ಜಗತ್ತಿನ ಗಮನ ಸೆಳೆದಿದ್ದ ವಿಶ್ವ ಸಂಸ್ಥೆಯ ಸಭೆಯನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತಾಡಿದ್ದು, ಸಭೆಯಲ್ಲಿ ಭಯೋತ್ಪಾದನೆಯ ವಿರುದ್ಧ ಗುಡುಗಿದ ಮೋದಿ ಪಾಕ್, ಚೀನಾ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಜಗತ್ತು ಒಂದಾಗಬೇಕಿದೆ ಎಂಬ ಕರೆಯ ಜೊತೆಗೆ ಲಸಿಕೆ ಉತ್ಪಾದನೆಗೆ ಭಾರತಕ್ಕೆ ಜಗತ್ತನ್ನ ಆಹ್ವಾನಿಸಿದರು.
ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯಲ್ಲಿ ಪ್ರಧಾನಿ ಮೋದಿ ಮಾತಿಗಾಗಿ ಎಲ್ಲಾ ದೇಶಗಳು ಕಾಯುತ್ತಿದ್ದವು. ಅದರಲ್ಲೂ ಸಹಜವಾಗಿ ಅಪ್ಘಾನಿಸ್ತಾನ ತಾಲಿಬಾನಿಗಳ ವಶವಾದ ನಂತರ ಅಲ್ಲಿನ ಬೆಳವಣಿಗೆಗಳ ಬಗ್ಗೆ ಪ್ರಧಾನಿ ಮೋದಿ ಏನು ಹೇಳುತ್ತಾರೆ ಎಂಬ ಕುತೂಹಲ ಜಾಗತಿಕ ನಾಯಕರಲ್ಲೂ ಮನೆ ಮಾಡಿತ್ತು. ಅದರಂತೆ ಇಂದು ಸಂಜೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಹಿಂದಿಯಲ್ಲೇ ಮಾತು ಆರಂಭಿಸಿದ ಪ್ರಧಾನಿ ಮೋದಿ, ಕೊರೋನಾ ಲಸಿಕೆ ವಿತರಣೆ ಹಾಗೂ ತಾಲಿಬಾನ್ ಬೆಳವಣಿಗೆಗಳ ಬಗ್ಗೆ ಮಾತಾಡಿದರು.
ಭಾಷಣದ ಆರಂಭದಲ್ಲೇ ಪ್ರಧಾನಿ ಮೋದಿ ಕೊರೊನಾದಿಂದ ಮೃತಪಟ್ಟವರಿಗೆ ಸಂತಾಪ ಸೂಚಿಸಿದ್ರು. ಲಸಿಕಾ ಕ್ಷೇತ್ರದಲ್ಲಿನ ಭಾರತದ ಸಾಧನೆಯನ್ನು ವಿಶ್ವದ ಮುಂದೆ ತೆರೆದಿಟ್ಟ ಮೋದಿ ಜಗತ್ತಿನ ಲಸಿಕೆ ತಯಾರಕರನ್ನು ಭಾರತಕ್ಕೆ ಆಹ್ವಾನಿಸಿದರು.
ಒಂದೂವರೆ ವರ್ಷದಿಂದ ಜಗತ್ತನ್ನು ಕೊರೋನಾ ಬೆಂಬಿಡದೆ ಕಾಡುತ್ತಿದೆ ಎಂದ ಮೋದಿ, ಇದರಿಂದ ಪ್ರಾಣ ಕಳೆದುಕೊಂಡವರಿಗೆ ಸಂತಾಪ ಸೂಚಿಸಿದರು. ಹಾಗೆಯೇ ಲಸಿಕೆ ಸಂಶೋಧನೆ ಹಾಗೂ ವಿತರಣೆಯಲ್ಲಿ ಭಾರತ ನಿರತವಾಗಿದೆ. ಪ್ರಪಂಚದಲ್ಲಿ ಅವಶ್ಯವಿರುವವರಿಗೆ ಲಸಿಕೆ ನೀಡುತ್ತೇವೆ. ಪ್ರಪಂಚದಲ್ಲಿ ಮೊದಲ ಡಿಎನ್ಎ ಲಸಿಕೆಯನ್ನು ನಾವು ಸಂಶೋಧನೆ ಮಾಡಿದ್ದೇವೆ ಎಂದು ಸಂತೋಷ ವ್ಯಕ್ತಪಡಿಸಿದರು.
ಇನ್ನು ತಮ್ಮ ಭಾಷಣದಲ್ಲಿ ಪ್ರಧಾನಿ ಮೋದಿ ನಿರೀಕ್ಷೆಯಂತೆ ಅಫ್ಘಾನ್ ಬೆಳವಣಿಗೆಗಳ ಬಗ್ಗೆ ಪ್ರಸ್ತಾಪ ಮಾಡಿದರು. ಪಾಕಿಸ್ತಾನ ಹಾಗೂ ಚೀನಾ ವಿರುದ್ಧ ಪ್ರಧಾನಿ ಮೋದಿ ಪರೋಕ್ಷ ವಾಗ್ದಾಳಿ ನಡೆಸಿದರು.
ಅಪ್ಘನ್ ನೆಲೆ ಭಯೋತ್ಪಾದನೆಗೆ ಬಳಕೆಯಾಗಲು ಬಿಡೋದಿಲ್ಲ ಎಂದ ಮೋದಿ, ಉಗ್ರರನ್ನು ರಾಜಕೀಯ ದಾಳವಾಗಿ ಬಳಸಿಕೊಳ್ಳಲಾಗುತ್ತಿದೆ. ಭಯೋತ್ಪಾದನೆ ಅವರಿಗೂ ಮಾರಕವಾಗಿ ಪರಿಣಮಿಸಬಹುದು. ಅಂತ ಪಾಕ್ ಚೀನಾ ವಿರುದ್ಧ ಪರೋಕ್ಷವಾಗಿ ಗುಡುಗಿದರು. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಜಗತ್ತು ಒಂದಾಗಬೇಕು ಎಂದು ಸಾಮಾನ್ಯ ಸಭೆಯ ಭಾಷಣದಲ್ಲಿ ಪ್ರಧಾನಿ ಮೋದಿ ಒತ್ತಾಯಿಸಿದ್ದಾರೆ.
ನಿರೀಕ್ಷೆಯಂತೆಯೇ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಭಾಷಣದಲ್ಲಿ ಪ್ರಧಾನಿ ಮೋದಿ ಅಪ್ಘಾನಿಸ್ತಾನದ ಬೆಳವಣಿಗೆಗಳ ಬಗ್ಗೆ ಮಾತನಾಡಿದರು. ಭಯೋತ್ಪಾದನೆಯನ್ನು ಹಿಂಬಾಗಿಲಿನಿಂದ ಬೆಂಬಲಿಸುತ್ತಿರುವ ಪಾಕಿಸ್ತಾನ ಹಾಗೂ ಚೀನಾಕ್ಕೆ ಖಡಕ್ ಎಚ್ಚರಿಕೆ ನೀಡುತ್ತೇನೆ ಎಂದರು.