ತಾಲಿಬಾನ್ ಕ್ರೌರ್ಯದಿಂದ ಅತ್ತ ಅಫ್ಘಾನಿಸ್ತಾನ ತಲ್ಲಣಿಸಿ ಹೋಗಿದೆ. ತಾಲಿಬಾನಿಗಳ ಉಗ್ರವಾದಕ್ಕೆ ಅಫ್ಘಾನಿಸ್ತಾನವನ್ನು ಮೊತ್ತವಾಗಿ ವಶಪಡಿಸಿಕೊಂಡಿದ್ದಾರೆ. ಇದರ ನಡುವೆ ದೆಹಲಿಯ ಜೆಎನ್ಯೂ ಯೂನಿವೆರ್ಸಿಟಿಯ ಅಫ್ಘಾನ್ ವಿಧ್ಯಾರ್ಥಿಗಳಲ್ಲಿ ಇದೀಗ ತಳಮಳ ಶುರುವಾಗಿದೆ.
ದೆಹಲಿಯ ಜೆಎನ್ಯೂವಿನಲ್ಲಿ ಶಿಕ್ಷಣ ಪಡೆಯುತ್ತಿರುವ ಅಫ್ಘಾನಿಸ್ತಾನ ಮೂಲದ ವಿಧ್ಯಾರ್ಥಿಗಳಿಗೆ ತಮ್ಮ ವೀಸಾ ಅವಧಿ ಸವಾಲಾಗಿ ಪರಿಣಮಿಸಿದೆ. ANI ವರದಿ ಮಾಡಿರುವ ಪ್ರಕಾರ ಜೆಎನ್ಯೂವಿನ ಕೆಲ ಅಫ್ಘಾನಿ ವಿಧ್ಯಾರ್ಥಿಗಳ ವೀಸಾ ಅವಧಿ ಇನ್ನೇನು ಕೆಲ ತಿಂಗಳಲ್ಲೇ ಮುಕ್ತಾಯಗೊಳ್ಳಲಿದ್ದು, ಅಂಥಾ ವಿಧ್ಯಾರ್ಥಿಗಳಿಗೆ ಅತ್ತ ತಾಯ್ನಾಡಿಗೂ ಹೋಗುವಂತಿಲ್ಲ, ಇತ್ತ ವೀಸಾ ಅವಧಿ ಮುಗಿಯುವ ಕಾರಣ ಭಾರತದಲ್ಲೂ ಉಳಿದುಕೊಳ್ಳಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ.
ANI ವರದಿ ಪ್ರಕಾರ ಜೆಎನ್ಯೂವಿನ ಬಹುತೇಕ ಅಫ್ಘಾನಿ ವಿಧ್ಯಾರ್ಥಿಗಳ ವೀಸಾ ಅವಧಿ ಇದೇ ವರ್ಷದ ಡಿಸೆಂಬರ್ ತಿಂಗಳಿನಲ್ಲಿ ಮುಕ್ತಾಯಗೊಳ್ಳಲಿದೆ. ಅಫ್ಘಾನಿಸ್ತಾನದಲ್ಲಿ ಹಿಂಸಾಚಾರ ಮುಂದುವರೆದಿರುವ ಹಿನ್ನೆಲೆಯಲ್ಲಿ ವಿಧ್ಯಾರ್ಥಿಗಳು ಅಫ್ಘಾನಿಸ್ತಾನಕ್ಕೆ ಮರಳಲು ಮನಸ್ಸು ಮಾಡುತ್ತಿಲ್ಲ. ಹಾಗೂ ಇಲ್ಲೇ ಉಳಿದುಕೊಂಡು ಸ್ನಾತಕ್ಕೋತ್ತರ ವಿಷಯಗಳ ಮೇಲೆ ಶಿಕ್ಷಣ ಮುಂದುವರೆಸಲು ವೀಸಾ ಅವಧಿ ವಿಸ್ತರಿಸುವಂತೆ ಅನುಮತಿಯನ್ನು ಸರ್ಕಾರಕ್ಕೆ ಕೋರಿಕೊಳ್ಳಲಾಗಿದೆ.
