ಬೆಂಗಳೂರು: ಮಾ.21: ಉತ್ತರ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ ದಿನದಿಂದ ದಿನಕ್ಕೆ ಶಕ್ತಿಯುತವಾಗುತ್ತಲೇ ಸಾಗುತ್ತಿದೆ. ಇದೀಗ ಕಲಬುರಗಿ ಜಿಲ್ಲೆಯ ಹಿರಿಯ ನಾಯಕ ಬಾಬುರಾವ್ ಚಿಂಚನಸೂರ್ ಬಿಜೆಪಿ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಭೇಟಿ ಮಾಡಿ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ. ಇಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದು, ಯುಗಾದಿ ಹಬ್ಬ ಮುಕ್ತಾಯವಾದ ಬಳಿಕ ಮಾರ್ಚ್ 25ರಂದು ಗುರುಮಿಟ್ಕಲ್ ಕ್ಷೇತ್ರದಲ್ಲಿ ಬೃಹತ್ ಸಮಾವೇಶ ಮಾಡುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಮರು ಸೇರ್ಪಡೆ ಆಗುತ್ತಿದ್ದಾರೆ. 5 ಬಾರಿ ಶಾಸಕನಾಗಿ ಆಯ್ಕೆಯಾಗಿರುವ ಬಾಬುರಾವ್ ಚಿಂಚನಸೂರ್, 2 ಸಲ ಸಚಿವರಾಗಿ ಕೆಲಸ ಮಾಡಿದ್ದಾರೆ. ಕಲಬುರಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಜೊತೆ ಜೊತೆಗೆ ಬೆಳೆದುಬಂದ ಬಾಬುರಾವ್ ಚಿಂಚನಸೂರ್, ಸಿದ್ದರಾಮಯ್ಯ ಸರ್ಕಾರದಲ್ಲಿ ಮಂತ್ರಿ ಆಗಿದ್ದರು. ಆದ್ರೆ ಮಂತ್ರಿ ಸ್ಥಾನದಿಂದ ಕೆಳಗಳಿಸಿ ಪ್ರಿಯಾಂಕ್ ಖರ್ಗೆಗೆ ಸಚಿವ ಸ್ಥಾನ ಕೊಟ್ಟಿದ್ದರಿಂದ ಬೇಸತ್ತು 2018 ರಲ್ಲಿ ಬಿಜೆಪಿ ಸೇರಿದ್ದ ಬಾಬುರಾವ್ ಚಿಂಚನಸೂರ್, 2018ರಲ್ಲಿ ಗುರುಮಿಟ್ಕಲ್ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಿ ಸೋಲು ಕಂಡಿದ್ದರು. ಇದೀಗ ಕಾಂಗ್ರೆಸ್ನತ್ತ ಮರಳುತ್ತಿದ್ದಾರೆ.
ರಾಜಕೀಯ ಗುರುವಿನ ಮಾತಿಗೆ ಕಟ್ಟುಬಿದ್ದು ಕಾಂಗ್ರೆಸ್ ಸೇರ್ಪಡೆ..!
