—– ನಾ ದಿವಾಕರ—–
ಭಾವೋನ್ಮಾದದ ಸೂಕ್ಷ್ಮ ಗುಪ್ತಗಾಮಿನಿ ಅಲೆಗಳನ್ನು ಗಮನಿಸುವ ಸಾಮಾಜಿಕ ಸಂವೇದನೆ ಬೇಕಿದೆ

ಕಳೆದ ನಾಲ್ಕು ದಶಕಗಳಲ್ಲಿ ಭಾರತದ ಅಧಿಕಾರ ರಾಜಕಾರಣ ಹಾಗೂ ಅದನ್ನು ಪ್ರಧಾನವಾಗಿ ನಿರ್ದೇಶಿಸುವ ಸಾಂಸ್ಕೃತಿಕ-ರಾಜಕೀಯ ಚಟುವಟಿಕೆಗಳು, ಭಾರತೀಯ ಸಮಾಜದಲ್ಲಿ ಸೃಷ್ಟಿಸಿರುವ ಧಾರ್ಮಿಕ ಭಾವೋನ್ಮಾದ, ಕೋಮು ಭಾವಾವೇಶ ಹಾಗೂ ಮತೀಯ ಅಸೂಕ್ಷ್ಮತೆಗಳು, ಶತಮಾನಗಳ ಸಮನ್ವಯ-ಸೌಹಾರ್ದತೆಯ ಅಡಿಪಾಯವನ್ನು ವಿನಾಶದತ್ತ ಸಾಗಿಸಿದೆ. ವಿಶಾಲ ಸಮಾಜದ ಎಲ್ಲ ಸ್ತರಗಳಲ್ಲೂ, ಎಲ್ಲ ಶ್ರೇಣಿಗಳಲ್ಲೂ ಹಾಗೂ ತಳಪಾಯದ ಅಡಿಗಲ್ಲುಗಳವರೆಗೂ ವ್ಯಾಪಿಸಿರುವ ಈ ಸಂಕುಚಿತ ಮನಸ್ಥಿತಿ ದೇಶದ ರಾಜಕೀಯ ಪಕ್ಷಗಳಿಗೆ ಚುನಾವಣಾ ಬಂಡವಾಳವಾಗಿ ಕಂಡರೆ, ಈ ಪಕ್ಷಗಳ ಹಿಂದಿರುವ ಪಟ್ಟಭದ್ರ ಹಿತಾಸಕ್ತಿಗಳಿಗೆ ಇದು ಅಸ್ತಿತ್ವ-ಅಸ್ಮಿತೆಗಳ ಸುರಕ್ಷಿತ ವಾಹಕಗಳಾಗಿ ಕಾಣುತ್ತವೆ. ಈ ಮನಸ್ಥಿತಿಯನ್ನು ನಿರ್ವಚಿಸುವ ವಸ್ತುನಿಷ್ಠ ಪ್ರಯತ್ನಗಳು ಸಾಂಘಿಕ ನೆಲೆಯಲ್ಲಿ ನಡೆಯದೆ ಇರುವುದರಿಂದ, ಜಡಗಟ್ಟಿದ ಸಮಾಜದಲ್ಲಿ ಇದು ಸೃಷ್ಟಿಸಿರುವ ದ್ವೇಷ-ಹಿಂಸೆ ಮತ್ತು ಕ್ರೌರ್ಯ ಸಾಮಾಜಿಕ ವ್ಯಾಧಿಯಾಗಿ, ವ್ಯಸನವಾಗಿ ರೂಪಾಂತರ ಹೊಂದಿದೆ.

