ಹುಸಿ ಮುನಿಸಿನಿಂದ ಪರಸ್ಪರ ದೂರವಾಗಿದ್ದ ನಟ ದರ್ಶನ್ ಹಾಗೂ ಕಿಚ್ಚ ಸುದೀಪ್ ಒಂದೇ ವೇದಿಕೆ ಹಂಚಿಕೊಂಡಿದ್ದಾರೆ. ಅವರ ಮಿಲನಕ್ಕೆ ಸಾಕ್ಷಿಯಾಗಿದ್ದು ಹಿರಿಯ ನಟಿ ಸುಮಲತಾ ಅವರ ಜನ್ಮದಿನದ ಸಮಾರಂಭ.
ನಟಿ ಸುಮಲತಾ ಅಂಬರೀಶ್ ಸೆಪ್ಟೆಂಬರ್ 26ರಂದು ಬರ್ತ್ಡೇ ಆಚರಿಸಿಕೊಂಡಿದ್ದಾರೆ. ಈ ವಿಶೇಷ ದಿನವನ್ನು ಸಿನಿಮಾ ಮಂದಿಯ ಜತೆಗೆ ಕಳೆದಿದ್ದಾರೆ. ಆಪ್ತ ಸಿನಿಮಾ ಮಂದಿಯನ್ನು ಕರೆದು ಪಾರ್ಟಿ ನೀಡಿದ್ದಾರೆ. ಇದೇ ಪಾರ್ಟಿಗೆ ನಟ ದರ್ಶನ್ ಮತ್ತು ಕಿಚ್ಚ ಸುದೀಪ್ ಇಬ್ಬರಿಗೂ ಆಮಂತ್ರಣ ನೀಡಲಾಗಿತ್ತು.
ಅದರಂತೆ ಈ ಇಬ್ಬರೂ ಸ್ಟಾರ್ಗಳು ಒಂದೇ ವೇದಿಕೆಯಲ್ಲಿ ನಿಂತು ಸುಮಲತಾ ಅವರಿಗೆ ಬರ್ತ್ಡೇ ಶುಭಾಶಯ ಕೋರಿದ್ದಾರೆ. ದರ್ಶನ್ ಮತ್ತು ಸುದೀಪ್ ಅಕ್ಕಪಕ್ಕದಲ್ಲಿಯೇ ನಿಂತಿದ್ದಾರೆ.
ಈ ಬರ್ತ್ಡೇ ಪಾರ್ಟಿಯ ಕಿರು ವಿಡಿಯೊ ತುಣುಕು ಸಾಮಾಜಿಕ ಜಾಲತಾಣದಲ್ಲಿ ಹೊರಬೀಳುತ್ತಿದ್ದಂತೆ, ಅಭಿಮಾನಿವಲಯದಲ್ಲಿ ಸಂಭ್ರಮಾಚರಣೆ ಶುರುವಾಗಿದೆ.
ಇಬ್ಬರನ್ನೂ ನೋಡಿದ ಫ್ಯಾನ್ಸ್ ಕುಣಿದು ಕುಪ್ಪಳಿಸುತ್ತಿದ್ದಾರೆ. ದಿಗ್ಗಜರು ಸಿನಿಮಾದ ಕುಚಿಕು.. ಕುಚಿಕು.. ಹಾಡನ್ನು ಜೋಡಿಸಿ ಸಂಭ್ರಮಿಸುತ್ತಿದ್ದಾರೆ. ಕಳೆದ ಆರು ವರ್ಷಗಳಿಂದ ಈ ಇಬ್ಬರೂ ಒಟ್ಟಿಗೆ ಮುಖಾಮುಖಿಯಾಗಿರಲಿಲ್ಲ. ಇದೀಗ ಆ ಕ್ಷಣವನ್ನು ಇಡೀ ಅಭಿಮಾನಿ ಬಳಗ ಕಣ್ತುಂಬಿಕೊಂಡು, ಸಾರ್ಥಕ ಕ್ಷಣ ಎಂದೆಲ್ಲ ಜಾಲತಾಣಗಳಲ್ಲಿ ವಿಡಿಯೋ ಹಂಚಿಕೊಳ್ಳುತ್ತಿದ್ದಾರೆ.
ನಟ ದರ್ಶನ್ ಹಾಗೂ ಸುದೀಪ್‌ಗೆ ನಟಿ ಸುಮಲತಾ ಕೇಕ್ ತಿನಿಸಿದ್ದಾರೆ. ಒಂದೇ ಚಮಚದಲ್ಲಿ ಮೊದಲಿಗೆ ಅಲ್ಲೇ ಇದ್ದ ದರ್ಶನ್ಗೆ ಕೇಕ್ ತಿನಿಸಿ, ಅದೇ ಚಮಚದಿಂದಲೇ ಸುದೀಪ್ಗೂ ಕೇಕ್ ತಿನಿಸಿದ ವಿಡಿಯೊ ವೈರಲ್ ಆಗಿದೆ. ಇದನ್ನು ನೋಡಿದ ಫ್ಯಾನ್ಸ್ ಖುಷಿಯಲ್ಲಿ ತೇಲಾಡುತ್ತಿದ್ದಾರೆ. ಆದರೆ, ಹೀಗೆ ಇಬ್ಬರೂ ಒಟ್ಟಿಗೆ ಅಲ್ಲೇ ಇದ್ದರೂ, ಇಬ್ಬರೂ ಪರಸ್ಪರ ಮಾತನಾಡಿಲ್ಲ. ವಿಡಿಯೋದಲ್ಲಿ ದರ್ಶನ್ ಸುಮಲತಾ ಹಿಂದೆ ನಿಂತು ಅವರಿವರನ್ನು ತಬ್ಬಿ ಮಾತನಾಡಿಸುತ್ತಿದ್ದರೆ, ಇತ್ತ ಸುದೀಪ್ ಸುಮಲತಾ ಅವರ ಮುಂದೆ ನಿಂತು ರಾಕ್ಲೈನ್ ವೆಂಕಟೇಶ್ ಜತೆ ಮಾತನಾಡುತ್ತಿದ್ದಾರೆ.
ಇನ್ನು ಸುದೀಪ್ ಮತ್ತು ದರ್ಶನ್ ಒಂದೇ ಕಡೆ ಸೇರಿದ್ದಾರೆ ಎಂಬ ಕಾರಣಕ್ಕೆ ಬರ್ತ್ಡೇ ಪಾರ್ಟಿಯಲ್ಲಿ ದಿಗ್ಗಜರು ಸಿನಿಮಾದ ʼಕುಚಿಕು ಕುಚಿಕು.. ನೀನು ಚಡ್ಡಿ ದೋಸ್ತು ಕಣೋ ಕುಚಿಕುʼ ಅನ್ನೋ ಹಾಡೇ ಮೇಳೈಸಿದೆ. ಆ ಹಾಡನ್ನೇ ಹತ್ತಾರು ಬಾರಿ ಪ್ಲೇ ಮಾಡಿದ್ದಾರೆ.