ಮಲ್ಲಿಕಾರ್ಜುನ ಖರ್ಗೆ ಶಿಷ್ಯ ಎಂದೇ ಗುರುತಿಸಿಕೊಂಡಿದ್ದ ಬಾಬುರಾವ್ ಚಿಂಚನಸೂರ್, ಕೂಲಿ ಸಮುದಾಯದ ಪ್ರಮುಖ ನಾಯಕ. ರಾಜಕೀಯ ಗುರು ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾದ ಬಳಿಕ ಗುರುವಿನ ಮಾತಿಗೆ ಮನ್ನಣೆ ಕೊಟ್ಟು ಕಾಂಗ್ರೆಸ್ಗೆ ವಾಪಸ್ ಆಗ್ತಿದ್ದಾರೆ ಎನ್ನಲಾಗಿದೆ. ಇನ್ನೂ ಒಂದು ಮೂಲಗಳ ಪ್ರಕಾರ ಬಿಜೆಪಿಯಲ್ಲಿ ಟಿಕೆಟ್ ಸಿಗುವುದಿಲ್ಲ ಎನ್ನುವುದನ್ನು ಅರಿತು ಕಾಂಗ್ರೆಸ್ನಲ್ಲಿ ಟಿಕೆಟ್ ಪಡೆಯಲು ಬಂದಿದ್ದಾರೆ ಎನ್ನಲಾಗ್ತಿದೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಮಂತ್ರಿ ಸ್ಥಾನ ಕಳೆದುಕೊಂಡು, ಈ ಕ್ರಮಕ್ಕೆ ಮಲ್ಲಿಕಾರ್ಜುನ ಖರ್ಗೆಯೇ ಕಾರಣ ಎಂದು ಖರ್ಗೆ ಮೇಲೆ ಸಿಟ್ಟಲ್ಲಿದ್ದ ಬಾಬುರಾವ್ ಚಿಂಚನಸೂರಿಗೆ ಬಿ.ಎಸ್ ಯಡಿಯೂರಪ್ಪ ಆಹ್ವಾನ ಕೊಟ್ಟಿದ್ದರು. ಯಡಿಯೂರಪ್ಪ ಮಾತಿನಿಂದ ಬಿಜೆಪಿ ಸೇರಿದ್ದ ಚಿಂಚನಸೂರ್, 2018ರಲ್ಲಿ ಗುರುಮಿಟ್ಕಲ್ನಲ್ಲಿ ಸೋತರೂ ಬಿಜೆಪಿಯಿಂದ ವಿಧಾನಪರಿಷತ್ (Members of a State Legislative Council ) ಸ್ಥಾನ ನೀಡಲಾಗಿತ್ತು. BJP ಸರ್ಕಾರದಲ್ಲಿ ಸಚಿವ ಸ್ಥಾನ ಸಿಗದಿದ್ದಾಗ ಬಿಜೆಪಿಯಿಂದ ಅಂಬಿಗರ ಚೌಡಯ್ಯ ನಿಗಮ ಸ್ಥಾನ ನೀಡಲಾಗಿತ್ತು.
ಮಲ್ಲಿಕಾರ್ಜುನ ಖರ್ಗೆ ಹಾಗು ಪ್ರಿಯಾಂಕ್ ಖರ್ಗೆ ಟಾರ್ಗೆಟ್..!
ಬಾಬುರಾವ್ ಚಿಂಚನಸೂರು ವಿಧಾನಸಭೆ ಚುನಾವಣೆಯಲ್ಲಿ ಸೋತು ಸುಣ್ಣವಾದರೂ ಶಕ್ತಿ ಮಾತ್ರ ಕುಂದಿರಲಿಲ್ಲ. 2019ರಲ್ಲಿ ತಂತ್ರಗಾರಿಕೆ ಮಾಡಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಲೋಕಸಭಾ ಚುನಾವಣೆಯಲ್ಲಿ ಸೋಲಿಸಲು ಶಕ್ತರಾಗಿದ್ದರು. ಇದೀಗ 2023ರಲ್ಲಿ ಪ್ರಿಯಾಂಕ್ ಖರ್ಗೆ ಅವರನ್ನು ಟಾರ್ಗೆಟ್ ಮಾಡಿದ್ದ ಬಿಜೆಪಿ ಯೋಜನೆಯಲ್ಲಿ ಬಾಬುರಾವ್ ಚಿಂಚನಸೂರ್ ಪ್ರಮುಖರಾಗಿದ್ದರು. ಆದರೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತುಕತೆ ನಡೆಸಿ ಕಾಂಗ್ರೆಸ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಮಾರ್ಚ್ 25ಕ್ಕೆ ಸೈದಾಪುರ ಸಮಾವೇಶದಲ್ಲಿ ಮಲ್ಲಿಕಾರ್ಜು ಖರ್ಗೆ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗಲಿದ್ದಾರೆ. ಈ ಮೂಲಕ ಬಿಜೆಪಿ ಪಾಲಿಗೆ ಕಲ್ಯಾಣ ಕರ್ನಾಟಕದಲ್ಲಿ ಆಘಾತ ಎದುರಾದಂತಾಗಿದೆ. ಕೆಲವೇ ತಿಂಗಳುಗಳ ಹಿಂದೆ ಮಾತನಾಡಿದ್ದ ಬಾಬುರಾವ್ ಚಿಂಚನಸೂರ್, ಬಿಜೆಪಿ ಪಕ್ಷ ತಾಯಿ ಇದ್ದಂಗೆ ತಾಯಿಪಕ್ಷ ಬಿಡೋನಲ್ಲ ಅಂದಿದ್ರು. ಸೂರ್ಯ -ಚಂದ್ರ ಇರೋವರೆಗೂ ಬಿಜೆಪಿಯಲ್ಲೇ ಇರ್ತೀನಿ ಅಂತಾನೂ ಹೇಳಿದ್ರು. ಇದೀಗ ಅದೇ ಬಿಜೆಪಿಗೆ ರಾಜೀನಾಮೆ ಕೊಟ್ಟು ಕಾಂಗ್ರೆಸ್ನತ್ತ ದಾಪುಗಾಲು ಇಟ್ಟಿದ್ದಾರೆ,
ಮಗನಿಗಾಗಿ ಖರ್ಗೆ ಸಂಧಾನವೋ ಪಕ್ಷದ ಹಿತಕ್ಕಾಗಿಯೋ..?