ಈ ವ್ಯಸನದ ಭ್ರೂಣಾವಸ್ಥೆಯಲ್ಲೇ ಸೃಷ್ಟಿಸಲಾಗುವ ಅರಾಜಕತೆ ಮತ್ತು ಕ್ಷೋಭೆ ವಿಶಾಲ ಸಮಾಜವನ್ನು ಆಗಾಗ ಕಾಡುತ್ತಲೇ ಇರುತ್ತದೆ. ಅಧಿಕಾರ ರಾಜಕಾರಣದ ವಾರಸುದಾರರಿಗೆ ಕಾನೂನು ಸುವ್ಯವಸ್ಥೆ ಎಷ್ಟು ಮುಖ್ಯ ಎನಿಸುವುದೋ ಅಷ್ಟೇ ಮುಖ್ಯವಾಗಿ ಈ ʼ ಅರಾಜಕತೆ ʼ ಮತ್ತು ಅದು ಸೃಷ್ಟಿಸುವಂತಹ ಸಾಮಾಜಿಕ-ಸಾಂಸ್ಕೃತಿಕ ವಿಭಜನೆ-ವಿಘಟನೆಗಳು ಸಹ ಅಪ್ಯಾಯಮಾನವಾಗಿರುತ್ತವೆ. ಈ ರಾಜಕೀಯ ಮನೋಭಾವದ ಒಂದು ಆಯಾಮವನ್ನು ಪ್ರತಿಯೊಂದು ಕೋಮು ಗಲಭೆಯ ಸಂದರ್ಭದಲ್ಲೂ ಗುರುತಿಸಬಹುದು. ಸಮಾಜದಲ್ಲಿ ಬೇರೂರಿ ವಿಷವರ್ತುಲಗಳನ್ನು ಸೃಷ್ಟಿಸಿರುವ ಮತೀಯ ಭಾವನೆಗಳು ಸೃಜಿಸುವ ಆಕ್ರೋಶ-ಹತಾಶೆ ಮತ್ತು ಇವುಗಳನ್ನು ಕಾರ್ಯಗತಗೊಳಿಸುವ ಭಾವೋನ್ಮಾದದ ಮನಸ್ಥಿತಿಯನ್ನು ನಿರ್ದಿಷ್ಟ ಮತ ಅಥವಾ ಧರ್ಮದ ಚೌಕಟ್ಟಿನಿಂದಾಚೆಗೆ ಯೋಚಿಸುವ ಸೂಕ್ಷ್ಮತೆ ಮತ್ತು ವ್ಯವಧಾನವನ್ನೇ ನಮ್ಮ ರಾಜಕೀಯ ಪಕ್ಷಗಳು ಕಳೆದುಕೊಂಡಿರುವುದನ್ನು ಈ ದೃಷ್ಟಿಯಿಂದಲೇ ನೋಡಬೇಕಿದೆ.

ಮತೀಯ ಉನ್ಮಾದದ ನೆಲೆಗಳು
ಮತೀಯ ಭಾವೋನ್ಮಾದ ಸೃಷ್ಟಿಸುವಂತಹ ಉದ್ವಿಗ್ನ ಪರಿಸ್ಥಿತಿಗಳು ಸೌಹಾರ್ದತೆಯನ್ನು ಭಂಜಿಸುವ ಹಾಗೆಯೇ ಕೋಮುವಾದ-ಮತೀಯವಾದವನ್ನೇ ಅವಲಂಬಿಸುವ ರಾಜಕೀಯ ಪಕ್ಷ-ಗುಂಪು-ಸಂಘಟನೆಗಳಿಗೆ ಇಂಧನವನ್ನೂ ಒದಗಿಸುತ್ತವೆ. ಮೈಸೂರಿನ ಉದಯಗಿರಿಯಲ್ಲಿ ನಡೆದಿರುವ ಘಟನೆಗಳನ್ನು ಈ ಚೌಕಟ್ಟಿನಲ್ಲಿಟ್ಟು ನೋಡಬೇಕಿದೆ. ಒಬ್ಬ ವ್ಯಕ್ತಿಯ ಕಿಡಿಗೇಡಿ ಕೃತ್ಯವನ್ನು ನಿರ್ದಿಷ್ಟ ಮತದ ಚೌಕಟ್ಟಿನೊಳಗಿಟ್ಟು ನೋಡುವ ಮೂಲಕ ಇಡೀ ಸಮುದಾಯವನ್ನೇ ಗುರಿಯಾಗಿಸುವ ಒಂದು ರಾಜಕೀಯ ವ್ಯಸನ ಇಲ್ಲಿ ಗೋಚರಿಸುತ್ತದೆ. ಹಾಗಾಗಿಯೇ ಉದಯಗಿರಿ ಘಟನೆಯಲ್ಲಿ ಬಿಜೆಪಿ ನಾಯಕರಿಗೆ ತಾಲಿಬಾನ್, ಜಿಹಾದ್ ಇತ್ಯಾದಿಗಳು ಕಾಣುತ್ತವೆ. ಅಪರಾಧ ಎಸಗಿದ ವ್ಯಕ್ತಿಯ ಮತ್ತು ವಿರೋಧಿಸಿದ ಗುಂಪುಗಳ ಮತೀಯ ಅಸ್ಮಿತೆಗಳೇ ಈ ಕ್ಲೀಷೆಗಳನ್ನು ನಿರ್ವಚಿಸುವ ಸಾಧನಗಳಾಗುತ್ತವೆ. ಉದಯಗಿರಿ ಘಟನೆಯಲ್ಲಿ ಉನ್ಮಾದ ಸೃಷ್ಟಿಸುವಂತಹ ಸಾಮಾಜಿಕ ಮಾಧ್ಯಮ ಸಂದೇಶವನ್ನು ಸೃಷ್ಟಿಸಿದವನಿಗೆ ಸಲ್ಲದ ಮತೀಯ ಅಸ್ಮಿತೆ, ಗಲಭೆ ಎಬ್ಬಿಸಿದ ಗುಂಪುಗಳಿಗೆ ಸಲ್ಲುತ್ತದೆ.
