ಬೆಂಗಳೂರಿ ಸುರಿದ ಧಾರಕಾರ ಬೇಸಿಗೆ ಮಳೆಗೆ ಯುವತಿಯೊಬ್ಬರು ಬಲಿಯಾಗಿದ್ದಾರೆ. ಭಾರೀ ಮಳೆಯಿಂದ ಕೆ.ಆರ್ ಸರ್ಕಲ್ ಅಂಡರ್ ಪಾಸ್ಗೆ ನೀರು ಬಂದಿತ್ತು. ಕ್ರಮೇಣವಾಗಿ ಅಂಡರ್ ಪಾಸ್ ಕೆಳಗೆ ನೀರಿನ ಮಟ್ಟ ಹೆಚ್ಚಾಗಿದೆ. ಈ ವೇಳೆ ನೀರಿನಲ್ಲಿ ಸಿಲುಕಿದ್ದ ಆರಕ್ಕೂ ಹೆಚ್ಚು ಮಂದಿ ನೀರು ಹೆಚ್ಚಾಗುತ್ತಿದ್ದಂತೆ ಜೋರಾಗಿ ಕಿರುಚಾಡೋಕೆ ಶುರು ಮಾಡಿದ್ದಾರೆ. ಈ ವೇಳೆ ಅಂಡರ್ ಪಾಸ್ ಮೇಲಿದ್ದ ಬೇರೆ ವಾಹನ ಸವಾರರು ಕೂಡಲೇ ಸಹಾಯಕ್ಕೆ ಹೋಗಿದ್ದಾರೆ. ಮೊದಲಿಗೆ ಸೀರೆ ಕೊಟ್ಟು ಕೆಳಗಡೆ ಇದ್ದವರನ್ನು ಮೇಲೆತ್ತಲು ಪ್ರಯತ್ನ ಮಾಡಿ ವಿಫಲವಾದ ಬಳಿಕ, ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಆ ಬಳಿಕ ಅಗ್ನಿಶಾಮಕ ಸಿಬ್ಬಂದಿ ರಕ್ಷಣೆ ಮಾಡಿ ಆಸ್ಪತ್ರೆಗೆ ಕಳಹಿಸಿ ಕೊಟ್ಟಿದ್ದು, ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ಮಾಡಿದ ಆರೋಪ ಕೇಳಿ ಬಂದಿದ್ದು 22 ವರ್ಷದ ಇನ್ಫೋಸಿಸ್ ಉದ್ಯೋಗಿ ಭಾನುರೇಖಾ ಸಾವನ್ನಪ್ಪಿದ್ದಾರೆ.
ಸಿಎಂ ಆದ ಮರು ದಿನವೇ ದುರಂತ, ಸಿದ್ದರಾಮಯ್ಯ ಗರಂ..
ಮಳೆ ಸುರಿದಿದ್ದು ಕೇವಲ ಅರ್ಧ ಗಂಟೆ ಮಾತ್ರ. ಆದರೂ ಅವಾಂತರದ ಸುದ್ದಿ ಟಿವಿಗಳಲ್ಲಿ ಬರುತ್ತಿದ್ದ ಹಾಗೆ ಅಲರ್ಟ್ ಆದ ಸಿದ್ದರಾಮಯ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಬಳಿ ವರದಿ ಪಡೆದುಕೊಂಡಿದ್ದಾರೆ. ಮಳೆ ಹಾನಿ ಬಗ್ಗೆ ಮಾಹಿತಿ ಪಡೆದ ಸಿಎಂ ಸಿದ್ದರಾಮಯ್ಯ, ಯಾವ್ಯಾವ ಭಾಗದಲ್ಲಿ ಹಾನಿಯಾಗಿದೆ ಎನ್ನುವ ಮಾಹಿತಿ ಕಲೆ ಹಾಕಿದ ಬಳಿಕ ಬಿಬಿಎಂಪಿ ಅಧಿಕಾರಿಗಳಿಗೆ ಚಳಿ ಬಿಡಿಸಿದ್ದಾರೆ. ಬೆಂಗಳೂರಿನಲ್ಲಿ ಮಳೆ ಅವಾಂತರಕ್ಕೆ ಜನತ ತತ್ತರದ ಬಗ್ಗೆ ಕೇಳಿದ ಸಿಎಂ ಪ್ರಶ್ನೆಗೆ ಸಮರ್ಪಕ ಮಾಹಿತಿ ನೀಡದ ಬಿಬಿಎಂಪಿ ಅಧಿಕಾರಿಗಳು. ಜೂನ್‌ನಲ್ಲಿ ಆರಂಭವಾಗುವ ಮಳೆಗಾಲಕ್ಕೆ ನಿಮ್ಮ ತಯಾರಿ ಏನು..? ಎಂದು ಪ್ರಶ್ನಿಸಿದ ಸಿಎಂ ಸಿದ್ಧರಾಮಯ್ಯ. ಸಿದ್ಧರಾಮಯ್ಯರ ಪ್ರಶ್ನೆಗೆ ಉತ್ತರಿಸಲು ತಡಬಡಾಯಿಸಿದ ಅಧಿಕಾರಿಗಳು. ಅರ್ಧ ಗಂಟೆ ಮಳೆಗೆ ಹೀಗೆ ಆದರೆ, ನೀವು ಬೇಸಿಗೆ ಕಾಲದಲ್ಲಿ ಕುಳಿತು ಮಾಡಿದ್ದೇನು..? ಈಗ ನಾನೇ ಅಲ್ಲಿಗೆ ಬರಬೇಕಾ..? ಎಂದು ಸಿಎಂ ಸಿದ್ಧರಾಮಯ್ಯ ಗರಂ ಆಗಿದ್ದಾರೆ. ಕೆಲಸ ಮಾಡುವುದಕ್ಕೆ ಆಗುವುದಿಲ್ಲ ಅಂದರೆ ಮನೆಗೆ ಹೋಗಿ ಎಂದಿರುವ ಸಿಎಂ ಸಿದ್ಧರಾಮಯ್ಯ ಮಾತಿಗೆ ಮುಂಗಾರು ಮಳೆ ಆರಂಭಕ್ಕೂ ಮುನ್ನಾ ಬೆಂಗಳೂರಿನಲ್ಲಿ ಇದು ಅಕಾಲಿಕ ಮಳೆ ಎಂದು ಸಮಜಾಯಿಸಿ ನೀಡಲು ಬಿಬಿಎಂಪಿ ಅಧಿಕಾರಿಗೆ ಗದರಿದ ಸಿಎಂ, ಅಕಾಲಿಕ ಮಳೆ ಹೌದು, ಮಳೆ ಹೇಳಿ ಕೇಳಿ ಬರಬೇಕಾ..? ಅದರಲ್ಲೂ ನಿಮ್ಮನ್ನ ಕೇಳಿ ಬರಬೇಕಾ..? ಎಂದು ಅಧಿಕಾರಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ.
ಇನ್ಫೋಸಿಸ್ ಉದ್ಯೋಗಿ, ಆಂಧ್ರ ಮೂಲದ ಭಾನುರೇಖಾ ಸಾವು..!
ಕೆ.ಆರ್ ಸರ್ಕಲ್ ಬಳಿಯ ದುರಂತದ ಬಗ್ಗೆ ಟಿವಿಗಳಲ್ಲಿ ಸುದ್ದಿ ಬರುತ್ತಿರುವುದನ್ನು ಗಮನಿಸಿದ ಸಿಎಂ, ಕೂಡಲೇ ಅಧಿಕಾರಿಯನ್ನು ಆಸ್ಪತ್ರೆಗೆ ಕಳುಹಿಸಿ ಎಂದು ಸೂಚನೆ ಕೊಟ್ಟರಲ್ಲದೆ, ತಾನೇ ಎದ್ದು ಆಸ್ಪತ್ರೆಗೆ ಭೇಟಿ ನೀಡಿದರು. ಸಿಎಂ ಸಿದ್ದರಾಮಯ್ಯ ನೀಡಿರುವ ಮಾಹಿತಿಯಂತೆ ಮೃತ ಯುವತಿ ಭಾನುರೇಖಾ, ಆಂಧ್ರ ಪ್ರದೇಶದ ವಿಜಯವಾಡ ಮೂಲದವರು. ಬೆಂಗಳೂರಿನ ಇನ್ಫೋಸಿಸ್ನಲ್ಲಿ ಉದ್ಯೋಗಿ ಆಗಿದ್ದರು. ಪ್ರಗತಿ ನಗರದಲ್ಲಿ ವಾಸವಾಗಿದ್ದ ಭಾನುರೇಖಾರನ್ನು ನೋಡಲು ಊರಿನಿಂದ ಅಜ್ಜಿ, ತಂಗಿ ಸೇರಿದಂತೆ ಕುಟುಂಬಸ್ಥರು ಬಂದಿದ್ದರು. ಇಂದು ಭಾನುವಾರ ಆಗಿದ್ದರಿಂದ ಕಬ್ಬನ್ ಪಾರ್ಕ್ ತೋರಿಸಲು ಕರೆ ತಂದಿದ್ದ ಭಾನುರೇಖಾ, ಬಾಡಿಗೆ ಕಾರು ಮಾಡಿಕೊಂಡು ಸುತ್ತಾಡಿಸುತ್ತಿದ್ದರು. ಕಾರು ಚಾಲಕ ಅಂಡರ್ಪಾಸ್ನಲ್ಲಿ ಭರ್ತಿಯಾಗಿದ್ದ ನೀರನ್ನು ನೋಡದೆ ಸಾಗಿದ್ದಾನೆ. ಕಾರಿನೊಳಕ್ಕೆ ನೀರು ತುಂಬಿಕೊಂಡು ಯುವತಿ ನೀರು ಕುಡಿದಿದ್ದಾಳೆ. ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯ ಮಾಡಿಲ್ಲ ಎಂದು ಹೇಳಿದ್ದಾರೆ. ಆದರೆ ಪೋಷಕರು ನಿರ್ಲಕ್ಷ್ಯದ ಆರೋಪ ಮಾಡಿದ್ದಾರೆ. ನಿರ್ಲಕ್ಷ್ಯದ ಬಗ್ಗೆ ವಿಚಾರಣೆ ಮಾಡಲು ಅಧಿಕಾರಿಗಳಿಗೆ ಹೇಳಿದ್ದೇನೆ. ಆಸ್ಪತ್ರೆಯವರು ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ಮಾಡಿದ್ದರೆ ಅಗತ್ಯ ಕ್ರಮ ತೆಗೆದುಕೊಳ್ತೇವೆ ಎಂದಿದ್ದಾರೆ.
