ವಿಶ್ವಕಪ್ ನ 5ನೇ ಪಂದ್ಯದಲ್ಲಿ ಅಪ್ಘಾನಿಸ್ತಾನ್ ತಂಡ ಉಗಾಂಡ ವಿರುದ್ಧ ಭರ್ಜರಿ ಜಯ ಸಾಧಿಸಿದೆ.
ಟಾಸ್ ಗೆದ್ದ ಉಗಾಂಡ ತಂಡ ಮೊದಲು ಬೌಲಿಂಗ್ ಆಯ್ದುಕೊಂಡಿತ್ತು. ಹೀಗಾಗಿ ಮೊದಲು ಬ್ಯಾಟ್ ಮಾಡಿದ ಅಪ್ಘಾನಿಸ್ತಾನ್ ಭರ್ಜರಿ ಇನ್ನಿಂಗ್ಸ್ ಕಟ್ಟಿತು. ಆರಂಭಿಕರಾದ ರಹಮಾನುಲ್ಲಾ ಗುರ್ಬಾಝ್ ಹಾಗೂ ಇಬ್ರಾಹಿಂ ಝದ್ರಾನ್ ಉತ್ತಮ ಪ್ರದರ್ಶನ ತೋರಿದರು. ಮೊದಲ ವಿಕೆಟ್ ಗೆ 154 ರನ್ ಗಳ ಜೊತೆಯಾಟವಾಡಿದ ನಂತರ ಇಬ್ರಾಹಿಂ ಝದ್ರಾನ್ (74) ಮಸಾಬ ಎಸೆತದಲ್ಲಿ ಬೌಲ್ಡ್ ಆದರು. ಮತ್ತೊಂದೆಡೆ ಬಿರುಸಿನ ಬ್ಯಾಟಿಂಗ್ ಮುಂದುವರೆಸಿದ ಗುರ್ಬಾಝ್ 45 ಎಸೆತಗಳಲ್ಲಿ 76 ರನ್ ಗಳಿಸಿದರು.
ಮೊಹಮ್ಮದ್ ನಬಿ 14 ರನ್ ಗಳಿಸಿದರು. ಅಂತಿಮವಾಗಿ ಅಫ್ಘಾನಿಸ್ತಾನ್ ತಂಡ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 183 ರನ್ ಗಳಿಸಿತು. 184 ರನ್ ಗಳ ಗುರಿ ಬೆನ್ನಟ್ಟಿದ ಉಗಾಂಡ ತಂಡಕ್ಕೆ ಆರಂಭಿಕ ಆಘಾತನ ನೀಡುವಲ್ಲಿ ಅಫ್ಘಾನ್ ಬೌಲರ್ ಗಳು ಯಶಸ್ವಿಯಾದರು. 18 ರನ್ ಗಳಿಗೆ ಉಗಾಂಡದ ಪ್ರಮುಖ 5 ವಿಕೆಟ್ ಉರುಳಿದ್ದವು. ಪರಿಣಾಮ ಉಗಾಂಡ ತಂಡವು 16 ಓವರ್ ಗಳಲ್ಲಿ 58 ರನ್ ಗಳಿಸಿ ಸರ್ವಪತನ ಕಂಡು ಹೀನಾಯ ಸೋಲು ಕಂಡಿತು. ಜೂನ್ 8ರಂದು ಅಪ್ಘಾನಿಸ್ತಾನ್ ತಂಡ ನ್ಯೂಜಿಲೆಂಡ್ ವಿರುದ್ಧ ಸೆಣಸಾಟ ನಡೆಸಲಿದೆ.