ಇಲ್ಲಿ ಕಾರ್ಯಗತವಾಗುವ ಬಹುಮುಖ್ಯ ಚಿಂತನೆ ಎಂದರೆ ʼ ಧಾರ್ಮಿಕ ಭಾವನೆಗಳು ʼ ಎಂಬ ಮತ್ತೊಂದು ಕ್ಲೀಷೆ. ಸದಾ ಸಾಪೇಕ್ಷವಾಗಿಯೇ ನೋಡಲಾಗುವ ಈ ʼಭಾವನೆಗಳುʼ ಉನ್ಮತ್ತ ಮನಸ್ಸುಗಳನ್ನು ತಯಾರಿಸುವ ಕಾರ್ಖಾನೆಯ ಕಚ್ಚಾವಸ್ತುವಿನಂತೆ ಸಾಂಘಿಕ ನೆಲೆಯಲ್ಲಿ ಬಳಸಲ್ಪಡುತ್ತವೆ. ತಳಸಮಾಜದಲ್ಲಿ, ವಿಶೇಷವಾಗಿ ಶ್ರಮಿಕ ಜಗತ್ತಿನಲ್ಲಿ, ಯಾವುದೇ ಸಮುದಾಯದ ಜನತೆಯನ್ನು ಗಮನಿಸಿದರೂ, ಅವರ ನಿತ್ಯ ಬದುಕಿಗೂ ಈ ಭಾವನಾತ್ಮಕ ಪ್ರಪಂಚಕ್ಕೂ ಸಂಬಂಧ ಇಲ್ಲದಿರುವುದನ್ನು ಗುರುತಿಸಬಹುದು. ಏಕೆಂದರೆ ಭಾರತದಂತಹ ಅಸಮಾನತೆಯ ದೇಶದಲ್ಲಿ ಶ್ರಮ ಜಗತ್ತಿನ ದುಡಿಮೆಗಾರರಿಗೆ ಅವರವರ ನಿತ್ಯ ಬದುಕು ಸಮನ್ವಯ ಮತ್ತು ಸೌಹಾರ್ದತೆಯ ನೆಲೆಯಲ್ಲೇ ರೂಪಗೊಂಡಿರುತ್ತದೆ. ಈ ಮನಸ್ಸುಗಳಲ್ಲಿರಬಹುದಾದ ಅನಕ್ಷರತೆ, ಹತಾಶೆ, ಅಸಮಾಧಾನ ಮತ್ತು ಆಕ್ರೋಶಗಳನ್ನು ತಮ್ಮ ಹಿತಾಸಕ್ತಿಗನುಗುಣವಾಗಿ ಬಳಸಿಕೊಳ್ಳುವ ಒಂದು ಸಾಂಸ್ಥಿಕ ವ್ಯವಸ್ಥೆ, ಸಾಂಘಿಕ ರೂಪದಲ್ಲಿ ಸದಾ ಕ್ರಿಯಾಶೀಲವಾಗಿರುತ್ತದೆ.

