ದೇಶಾದ್ಯಂತ ಪೆಗಾಸಸ್ ಎಂಬ ಪೆಡಂಭೂತ ಭಾರಿ ಸದ್ದು ಮಾಡುತ್ತಿರುವ ಬೆನ್ನಲ್ಲೇ, ಇದರ ಬೇರುಗಳು ಪಶ್ಚಿಮ ಬಂಗಾಳಕ್ಕೂ ಹಬ್ಬಿರುವ ಕುರಿತು ವರದಿಯಾಗಿದೆ. ಇದಕ್ಕೆ ಪೂರಕವೆಂಬಂತೆ ಪಶ್ಚಿಮ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿರುವ ಸುವೆಂಧು ಅಧಿಕಾರಿಯವರೇ ನೀಡಿರುವ ಹೇಳಿಕೆ ಸಂಶಯವನ್ನು ಮತ್ತಷ್ಟು ಬಲಪಡಿಸುತ್ತಿದೆ. ಕರ್ನಾಟಕದಲ್ಲಿ ಅಸ್ಥಿತ್ವದಲ್ಲಿದ್ದ ಸರ್ಕಾರವನ್ನೇ ಉರುಳಿಸಲು ಪೆಗಾಸಸ್ ಅನ್ನು ಬಳಸಿಕೊಂಡಿರುವುದು ದೊಡ್ಡ ಸುದ್ದಿಯಾಗುತ್ತಲೇ, ಪಶ್ಚಿಮ ಬಂಗಾಳದಲ್ಲಿ ಅಧಿಕಾರ ಹಿಡಿಯಲೂ ಪೆಗಾಸಸ್ ಅನ್ನು ಬಳಸಿಕೊಳ್ಳಲಾಗಿದೆ ಎಂಬುದು ಸ್ಪಷ್ಟವಾಗುತ್ತಿದೆ.
ಪೂರ್ವ ಮೇದಿನಿಪುರ ಜಿಲ್ಲೆಯಲ್ಲಿ ನಡೆದ ಸಮಾವೇಷದಲ್ಲಿ ಪಾಲ್ಗೊಂಡಿದ್ದ ಸುವೆಂಧು ಅಧಿಕಾರಿ “ಸೋದರಳಿಯನ ಕಚೇರಿಗೆ ಬರುವ ಎಲ್ಲಾ ಕರೆಗಳ ದಾಖಲೆ ನನ್ನ ಬಳಿ ಇವೆ,” ಎಂದು ಹೇಳಿದ್ದರು. ಅದು ಕೂಡಾ ಪೆಗಾಸಸ್ ಕುರಿತ ಚರ್ಚೆ ಆರಂಭವಾಗಿರುವ ಸಂದರ್ಭದಲ್ಲಿಯೇ ಇಂತಹ ಹೇಳಿಕೆ ನೀಡಿರುವುದು ಅನುಮಾನಗಳಗೆ ಮತ್ತಷ್ಟು ಪುಷ್ಟಿ ನೀಡಿದೆ. ಪಶ್ಚಿಮ ಬಂಗಾಳದಲ್ಲಿ “ಸೋದರಳಿಯ” ಎಂದರೆ, ಸಿಎಂ ಮಮತಾ ಬ್ಯಾನರ್ಜಿ ಅವರ ಸೋದರಳಿಯನಾದ ಅಭಿಷೇಕ್ ಬ್ಯಾನರ್ಜಿ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಟಿಎಂಸಿಯಲ್ಲಿ ಮಮತಾ ನಂತರದ ಸ್ಥಾನ ಹೊಂದಿರುವ ಅಭಿಷೇಕ್, ಚುನಾವಣಾ ಸಮಯದಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಈಗ ಅವರ ಮೇಲೂ ಪೆಗಾಸಸ್ ಮೂಲಕ ಹದ್ದಿನ ಕಣ್ಣು ಇಡಲಾಗಿತ್ತು ಎಂಬುದು ತಿಳಿದು ಬರುತ್ತಿದೆ.
“ಸೋದರಳಿಯನ ಕಚೇರಿಗೆ ಬರುವ ಎಲ್ಲಾ ಕರೆಗಳ ದಾಖಲೆ ನನ್ನ ಬಳಿ ಇವೆ. ಹಾಗಾಗಿ ಎಚ್ಚರಿಕೆಯಿಂದ ಇರಿ. ನಿಮ್ಮ ಬಳಿ ರಾಜ್ಯ ಸರ್ಕಾರವಿದ್ದರೆ, ನಮ್ಮ ಕೈಯಲ್ಲಿ ಕೇಂದ್ರ ಸರ್ಕಾರವಿದೆ,” ಎಂದು ಪರೋಕ್ಷವಾದ ಧಮ್ಕಿ ನೀಡಿದ್ದಾರೆ. ‘ಆನಂದ್ ಬಜಾರ್ ಪತ್ರಿಕಾ’ ಎಂಬ ಸ್ಥಳೀಯ ಬಂಗಾಳಿ ಪತ್ರಿಕೆಯು ಇದನ್ನು ವರದಿ ಮಾಡಿದೆ.

