ಭಾರತದ ಸುಮಾರು 75% ಮಳೆಗೆ ಕಾರಣವಾಗುವ ಮುಂಗಾರು ಸಾಮಾನ್ಯವಾಗಿ ಕೇರಳದ ಮೂಲಕ ಜೂನ್‌ನಲ್ಲಿ ಭಾರತಕ್ಕೆ ಪ್ರವೇಶಿಸಿ, ಜುಲೈಯಲ್ಲಿ ಇಡೀ ಭಾರತದಾದ್ಯಂತ ಹರಡಿ ಸಪ್ಟೆಂಬರ್‌ನಲ್ಲಿ ಅಂತ್ಯವಾಗುತ್ತದೆ. ಆದರೆ ಸತತವಾಗಿ ಮೂರನೇ ಬಾರಿ ಸೆಪ್ಟೆಂಬರ್‌ನಲ್ಲಿ ನಿಗದಿಗಿಂತ ಹೆಚ್ಚು ಮಳೆಯಾಗಿದ್ದು ಆತಂಕಕ್ಕೆ ಕಾರಣವಾಗಿದೆ. ಇದು ಹೆಚ್ಚುತ್ತಿರುವ ಜಾಗತಿಕ ತಾಪಮಾನದ ನೇರ ಪರಿಣಾಮವೆಂದು ಈಗಲೇ ಹೇಳಲಾಗದಿದ್ದರೂ ಬದಲಾಗುತ್ತಿರುವ ಮಾನ್ಸೂನ್‌ನ ಸೂಚನೆಯಾಗಿರಬಹುದು ಎನ್ನುವ ಆತಂಕ ತಲೆದೋರಿದೆ.
![](https://pratidhvani.com/wp-content/uploads/2021/10/2-afp-1024x768.jpg)
ಸೆಪ್ಟೆಂಬರ್ನಲ್ಲಿ ಸಾಮಾನ್ಯವಾಗಿ ಭಾರತದಲ್ಲಿ ಮುಂಗಾರು ಹಿಂತೆಗೆದುಕೊಳ್ಳುತ್ತದೆ. ಆದರೆ, ಕಳೆದ ಮೂರು ವರ್ಷಗಳಲ್ಲಿ, ಸಪ್ಟೆಂಬರ್‌ನಲ್ಲಿ ಅಧಿಕ ಮಳೆಯಾಗಿದೆ. ಭಾರತದ ಹವಾಮಾನದ ಪ್ರಕಾರ ಸಪ್ಟೆಂಬರ್ ತಿಂಗಳಲ್ಲಿ ಸುರಿಯಬೇಕಿರುವ ಮಳೆಯ ಪ್ರಮಾಣ ಸರಾಸರಿ 17 ಸೆಂ.ಮೀ. ಆದರೆ 2019 ರ ಸೆಪ್ಟೆಂಬರ್‌ನಲ್ಲಿ 25 ಸೆಂ.ಮೀ ಮಳೆಯಾಗಿತ್ತು, 2020 ರಲ್ಲಿ ಸಾಮಾನ್ಯಕ್ಕಿಂತ ಸ್ವಲ್ಪ ಹೆಚ್ಚು ಅಂದರೆ 17.7 ಸೆಂ.ಮೀ. ಮತ್ತು ಈ ವರ್ಷ, ಸೆಪ್ಟೆಂಬರ್ 24 ರ ಹೊತ್ತಿಗೆ ಸಾಮಾನ್ಯಕ್ಕಿಂತ 2 ಸೆಂ.ಮೀ ಹೆಚ್ಚು ಅಂದರೆ 19 ಸೆಂ.ಮೀ ಮಳೆ ದಾಖಲಿಸಿದೆ. ಕೆಲವು ಪ್ರದೇಶಗಳಲ್ಲಿ, ಮಳೆ ಜೋರಾಗಿ ಬಿದ್ದಿದೆ. ಉದಾಹರಣೆಗೆ, ದೆಹಲಿಯಲ್ಲಿ ಸೆಪ್ಟೆಂಬರ್ 24 ರವರೆಗೆ 16 ಮಳೆ ದಿನಗಳು ದಾಖಲಾಗಿದ್ದು, 409.2 ಮಿಮೀ ಮಳೆಯಾಗಿದೆ. ಇದು ಸಪ್ಟೆಂಬರ್‌ನಲ್ಲಿ ಸಾಮಾನ್ಯವಾಗಿ ಮಳೆಯಾಗುವುದಕ್ಕಿಂತ 274% ಅಧಿಕ.