ಈ ಬಗ್ಗೆ ಎಎನ್ಐ ಜೊತೆ ಮಾತನಾಡಿದ ಓರ್ವ ಅಫ್ಘಾನಿ ಮೂಲದ ವಿಧ್ಯಾರ್ಥಿ, ಅಫ್ಘಾನಿಸ್ತಾನದಲ್ಲಿ ಸದ್ಯ ಯುದ್ಧದ ವಾತಾವರಣ ಮನೆ ಮಾಡಿದೆ. ಯಾವ ಕ್ಷಣದಲ್ಲಿ ಬೇಕಿದ್ದರೂ ಯುದ್ಧ ಘಟಿಸಬಹುದು. ಮನುಷ್ಯರ ಮಾರಣಹೋಮ ನಡೆಯುತ್ತಿದೆ. ಹೋದರೆ ಒಂದಾ ಸಾವು ಇಲ್ಲವೇ ಇಲ್ಲವೇ ಸೆರೆಯಲ್ಲಿ ಬದುಕಬೇಕಿದೆ. ಇದೇ ವೇಳೆ ನಮ್ಮ ಮೇಳೆ ಭಾರೀ ಪ್ರಮಾಣದ ಶೈಕ್ಷಣಿಕ ಶುಲ್ಕ ವಿಧಿಸಿದರೆ ನಮ್ಮನ್ನದು ಮತ್ತಷ್ಟು ಕಷ್ಟಕ್ಕೆ ದೂಡಲಿದೆ ಎಂದು ಸಂಕಟ ತೋಡಿಕೊಂಡಿದ್ದಾರೆ.
ಇನ್ನು ಜೆಎನ್ಯೂವಿನ ಟರ್ಮಿನಲ್ ವಿಧ್ಯಾರ್ಥಿಗಳು ಸೆಪ್ಟೆಂಬರ್ 23ರ ಒಳಗಾಗಿ ಹಾಸ್ಟೆಲ್ ಖಾಲಿ ಮಾಡಿ ಕೊಡುವ ಅನಿವಾರ್ಯತೆಗೆ ಸಿಲುಕಿಕೊಂಡಿದ್ದಾರೆ. ಹೀಗಾಗಿ ಹೊರಗಡೆ ತಂಗುವುದು ಇವರಿಗೆ ಆರ್ಥಿಕವಾಗಿ ಭಾರೀ ಹೊಡೆತ ಕೊಡಲಿದೆ.
ʻʻಅಫ್ಘಾನಿಸ್ತಾನದಲ್ಲಿ ಪರಿಸ್ಥಿತಿ ಕೈ ಮೀರಿ ಹೋಗಿದೆ. ಹೀಗಾಗಿ ನಮ್ಮ ಪರಿಸ್ಥಿತಿಯನ್ನು ಜೆಎನ್ಯೂ ಆಡಳಿತ ಮಂಡಳಿ ಅರ್ಥಮಾಡಿಕೊಂಡು ನನ್ನ ವೀಸಾ ಅವಧಿ ವಿಸ್ತರಿಸಿ ಕೊಡುತ್ತೇ ಎಂದು ನಂಬಿದ್ದೇನೆ. ಜೊತೆಗೆ, ಜೆಎನ್ಯೂವಿನಲ್ಲಿ ಪಿಹೆಚ್ಡಿ ನಂಥಾ ಕೋರ್ಸ್ಗಳು ಬಹಳ ದುಬಾರಿ. ನಮ್ಮಂಥಾ ಬಡ ಹಿನ್ನೆಲೆಯುಳ್ಳ ವಿಧ್ಯಾರ್ಥಿಗಳಿಗೆ ಭರಿಸಿಕೊಳ್ಳುವಂಥಾ ಶಕ್ತಿ ಇಲ್ಲ. ಹೀಗಾಗಿ ಮುಂದೇನು ಮಾಡಬೇಕು ಎಂಬ ಚಿಂತೆಯಲ್ಲಿದ್ದೇವೆʼʼ ಎಂದು ಅಫ್ಘಾನ್ ಮೂಲದ ಜೆಎನ್ಯೂ ವಿಧ್ಯಾರ್ಥಿ ಜಲಾಲುದ್ದೀನ್ ರಾಷ್ಟ್ರೀಯ ಮಾಧ್ಯಮಗಳಗೆ ಪ್ರತಿಕ್ರಿಯಿಸಿದ್ದಾರೆ.
