಟ್ಟಿನ ಸ್ಥಾನಮಾನಗಳನ್ನು ಅನುಭವಿಸಿರುವವರು ಚುನಾವಣೆ ಹೊಸ್ತಿಲಲ್ಲಿ ಅಧಿಕಾರ ತ್ಯಜಿಸಿ ಪಕ್ಷ ಸಂಘಟನೆಗೆ ಹೋಗಬೇಕು ಮತ್ತು ಅದೇ ಹೊತ್ತಿಗೆ ಪಕ್ಷದ ಹೊಸ ಮುಖಗಳಿಗೆ, ಅರ್ಹರಿಗೆ ಸಚಿವ ಸಂಪುಟದಲ್ಲಿ ಅವಕಾಶ ಮಾಡಿಕೊಡಲು ಅನುವು ಮಾಡಿಕೊಡಬೇಕು ಎಂದು ಸ್ವತಃ ಸಿಎಂ ರಾಜಕೀಯ ಕಾರ್ಯದರ್ಶಿ ಎಂ ಪಿ ರೇಣುಕಾಚಾರ್ಯ ಕಾರ್ಯಕಾರಿಣಿಯ ಮಗ್ಗುಲಲ್ಲೇ ಬಹಿರಂಗ ಹೇಳಿಕೆ ನೀಡಿದ್ದರು. ಅದಾದ ಬೆನ್ನಲ್ಲೇ ಹಿರಿಯ ಸಚಿವ ಮತ್ತು ಹಲವು ಬಾರಿ ಸಚಿವರಾಗಿ ಆಯಕಟ್ಟಿನ ಖಾತೆಗಳನ್ನು ಪಡೆದಿರುವ ಕೆ ಎಸ್ ಈಶ್ವರಪ್ಪ ಪ್ರತಿಕ್ರಿಯೆ ನೀಡಿ, ಪಕ್ಷ ಹೇಳಿದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಸಂಘಟನೆಯ ಕೆಲಸ ಮಾಡಲು ತಾವು ಸದಾ ಮುಂದಿರುವುದಾಗಿ ಹೇಳಿದ್ದರು.
ಹೀಗೆ ಪಕ್ಷದ ಹಿರಿಯ ನಾಯಕರ ನಡುವೆ ಹಿರಿಯರು ಸಚಿವ ಸಂಪುಟದಿಂದ ಹೊರನಡೆಯುವುದು ಮತ್ತು ಹೊಸಬರಿಗೆ ಅವಕಾಶ ಕೊಡುವುದರ ಬಗ್ಗೆ ಬಹಿರಂಗ ಹೇಳಿಕೆ-ಪ್ರತಿಹೇಳಿಕೆಗಳು ಬಿರುಸಾಗಿರುವ ಹೊತ್ತಿನಲ್ಲೇ ಬಿಜೆಪಿಯ ರೆಬಲ್ ಸ್ಟಾರ್ ಎಂದೇ ಜನಪ್ರಿಯರಾಗಿರುವ ಬಸನಗೌಡ ಪಾಟೀಲ್ ಯತ್ನಾಳ್ ಒಂದು ಹೇಳಿಕೆ ನೀಡಿ, ಸಚಿವ ಸಂಪುಟ ಪುನರ್ ರಚನೆಯ ಕುರಿತ ಚರ್ಚೆಗಳನ್ನು ಇನ್ನಷ್ಟು ಸ್ಪಷ್ಟಗೊಳಿಸಿದರು.