ಹೀಗೆ ಅಕಾಲಿಕವಾಗಿ ಸುರಿಯುವ ಮಳೆ ಒಂದು ಪ್ರದೇಶದ ಜನಜೀವನದ ಮೇಲೆ ಅಪಾರ ಪ್ರಮಾಣದ ವಿಪರೀತ ಪರಿಣಾಮಗಳನ್ನು ಉಂಟುಮಾಡುತ್ತದೆ ಮತ್ತು ಮಳೆಯನ್ನೇ ಅವಲಂಬಿಸಿರುವ ಕೃಷಿ ಚಟುವಟಿಕೆಗಳಿಗೆ ಹಾನಿಯನ್ನುಂಟು ಮಾಡುತ್ತದೆ. ಅದರಲ್ಲೂ ಮಳೆನೀರಿನ ಪ್ರಮಾಣ ಹಾಗೂ ಅದು ಸುರಿಯುವ ಸಮಯವನ್ನು ಅವಲಂಬಿಸಿರುವ ಖಾರಿಫ್ ಬೆಳೆಗಳಿಗೆ ಈ ರೀತಿಯ ಮಳೆ ಹೆಚ್ಚು ಅಪಾಯಕಾರಿಯಾಗಿ ಪರಿಣಮಿಸುತ್ತದೆ. ಅತಿಯಾದ, ತುಂಬಾ ಕಡಿಮೆ ಅಥವಾ ತಪ್ಪಾದ ಸಮಯದಲ್ಲಿ ಸುರಿಯುವ ಮಳೆಯಿಂದಾಗಿ ಇಡೀ ವರ್ಷದ ಪ್ರಯತ್ನಗಳು ವ್ಯರ್ಥವಾಗಬಹುದು.
ಕಳೆದ ಮೂರು ವರ್ಷಗಳಿಗೆ ಹೋಲಿಸಿದರೆ 2014ನ್ನು ಹೊರತುಪಡಿಸಿ 2013 ಮತ್ತು 2018 ರ ನಡುವೆ, ಸಪ್ಟೆಂಬರ್ ಮಳೆ ಸಾಮಾನ್ಯಕ್ಕಿಂತ ಕಡಿಮೆ ಇತ್ತು.
2010 ಮತ್ತು 2012 ರ ನಡುವಿನ ಸಪ್ಟೆಂಬರ್‌ಗಳು ಸರಾಸರಿಗಿಂತ ಹೆಚ್ಚಿನ ಮಳೆ ಪಡೆದಿದ್ದರೂ ಅದು ಭಾರತ ಆ ವರ್ಷ ಪಡೆದ ಒಟ್ಟು ಮಳೆಯ ಸರಾಸರಿಯನ್ನು ಹೆಚ್ಚಿಸಿರಲಿಲ್ಲ. ಆದರೆ 2019 ಮತ್ತು 2020 ರಲ್ಲಿ, ಭಾರತದಲ್ಲಿ ಬಿದ್ದ ಒಟ್ಟು ಸರಾಸರಿ ಮಳೆಯು ಸಾಮಾನ್ಯಕ್ಕಿಂತ 10% ಕ್ಕಿಂತ ಹೆಚ್ಚು.
ಈ ವರ್ಷ ಸಪ್ಟೆಂಬರ್ ಆರಂಭವಾಗುವುದಕ್ಕಿಂತ ಮೊದಲು ಭಾರತದಲ್ಲಿ ಸಾಮಾನ್ಯಕ್ಕಿಂತ 9% ಮಳೆಯ ಕೊರತೆಯಿತ್ತು. ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಸೆಪ್ಟೆಂಬರ್ ಅಂತ್ಯದ ವೇಳೆಗೆ ಶೇ .4 ರಷ್ಟು ಕೊರತೆಯನ್ನು ಕಡಿಮೆ ಮಾಡುತ್ತದೆ ಎಂದು ಊಹಿಸಿದ್ದರೂ, ಸಪ್ಟೆಂಬರ್ 24ರ ವರೆಗಿನ ಮಳೆಯ ಪ್ರಮಾಣವನ್ನು ಪರಿಶೀಲಿಸಿದಾಗ ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಮಳೆಯಾಗಿರುವುದು ಕಂಡುಬಂದಿದೆ.