ಇನ್ನು ಭಾರತ ಸರ್ಕಾರ ಅಫ್ಘಾನಿಸ್ತಾನ ಮೂಲದ ವಿಧ್ಯಾರ್ಥಿಗಳಿಗೆ ವೀಸಾ ಅವಧಿ ವಿಸ್ತರಿಸಿಕೊಡದಿದ್ದರೆ, ಅಂಥಾ ವಿಧ್ಯಾರ್ಥಿಗಳು ಕಡ್ಡಾಯವಾಗಿ ಇಲ್ಲಿಂದ ನಿರ್ಗಮಿಸಬೇಕಿದೆ. ಒಂದು ವೇಳೆ ವೀಸಾ ಅವಧಿ ವಿಸ್ತರಿಸುವುದೇ ಆದರೂ ಪಾಸ್ಪೋರ್ಟ್ ಗಡುವು ದಿನಾಂಕ (Expiry Date) ಸಮಸ್ಯೆ ಎದುರಾಗುವ ಸಂಭವವಿದೆ. ವಿಸ್ತರಣೆಗೊಂಡ ವೀಸಾ ಅವಧಿಯ ಆಸುಪಾಸಿನಲ್ಲಿ ಪಾಸ್ಪೋರ್ಟ್ ಎಕ್ಸ್ಪೈಯರ್ ದಿನಾಂಕ ಇರುವಂತಿಲ್ಲ. ಹೀಗಾಗಿ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ ಅಫ್ಘಾನ್ ಮೂಲದ ವಿಧ್ಯಾರ್ಥಿಗಳು.
ʻʻನನ್ನ ವೀಸಾ ಅವಧಿ ಇದೇ ವರ್ಷದ ಡಿಸೆಂಬರ್ 31ಕ್ಕೆ ಮುಕ್ತಾಯಗೊಳ್ಳಲಿದೆ. ಇಲ್ಲಿಗೆ ಬರುವುದಕ್ಕೂ ಮೊದಲೇ ನಾನು ಅಫ್ಘಾನಿಸ್ತಾನದಲ್ಲಿ ಸರ್ಕಾರಿ ಕೆಲಸದಲ್ಲಿದ್ದೆ. ಈಗ ನಾನು ವಾಪಾಸ್ ಹೋದರೆ ಅವರು ನನ್ನನ್ನು ವಶಕ್ಕೆ ಪಡೆದು ಹಿಂಸೆ ಕೊಡುವವರಿದ್ದಾರೆ. ತಾಲಿಬಾನಿಗಳು ವಶಕ್ಕೆ ಪಡೆದುಕೊಂಡ ಪ್ರದೇಶವೊಂದರಲ್ಲೇ ನನ್ನ ಕುಟುಂಬವೂ ಇದೆ. ಕಳೆದ ಒಂದೂವರೆ ವಾರದಿಂದ ನಾನು ನನ್ನ ಕುಟುಂಬದ ಜೊತೆ ಮಾತನಾಡಲಿಲ್ಲ. ಅವರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ ನನಗೆʼʼ ಎಂದು ಶಫೀಕ್ ಸುಲ್ತಾನ್ ಎಂಬ ಜೆಎನ್ಯೂ ವಿಧ್ಯಾರ್ಥಿ ANI ಕೊಟ್ಟ ಸಂದರ್ಶನದಲ್ಲಿ ಹೇಳಿದ್ದಾರೆ.
ಒಟ್ಟಾರೆ ಅಫ್ಘಾನಿಸ್ತಾನ ತಾಲಿಬಾನ್ ಉಗ್ರ ಸಂಘಟನೆಯ ತೆಕ್ಕೆಗೆ ಉರುಳುತ್ತಿದ್ದಂತೆ ದೇಶದಲ್ಲಿದ್ದು ಶಿಕ್ಷಣ ಪಡೆಯುತ್ತಿರುವ ವಿಧ್ಯಾರ್ಥಿಗಳಿಗೆ ಆತಂಕ ಶುರುವಾಗಿದೆ. ವೀಸಾ ಅವಧಿ ಮುಕ್ತಾಯವಾಗುತ್ತಿರುವ ಹಿನ್ನೆಲೆಯಲ್ಲಿ ಇಲ್ಲ ಉಳಿದುಕೊಳ್ಳುವುದಕ್ಕೂ ಆಗದೆ ಅತ್ತ ತಾಯ್ನಾಡಿಗೂ ಮರಳಲಾಗದ ಪರಿಸ್ಥಿತಿಯಲ್ಲಿದ್ದಾರೆ.












