ಸ್ಯಾಡಲ್ವುಡ್ನ 2000ದಿಂದೀಚೆಗೆ ಬಂದ ಎಲ್ಲ ಪ್ರಮುಖ ನಾಯಕ ನಟರ ಜೊತೆ ತೆರೆ ಹಂಚಿಕೊಂಡಿರು ನಟಿ ರಮ್ಯಾ ನಿಧನರಾಗಿದ್ದಾರೆ ಎಂಬ ವದಂತಿ ಪರಭಾಷೆಯ ಸುದ್ದಿವಾಹಿನಿಗಳಲ್ಲಿ ಬುಧವಾರ (ಸೆಪ್ಟೆಂಬರ್ 6) ವರದಿಯಾಗಿದೆ.
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್, ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ಸಾವನ್ನು ಅರಗಿಸಿಕೊಳ್ಳುವ ಮುನ್ನವೇ ಬುಧವಾರ ಬೆಳಿಗ್ಗೆ ರಮ್ಯಾ ಅವರ ಸಾವಿನ ಸುದ್ದಿ ಕನ್ನಡ ಸಿನಿ ಅಭಿಮಾನಿಗಳಲ್ಲಿ ಆಘಾತ ಉಂಟು ಮಾಡಿತ್ತು.
ನಟಿ ರಮ್ಯಾ ಹೃದಯ ಸ್ತಂಭನದಿಂದ ಸಾವಿಗೀಡಾಗಿದ್ದಾರೆ ಎಂದು ಪರಭಾಷೆಯ ವಾಹಿನಿಗಳಲ್ಲಿ ಪ್ರಸಾರವಾಗಿರುವ ಸುದ್ದಿಯ ಪೋಸ್ಟ್ಗಳು ಬುಧವಾರ ಬೆಳಿಗ್ಗೆ ಟ್ವಿಟರ್ನಲ್ಲಿ ಹರಿದಾಡಿದ್ದು, ಭೀತಿ ಸಷ್ಟಿಸಿದ್ದವು.
ಆದರೆ ಈ ಸುದ್ದಿ ಊಹಾಪೋಹದಿಂದ ಕೂಡಿದೆ ಎಂದು ಸ್ಪಷ್ಟನೆ ನೀಡಲಾಗಿದೆ. ಪತ್ರಕರ್ತೆ ಚಿತ್ರಾ ಸುಬ್ರಮಣ್ಯಂ ಈ ಬಗ್ಗೆ ಟ್ವಿಟರ್ನಲ್ಲಿ ಸ್ಪಷ್ಟನೆ ನೀಡಿದ್ದು, “ನಟಿ ರಮ್ಯಾ ಯಾವ ಸಮಸ್ಯೆಯೂ ಇಲ್ಲದೆ ಆರಾಮಾಗಿದ್ದಾರೆ. ನಾನು ಈಗಷ್ಟೇ ಅವರೊಂದಿಗೆ ಮಾತನಾಡಿದೆ ದಿವ್ಯ ಸ್ಪಂದನಾ ಚೆನ್ನಾಗಿದ್ದಾರೆ. ನಾಳೆ ಪ್ರೇಗ್ ನಗರಕ್ಕೆ ಮತ್ತು ನಂತರ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ” ಎಂದು ಎಕ್ಸ್ ಮಾಧ್ಯಮದಲ್ಲಿ ದೃಢಪಡಿಸಿದ್ದಾರೆ.
ರಮ್ಯಾ ಅವರು ಸ್ವಿಟ್ಜರ್ಲೆಂಡ್ನ ಜಿನೀವಾದಲ್ಲಿ ಆರಾಮಾಗಿದ್ದಾರೆ. ಯಾವುದೇ ವದಂತಿಗಳನ್ನು ನಂಬಬೇಡಿ ಎಂದು ಮಾರುಕಟ್ಟೆ ವಿಶ್ಲೇಷಕ ಹಾಗೂ ಚಿತ್ರ ವಿಮರ್ಶಕ ಮನೋಬಲ ವಿಜಯಬಾಲನ್ ಟ್ವೀಟ್ ಮಾಡಿದ್ದಾರೆ.
1982ರ ನವೆಂಬರ್ 29 ರಂದು ಜನಿಸಿದ ದಿವ್ಯ ಸ್ಪಂದನಾ ಅವರು ಕನ್ನಡ ಚಿತ್ರರಂಗದಲ್ಲಿ ರಮ್ಯಾ ಎಂದೇ ಚಿರಪರಿಚಿತ. ಇಂದಿಗೂ ಅಪಾರ ಸಂಖ್ಯೆಯ ಅಭಿಮಾನಿಗಳ ಬಳಗವನ್ನು ಹೊಂದಿರುವ ನಟಿ, ರಾಜಕಾರಣಿಯೂ ಹೌದು. ಅವರು ಈ ಹಿಂದೆ ಮಂಡ್ಯ ಲೋಕಸಭೆಯನ್ನು ಪ್ರತಿನಿಧಿಸಿದ್ದರು.
ನಟಿ ರಮ್ಯಾ ಅವರು ಹಲವಾರು ಕನ್ನಡ ಚಿತ್ರಗಳಲ್ಲಿ ನಟಿಸಿದ್ದು, ತಮಿಳು ಚಿತ್ರರಂಗಕ್ಕೂ ಗಮನಾರ್ಹ ಕೊಡುಗೆಗಳನ್ನು ನೀಡಿದ್ದಾರೆ. ಅವರ ಪ್ರತಿಭೆಗೆ ದಕ್ಷಿಣದ ಎರಡು ಫಿಲ್ಮ್ಫೇರ್ ಪ್ರಶಸ್ತಿಗಳು, ಉದಯ ಪ್ರಶಸ್ತಿ ಮತ್ತು ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಸೇರಿದಂತೆ ಹಲವಾರು ಪುರಸ್ಕಾರಗಳನ್ನು ಸಂದಿವೆ.