![](https://pratidhvani.com/wp-content/uploads/2021/10/145945-txklickypf-1597311693-1024x538.jpg)
ಮುಂಗಾರು ಸಾಮಾನ್ಯವಾಗಿ ಸೆಪ್ಟೆಂಬರ್ 1 ರ ವೇಳೆಗೆ ಹಿಂತೆಗೆದುಕೊಳ್ಳಲು ಆರಂಭಿಸುತ್ತದೆ ಮತ್ತು ಅಕ್ಟೋಬರ್ ವೇಳೆಗೆ ಸಂಪೂರ್ಣವಾಗಿ ಹೋಗುತ್ತದೆ. ಆದರೆ 2019 ಮತ್ತು 2020 ರಲ್ಲಿ ಮುಂಗಾರು ಅಕ್ಟೋಬರ್‌ನಲ್ಲಿ ತನ್ನ ಹಿಂತೆಗೆತವನ್ನು ಆರಂಭಿಸಿತು ಮತ್ತು ಈ ವರ್ಷವೂ ಅದೇ ನಿರೀಕ್ಷೆಯಿದೆ ಎಂದು ಐಎಂಡಿ ವರದಿ ಹೇಳುತ್ತದೆ.
ಐಎಂಡಿಯ ಮಾಜಿ ಮಹಾನಿರ್ದೇಶಕರಾದ ಕೆ.ಜೆ. ರಮೇಶ್ “ಜಾಗತಿಕ ತಾಪಮಾನವು ಮಾನ್ಸೂನ್ ಅವಧಿಯಲ್ಲಿ ತೇವಾಂಶದ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಇದು ಮಳೆಯ ವಿತರಣೆಯ ಮೇಲೆ ಪರಿಣಾಮ ಬೀರುತ್ತದೆ” ಎಂದು ಹೇಳುತ್ತಾರೆ. ಜೂನ್ ಮತ್ತು ಸೆಪ್ಟೆಂಬರ್‌ನಲ್ಲಿ ಬೀಳುವ ಮಳೆಯಲ್ಲಿ ಸ್ವಲ್ಪ ಹೆಚ್ಚಳವಾದರೂ ಸಹ ಒಟ್ಟು ಮಳೆಯಲ್ಲಿ ದೊಡ್ಡ ಶೇಕಡಾವಾರು ಹೆಚ್ಚಳವನ್ನು ತೋರಿಸುತ್ತದೆ ಎಂದು ಅವರು ಹೇಳಿದ್ದಾರೆ.
