ಮುಂದಿನ ವರ್ಷ ಉತ್ತರ ಪ್ರದೇಶ, ಉತ್ತರಖಾಂಡ, ಗೋವಾ, ಮಣಿಪುರ, ಪಂಜಾಬ್ ಮತ್ತು ಗುಜರಾತ್ ಒಟ್ಟು ಆರು ರಾಜ್ಯಗಳಿಗೆ ವಿಧಾನಸಭಾ ಚುನಾವಣೆ ನಡೆಯಲಿದೆ. ಗುಜರಾತ್ ಚುನಾವಣೆ ವರ್ಷದ ಕೊನೆಗೆ (ಡಿಸೆಂಬರ್) ನಡೆದರೆ ಉಳಿದವೆಲ್ಲವೂ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ನಡೆಯುತ್ತವೆ. ಈ ಆರು ರಾಜ್ಯಗಳ ಪೈಕಿ ಮೂರರಲ್ಲಿ (ಉತ್ತರ ಪ್ರದೇಶ, ಉತ್ತರಖಂಡ ಮತ್ತು ಗುಜರಾತ್) ಬಿಜೆಪಿಯ ಸರ್ಕಾರವಿದೆ. ಗೋವಾ ಮತ್ತು ಮಣಿಪುರಗಳಲ್ಲಿ ಬಿಜೆಪಿ ನೇತೃತ್ವದ ಮೈತ್ರಿ ಸರ್ಕಾರಗಳಿವೆ. ಪಂಜಾಬ್ ಒಂದರಲ್ಲಿ ಕಾಂಗ್ರೆಸ್ ಸರ್ಕಾರ ಇದೆ.
ಇದಿಷ್ಟನ್ನು ಓದಿದ ಮೇಲೆ ಸಹಜವಾಗಿ ಈ ಚುನಾವಣೆಗಳು ಎಲ್ಲಾ ಪಕ್ಷಗಳಿಗಿಂತ ಬಿಜೆಪಿಗೆ ಇರುವ ಅಧಿಕಾರವನ್ನು ಉಳಿಸಿಕೊಳ್ಳುವ ದೃಷ್ಟಿಯಲ್ಲಿ ತುಂಬಾ ಮಹತ್ವವಾದವು ಎನಿಸಲಿದೆ. ಕಾಂಗ್ರೆಸ್ ಪಕ್ಷಕ್ಕೆ ಪಂಜಾಬ್ ಉಳಿಸಿಕೊಳ್ಳುವ, ಗೋವಾ ಮತ್ತು ಉತ್ತರಾಖಂಡದಲ್ಲಿ ಗೆಲುವಿಗಾಗಿ ಪ್ರಯತ್ನಿಸುವ, ಉತ್ತರ ಪ್ರದೇಶ, ಗುಜರಾತ್ ಮತ್ತು ಮಣಿಪುರಗಳಲ್ಲಿ ನೆಲೆ ವಿಸ್ತರಿಸಿಕೊಳ್ಳುವ ದೃಷ್ಟಿಯಲ್ಲಿ ಮುಖ್ಯವಾದುದು ಎನಿಸುತ್ತದೆ. ಆದರೆ ಈ ಎರಡೂ ರಾಷ್ಟ್ರೀಯ ಪಕ್ಷಗಳ ನಿದ್ದೆಗೆಡಿಸಿರುವುದು ಆಮ್ ಆದ್ಮಿ ಪಕ್ಷ. ಏಕೆಂದರೆ ಮುಂದಿನ ವರ್ಷ ನಡೆಯುವ ಈ ಆರು ರಾಜ್ಯಗಳ ಪೈಕಿ ಮಣಿಪುರ ಬಿಟ್ಡು ಉಳಿದೆಲ್ಲೆಡೆ ಪೂರ್ಣ ಪ್ರಮಾಣದಲ್ಲಿ ಕಣಕ್ಕಿಳಿಯಲೊರಟಿದೆ ಆಮ್ ಆದ್ಮಿ ಪಕ್ಷ.