ಮಲ್ಲಿಕಾರ್ಜುನ ಖರ್ಗೆ ಶಿಷ್ಯನೇ ಆಗಿದ್ದ ಡಾ ಉಮೇಶ್ ಜಾಧವ್ ಎದುರು ಸೋಲುವುದಕ್ಕೆ ಬಾಬುರಾವ್ ಚಿಂಚನಸೂರ್ ಕಾರಣ ಎನ್ನುವುದು ಮಲ್ಲಿಕಾರ್ಜುನ ಖರ್ಗೆಗೆ ತಿಳಿಯಲು ಹೆಚ್ಚು ದಿನಗಳ ಅವಶ್ಯಕತೆ ಬೇಕಿರಲಿಲ್ಲ. ಅದೂ ಅಲ್ಲದೆ ಈ ಬಾರಿ ಚಿತ್ತಾಪುರ ವಿಧಾನಸಭಾ ಕ್ಷೇತ್ರದಲ್ಲಿ ಪ್ರಿಯಾಂಕ್ ಖರ್ಗೆ ಗೆಲುವಿಗೂ ಚಿಂಚನಸೂರು ಅಡ್ಡಿಯಾಗಲಿದ್ದಾರೆ ಎನ್ನುವ ಗುಟ್ಟು ಚುನಾವಣೆ ಘೋಷಣೆಗೂ ಮುನ್ನವೇ ಬಯಲಾಗಿದ್ದು, ಮಲ್ಲಿಕಾರ್ಜುನ ಖರ್ಗೆ ಸಂಧಾನಕ್ಕೆ ವೇದಿಕೆ ಮಾಡುವಂತಾಯ್ತು ಎನ್ನಲಾಗ್ತಿದೆ. ಕೂಲಿ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿದ್ದು, ಚಿಂಚನಸೂರ್ ಅವರನ್ನೇ ಬಳಸಿಕೊಂಡು ಪ್ರಿಯಾಂಕ್ ಖರ್ಗೆ ಅವರಿಗೆ ಸೋಲುಣಿಸಲು ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ನೇತೃತ್ವದಲ್ಲಿ ಜೇಡರ ಬಲೆ ಹೆಣೆಯುವ ಕೆಲಸ ಮಾಡಿತ್ತು. ಪ್ರಿಯಾಂಕಾ ಖರ್ಗೆಯನ್ನು ಸೋಲಿಸುವುದೇ ನನ್ನ ಹುರಿ ಎಂದು ತೊಡೆ ತಟ್ಟಿದ್ದ ಬಾಬುರಾವ್ ಚಿಂಚನಸೂರ್ ಅವರನ್ನೇ ಸೆಳೆಯುವ ಮೂಲಕ ಪ್ರಿಯಾಂಕ್ ಖರ್ಗೆ ರಾಜಕೀಯ ದಾಳ ಉರುಳಿಸಿದ್ದಾರೆ. ತಂದೆ ಮಲ್ಲಿಕಾರ್ಜುನ್ ಖರ್ಗೆ, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮೂಲಕ ಆಪರೇಷನ್ ಮಾಡಿ ಎದುರಾಳಿಯನ್ನೇ ಸೆಳೆದುಕೊಳ್ಳುವ ಮೂಲಕ ಗೆಲುವಿಗೆ ಅಡ್ಡಿಯಾಗಿದ್ದ ತೊಡಕನ್ನು ನಿವಾರಿಸಿಕೊಂಡಿದ್ದಾರೆ.
ಕೃಷ್ಣಮಣಿ