ಈ ಸಾಂಘಿಕ ನೆಲೆಗಳಲ್ಲೇ ಭಾವೋನ್ಮಾದವೂ ಉತ್ಪತ್ತಿಯಾಗುತ್ತದೆ. ಇದನ್ನು ವ್ಯವಸ್ಥಿತವಾಗಿ ಸೃಷ್ಟಿಸುವ ಬೋಧನೆ, ಚಿಂತನೆ ಹಾಗೂ ಮಾರ್ಗದರ್ಶನಗಳು ಸಾಂಸ್ಥಿಕ ಚೌಕಟ್ಟುಗಳಲ್ಲಿ ನಿರ್ವಚಿಸಲ್ಪಡುತ್ತವೆ. ಹಿಂದೂ-ಮುಸ್ಲಿಂ ಮತೀಯ ಸಂಘಟನೆಗಳು ಇದರ ಫಲಾನುಭವಿಗಳಾಗುತ್ತಾರೆ. ಆದರೆ ಇಲ್ಲಿ ಕಾಲಾಳುಗಳಾಗಿ, ತುಡುಗು ಪಡೆಗಳಾಗಿ (Fringe Elements) ಕಾರ್ಯೋನ್ಮುಖವಾಗುವ ಒಂದು ಯುವ ಜಗತ್ತು ಭ್ರಮಾಧೀನವಾಗಿರುದಷ್ಟೇ ಅಲ್ಲದೆ, ಯಾರ ಜಪ್ತಿಗೂ ಸಿಗದ ರೀತಿಯಲ್ಲಿ ಚಲನಶೀಲವಾಗಿರುತ್ತದೆ. ಮೈಸೂರಿನ ಉದಯಗಿರಿ ಅಥವಾ ಬೆಂಗಳೂರಿನ ಡಿಜಿ ಹಳ್ಳಿ, ಕೆಜಿ ಹಳ್ಳಿ ಘಟನೆಗಳಲ್ಲಿ ಪ್ರಧಾನವಾಗಿ ಭಾಗಿಯಾಗುವ ಈ ಯುವ ತಲೆಮಾರಿನ ಹುಡುಗರು ಸಾಂದರ್ಭಿಕ ಶಿಶುಗಳಾಗಿ ತಮ್ಮ ಜೀವನವನ್ನೇ ಹಾಳುಮಾಡಿಕೊಳ್ಳುವುದನ್ನೂ ನಾವು ಕಾಣುತ್ತಿದ್ದೇವೆ. ಈ ವಿದ್ಯಮಾನವನ್ನು ಬಹುಸಂಖ್ಯಾತ-ಅಲ್ಪಸಂಖ್ಯಾತ ಎಂದು ವಿಂಗಡಿಸದೆ ನೋಡಿದಾಗ, ಇಲ್ಲಿ ನಮಗೆ ಮತೀಯ ಉನ್ಮಾದ ಸಾಮಾಜಿಕ ವ್ಯಸನವಾಗಿಯೂ, ಭಾವಾವೇಶದ ಚಟುವಟಿಕೆಗಳು ಸಾಂಸ್ಕೃತಿಕ ವ್ಯಾಧಿಯಾಗಿಯೂ ಕಾಣಲು ಸಾಧ್ಯ.

ಉದಯಗಿರಿ ಗಲಭೆಗಳ ಸುತ್ತ
ಮೈಸೂರಿನ ಉದಯಗಿರಿಯಲ್ಲಿ ನಡೆದಿರುವ ಗಲಭೆಗಳನ್ನೇ ಗಮನಿಸಿದರೆ ಇದರ ಒಂದು ಆಯಾಮವನ್ನು ಗುರುತಿಸಬಹುದು. ತಮ್ಮ ಧರ್ಮದ ಬಗ್ಗೆ ಗೌರವ ಹೊಂದಿರುವ ಯಾವುದೇ ವ್ಯಕ್ತಿಯನ್ನು ಕೆರಳಿಸುವಂತಹ ಒಂದು ಚಿತ್ರವನ್ನು ಸಾಮಾಜಿಕ ತಾಣದಲ್ಲಿ ಪೋಸ್ಟ್ ಮಾಡಿರುವ ವ್ಯಕ್ತಿಯನ್ನು ಆರೋಪಿ ಎಂದು ಗುರುತಿಸಿ ಬಂಧಿಸಲಾಗಿದೆ. ಈತ ಒಬ್ಬ ಡ್ರೈ ಫ್ರೂಟ್ಸ್ ವ್ಯಾಪಾರಿ, ಉದ್ಯಮಿ ಎಂದೂ ವರದಿಯಾಗಿದೆ. ಅಂದರೆ ಆರೋಪಿಯು ಮಾನಸಿಕ ಅಸ್ವಸ್ಥನೋ, ಅನಕ್ಷರಸ್ಥನೋ ಆಗಿರುವ ಸಾಧ್ಯತೆಗಳಿಲ್ಲ. ಈ ವ್ಯಕ್ತಿಯ ಕಿಡಿಗೇಡಿತನವನ್ನು ವ್ಯಕ್ತಿಗತ ನೆಲೆಯಲ್ಲಿ ನೋಡಿದರೆ ʼ ಕಿಡಿಗೇಡಿ ʼ ಎನಿಸಿಕೊಳ್ಳುತ್ತಾನೆ. ಇದರ ವಿರುದ್ಧ ಪ್ರತಿಭಟನೆ ನಡೆಸಿ ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿ, ಸಾರ್ವಜನಿಕ ಆಸ್ತಿಪಾಸ್ತಿಯನ್ನು ನಾಶಮಾಡಿದ ಸಣ್ಣ ಗುಂಪು ಸಹ ʼ ಕಿಡಿಗೇಡಿ ʼ ಗುಂಪು ಎನಿಸಿಕೊಳ್ಳುತ್ತದೆ. ಈ ಗುಂಪಿನಲ್ಲಿ 15-16 ವರ್ಷದ ಯುವಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂಬ ಮಾಹಿತಿಯೂ, ಸಮುದಾಯದ ನಾಯಕರ ಮಾತುಗಳನ್ನೂ ಮೀರಿ ಈ ದುರ್ವರ್ತನೆಯಲ್ಲಿ ತೊಡಗಿರುವುದಾಗಿಯೂ ವರದಿಯಾಗಿದೆ.
