ತಮಿಳುನಾಡು: ಬೊಜ್ಜು ಕರಗಿಸುವ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಯುವಕ, ಚಿಕಿತ್ಸೆ ಮುಗಿದ ಹದಿನೈದೇ ನಿಮಿಷದಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ.

26 ವರ್ಷದ ಹೇಮಚಂದ್ರನ್ ಎಂಬ ವ್ಯಕ್ತಿ ಸಾವನ್ನಪ್ಪಿದ್ದು, ಚೆನ್ನೈನಲ್ಲಿ ಈ ಘಟನೆ ನಡೆದಿದೆ. ಶಸ್ತ್ರಚಿಕಿತ್ಸೆಗೆ ಒಳಗಾದ ಕೇವಲ 15 ನಿಮಿಷದಲ್ಲಿಯೇ ಯುವಕ ಸಾವನ್ನಪ್ಪಿದ್ದಾನೆ. ಚೆನ್ನೈನ ಪಮ್ಮಲ್ ನಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ತೂಕ ಇಳಿಸುವ ಚಿಕಿತ್ಸೆಗೆ ಒಳಗಾಗಿದ್ದ. ಶಸ್ತ್ರಚಿಕಿತ್ಸೆಯ ನಂತರ ಹೃದಯಾಘಾತವಾಗಿ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.

ಯುವಕನ ಸಾವಿಗೆ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಇಬ್ಬರು ಜಂಟಿ ನಿರ್ದೇಶಕರನ್ನೊಳಗೊಂಡ ಸಮಿತಿ ರಚಿಸುವಂತೆ ವೈದ್ಯಕೀಯ ಇಲಾಖೆ ಆದೇಶ ನೀಡಿದೆ. ತೀವ್ರ ದುಃಖ ವ್ಯಕ್ತಪಡಿಸಿದ ಕುಟುಂಬಸ್ಥರು ಚೆನ್ನೈ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಯುವಕ ಸುಮಾರು 150 ಕೆ.ಜಿ. ತೂಕ ಹೊಂದಿದ್ದ. ಸ್ಥೂಲಕಾಯದಿಂದಾಗಿ ಆತ ಸಾಕಷ್ಟು ರೋಗಗಳಿಗೆ ತುತ್ತಾಗುತ್ತಿದ್ದ. ಹೀಗಾಗಿ ಬೊಜ್ಜು ಕರಗಿಸುವ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ. ಬೊಜ್ಜು ಕರಗಿಸುವ ಭರವಸೆಯನ್ನು ಕೂಡ ವೈದ್ಯರು ನೀಡಿದ್ದರು ಎನ್ನಲಾಗಿದೆ. ಶಸ್ತ್ರಚಿಕಿತ್ಸೆಗೆ ರೂ.4 ಲಕ್ಷ ವೆಚ್ಚವಾಗಲಿದೆ ಎಂದು ವೈದ್ಯರು ಹೇಳಿದ್ದರು ಎನ್ನಲಾಗಿದೆ.