ಆಮ್ ಆದ್ಮಿ ಪಕ್ಷ ಎಲ್ಲಿ ಯಾವ ಪಕ್ಷಕ್ಕೆ, ಅಂದರೆ ಬಿಜೆಪಿ ಅಥವಾ ಕಾಂಗ್ರೆಸಿಗೆ ಹೇಗೆ ಏಟು ಕೊಡುತ್ತೆ ಎಂದು ಹೇಳಲಾರದ ಪರಿಸ್ಥಿತಿ ಇದೆ. ಆಮ್ ಆದ್ಮಿ ಪಕ್ಷ ಮಧ್ಯಮವರ್ಗ, ವಿದ್ಯಾವಂತ ವರ್ಗ, ಯುವಕ-ಯುವತಿಯರು ಹಾಗೂ ಮೇಲ್ವರ್ಗದ ಮತಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಪಡೆದರೆ ಬಿಜೆಪಿಗೆ ಹೊಡೆತ ಬೀಳಲಿದೆ. ಬಡವರು, ದಲಿತರು, ಅಲ್ಪಸಂಖ್ಯಾತರು ಹಾಗೂ ಕೂಲಿ ಕಾರ್ಮಿಕರ ಮತಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಪಡೆದರೆ ಅದರಿಂದ ಕಾಂಗ್ರೆಸ್ ಪಕ್ಷಕ್ಕೆ ಹಾನಿಯಾಗಲಿದೆ. ಜೊತೆಗೆ ಇದು ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷಕ್ಕೂ ಅನ್ವಯವಾಗಲಿದೆ. ಆದುದರಿಂದ ಒಂದು ಅರ್ಥದಲ್ಲಿ ಈ ಐದು ರಾಜ್ಯಗಳಲ್ಲಿ ಈ ಬಾರಿ ನಿಜವಾಗಿಯೂ ನಿರ್ಣಾಯಕ ಪಾತ್ರ ವಹಿಸುತ್ತಿರುವುದು ಆಮ್ ಆದ್ಮಿ ಪಕ್ಷ ಎನ್ನಲಾಗುತ್ತಿದೆ.
ಇದಕ್ಕೆ ಪೂರಕವಾಗಿ ಆಮ್ ಆದ್ಮಿ ಪಕ್ಷ ಎಲ್ಲಾ ರಾಜ್ಯಗಳಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಸ್ಪರ್ಧೆ ಮಾಡಲು ಹೊರಟಿದೆ. ಈ ಮೂಲಕ ಎಲ್ಲರಿಂದಲೂ ಸಮಾನ ಅಂತರ ಕಾಪಾಡಿಕೊಳ್ಳತೊಡಗಿದೆ. ಅಲ್ಲದೆ ಸದ್ಯ ಅದು ಅಧಿಕಾರದಲ್ಲಿ ಇರುವ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅನುಸರಿಸಿದ ತಂತ್ರವನ್ನೇ ಈ ಐದು ರಾಜ್ಯಗಳಲ್ಲಿ ಬಳಸಲೊರಟಿದೆ. ಉದಾಹರಣೆಗೆ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದರೆ ಉಚಿತವಾಗಿ ವಿದ್ಯುತ್ ಕೊಡಲಾಗುವುದು ಎಂಬ ಭರವಸೆಯನ್ನು ಎಲ್ಲಾ ಕಡೆ ನೀಡುತ್ತಿದೆ. ಜೊತೆಗೆ ದಿನದ 24ಗಂಟೆಯೂ ವಿದ್ಯುತ್ ಕೊಡುವುದಾಗಿ ತಿಳಿಸುತ್ತಿದೆ. ಇದೊಂದು ಉದಾಹರಣೆಯಾಗಿದ್ದು ಇದೇ ರೀತಿ ಎಲ್ಲಾ ಕಡೆಗಳಲ್ಲೂ ಒಂದೇ ರೀತಿಯ ಮಾರ್ಗಸೂಚಿಗಳನ್ನು ಅನುಸರಿಸಲೊರಟಿದೆ.