ಇಲ್ಲಿ ಉದ್ಭವಿಸುವ ಪ್ರಶ್ನೆ ಹಠಾತ್ತನೆ ಸ್ಫೋಟಗೊಂಡ ಆಕ್ರೋಶ ಹಿಂಸಾತ್ಮಕ ಸ್ವರೂಪ ಪಡೆದುಕೊಳ್ಳುವುದು ಸಹಜ ಎನ್ನಬಹುದಾದರೂ, ಈ ಯುವಕರಿಗೆ ಚೀಲಗಟ್ಟಲೆ ಕಲ್ಲುಗಳು ಹೇಗೆ ದೊರೆತವು ? ಇಂತಹ ಸಂದರ್ಭಗಳಿಗೆಂದೇ ಕಲ್ಲುಗಳನ್ನು, ಕೋಮು ಗಲಭೆಗಳಲ್ಲಿ ಬಳಸಲ್ಪಡುವ ಚಾಕು ಚೂರಿ ತಲವಾರು ಇತ್ಯಾದಿಗಳ ಹಾಗೆ, ಸಂಗ್ರಹಿಸಿಡಲಾಗುವುದೇ ? ಗಲಭೆಗಳಿಗೆಂದೇ ಬಳಸಲ್ಪಡುವ ಈ ಅಸ್ತ್ರಗಳು, ಉನ್ಮತ್ತ ಮನಸ್ಸುಗಳ ಮೇಲೆ ಸಮ್ಮೋಹನಾಸ್ತ್ರಗಳಂತೆ ಕಾರ್ಯನಿರ್ವಹಿಸುವುದನ್ನು ಸೂಕ್ಷ್ಮವಾಗಿ ಗಮನಿಸಬೇಕಿದೆ. ಬಿಜೆಪಿ ನಾಯಕರಿಗೆ ಈ ಘಟನೆಗಳಲ್ಲಿ ತಾಲಿಬಾನಿ ಮನಸ್ಥಿತಿ ಇತ್ಯಾದಿಗಳು ಕಂಡುಬರುವುದು ಸಹಜ, ಏಕೆಂದರೆ ಅದು ರಾಜಕೀಯವಾಗಿ ಲಾಭ ತಂದುಕೊಡುವ ಒಂದು ಪದ. ಆದರೆ ವಾಸ್ತವದಲ್ಲಿ ಹಿಂದೂ-ಮುಸ್ಲಿಂ ಎರಡೂ ಸಮುದಾಯಗಳಲ್ಲಿರುವ ತುಡುಗು ಪಡೆಗಳು (Fringe Elements) ಯುವ ತಲೆಮಾರಿನ ದಿಕ್ಕು ತಪ್ಪಿಸುವ ವಾಹಕಗಳಾಗಿ ಪರಿಣಮಿಸುತ್ತವೆ.
