ಮಂಡ್ಯ: ನಾಗಮಂಗಲ ಗಣೇಶ ಗಲಭೆ ಪ್ರಕರಣ ನಡೆದು 24 ಗಂಟೆಗಳು ಆಗುತ್ತಿದ್ದು, ಸರ್ಕಾರ ಪರಿಸ್ಥಿತಿ ಹತೋಟಿಗೆ ತರುವ ಎಲ್ಲಾ ಪ್ರಯತ್ನಗಳನ್ನು ಸರ್ಕಾರ ತೆಗೆದುಕೊಂಡಿದೆ. ಗಣೇಶ ವಿಸರ್ಜನೆ ವೇಳೆ ನಡೆದ ಗಲಾಟೆಯಲ್ಲಿ ಕಿಡಿಗೇಡಿಗಳ ಮೇಲೆ ವಿರುದ್ಧ FIR ದಾಖಲು ಮಾಡಲಾಗಿದ್ದು, 150 ಜನರ ಮೇಲೆ ಎಫ್ಐಆರ್‌ನಲ್ಲಿ ಉಲ್ಲೇಖ ಮಾಡಲಾಗಿದೆ. 53 ಮಂದಿ ಆರೋಪಿಗಳ ಹೆಸರು ಮತ್ತು ವಿಳಾಸ ಪತ್ತೆ ಮಾಡಿ ಬಂಧನ ಮಾಡಲಾಗಿದೆ. ಭಾರತೀಯ ದಂಡ ಸಂಹಿತೆ 109, 115, 118, 121, 132, 189, 190 ಸೇರಿದಂತೆ 16 ಸೆಕ್ಷನ್‌ಗಳ ಅಡಿ FIR ದಾಖಲು ಮಾಡಿಕೊಳ್ಳಲಾಗಿದೆ.
ನಾಗಮಂಗಲದ ಕೋಮು ಗಲಭೆ ಪ್ರಕರಣ ನಡೆದ ಬಳಿಕ ಮುನ್ನೆಚ್ಚರಿಕೆ ಕ್ರಮವಾಗಿ ಇಂದು ಮತ್ತು ನಾಳೆ ಮದ್ಯ ಮಾರಾಟ ಮತ್ತು ಸಂಗ್ರಹಣೆಗೆ ನಿರ್ಬಂಧ ವಿಧಿಸಲಾಗಿದೆ. ನಾಗಮಂಗಲ ಟೌನ್ ಸೇರಿದಂತೆ ಸುತ್ತಮುತ್ತಲಿನ 3 ಕಿ.ಮೀ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧ ಮಾಡಿ ಮಂಡ್ಯ ಡಿಸಿ ಡಾ.ಕುಮಾರ್ ಆದೇಶ ಹೊರಡಿಸಿದ್ದಾರೆ. ಸೆಪ್ಟೆಂಬರ್ 12 ಮತ್ತು 13ರಂದು ಮದ್ಯ ಮಾರಾಟಕ್ಕೆ ಡಿಸಿ ನಿರ್ಬಂಧ ವಿಧಿಸಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಎರಡು ದಿನಗಳ ಕಾಲ ಮದ್ಯ ಮಾರಾಟ ನಿಷೇಧ ಮಾಡಲಾಗಿದೆ. ಸೆಪ್ಟೆಂಬರ್ 13 ರ ಮಧ್ಯರಾತ್ರಿ 12 ಗಂಟೆ ತನಕ ಕರ್ನಾಟಕ ಅಬಕಾರಿ ಕಾಯ್ದೆ 1965 ರ ಕಲಂ 21 ರ ಅನ್ವಯ ಅಧಿಕಾರ ಚಲಾಯಿಸಿ ನಿಷೇಧ ಆದೇಶ ಹೊರಡಿಸಿದ್ದಾರೆ.
