ಕೇಂದ್ರ ಸರ್ಕಾರದ ವಿರೋಧದ ನಡುವೆಯೂ ಬಿಹಾರದಲ್ಲಿ ಜಾತಿ ಸಮೀಕ್ಷೆ ನಡೆಸಲು ಅಧಿಸೂಚನೆಯನ್ನು ಹೊರಡಿಸಲಾಗಿದೆ. ಈ ಸಮೀಕ್ಷೆಯ ಪ್ರಕ್ರಿಯೆ 28 ಫೆಬ್ರವರಿ 2023ರೊಳಗೆ ಪೂರ್ಣಗೊಳ್ಳಲಿದ್ದು ಇದಕ್ಕಾಗಿ 500 ಕೋಟಿ ರೂಪಾಯಿ ಹಣವನ್ನು ಮೀಸಲಿಡಲಾಗಿದೆ. ಜಾತಿ ಜೊತೆಗೆ ಆರ್ಥಿಕ ಸ್ಥಿತಿಗತಿಯ ಬಗ್ಗೆಯೂ ಸಮೀಕ್ಷೆ ನಡೆಸಲು ಬಿಹಾರ ಸರ್ಕಾರ ಮುಂದಾಗಿದ್ದು ಇದು ದೇಶಾದ್ಯಂತ ಬೇರೆಯದೇ ರೀತಿಯ ಸಂಚಲನ ಮೂಡಿಸಿದೆ.
ಬಿಹಾರದಲ್ಲಿ ಆಡಳಿತಾರೂಢ ಜೆಡಿಯು ಹಾಗೂ ಪ್ರತಿಪಕ್ಷಗಳಾದ ರಾಷ್ಟ್ರೀಯ ಜನತಾದಳ ಮತ್ತು ಕಾಂಗ್ರೆಸ್ ಜಾತಿ ಜನಗಣತಿ ನಡೆಸುವುದರ ಪರವಾಗಿದ್ದವು. ಆದರೆ ಕೇಂದ್ರ ಸರ್ಕಾರ ಇದನ್ನು ನಿರಾಕರಿಸುತ್ತಲೇ ಬಂದಿತ್ತು. ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಲೋಕಸಭೆಯಲ್ಲೂ ಇಂತಹ ಜನಗಣತಿಯನ್ನು ನಿರಾಕರಿಸಿದ್ದರು. ಈ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ರಾಜ್ಯದ ಬಿಜೆಪಿ ನಾಯಕರೂ ಕೇಂದ್ರ ಸರ್ಕಾರದ ಜೊತೆ ದನಿಗೂಡಿಸಿ ಜಾತಿ ಸಮೀಕ್ಷೆಯನ್ನು ವಿರೋಧಿಸಿದ್ದವು. ಆದರೆ ಅಂತಿಮವಾಗಿ ಜಾತಿ ಸಮೀಕ್ಷೆ ಮಾಡುವ ಬಗ್ಗೆ ಅಧಿಸೂಚನೆ ಹೊರಡಿಸುವ ವಿಷಯಕ್ಕೆ ಸಂಬಂಧಿಸಿದಂತೆ ನಿತೀಶ್ ಕುಮಾರ್ ಸರ್ಕಾರ ತನ್ನ ಬದ್ಧತೆಯನ್ನು ಪ್ರದರ್ಶಿಸಿದೆ.
ಬಿಹಾರದಲ್ಲಿ ನಡೆಯುತ್ತಿರುವ ಜಾತಿ ಸಮೀಕ್ಷೆಯನ್ನು ಜಾತಿ ಗಣತಿ ಎಂದು ಏಕೆ ಕರೆಯುತ್ತಿಲ್ಲ? ಈ ಹಿಂದೆ ಯಾವುದೇ ರಾಜ್ಯ ಇಂತಹ ಸಮೀಕ್ಷೆ ನಡೆಸಿದೆಯೇ? ಇಂತಹ ಜನಗಣತಿಯನ್ನು ಕೊನೆಯ ಬಾರಿಗೆ ಯಾವಾಗ ನಡೆಸಲಾಯಿತು? ಜಾತಿ ಗಣತಿಗೆ ಮೊದಲಿನಿಂದಲೂ ಬೇಡಿಕೆ ಬಂದಿದ್ದು ಯಾವಾಗ? ಕೇಂದ್ರ ಸರ್ಕಾರಗಳು ಜಾತಿ ಗಣತಿಯಿಂದ ಹಿಂದೆ ಸರಿಯುವುದೇಕೆ? ಎಂಬ ಅನೇಕ ಪ್ರಶ್ನೆಗಳಿವೆ.