ಉದಯಗಿರಿ ಗಲಭೆಯಲ್ಲಿ ಪಾಲ್ಗೊಂಡ ಕೆಲವೇ ಯುವಕರು ಇಡೀ ಸಮುದಾಯವನ್ನು ಪ್ರತಿನಿಧಿಸುತ್ತಾರೆಯೇ ? ಖಂಡಿತವಾಗಿಯೂ ಇಲ್ಲ. ಹಾಗೆಯೇ ಈ ಗಲಭೆಗೆ ಕಾರಣನಾದ ಆರೋಪಿಯೂ ಸಾಮುದಾಯಿಕ ಪ್ರತಿನಿಧಿಯಾಗಿ ಕಾಣಬೇಕಿಲ್ಲ. ಆದರೆ ಈ ಎರಡೂ ಬದಿಯಲ್ಲಿರುವ ದುರ್ವರ್ತನೆಯನ್ನು, ಉನ್ಮತ್ತ ಮನಸ್ಸುಗಳನ್ನು ಹಾಗೂ ಅದನ್ನು ಸೃಷ್ಟಿಸುವ ನೆಲೆಗಳನ್ನು ಗಮನಿಸಿದಾಗ, ನಮಗೆ ಅಲ್ಲಿ ಒಂದು ಸಾಂಘಿಕ ಚೌಕಟ್ಟು, ಸಾಂಸ್ಥಿಕ ನೆಲೆಗಟ್ಟು ಕಾಣುತ್ತದೆ. ಬಿಜೆಪಿಯಂತಹ ಪಕ್ಷಗಳ ಅಭಿಪ್ರಾಯಗಳಲ್ಲಿ, ಕಲ್ಲೆಸೆಯುವ ಹುಡುಗರು ತಾಲಿಬಾನಿಗಳಂತೆ ಅಥವಾ ಜಿಹಾದಿಗಳಂತೆ ಕಾಣುತ್ತಾರೆ ಆದರೆ ಈ ಉನ್ಮಾದಕ್ಕೆ ಕಾರಣವಾಗುವ ವ್ಯಕ್ತಿ ಹಿಂದೂ ಎನಿಸಿಕೊಳ್ಳುವುದಿಲ್ಲ. ಅಥವಾ ಇಂತಹ ʼ ಕಿಡಿಗೇಡಿಗಳು ʼ ಯಾವುದೇ ಅಸ್ಮಿತೆಯಾಧಾರಿರತ ನಿರ್ವಚನೆ ಅಥವಾ ನಿಷ್ಕರ್ಷೆಗೊಳಗಾಗುವುದಿಲ್ಲ. ಇಲ್ಲಿ ಅಸ್ಮಿತೆಗಳೂ ಸಾಪೇಕ್ಷವಾಗಿಬಿಡುತ್ತವೆ. ಇದೇ ಸೂತ್ರವನ್ನು ಜಾತಿ ಗಲಭೆಗಳ ಸಂದರ್ಭದಲ್ಲೂ ನಾವು ಗುರುತಿಸಬೇಕಿದೆ.
ಮತಾಂಧತೆಯ ವಿಶಾಲ ನೆಲೆಗಟ್ಟು

ಇದರ ಒಂದು ಅಪಾಯಕಾರಿ ಆಯಾಮವನ್ನು ಕರ್ನಾಟಕದ ಕರಾವಳಿಯಲ್ಲಿ ಸೃಷ್ಟಿಯಾಗಿರುವ ದ್ವೇಷಪೂರಿತ ವಾತಾವರಣದಲ್ಲಿ ಸ್ಪಷ್ಟವಾಗಿ ಗುರುತಿಸಲು ಸಾಧ್ಯ. ಕ್ರಮೇಣ ಈ ಸಾಮಾಜಿಕ ನೆಲೆಗಳೇ ಇಡೀ ರಾಜ್ಯವನ್ನು ವ್ಯಾಪಿಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಈ ಗಲಭೆಗಳಿಗೆ ತಕ್ಷಣದಲ್ಲಿ ಸರ್ಕಾರ, ಕಾನೂನು ಸುವ್ಯವಸ್ಥೆ ಇತ್ಯಾದಿಗಳನ್ನು ದೂಷಿಸುವ ರಾಜಕೀಯ ನಾಯಕರ ಬೀಸು ಹೇಳಿಕೆಗಳಿಂದಾಚೆ ನೋಡಿದಾಗ, ನಮಗೆ ಈ ದುರ್ವರ್ತನೆಯ ಮೂಲವನ್ನು ಗ್ರಹಿಸಲು ಸಾಧ್ಯ. ಉದಯಗಿರಿ ಘಟನೆಯಲ್ಲಿ ಗಲಭೆನಿರತ ಯುವಕರು ತಮ್ಮ ನಾಯಕರ ಮಾತಿಗೂ ಬೆಲೆ ಕೊಡಲಿಲ್ಲ ಎಂಬ ಮಾಹಿತಿಯೂ ಲಭ್ಯವಾಗಿದೆ. ಇದಕ್ಕೆ ಏನು ಕಾರಣ ? ಸಾಂಘಿಕವಾಗಿ ನಾವು ಈ ಯುವ ತಲೆಮಾರನ್ನು ಶಸ್ತ್ರೀಕರಣಗೊಳಿಸಿದ್ದೇವೆ (Weaponised) ಅಲ್ಲವೇ ? ಅವರನ್ನು ನಿಶ್ಶಸ್ತ್ರೀಕರಣಗೊಳಿಸುವ (De weaponise) ಇಚ್ಛಾಶಕ್ತಿಯಾಗಲೀ, ಆಸಕ್ತಿಯಾಗಲೀ ಮತೀಯ ಸಂಘಟನೆಗಳಿಗೆ, ನಾಯಕರಿಗೆ ಇರುವುದಿಲ್ಲ. ಇದು ಸಾಧ್ಯವಾಗುವುದೂ ಇಲ್ಲ. ಏಕೆಂದರೆ ಹೀಗೆ ದಾರಿ ತಪ್ಪಿದ ಯುವಸಮೂಹಕ್ಕೆ ಅಲ್ಲೊಂದು ರೋಚಕ-ರೋಮಾಂಚಕಾರಿ ಜಗತ್ತು ಗೋಚರಿಸುತ್ತದೆ.