ಇಷ್ಟು ಮಾತ್ರವಲ್ಲದೇ ಚುನಾವಣಾ ಸಮಯದಲ್ಲಿ, ಪ್ರಶಾಂತ್ ಕಿಶೋರ್ ಅವರ ಮೊಬೈಲ್ ಕೂಡಾ ಹ್ಯಾಕ್ ಮಾಡಲಾಗಿತ್ತು. ಪೆಗಾಸಸ್ ಎಂಬ ತಂತ್ರಾಂಶವನ್ನು ಅಭಿವೃದ್ದಿಪಡಿಸಿರುವ NSO ಸಂಸ್ಥೆಯ ಪ್ರಕಾರ ಕೇವಲ ಕಣ್ಗಾವಲು ಇಡಲಿಚ್ಚಿಸುವ ಸರ್ಕಾರಗಳು ಮಾತ್ರ ಈ ತಂತ್ರಾಂಶವನ್ನು ಬಳಸಿಕೊಳ್ಳುತ್ತವೆ. ಹಾಗಾಗಿ, ಭಾರತದಲ್ಲಿ ಅನಾಮಿಕ ಸಂಸ್ಥೆಯ ಸಹಾಯದೊಂದಿಗೆ ರಾಜಕೀಯ ಲಾಭ ಪಡೆಯತ್ತಿತ್ತು ಎಂಬುದು ಸ್ಪಷ್ಟವಾಗಿ ತಿಳಿದು ಬರುತ್ತಿದೆ.
ಈಗ ಸುವೆಂಧು ಅಧಿಕಾರಿಯವರ ಭಾಷಣದ ನಂತರ ಈ ವಿಚಾರದ ಕುರಿತು ಮತ್ತ್ಟು ಬಲವಾದ ಸಾಕ್ಷ್ಯಗಳು ಲಭಿಸುತ್ತಿವೆ. ಪೆಗಾಸಸ್ ಎಂಬ ತಂತ್ರಾಂಶವು ಎಷ್ಟು ಅಪಾಯಕಾರಿ ಎಂದರೆ, ಯಾರ ಫೋನ್ ಹ್ಯಾಕ್ ಮಾಡಲಾಗಿದೆಯೋ ಅವರ ಕರೆಗಳು, ಸಂದೇಶಗಳು ಮಾತ್ರವಲ್ಲದೇ, ಫೋನ್ ಸಹಾಯದಿಂದ ಅವರ ಮಾತುಗಳನ್ನು ಗುಪ್ತವಾಗಿ ರೆಕಾರ್ಡ್ ಮಾಡಬಲ್ಲದು ಹಾಗೂ ಫೋನ್ ಬಳಸುವವರಿಗೆ ತಿಳಿಯದಂತೆಯೇ ವೀಡಿಯೊ ಕೂಡಾ ಮಾಡಬಲ್ಲದು. ಇಂತಹ ಅಪಾಯಕಾರಿ ತಂತ್ರಾಂಶವನ್ನು ಬಳಸಿಕೊಂಡು ರಾಜಕೀಯ ದುರ್ಲಾಭ ಪಡೆಯುವ ಯೋಚನೆ ಇದ್ದಿದ್ದಂತು ಸತ್ಯ.

ಸಂಸತ್ತಿನಲ್ಲೂ ಪ್ರತಿಧ್ವನಿಸಿದ ಪೆಗಾಸಸ್:
ಸುವೆಂಧು ಅಧಿಕಾರಿ ಅವರ ಭಾಷಣದ ವರದಿಗಳು ಹೊರಬೀಳುತ್ತಿದ್ದಂತೆಯೇ, ಮಂಗಳವಾರ ಮುಂಜಾನೆ ಟಿಎಂಸಿ ಸಂಸದರಾದ ಸೌಗತಾ ರಾಯ್ ಹಾಗೂ ಸುಖೇಂದು ಸೇಖರ್ ಅವರು ರಾಜ್ಯಸಭೆ ಹಾಗೂ ಲೋಕಸಭೆಯ ಇತರ ಚರ್ಚೆಗಳನ್ನು ಬದಿಗಿಟ್ಟು ಪೆಗಾಸಸ್ ವಿಚಾರವನ್ನು ಚರ್ಚಿಸುವಂತೆ ಮನವಿ ಮಾಡಿಕೊಂಡರು.
ಸಂಸತ್ತಿನ ಮುಂಭಾಗದಲ್ಲಿರುವ ಮಹಾತ್ಮಾ ಗಾಂಧಿ ಪ್ರತಿಮೆಯ ಎದುರು ಟಿಎಂಸಿ ನಾಯಕರು ಪ್ರತಿಭಟನೆಯನ್ನೂ ನಡೆಸಿದರು.

ದೇಶದಲ್ಲಿ ರಾಜಕೀಯ ವಿರೋಧಿಗಳ ಖಾಸಗಿತನಕ್ಕೆ ಧಕ್ಕೆ ಉಂಟು ಮಾಡಿ ಇಂತಹ ನೀಚ ದಾರಿಯಿಂದ ಅವರನ್ನು ಮಣಿಸುವ ತಂತ್ರವನ್ನು ಅನುಸರಿಸಿರುವುದು ನಿಜಕ್ಕೂ ದುರಂತ. ಪ್ರಜಾಪ್ರಭುತ್ವ ಮಾದರಿಯಲ್ಲಿ ಚುನಾವಣೆ ಗೆಲ್ಲಲು ಅಸಾಧ್ಯವಾದಾಗ ಪ್ರಜಾಪ್ರಭುತ್ವದ ಆಶಯಗಳಿಗೆ ಧಕ್ಕೆ ಉಂಟುಮಾಡುವಂತಹ ಕೃತ್ಯಗಳು ದೇಶದ ಪ್ರಗತಿಯನ್ನು ಅಧಪತನದತ್ತ ಕೊಂಡೊಯ್ಯುವುದರಲ್ಲಿ ಸಂಶಯವಿಲ್ಲ.