ಈ ವರ್ಷ ಜೂನ್ ನಲ್ಲಿ ಪ್ರಕಟವಾದ ಒಂದು ಅಧ್ಯಯನವು ಜಾಗತಿಕ ತಾಪಮಾನವು ಭಾರತದ ಮಾನ್ಸೂನ್ ಅನ್ನು ‘ಹೆಚ್ಚು ತೇವಾಂಶಭರಿತವಾಗಿಸಲಿದೆ ಮತ್ತು ಹೆಚ್ಚು ಅಪಾಯಕಾರಿಯಾಗಲಿದೆ’ ಎಂದು ಅಂದಾಜಿಸಿತ್ತು. ವಾತಾವರಣದಲ್ಲಿನ ಇಂಗಾಲದ ಡೈಆಕ್ಸೈಡ್‌ನ ಹೆಚ್ಚಿನ ಸಾಂದ್ರತೆಗಳು, ಜಾಗತಿಕವಾಗಿ ಕುಸಿದಿರುವ ಮಂಜುಗಡ್ಡೆಯ ಪ್ರಮಾಣ, ತೇವಾಂಶ ಹೊಂದಿರುವ ಗಾಳಿಯ ಹೆಚ್ಚಳದಿಂದ ಹೆಚ್ಚಿನ ಮಳೆ ಮತ್ತು ಕಡಿಮೆ ಲವಣಾಂಶವು ದಾಖಲಾಗಿದೆ ಎಂದು ಅಧ್ಯಯನವು ಕಂಡುಹಿಡಿದಿದೆ. ಈ ಅಧ್ಯಯನದ ಪ್ರಮುಖ ಲೇಖಕರಾದ ಸ್ಟೀವನ್ ಕ್ಲೆಮೆನ್ಸ್ “ಕಳೆದ ಮಿಲಿಯನ್ ವರ್ಷಗಳಲ್ಲಿ ವಾತಾವರಣದಲ್ಲಿ ಉಂಟಾದ ಇಂಗಾಲದ ಡೈಆಕ್ಸೈಡ್ ಹೆಚ್ಚಳದಿಂದಾಗಿ ದಕ್ಷಿಣ ಏಷ್ಯಾದ ಮಾನ್ಸೂನ್ ವ್ಯವಸ್ಥೆಯಲ್ಲಿ ಮಳೆಯ ಪ್ರಮಾಣದಲ್ಲಿ ಗಣನೀಯ ಹೆಚ್ಚಳವಾಗಿದೆ” ಎಂದು ಹೇಳಿರುವುದಾಗಿ ‘ನ್ಯೂಯಾರ್ಕ್ ಟೈಮ್ಸ್’ ವರದಿ ಮಾಡಿದೆ.
![](https://pratidhvani.com/wp-content/uploads/2021/08/pratidhvani_2021-02_b25805e8-d9f8-421e-a7cb-a15b7e6f7742_pratidhvani_2020_09_17f09c37_524c_4aa5_a9f7_60fb07975af5_Support_us_Banner_New_3-1.png)
ಪರಿಸರದ ಮೇಲಿನ ಮಾನವನ ವಿಪರೀತ ಹಸ್ತಕ್ಷೇಪದಿಂದ ವಾತಾವರಣದಲ್ಲಿ ಹಸಿರುಮನೆ ಅನಿಲಗಳ ಸಾಂದ್ರತೆಯು ಹೆಚ್ಚುತ್ತಿರುವುದರಿಂದ, ಭಾರತವು ಹೊಸ ಮಾನ್ಸೂನ್ ಮಾದರಿಗಳನ್ನು ನಿರೀಕ್ಷಿಸಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಈ ಬಗ್ಗೆ ವಿಸ್ತೃತ ಅಧ್ಯಯನ ಕೈಗೊಂಡಿರುವ ಜರ್ಮನಿಯ ಪಾಟ್ಸ್‌ಡ್ಯಾಮ್ ಇನ್‌ಸ್ಟಿಟ್ಯೂಟ್‌ನ ‘dynamics of the climate system’ನ ಪ್ರಾಧ್ಯಾಪಕ ಆಂಡರ್ಸ್ ಲೆವರ್‌ಮನ್ ಅವರು ಹವಾಮಾನಾಧಾರಿತ ಮಾನ್ಸೂನ್ ಮುನ್ಸೂಚನೆಗಳ ಕುರಿತು ಸಂಶೋಧನೆಯನ್ನು ಕೈಗೊಂಡಿದ್ದು, ಹೊಸ ಮುಂಗಾರಿನ ಪರಿಣಾಮಗಳು ಭಾರತೀಯ ಉಪಖಂಡದ ಜನರಿಗೆ ‘ಭೀಕರ’ವಾಗಬಹುದು ಎಂದು ಹೇಳಿದ್ದಾರೆ. “ಮಾನ್ಸೂನ್‌ನ ಹೆಚ್ಚುತ್ತಿರುವ ಅನಿಯಮಿತ ಸ್ವಭಾವವು ತನ್ನದೇ ಆದ ಅಪಾಯಗಳನ್ನು ಹೊಂದಿದೆ” ಎಂದೂ ಅವರು ಹೇಳಿದ್ದಾರೆ.