ನಾಗಮಂಗಲ ಗಲಭೆ ಪ್ರಕರಣದ ಬಳಿಕ ಇಂದು ಪೊಲೀಸಸು ನಾಗಮಂಗಲದಲ್ಲಿ ಪಥಸಂಚಲನ ನಡೆಸಿದ್ದಾರೆ. ದಕ್ಷಿಣ ವಲಯ ಐಜಿಪಿ ಬೋರಲಿಂಗಯ್ಯ ನೇತೃತ್ವದಲ್ಲಿ ರೂಟ್ ಮಾರ್ಚ್ ಮಾಡಲಾಗಿದ್ದು, ಶಾಂತಿ ಸುವ್ಯವಸ್ಥೆಗಾಗಿ ಟೌನ್ ರೌಂಡ್ಸ್ ಮಾಡಿದ್ದಾರೆ. ಇತಿಹಾಸ ಪ್ರಸಿದ್ಧ ಚನ್ನಕೇಶವ ದೇವಾಲಯ, ಮಂಡ್ಯ ವೃತ್ತ, ಮೈಸೂರು ರಸ್ತೆ, ಬೆಳ್ಳೂರು ರಸ್ತೆ ಸೇರಿ ಹಲವು ಬಡಾವಣೆಗಳಲ್ಲಿ ಪಥಸಂಚಲನ ಮಾಡಿದ್ದಾರೆ. ನಿನ್ನೆ ಸಂಜೆ ನಾಗಮಂಗಲದಲ್ಲಿ ಕೋಮುಗಲಭೆ ಸೃಷ್ಟಿಯಾಗಿತ್ತು. ಉದ್ವಿಗ್ನ ಪರಿಸ್ಥಿತಿಯಲ್ಲಿ ಹೊತ್ತಿ ಉರಿದಿತ್ತು ನಾಗಮಂಗಲ. ಇದೀಗ ಸಹಜ ಪರಿಸ್ಥಿತಿಗೆ ತರಲು ಪೊಲೀಸರು ಪಥಸಂಚಲನ ಮಾಡಿದ್ದಾರೆ.
ಅಧಿಕಾರಿಗಳು ಶಾಂತಿ ಸುವ್ಯವಸ್ಥೆ ಕಾಪಾಡುವುದಕ್ಕೆ ಹರಸಾಹಸ ಮಾಡ್ತಿದ್ರೆ ರಾಜಕಾರಂಣಿಗಳು ಮಾತ್ರ ಭಿನ್ನ ವಿಭಿನ್ನ ಹೇಳಿಕೆಗಳನ್ನು ನೀಡುತ್ತ ರಾಜಕೀಯ ಬೇಳೆ ಬೇಯಿಸಿಕೊಳ್ತಿದ್ದಾರೆ. ಗಲಭೆಯಲ್ಲಿ ಸುಟ್ಟು ಕರಕಲಾದ ಬಟ್ಟೆ ಅಂಗಡಿಗಳಿಗೆ ಬಿಜೆಪಿ ನಾಯಕರ ನಿಯೋಗ ಭೇಟಿ ನೀಡಿದ್ದು, ವಿರೋಧ ಪಕ್ಷದ ನಾಯಕ ಆರ್ ಅಶೋಕ್, ಬಿ.ವೈ ವಿಜಯೇಂದ್ರ, ಪ್ರತಾಪ್ ಸಿಂಹ ಸ್ಥಳ ವೀಕ್ಷಣೆ ಮಾಡಿದ್ದಾರೆ. ಜೊತೆಗೆ ಗಲಭೆಗೆ ಕಾರಣವಾದ ಮಸೀದಿ ಮುಂದೆ ಬಿಜೆಪಿ ನಾಯಕರು ಜಾಥಾ ಹೋಗಿದ್ದು, ಜೈಶ್ರೀರಾಮ್ ಘೋಷೋಣೆ ಕೂಗುತ್ತ ಸಾಗಿದ್ದಾರೆ. ಬೇಕೆ ಬೇಕು ನ್ಯಾಯ ಬೇಕು, ಜೈ ಶ್ರೀರಾಮ್ ಎಂದು ಘೋಷಣೆ ಮೊಳಗಿಸಿದ್ದಾರೆ.