ವಾಸ್ತವವಾಗಿ ಜನಗಣತಿಯನ್ನು ನಡೆಸುವುದು ಕೇಂದ್ರ ಸರ್ಕಾರ. ಜಾತಿ ಗಣತಿ ನಡೆಸುವುದು ಕೂಡ ಕೇಂದ್ರ ಸರ್ಕಾರದ ಕರ್ತವ್ಯವೇ. ಆದರೆ ಕೇಂದ್ರ ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನಗಣತಿಯನ್ನು ಮಾತ್ರ ನಡೆಸುತ್ತದೆ. ಸ್ವಾತಂತ್ರ್ಯಾ ನಂತರ ಹಿಂದುಳಿದ ಮತ್ತು ಇತರೆ ಜಾತಿಗಳ ಜಾತಿ ಗಣತಿಯನ್ನು ನಡೆಸಿಯೇ ಇಲ್ಲ. ರಾಜ್ಯ ಸರ್ಕಾರಗಳು ಜನಗಣತಿ ನಡೆಸುವಂತಿಲ್ಲ. ಅದಕ್ಕಾಗಿಯೇ ರಾಜ್ಯ ಸರ್ಕಾರ ‘ಜಾತಿ ಸಮೀಕ್ಷೆ’ ಎಂದು ಹೇಳುತ್ತಿವೆ.
ಹಿಂದೆ ಕರ್ನಾಟಕದಲ್ಲೂ ಇದೇ ರೀತಿಯ ಸಮೀಕ್ಷೆ ನಡೆದಿತ್ತು. 2014ರಲ್ಲಿ ಅಂದಿನ ಸಿದ್ದರಾಮಯ್ಯ ಸರ್ಕಾರ ಜಾತಿ ಸಮೀಕ್ಷೆ ನಡೆಸಿತ್ತು. ಇದನ್ನು ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ಎಂದು ಕರೆಯಲಾಗಿತ್ತು. ಅದರ ವರದಿ 2017 ರಲ್ಲಿ ಬಂದಿತು, ಆದರೆ ಅದನ್ನು ಸಾರ್ವಜನಿಕಗೊಳಿಸಲಾಗಿಲ್ಲ.
ಈ ಸಮೀಕ್ಷೆಯು ತಮ್ಮ ಸಮುದಾಯವನ್ನು ಒಬಿಸಿ ಅಥವಾ ಎಸ್‌ಸಿ/ಎಸ್‌ಟಿಗೆ ಸೇರಿಸಿಕೊಳ್ಳಲು ಒತ್ತಾಯಿಸುತ್ತಿರುವ ಜನರಿಗೆ ದೊಡ್ಡ ಅವಕಾಶವಾಗಿದೆ. ಹೆಚ್ಚಿನ ಜನರು ಜಾತಿ ಕಾಲಂನಲ್ಲಿ ಉಪಜಾತಿಯ ಹೆಸರನ್ನು ನಮೂದಿಸಿದ್ದಾರೆ. ಇದರಿಂದಾಗಿ ಕರ್ನಾಟಕದಲ್ಲಿ ಇದ್ದಕ್ಕಿದ್ದಂತೆ 192ಕ್ಕೂ ಹೆಚ್ಚು ಹೊಸ ಜಾತಿಗಳು ಕಾಣಿಸಿಕೊಂಡವು. 10ಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ಸುಮಾರು 80 ಹೊಸ ಜಾತಿಗಳು ಇದ್ದವು.