5 ಲಕ್ಷ ಪರಿಹಾರ ಘೋಷಣೆ, ಸತ್ತವರಿಗೆಲ್ಲಾ ಹಣ ಬೇಕಿರಲ್ಲ..!
ಮಳೆಯ ನೀರಿನಲ್ಲಿ ಪ್ರಾಣ ಕಳೆದುಕೊಂಡ ಇನ್ಫೋಸಿಸ್ ಉದ್ಯೋಗಿ ಭಾನುರೇಖಾಗೆ ಸರ್ಕಾರ 5 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದೆ. ಬಡ ಕುಟುಂಬಗಳ ನೆರವಿಗೆ ಹಣ ಪರಿಹಾರ ಆಗಬಹುದು. ಆದರೆ ಇನ್ಫೋಸಿಸ್ನಲ್ಲಿ ಕೆಲಸ ಮಾಡುವ ಯುವತಿಗೆ 5 ಲಕ್ಷ ದೊಡ್ಡ ಮೊತ್ತವಲ್ಲ. ಆದರೆ ಬಿಬಿಎಂಪಿ ಜನರ ಪ್ರಾಣದ ಜೊತೆ ಚಲ್ಲಾಟ ಆಡುವುದನ್ನು ಮೊದಲು ನಿಲ್ಲಿಸಬೇಕು. ಬೆಂಗಳೂರಿನ ಬಹುತೇಕ ಎಲ್ಲಾ ಅಂಡರ್ಪಾಸ್ಗಳಲ್ಲೂ ಮಳೆ ಬರುತ್ತಿದ್ದ ಹಾಗೆ ನೀರು ತುಂಬಿಕೊಳ್ಳುತ್ತದೆ. ಕೆ. ಆರ್ ಸರ್ಕಲ್ ಮಾತ್ರವಲ್ಲ, ಶೇಷಾದ್ರಿಪುರಂ ರೈಲ್ವೆ ಅಂಡರ್‌ಪಾಸ್, ಓಕಳಿಪುರಂ, ಕಂಟೋನ್ಮೆಂಟ್, ಸೆವೆಂತ್ ಮಿನಿಸ್ಟರ್ ಕ್ವಾರ್ಟಸ್, ಕಾವೇರಿ ಥಿಯೇಟರ್, ಶಿವಾನಂದ ಸರ್ಕಲ್, ಸೇರಿದಂತೆ ಹತ್ತಾರು ಅಂಡರ್ಪಾಸ್ನಲ್ಲೂ ಇದೇ ಕಥೆ. ತುಂಬಾ ನೀರು ಸಂಗ್ರಹವಾಗುವ ಅಂಡರ್ಪಾಸ್ನಲ್ಲಿ ಮಳೆ ಬೀಳುತ್ತಿದ್ದ ಹಾಗೆ ಅಧಿಕಾರಿಗಳು ಅಲರ್ಟ್ ಆಗಿ ಸಂಚಾರ ಬದಲಾವಣೆ ಮಾಡಬೇಕು ಅಥವಾ ನೀರನ್ನು ಶೀಘ್ರವಾಗಿ ಹೊರ ಹಾಕುವ ವ್ಯವಸ್ಥೆ ಮಾಡಬೇಕು. 5 ಲಕ್ಷ ಪರಿಹಾರ ಕೊಟ್ಟು ಮತ್ತೊಂದು ಸಾವಿಗೆ ಕಾಯುವುದು ಸಮಂಜಸ ಅಲ್ಲ ಅಲ್ಲವೇ..?
ಕೃಷ್ಣಮಣಿ