ಬೆಂಗಳೂರು: ಕನ್ನಡ ಚಿತ್ರರಂಗದ ನಟ ಉಪೇಂದ್ರ ಮತ್ತು ಪ್ರಿಯಾಂಕಾ ಉಪೇಂದ್ರ ಹಾಗೂ ಅವರ ಮ್ಯಾನೇಜರ್ ಮೊಬೈಲ್ ಹ್ಯಾಕ್ ಮಾಡಿ ಹಣ ದೋಚಿದ್ದ ಸೈಬರ್ ವಂಚಕರ ಜಾಲ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದೆ.

ಕಳೆದ ತಿಂಗಳು ಪ್ರಿಯಾಂಕಾ ಉಪೇಂದ್ರ ಆನ್ಲೈನ್ನಲ್ಲಿ ಕೆಲ ವಸ್ತುಗಳನ್ನು ಖರೀದಿಸಿದ್ದರು. ವಸ್ತುಗಳು ಮನೆಗೆ ತಲುಪುವ ಸಮಯದಲ್ಲಿ ಅವರ ಮೊಬೈಲ್ಗೆ ಲಿಂಕ್‌ವೊಂದು ಬಂದಿದ್ದು, ಆನ್ಲೈನ್ ಡೆಲಿವರಿ ಸಂಸ್ಥೆಯಿಂದ ಬಂದ ಸಂದೇಶವೆಂದು ಪ್ರಿಯಾಂಕಾ ಲಿಂಕ್ ಕ್ಲಿಕ್ ಮಾಡಿದ್ದರು. ಕೂಡಲೇ ಅವರ ಮೊಬೈಲ್ ಹ್ಯಾಕ್ ಆಗಿತ್ತು. ಜೊತೆಗೆ ಪತಿ ಉಪೇಂದ್ರ ಹಾಗೂ ಮ್ಯಾನೇಜರ್ ಮೊಬೈಲ್ ಕೂಡ ಹ್ಯಾಕ್ ಆಗಿತ್ತು. ಬಳಿಕ ಸಂಪರ್ಕದಲ್ಲಿದ್ದವರಿಗೆ ಹಣ ಕಳುಹಿಸುವಂತೆ ಮೆಸೇಜ್ ಮಾಡಿದ್ದ ಆರೋಪಿ, ಪ್ರಿಯಾಂಕಾ ಅವರ ಪರಿಚಯಸ್ಥರಿಂದ ಒಂದೂವರೆ ಲಕ್ಷ ರೂಪಾಯಿ ಹಣ ದೋಚಿದ್ದಾನೆ.

ಈ ಬಗ್ಗೆ ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಬಿಹಾರ ಮೂಲದ ವಿಕಾಸ್ ಕುಮಾರ್ ಎಂಬಾತನನ್ನು ಬಂಧಿಸಿದ್ದಾರೆ. ಇನ್ನು ಆರೋಪಿ ಬಂಧನದ ವೇಳೆ ಆತನ ಊರಿನ 150ಕ್ಕೂ ಹೆಚ್ಚು ಯುವಕರು ಸೈಬರ್ ಕ್ರೈಂನಲ್ಲಿ ತೊಡಗಿರುವ ವಿಚಾರ ಬೆಳಕಿಗೆ ಬಂದಿದ್ದು, ಸದ್ಯ ತನಿಖೆ ಮುಂದುವರಿದಿದೆ.