ಒಂದೆಡೆ ಒಬಿಸಿಗಳ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾದರೆ, ಮತ್ತೊಂದೆಡೆ ಲಿಂಗಾಯತರು ಮತ್ತು ಒಕ್ಕಲಿಗರಂತಹ ಪ್ರಮುಖ ಸಮುದಾಯಗಳ ಜನರ ಸಂಖ್ಯೆ ಕಡಿಮೆಯಾಗಿದೆ. ಇದೇ ಹಿನ್ನೆಲೆಯಲ್ಲಿ ನಂತರ ಬಂದ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಮತ್ತು ಈಗಿನ ಬಿಜೆಪಿ ಸರ್ಕಾರ 150 ಕೋಟಿ ರೂಪಾಯಿ ಖರ್ಚು ಮಾಡಿಯೂ ವರದಿಯನ್ನು ಕೋಲ್ಡ್ ಸ್ಟೋರೇಜ್‌ನಲ್ಲಿ ಇರಿಸಿವೆ.
ಕೊನೆಯ ಜಾತಿ ಗಣತಿ ನಡೆದದ್ದು ಯಾವಾಗ?
ದೇಶದಲ್ಲಿ ಜನಗಣತಿ ಪ್ರಾರಂಭವಾದದ್ದು 1881ರಲ್ಲಿ. ಮೊದಲ ಜನಗಣತಿಯಲ್ಲಿ ಮಾಹಿತಿ ಬಿಡುಗಡೆ ಮಾಡಲಾಗಿತ್ತು. ನಂತರ ಪ್ರತಿ ಹತ್ತು ವರ್ಷಗಳಿಗೊಮ್ಮೆ ಜನಗಣತಿ ನಡೆಯುತ್ತಿತ್ತು. 1941ರ ಜನಗಣತಿಯಲ್ಲಿ ಜಾತಿವಾರು ಡೇಟಾವನ್ನು ಸಂಗ್ರಹಿಸಲಾಯಿತು. ಆದರೆ ಅದನ್ನು ಬಿಡುಗಡೆ ಮಾಡಲಿಲ್ಲ. ಸ್ವಾತಂತ್ರ್ಯದ ನಂತರದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಂಕಿ ಅಂಶಗಳನ್ನು ಬಿಡುಗಡೆ ಮಾಡಲಾಗಿದೆ. 1931ರ ನಂತರ ಇತರ ಜಾತಿಗಳ ಜಾತಿವಾರು ಅಂಕಿ ಅಂಶಗಳು ಪ್ರಕಟವಾಗಿಲ್ಲ.

ಜಾತಿ ಗಣತಿಯ ಅಗತ್ಯವೇನು?
1947ರಲ್ಲಿ ದೇಶ ಸ್ವತಂತ್ರವಾಯಿತು. 1951ರಲ್ಲಿ ಸ್ವತಂತ್ರ ಭಾರತದಲ್ಲಿ ಮೊದಲ ಜನಗಣತಿ ನಡೆಸಲಾಯಿತು. 1951ರಿಂದ 2011ರವರೆಗೆ ನಡೆಸಿದ ಎಲ್ಲಾ 7 ಜನಗಣತಿಗಳಲ್ಲಿ ಎಸ್‌ಸಿ ಮತ್ತು ಎಸ್‌ಟಿಗಳಿಗೆ ಜಾತಿ ಗಣತಿಯನ್ನು ಮಾಡಲಾಗಿದೆ, ಆದರೆ ಒಬಿಸಿ ಮತ್ತು ಇತರ ಜಾತಿಗಳ ಜಾತಿ ಆಧಾರಿತ ಜನಗಣತಿಯನ್ನು ಎಂದಿಗೂ ನಡೆಸಲಾಗಿಲ್ಲ. 1990ರಲ್ಲಿ ಅಂದಿನ ವಿ.ಪಿ. ಸಿಂಗ್ ಸರ್ಕಾರ ಮಂಡಲ್ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಿತು. ಆಗಲೂ 1931ರ ಜನಗಣತಿ ಆಧಾರದ ಮೇಲೆ ಮೀಸಲಾತಿ ಮಿತಿ ನಿಗದಿಪಡಿಸಲಾಗಿತ್ತು. 1931ರಲ್ಲಿ ದೇಶದ ಹಿಂದಿನ ಜಾತಿಗಳು ಒಟ್ಟು ಜನಸಂಖ್ಯೆಯ ಶೇಕಡಾ 52 ರಷ್ಟಿದ್ದರು. ಎಸ್‌ಸಿ ಮತ್ತು ಎಸ್‌ಟಿ ವರ್ಗದ ಮೀಸಲಾತಿ ಅವರ ಜನಸಂಖ್ಯೆಗೆ ಅನುಗುಣವಾಗಿದೆ. ಆದರೆ ಒಬಿಸಿ ಮೀಸಲಾತಿ ಆಧಾರವು 90 ವರ್ಷಗಳ ಹಿಂದಿನ ಜನಗಣತಿಯಾಗಿದೆ. ಇದು ಈಗ ಪ್ರಸ್ತುತವಲ್ಲ. ಜಾತಿ ಗಣತಿ ನಡೆದರೆ ಅದಕ್ಕೊಂದು ಗಟ್ಟಿ ತಳಹದಿ ಬರುತ್ತದೆ. ನಂತರ ಹೊಸ ಅಂಕಿ ಅಂಶಗಳನ್ನು ಆಧರಿಸಿ ಮೀಸಲಾತಿಯನ್ನು ಮರು ನಿಗಧಿ ಮಾಡಬಹುದಾಗಿದೆ.