ಈ ಶಸ್ತ್ರಗಳು ಭೌತಿಕವಾಗಿ ತಲವಾರು, ಕಲ್ಲುಗಳಲ್ಲಿ ಕಾಣಬಹುದಾದರೂ, ಬೌದ್ಧಿಕವಾಗಿ ಮೂಲಭೂತವಾದ ಮತ್ತು ಮತಾಂಧತೆಯ ಸಿದ್ಧಾಂತಗಳಲ್ಲೇ ಅಡಗಿವೆ. ಒಮ್ಮೆ ಶಸ್ತ್ರೀಕರಣಕ್ಕೊಳಗಾದ ಯುವ ಸಮೂಹವನ್ನು ಅದರಿಂದ ಹೊರತರುವ ಪ್ರಯತ್ನಗಳನ್ನು ಸೃಷ್ಟಿಕರ್ತ ಸಂಘ-ಸಂಸ್ಥೆಗಳಾಗಲೀ, ಪಕ್ಷ-ಗುಂಪುಗಳಾಗಲೀ ಮಾಡುವುದಿಲ್ಲ. ಏಕೆಂದರೆ ಅಲ್ಲಿ ಅವುಗಳ ಸಾಂಸ್ಥಿಕ-ಸಾಂಘಿಕ ಹಿತಾಸಕ್ತಿಗಳಿರುತ್ತವೆ. ಇಲ್ಲಿ ಶಸ್ತ್ರೀಕರಣಕ್ಕೊಳಗಾದ ಒಂದು ಸಮಾಜವೇ ಸೃಷ್ಟಿಯಾಗುವುದರಿಂದ, ಅದು ಭೌತಿಕವಾಗಿ ಚುನಾವಣಾ ರಾಜಕಾರಣದ ಬಂಡವಾಳವಾಗಿ ಪರಿಣಮಿಸುತ್ತದೆ. ಇದನ್ನೇ ನಾವು ಸಮಾಜಶಾಸ್ತ್ರೀಯ ಪರಿಭಾಷೆಯಲ್ಲಿ ʼ ಸಾಮಾಜಿಕ ವ್ಯಸನ-ಸಾಂಸ್ಕೃತಿಕ ವ್ಯಾಧಿ ʼ ಎಂದು ಗುರುತಿಸಬಹುದು.
ಸೌಹಾರ್ದ ಮಾನವೀಯತೆಯ ಕಡೆಗೆ

ಸೌಹಾರ್ದತೆ, ಸಮನ್ವಯತೆ, ಸೋದರತ್ವ ಬಯಸುವ ಸಮಾಜವೊಂದು ಈ ವ್ಯಸನವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಇನ್ನೂ ಕ್ರಿಯಾಶೀಲತೆಯಿಂದ ನಡೆಯಬೇಕಿದೆ. ವಿಶಾಲ ಸಮಾಜದ ನೆಲೆಯಲ್ಲಿ ನಿಂತು ನೋಡಿದಾಗ, ಸಾಮಾಜಿಕವಾಗಿ ಸದಾ ಚಲನಶೀಲವಾಗಿರುವ ಸೆಕ್ಯುಲರ್ ಅಥವಾ ಪ್ರಗತಿಪರ ಎಂದು ನಿರ್ವಚಿಸಬಹುದಾದ ಸಂಘಟನೆಗಳ ನಡುವೆ ಒಂದು ತಾತ್ವಿಕ ಐಕಮತ್ಯದ ಅವಶ್ಯಕತೆ ಎದ್ದು ಕಾಣುತ್ತದೆ. ಐಕಮತ್ಯದ ಕೊರತೆ ಢಾಳಾಗಿ ಕಾಣುತ್ತದೆ. ವಿಘಟಿತವಾಗಿರುವ ಸಾಂಘಿಕ ಚಿಂತನೆಗಳನ್ನು, ಪ್ರಜಾಸತ್ತಾತ್ಮಕ ನೆಲೆಯಲ್ಲಿ ಸಂಘಟಿತವನ್ನಾಗಿ ಮಾಡುವ ಮೂಲಕ ಇದನ್ನು ಆಗುಮಾಡಬಹುದು. ಹಾಗಾದಾಗ ನಮಗೆ ಸಮಾಜದ ಎಲ್ಲ ಸ್ತರಗಳನ್ನೂ, ವಿಶೇಷವಾಗಿ ಇಂತಹ ವಿಕೃತಗಳಿಗೆ ಬಲಿಯಾಗುತ್ತಿರುವ ಸಮಾಜವನ್ನು, ತಲುಪಲು ಸಾಧ್ಯವಾಗುತ್ತದೆ. ಈ ಯುವ ತಲೆಮಾರನ್ನು ವಿಶಾಲ ಜಗತ್ತಿನ ಮುಕ್ತ ವಾತಾವರಣಕ್ಕೆ ತರುವ ಕೆಲಸವನ್ನು ಮಾಡಬಹುದು.