ರಾಷ್ಟ್ರೀಯ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಆಮ್ ಆದ್ಮಿಪಕ್ಷ ವಿಸ್ತರಿಸಿಕೊಳ್ಳುವ ಬಗ್ಗೆ ಮಾತನಾಡಿದ್ದಾರೆ. ತಮ್ಮ ಪಕ್ಷ ಜನಪರ ರಾಜಕಾರಣ ಮಾಡುತ್ತದೆ. ಹಾಗಾಗಿ ನಮ್ಮದು ಯಾವಾಗಲೂ, ಎಲ್ಲಾ ಕಡೆಗೂ ಒಂದೇ ನಿಲುವು ಎಂದಿದ್ದಾರೆ. ‘ಉಚಿತವಾಗಿ ವಿದ್ಯುತ್ ಕೊಡುವುದು ಜನಪರ ಘೋಷಣೆಯಲ್ಲವೇ?’ ಎಂಬ ಪ್ರಶ್ನೆಗೆ ‘50,009 ಕೋಟಿ ರೂಪಾಯಿ ಬಜೆಟ್‌ನಲ್ಲಿ ದೆಹಲಿ ಜನಕ್ಕೆ ನಾವು ಉಚಿತ ವಿದ್ಯುತ್ ನೀಡುತ್ತಿದ್ದೇವೆ ಎಂದರೆ 5 ಲಕ್ಷದ 50 ಸಾವಿರ ಕೋಟಿ ಬಜೆಟ್‌ನಲ್ಲಿ ಉತ್ತರ ಪ್ರದೇಶದ ಜನರಿಗೆ ಏಕೆ ಉಚಿತ ವಿದ್ಯುತ್ ನೀಡಲು ಸಾಧ್ಯವಿಲ್ಲ?’ ಎಂದು ಪ್ರಶ್ನಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ.
ಆಮ್ ಆದ್ಮಿ ಪಕ್ಷ ಸರ್ಕಾರ ರಚಿಸುವ ಸ್ಥಿತಿಯಲ್ಲಿ ಇಲ್ಲವಲ್ಲಾ ಎಂಬ ಪ್ರಶ್ನೆಗೆ ‘ವಿದ್ಯುತ್ ಸಮಸ್ಯೆಯೊಂದೇ ನಮ್ಮನ್ನು ಉತ್ತರ ಪ್ರದೇಶದಲ್ಲಿ ಅಧಿಕಾರಕ್ಕೆ ತರಲಿದೆ. ಸಾಮಾನ್ಯ ಜನರು ನಮ್ಮ ಜೊತೆ ಸೇರಿಕೊಂಡಿದ್ದಾರೆ. ನಾವು ಅಧಿಕಾರದ ರೇಸಿನಲ್ಲಿಲ್ಲ ಎಂಬುದು ಎದುರಾಳಿ ಪಕ್ಷಗಳು ಹರಡುತ್ತಿರುವ ಹಸಿ ಸುಳ್ಳುಗಳು’ ಎಂದು ಉತ್ತರಿಸಿದ್ದಾರೆ. ಜೊತೆಗೆ ನಾವು ಯಾವುದೇ ಪಕ್ಷದೊಂದಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಮೈತ್ರಿ ಮಾಡಿಕೊಳ್ಳುವುದಿಲ್ಲ. ಉದಾಹರಣೆಗೆ ಉತ್ತರ ಪ್ರದೇಶದಲ್ಲಿ ಎಲ್ಲಾ 403 ಸ್ಥಾನಗಳಲ್ಲೂ ಸ್ಪರ್ಧಿಸುತ್ತೇವೆ. ನಾವು ದೂರದೃಷ್ಟಿಯಿಂದ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.