ಇದನ್ನು ಮಾಡಿದ ನಂತರ ಹಿಂದುಳಿದ ಮತ್ತು ಹಿಂದುಳಿದ ವರ್ಗಗಳ ಜನರ ಶೈಕ್ಷಣಿಕ, ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಸ್ಥಿತಿಗತಿ ತಿಳಿಯುತ್ತದೆ ಎಂದು ಜಾತಿ ಗಣತಿಗೆ ಆಗ್ರಹಿಸುವವರು ಹೇಳುತ್ತಾರೆ. ಅವರ ಒಳಿತಿಗಾಗಿ ಸೂಕ್ತ ನೀತಿಯನ್ನು ನಿರ್ಧರಿಸಬಹುದು. ಇದೇ ವೇಳೆ ಇದನ್ನು ವಿರೋಧಿಸುತ್ತಿರುವವರು ಇಂತಹ ಜನಗಣತಿ ಸಮಾಜದಲ್ಲಿ ಜಾತಿ ವಿಭಜನೆ ಮಾಡುತ್ತದೆ. ಇದರಿಂದ ಜನರಲ್ಲಿ ವೈಷಮ್ಯ ಮೂಡುತ್ತದೆ ಎಂದು ಆಧಾರವಿಲ್ಲದ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಈ ಬಗ್ಗೆ ಕೇಂದ್ರ ಸರ್ಕಾರದ ನಿಲುವೇನು?
ಕೇಂದ್ರ ಗೃಹ ಸಚಿವಾಲಯವು ಕಳೆದ ಬಜೆಟ್ ಮತ್ತು ಮುಂಗಾರು ಅಧಿವೇಶನದಲ್ಲಿ ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ಜಾತಿ ಗಣತಿಯನ್ನು ನಿರಾಕರಿಸಿತು. ಪ್ರತಿ ಬಾರಿಯಂತೆ ಈ ಬಾರಿಯೂ ಕೇವಲ ಎಸ್‌ಸಿ ಮತ್ತು ಎಸ್‌ಟಿ ಸಮುದಾಯಗಳ ಜಾತಿ ಗಣತಿ ಮಾತ್ರ ನಡೆಯಲಿದೆ ಎಂದು ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಹೇಳಿದ್ದರು. ಆದರೆ ಮೋದಿ ಸರ್ಕಾರದ ಮೊದಲ ಅವಧಿಯಲ್ಲಿ ಈ ನಿಲುವು ಇರಲಿಲ್ಲ. 31 ಆಗಸ್ಟ್ 2018ರಂದು ಅಂದಿನ ಗೃಹ ಸಚಿವ ರಾಜನಾಥ್ ಸಿಂಗ್ 2021ರ ಜನಗಣತಿ ಸಿದ್ಧತೆಗಳ ಕುರಿತು ಸಭೆ ನಡೆಸಿದ್ದರು. ಬಳಿಕ ಈ ಜನಗಣತಿಯಲ್ಲಿ ಒಬಿಸಿ ಲೆಕ್ಕಾಚಾರ ಪರಿಗಣಿಸಲಾಗುತ್ತಿದೆ ಎಂದು ಪಿಐಬಿ ತಿಳಿಸಿತ್ತು.
