ಸೌಜನ್ಯ ಹತ್ಯೆ ಪ್ರಕರಣ ಈಗ ಇಡೀ ದೇಶದ ಗಮನ ಸೆಳೆಯುತ್ತಿದೆ. ಪ್ರಮುಖ ತಾರೆಯರು ಪ್ರಕರಣದ ಬಗ್ಗೆ ಹೇಳಿಕೆ ನೀಡುತ್ತಿದ್ದಾರೆ. ಸಂತ್ರಸ್ತೆಯ ಕುಟುಂಬದವರ ಹೋರಾಟಕ್ಕೆ ಬೆಂಬಲ ನೀಡುತ್ತಿದ್ದಾರೆ.
ಈಗ ಕನ್ನಡ ಚಿತ್ರರಂಗದ ನಟ ದುನಿಯಾ ವಿಜಯ್ ಸಹ ಸೌಜನ್ಯಾಳ ಹತ್ಯೆಯನ್ನು ಖಂಡಿಸಿದ್ದಾರೆ. ಈ ಕುರಿತು ಟ್ವೀಟ್ ಮೂಲಕ ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ.
“ಪ್ರತಿ ವರ್ಷ ಧರ್ಮಸ್ಥಳದ ದರ್ಶನ ಪಡೆಯುವುದು ನನ್ನ ವಾಡಿಕೆಯಾಗಿತ್ತು, ಆದರೆ ಸೌಜನ್ಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣ ಮತ್ತು ಇಂದಿನ ಬೆಳವಣಿಗೆ ನೋಡಿ ಸೌಜನ್ಯ ಮತ್ತು ಕುಟುಂಬಸ್ಥರಿಗೆ ನ್ಯಾಯ ಸಿಗುವವರೆಗೂ ಮಂಜುನಾಥನ ದರ್ಶನ ಮಾಡಕೂಡದು ಅನಿಸುತ್ತಿದೆ” ಎಂದು ಹೇಳಿದ್ದಾರೆ.
“ಸತ್ಯ ಎಂಬುದು ಸೂರ್ಯನ ಬೆಳಕಿದಂತೆ ಯಾರು ಹೆಚ್ಚು ಸಮಯ ಮರೆಮಾಚಲಾಗದು” ಎಂದು ದುನಿಯಾ ವಿಜಯ್ ಬರೆದುಕೊಂಡಿದ್ದಾರೆ.
ಸೌಜನ್ಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಜ್ಯ ವ್ಯಾಪಿ ಪ್ರತಿಭಟನೆಗಳು ಟೀಕೆಗಳು ಮತ್ತು ಖಂಡನೆ ವ್ಯಕ್ತವಾಗುತ್ತದೆ. ಇದೇ ವಿಚಾರಕ್ಕೆ ಈಗಾಗಲೇ ಹಲವು ಸಂಘ ಸಂಸ್ಥೆಗಳು ಬೀದಿಗೆ ಇಳಿದು ಹೋರಾಟವನ್ನು ಮಾಡುತ್ತಿವೆ.
ಈ ಸುದ್ದಿ ಓದಿದ್ದೀರಾ? ವರ್ಗಾವಣೆ ದಂಧೆಯಲ್ಲಿ ಕಾಂಗ್ರೆಸ್ ಸರ್ಕಾರ: ಬಸವರಾಜ ಬೊಮ್ಮಾಯಿ
ಪ್ರಕರಣದಲ್ಲಿ ಆರೋಪಿಯಾಗಿದ್ದ ಸಂತೋಷ ರಾವ್ ನಿರ್ದೋಷಿ ಎಂದು ನ್ಯಾಯಾಲಯ ಈಗಾಗಲೇ ತೀರ್ಪು ನೀಡಿದೆ.
ಹಾಗಾದರೆ ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಹೇಗೆ ನಡೆಯಿತು ಎಂಬ ಪ್ರಶ್ನೆ ಈಗ ಹಲವರನ್ನು ಕಾಡುತ್ತಿದೆ. ಈ ವಿಚಾರಕ್ಕೆ ಸಂಬಂಧಪಟ್ಟಂತೆ ಸೌಜನ್ಯ ಹತ್ಯೆ ಪ್ರಕರಣದ ಮರುತನಿಖೆ ನಡೆಯಬೇಕು ಎಂಬ ಒತ್ತಾಯ ಕೂಡ ಕೇಳಿ ಬರುತ್ತಿದೆ.