ಬೆಂಗಳೂರು: ನಟಿ ಕಾರುಣ್ಯ ರಾಮ್ ಅವರು ತಮ್ಮ ಸ್ವಂತ ತಂಗಿ ಸಮೃದ್ಧಿ ರಾಮ್ ವಿರುದ್ಧ ಆರ್.ಆರ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮನೆಯಲ್ಲಿದ್ದ ಹಣ ಹಾಗೂ ಚಿನ್ನವನ್ನು ದುರುಪಯೋಗ ಮಾಡಿಕೊಂಡು, ಮನೆ ಬಿಟ್ಟು ಹೋಗಿರುವ ಆರೋಪವನ್ನು ಕಾರುಣ್ಯ ರಾಮ್ ಮಾಡಿದ್ದಾರೆ.

ನಟಿ ಕಾರುಣ್ಯ ರಾಮ್ ಅವರ ದೂರಿನ ಪ್ರಕಾರ, ಸಹೋದರಿ ಸಮೃದ್ಧಿ ರಾಮ್ ಅವರಿಗೆ ಬೆಟ್ಟಿಂಗ್ ಗೀಳು ಅಂಟಿಕೊಂಡಿದ್ದು, ಈ ಚಟದ ಪರಿಣಾಮವಾಗಿ ಸುಮಾರು 25 ಲಕ್ಷ ರೂಪಾಯಿ ಹಣ ಕಳೆದುಕೊಂಡಿದ್ದಾರೆ ಎನ್ನಲಾಗಿದೆ. ಬೆಟ್ಟಿಂಗ್‌ನಲ್ಲಿ ಕಳೆದುಕೊಂಡ ಹಣವನ್ನು ತುಂಬಿಕೊಳ್ಳಲು ಖಾಸಗಿ ವ್ಯಕ್ತಿಗಳಿಂದ ಅಧಿಕ ಬಡ್ಡಿಗೆ ಸಾಲ ಪಡೆದಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇಷ್ಟೇ ಅಲ್ಲದೆ, ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿ ನಗದು ಹಾಗೂ ಚಿನ್ನಾಭರಣಗಳನ್ನು ಸಹ ಬಳಸಿ ಹಣ ಸಂಗ್ರಹಿಸಿ ಮತ್ತೆ ಬೆಟ್ಟಿಂಗ್‌ಗೆ ಹಾಕಿ ನಷ್ಟ ಮಾಡಿಕೊಂಡಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಈ ಬಗ್ಗೆ ಮನೆಯವರು ಪ್ರಶ್ನಿಸಿದಾಗ ಸಮೃದ್ಧಿ ರಾಮ್ ಅವರು ಮನೆ ಬಿಟ್ಟು ಹೋಗಿದ್ದಾರೆ ಎಂದು ಕಾರುಣ್ಯ ರಾಮ್ ದೂರಿನಲ್ಲಿ ತಿಳಿಸಿದ್ದಾರೆ.

ಈ ನಡುವೆ ಸಮೃದ್ಧಿಗೆ ಸಾಲ ನೀಡಿದ್ದವರು ಮನೆಗೆ ಬಂದು ಗಲಾಟೆ ನಡೆಸುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಹಾಗೂ ಬೆದರಿಕೆ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ ಎಂದು ನಟಿ ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಮೃದ್ಧಿ ರಾಮ್ ಜೊತೆಗೆ ಪ್ರತಿಭಾ, ರಕ್ಷಿತ್, ಪ್ರಜ್ವಲ್ ಹಾಗೂ ಸಾಗರ್ ಎಂಬವರ ವಿರುದ್ಧವೂ ದೂರು ದಾಖಲಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.