ಉಲ್ಟಾ ಹೊಡೆಯುತ್ತಿರುವ ಬಿಜೆಪಿ ನಾಯಕರು
ಬಿಜೆಪಿ ವಿರೋಧ ಪಕ್ಷದಲ್ಲಿದ್ದಾಗ ಅದರ ನಾಯಕರೇ ಬೇರೆ ನಿಲುವು ಹೊಂದಿದ್ದರು. 2011ರ ಜನಗಣತಿಗೂ ಮುನ್ನ ಮಾಜಿ ಕೇಂದ್ರ ಸಚಿವ ಹಾಗೂ ಬಿಜೆಪಿ ನಾಯಕ ಗೋಪಿನಾಥ್ ಮುಂಡೆ ಜಾತಿಗಣತಿಗೆ ಆಗ್ರಹಿಸಿದ್ದರು. 2011ರ ಜನಗಣತಿಯಲ್ಲಿ ಒಬಿಸಿಗಳನ್ನು ಲೆಕ್ಕ ಹಾಕದಿದ್ದರೆ ಅವರಿಗೆ ಅನ್ಯಾಯ ಮಾಡುತ್ತೇವೆ ಎಂದು ಅವರು 2010ರಲ್ಲಿ ಸಂಸತ್ತಿನಲ್ಲಿ ಹೇಳಿದ್ದರು.
ಕೇಂದ್ರ ಸರಕಾರದಿಂದ ಜಾತಿ ಗಣತಿಗೆ ಹಿಂದೇಟು ಏಕೆ?
ಮಂಡಲ್ ಆಯೋಗದ ನಂತರ ಹೆಚ್ಚು ಪ್ರಾದೇಶಿಕ ಪಕ್ಷಗಳು ಹುಟ್ಟಿಕೊಂಡಿವೆ. ಬಿಹಾರ ಮತ್ತು ಉತ್ತರ ಪ್ರದೇಶದಂತಹ ರಾಜ್ಯಗಳಲ್ಲಿ ಹೆಚ್ಚಿನ ಪರಿಣಾಮ ಬೀರಿದೆ. ಬಿಹಾರದಲ್ಲಿ ಆರ್‌ಜೆಡಿ ಮತ್ತು ಜೆಡಿಯು ಮತ್ತು ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷಗಳು ಒಬಿಸಿ ಸಮಸ್ಯೆಯನ್ನು ಎತ್ತಿದವು. ಈ ಪಕ್ಷಗಳಿಗೆ ಒಬಿಸಿ ಮತದಾರರ ಬೆಂಬಲವೂ ಸಿಕ್ಕಿತು ಆದರೆ ಈಗ ಈ ಟ್ರೆಂಡ್ ಬದಲಾಗಿದ್ದು ಕಳೆದ ಕೆಲ ಚುನಾವಣೆಗಳಲ್ಲಿ ಬಿಜೆಪಿ ಕೂಡ ಒಬಿಸಿಗಳ ಮತ ಪಡೆದಿದೆ. ಆದರೆ ಬಿಜೆಪಿಗೆ ಈಗಲೂ ಮೇಲ್ವರ್ಗ ಅಥವಾ ಮೇಲ್ಜಾತಿಗಳದ ಸಿಗುವಷ್ಟು ಬೆಂಬಲ ಒಬಿಸಿಗಳಿಂದ ಸಿಗುತ್ತಿಲ್ಲ. ಆದ್ದರಿಂದ ಕೇಂದ್ರ ಸರ್ಕಾರ ಮತ್ತು ಬಿಜೆಪಿ ಜಾತಿ ಗಣತಿ ಅಥವಾ ಸಮೀಕ್ಷೆ ನಡೆಸಲು ವಿರೋಧ ವ್ಯಕ್ತಪಡಿಸುತ್ತಿವೆ.