ಇದು ಸಾಧ್ಯವಾಗಬೇಕಾದರೆ, ನಾವು ಇಂದು ನಡೆಯುತ್ತಿರುವ ಕೋಮು ಗಲಭೆಗಳು, ಹಿಂಸಾತ್ಮಕ ಚಟುವಟಿಕೆಗಳು, ಮತಾಂಧತೆಯ ಸುಪ್ತ ವಾಹಿನಿಗಳನ್ನು ವಿಶಾಲ ನೆಲೆಯಲ್ಲಿ ಅರ್ಥಮಾಡಿಕೊಳ್ಳಬೇಕಿದೆ. ಈ ಘಟನೆಗಳನ್ನು ಮತೀಯ ಅಸ್ಮಿತೆಗಳಿಂದಾಚೆ ನೋಡುವ ಮೂಲಕ ಇಲ್ಲಿ ಗುಪ್ತಗಾಮಿನಿಯಂತೆ ಹರಿಯುವ ಸಾಮಾಜಿಕ ವ್ಯಸನ ಮತ್ತು ಸಾಂಸ್ಕೃತಿಕ ವ್ಯಾಧಿಯನ್ನು ಗುರುತಿಸಬೇಕಿದೆ. 21ನೇ ಶತಮಾನವನ್ನು ಭಾರತ ಸ್ವಾಗತಿಸಿದ್ದೇ ಈ ವ್ಯಸನ ಮುಖಾಂತರ, ಗೋದ್ರಾ-ಗುಜರಾತ್-ಖೈರ್ಲಾಂಜಿ-ಕಂಬಾಲಪಲ್ಲಿಗಳ ಮೂಲಕ. ಈಗ ಕಾಲು ಶತಮಾನ ಪೂರೈಸುತ್ತಿದ್ದೇವೆ. ಈಗಲಾದರೂ ಭಾವೋನ್ಮಾದವನ್ನು, ಭಾವಾವೇಶದ ಉತ್ಕರ್ಷಗಳನ್ನು ಸಾಮಾಜಿಕ-ಸಾಂಸ್ಕೃತಿಕ ಚೌಕಟ್ಟಿನೊಳಗಿಟ್ಟು ನಿರ್ವಚಿಸುವ, ನಿಷ್ಕರ್ಷೆಗೊಳಪಡಿಸುವ ನಿಟ್ಟಿನಲ್ಲಿ ಆಲೋಚನೆ ಮಾಡಬೇಕಿದೆ. ಇದು ನಮ್ಮ ಸಂಘಟನಾತ್ಮಕ ಜವಾಬ್ದಾರಿಯೂ ಹೌದು.
ಇದು ಸಾಧ್ಯವಾಗಬೇಕಾದರೆ ನಾವು ಮತೀಯ ಶಕ್ತಿಗಳಿಗೆ ಸಮಾನಾಂತರವಾಗಿ ತಳಮಟ್ಟದ ಸಮಾಜವನ್ನು ತಲುಪುತ್ತಲೇ ಇರಬೇಕಾಗುತ್ತದೆ. ಅಲ್ಲಿರುವ ಅಭಿಪ್ರಾಯ ಭೇದಗಳನ್ನು, ಅಸ್ಮಿತೆಯ ಗೋಡೆಗಳನ್ನು ಕೆಡವಿ ಒಂದು ಸಮನ್ವಯದ ಸಮಾಜವನ್ನು ಕಟ್ಟಲು ಮುಂದಾಗಬೇಕಿದೆ.