“ ಸಂಕ್ರಾಂತಿಯ ಬಳಿಕ ಪಕ್ಷ ಮತ್ತು ಸರ್ಕಾರದಲ್ಲಿ ಬದಲಾವಣೆಯಾಗಲಿದೆ. ಸಚಿವ ಸಂಪುಟದಲ್ಲಿ ಮಾತ್ರವಲ್ಲದೆ, ಪಕ್ಷದ ಸಂಘಟನೆಯಲ್ಲೂ ಬದಲಾವಣೆಯಾಗಲಿದೆ. ಆ ಮೂಲಕ ಮುಂದಿನ ವಿಧಾನಸಭಾ ಚುನಾವಣೆಗೆ ಪಕ್ಷವನ್ನು ಬಲಪಡಿಸುವುದು ಮೋದಿಯವರ ಯೋಜನೆ. ರಾಜ್ಯದ ಎಲ್ಲಾ ಬೆಳವಣಿಗೆಗಳನ್ನೂ ಪ್ರಧಾನಮಂತ್ರಿಗಳ ಗುಪ್ತಚರ ಇಲಾಖೆ ಗಮನಿಸುತ್ತಿದೆ. ಹಾಗಾಗಿ ಆ ಎಲ್ಲಾ ಮಾಹಿತಿಯ ಹಿನ್ನೆಲೆಯಲ್ಲೇ ಸಂಕ್ರಾಂತಿಯ ಬಳಿಕ ಮೋದಿ ದೊಡ್ಡ ನಿರ್ಧಾರ ಕೈಗೊಳ್ಳಲಿದ್ದಾರೆ. ಬಿಜೆಪಿಯಲ್ಲಿ ಮತ್ತು ಸರ್ಕಾರದಲ್ಲಿ ಮೋದಿ ತರುವ ಬದಲಾವಣೆಯನ್ನು ಕಾದುನೋಡಿ ಎಂದು ಯತ್ನಾಳ್ ಹೇಳಿದ್ದಾರೆ.
ಅಷ್ಟೇ ಅಲ್ಲ; ಗೃಹ ಸಚಿವರ ಬಗ್ಗೆಯೂ ಪ್ರಸ್ತಾಪಿಸಿರುವ ಯತ್ನಾಳ್, “ಗಟ್ಸ್ ಇರೋದು ಗೃಹ ಸಚಿವರಾಗಬೇಕು. ನಮ್ಮಂಥವರ ಕೈಯಲ್ಲಿ ಗೃಹ ಖಾತೆ ಕೊಟ್ರೆ, ಬರೋಬ್ಬರಿ ಮಾಡಿ ತೋರಿಸ್ತೀವಿ. ದೇಶ ವಿರೋಧಿ ಚಟುವಟಿಕೆ ಮಾಡೋರಿಗೆ ಸರಿಯಾಗಿ ಬುದ್ಧಿಕಲಿಸ್ತೀವಿ. ಆದರೆ, ಈಗಿನ ಗೃಹ ಸಚಿವರು ಪ್ರಾಮಾಣಿಕರು, ಒಳ್ಳೆಯವರೇನೋ ಸರಿ. ಆದರೆ, ಗಡುಸು ಇಲ್ಲ. ಅವರೇನಿದ್ದರೂ ಅರಣ್ಯ, ಕಂದಾಯ, ಗ್ರಾಮೀಣಾಭಿವೃದ್ಧಿಯಂತಹ ಖಾತೆಗೇ ಸರಿ” ಎಂದಿದ್ದಾರೆ.
ಎಂ ಪಿ ರೇಣುಕಾಚಾರ್ಯ ಹೇಳಿಕೆಯ ಬೆನ್ನಲ್ಲೇ ಮಲೆನಾಡಿನ ಇಬ್ಬರು ಸಚಿವರ ಪೈಕಿ ಒಬ್ಬರಿಗೆ ಕೋಕ್ ಸಿಗಬಹುದು. ಅದರಲ್ಲೂ ಹಲವು ಬಾರಿ ಸಚಿವರಾಗಿ ಅಧಿಕಾರ ಅನುಭವಿಸಿರುವ ನಾಯಕರನ್ನೇ ಸಂಪುಟದಿಂದ ಹೊರ ಕಳಿಸಿ, ಪಕ್ಷ ಸಂಘಟನೆಗೆ ಹಚ್ಚಬಹುದು ಎಂಬ ಚರ್ಚೆಗಳು ಆರಂಭವಾಗಿದ್ದವು. ಇದೀಗ ಯತ್ನಾಳ್ ಹೇಳಿಕೆ, ಮಲೆನಾಡಿನ ಇಬ್ಬರು ಸಚಿವರ ಪೈಕಿ ಒಬ್ಬರು ಸಂಪುಟದಿಂದ ಹೊರಹೋಗುವುದು ಮಾತ್ರವಲ್ಲ; ಮತ್ತೊಬ್ಬರ ಖಾತೆ ಬದಲಾವಣೆಯೂ ಆಗಬಹುದು ಎಂಬ ಸೂಚನೆಯನ್ನು ನೀಡಿದೆ.