ಜಾತಿ ಗಣತಿಯಾದರೆ ಪ್ರಾದೇಶಿಕ ಪಕ್ಷಗಳು ಕೇಂದ್ರ ಸರ್ಕಾರಿ ಉದ್ಯೋಗಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಒಬಿಸಿ ಕೋಟಾವನ್ನು ಬದಲಾಯಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಬಹುದು. ಇದು ಮತ್ತೊಂದು ‘ಮಂಡಲ್’ ತರಹದ ಪರಿಸ್ಥಿತಿಯನ್ನು ಸೃಷ್ಟಿಸಬಹುದು. ಬಿಜೆಪಿಗೆ ವಿರುದ್ಧ ಹೋರಾಡುತ್ತಿರುವ ಪ್ರಾದೇಶಿಕ ಪಕ್ಷಗಳಿಗೆ ಹೊಸ ಅಸ್ತ್ರ ನೀಡಿದಂತಾಗುತ್ತದೆ. ಮುಂದೆ ಇದನ್ನು ನಿಭಾಯಿಸಲು ಕಷ್ಟವಾಗಬಹುದು ಎಂಬ ಕಾರಣಕ್ಕೆ ಬಿಜೆಪಿ ಮಾಡುತ್ತಿದೆ.
ಜಾತಿ ಗಣತಿಗೆ ಮೊದಲು ಬೇಡಿಕೆ ಬಂದಿದ್ದು ಯಾವಾಗ?
ಪ್ರತಿಯೊಂದು ಜನಗಣತಿಗೂ ಮುನ್ನ ಇಂತಹ ಬೇಡಿಕೆ ಉದ್ಭವಿಸುತ್ತದೆ. ಒಬಿಸಿಗೆ ಸೇರಿದ ನಾಯಕರು ಈ ಬಗ್ಗೆ ದನಿ ಎತ್ತುತ್ತಾರೆ. ಮತ್ತೊಂದೆಡೆ ಮೇಲ್ಜಾತಿ ನಾಯಕರು ಈ ಬೇಡಿಕೆಯನ್ನು ವಿರೋಧಿಸುತ್ತಾರೆ. ಈಗ ನಿತೀಶ್ ಕುಮಾರ್, ತೇಜಸ್ವಿ ಯಾದವ್, ಮುಖೇಶ್ ಸಾಹ್ನಿ ಮುಂತಾದವರು ಈ ಬಗ್ಗೆ ಮಾತನಾಡುತ್ತಿದ್ದಾರೆ. ಒಬಿಸಿ ಸಮುದಾಯಕ್ಕೆ ಸೇರುವ ಮಹಾರಾಷ್ಟ್ರದ ಬಿಜೆಪಿ ನಾಯಕಿ ಪಂಕಜಾ ಮುಂಡೆ ಕೂಡ ಜನವರಿ 24 ರಂದು ಟ್ವೀಟ್‌ನಲ್ಲಿ ಇಂತಹ ಬೇಡಿಕೆಯನ್ನು ಪ್ರತಿಪಾದಿಸಿದ್ದಾರೆ. ಇದೇ ಏಪ್ರಿಲ್ 1 ರಂದು ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗವು 2021ರ ಜನಗಣತಿಯಲ್ಲಿ ಒಬಿಸಿ ಜನಸಂಖ್ಯೆಯನ್ನು ಎಣಿಕೆ ಮಾಡುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿತ್ತು. ಸುಪ್ರೀಂ ಕೋರ್ಟ್‌ನಲ್ಲಿಯೂ ಈ ಸಂಬಂಧ ಅರ್ಜಿ ವಿಚಾರಣೆಗೆ ಬಾಕಿ ಇದೆ. ಬಿಹಾರದಲ್ಲಿ ಈಗ ಜಾತಿ ಸಮೀಕ್ಷೆ ನಡೆಸುವ ಪ್ರಕ್ರಿಯೆ ಆರಂಭವಾಗಿರುವುದರಿಂದ ಮುಂದೆ ಈ ಬಗ್ಗೆ ಇನ್ನಷ್ಟು ರಾಜ್ಯಗಳು ಮುಂದಡಿ ಇಡುವ ಸಾಧ್ಯತೆ ಇದೆ.












