ಸಿಮೆಂಟ್ ಕ್ಷೇತ್ರದಲ್ಲಿ ಭಾರಿ ಸದ್ದು ಮಾಡಿದ್ದ ಅಂಬುಜಾ ಸಿಮೆಂಟ್ಸ್‌ನಂತ ದೈತ್ಯ ಕಂಪನಿಯನ್ನು ಖರೀದಿಸಿ ಸಿಮೆಂಟ್ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ ಏಷ್ಯಾದ ನಂ. 1 ಶ್ರೀಮಂತ ಗೌತಮ್ ಅದಾನಿಯ ಕಣ್ಣು ಈಗ ಆರೋಗ್ಯ ಕ್ಷೇತ್ರದ ಮೇಲೆ ಬಿದ್ದಿದೆ.
ಹೌದು, ಅದಾನಿ ಎಂಟರ್‌ಪ್ರೈಸಸ್ ಲಿ. (AEL) ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ಅದಾನಿ ಹೆಲ್ತ್ ವೆಂಚರ್ಸ್ ಲಿ. (AHVL, Adani Health Ventures Ltd) ಅನ್ನು ಸ್ಥಾಪಿಸುವ ಮೂಲಕ ಗೌತಮ್ ಅದಾನಿ ಆರೋಗ್ಯ ಕ್ಷೇತ್ರಕ್ಕೂ ಲಗ್ಗೆ ಇಟ್ಟಿದ್ದಾರೆ.
ಈ ಅಂಗ ಸಂಸ್ಥೆಯು, ರೋಗನಿರ್ಣಯ ಸೌಲಭ್ಯಗಳು, ಆರೋಗ್ಯ ಸಹಾಯಗಳು, ಆರೋಗ್ಯ-ತಂತ್ರಜ್ಞಾನ ಆಧಾರಿತ ಸೌಲಭ್ಯಗಳು ಮತ್ತು ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸುತ್ತದೆ. ಸಂಸ್ಥೆಯು ಇತರ ಸಂಬಂಧಿತ ಮತ್ತು ಪ್ರಾಸಂಗಿಕ ಚಟುವಟಿಕೆಗಳಲ್ಲಿ ಸಹ ಅಸ್ತಿತ್ವವನ್ನು ಹೊಂದಿರುತ್ತದೆ ಎಂದು AEL ತಿಳಿಸಿದೆ.
ಕಂಪನಿ ರಚನೆ ಬಳಿಕ ಪ್ರತಿಕ್ರಿಯೆ ನೀಡಿರುವ ಗೌತಮ್ ಅದಾನಿ, ಆದಷ್ಟು ಬೇಗ ಹೆಲ್ತ್‌ಕೇರ್ ಉದ್ಯಮ ತನ್ನ ಕಾರ್ಯಾಚರಣೆಯನ್ನು ಆರಂಭಿಸಲಿದೆ ಎಂದು ಹೇಳಿದ್ದಾರೆ. ಈ ಮೂಲಕ ಈ ಕ್ಷೇತ್ರದಲ್ಲಿರುವ ಘಟಾನುಘಟಿಗಳಿಗೆ ಪೈಪೋಟಿ ನೀಡುವ ಸೂಚನೆ ನೀಡಿದ್ದಾರೆ.