ಅಂದರೆ, ಮಲೆನಾಡು ಭಾಗದಿಂದ ಸಚಿವರಾಗಿರುವ ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ಸಂಪುಟದಿಂದ ಹೊರಹೋಗುತ್ತಾರೆ ಮತ್ತು ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಖಾತೆ ಬದಲಾವಣೆಯಾಗಲಿದೆ ಎಂಬುದು ಎಂ ಪಿ ರೇಣುಕಾಚಾರ್ಯ ಮತ್ತು ಯತ್ನಾಳ್ ಹೇಳಿಕೆಗಳ ಸೂಚ್ಯ ಸಾರಾಂಶ.
ಇಬ್ಬರೂ ಬಿಜೆಪಿಗಿಂತ ಆರ್ ಎಸ್ ಎಸ್ ಗೆ ಹೆಚ್ಚು ನಿಷ್ಠರು ಮತ್ತು ಸಂಘದ ಆಣತಿಯನ್ನು ಚಾಚೂ ತಪ್ಪದೆ ಪಾಲಿಸುವವರು. ಹಾಗಿದ್ದರೂ ಈ ಇಬ್ಬರ ಪಾಲಿಗೆ ಮುಳುವಾಗಿದ್ದು ಯಾವುದು? ಯಾವ ಕಾರಣಕ್ಕೆ ಇವರನ್ನು ಸ್ಥಾನಪಲ್ಲಟಗೊಳಿಸಲಾಗುತ್ತಿದೆ? ಯಾವ ಕಾರಣಕ್ಕೆ ಸಂಪುಟದಿಂದ ಕೈಬಿಡುವ ಸಾಧ್ಯತೆ ಇದೆಯೇ? ಎಂಬುದು ಕುತೂಹಲಕಾರಿ. ಅದರಲ್ಲೂ ಮುಖ್ಯವಾಗಿ ಮೂರು ಬಾರಿ ಗೆದ್ದರೂ ಸಚಿವ ಸ್ಥಾನ ವಂಚಿತರಾಗಿ ಸಾಮಾನ್ಯ ಶಾಸಕರಾಗಿಯೇ ಇದ್ದ ಆರಗ ಜ್ಞಾನೇಂದ್ರ ಅವರನ್ನು ಬೊಮ್ಮಾಯಿ ಸಂಪುಟದಲ್ಲಿ ಏಕಾಏಕಿ ಗೃಹ ಸಚಿವಕ್ಕೆ ಏರಿಸಿದ್ದೇ ಆರ್ ಎಸ್ ಎಸ್. ಸಂಘದ ಆದೇಶದಂತೆಯೇ ಅವರಿಗೆ ದಿಢೀರನೇ ಗೃಹ ಖಾತೆ ನೀಡಲಾಗಿತ್ತು. ಹಾಗಿದ್ದರೂ ಆರು ತಿಂಗಳಲ್ಲೇ ಸಂಘ ಆರಗ ವಿಷಯದಲ್ಲಿ ಭ್ರಮನಿರಸನಗೊಂಡಿತೆ? ಎಂಬುದು ಪ್ರಶ್ನೆ.