ಕಳೆದ ವರ್ಷ ಆಗಸ್ಟ್‌ನಲ್ಲಿ ತಾಲಿಬಾನ್ ಕಾಬೂಲ್‌ನ್ನು ವಶಪಡಿಸಿಕೊಂಡಾಗ ಜಗತ್ತು ಮೊದಲು ತಲೆ ಕೆಡಿಸಿಕೊಂಡದ್ದೇ ಅಲ್ಲಿನ ಹೆಣ್ಣು ಮಕ್ಕಳ ಶಿಕ್ಷಣದ ಬಗ್ಗೆ. ಇದಕ್ಕೆ ಪೂರಕವೆಂಬಂತೆ ಅಫ್ಘಾನ್ ಹುಡುಗಿಯರು ದೇಶ ವಿದೇಶಗಳಲ್ಲಿರುವ ತಮ್ಮ ಸಂಬಂಧಿಕರಿಗೆ, ಸ್ನೇಹಿತರಿಗೆ “ನಮ್ಮನ್ನು ದಯವಿಟ್ಟು ಇಲ್ಲಿಂದ ಹೊರಗೆ ಕರೆದುಕೊಂಡು ಹೋಗಿ. ತಾಲಿಬಾನಿಗಳು ನಮ್ಮನ್ನು ಗಲ್ಲಿಗೇರಿಸುತ್ತಾರೆ” ಎಂದು ಮೆಸೇಜ್ ಮಾಡಿದ್ದರು. ಹಲವು ಸುಶಿಕ್ಷಿತ ಹೆಣ್ಣುಮಕ್ಕಳು ವೀಸಾಕ್ಕಾಗಿ ಮಾಡಿದ ಪ್ರಯತ್ನಗಳು ವ್ಯರ್ಥವಾಗಿದ್ದವು. ಈಗ ಜಗತ್ತು ಭಯ ಪಟ್ಟಂತೆಯೇ ಅಲ್ಲಿನ ಹೆಣ್ಣುಮಕ್ಕಳ ಶಿಕ್ಷಣ ಅರ್ಧಕ್ಕೆ ಮೊಟಕುಗೊಂಡಿದೆ.
‘ಸೇವ್ ದಿ ಚಿಲ್ಡ್ರನ್’ ಸಂಘಟನೆಯ ಇತ್ತೀಚಿನ ವರದಿಯ ಪ್ರಕಾರ ಅಲ್ಲಿನ 46 ಶೇಕಡ ಹುಡುಗಿಯರು ಶಾಲೆಯಿಂದ ಹೊರಬಂದಿದ್ದಾರೆ ಮತ್ತು 26 ಶೇಕಡ ಹುಡುಗಿಯರು ಖಿನ್ನತೆಯಿಂದ ಬಳಲುತ್ತಿದ್ದಾರೆ. ಅಫ್ಘಾನಿಸ್ತಾನದ ವಿದ್ಯಾವಂತ ಮಹಿಳೆಯರು ದೋಹಾದಲ್ಲಿ ಅಮೆರಿಕ ಮತ್ತು ತಾಲಿಬಾನ್ ನಡುವೆ ಮಾತುಕತೆ ನಡೆಯುತ್ತಿದ್ದಾಗಲೇ ಮಹಿಳಾ ಹಕ್ಕುಗಳು ಮತ್ತು ರಕ್ಷಣೆಯ ಸಮಸ್ಯೆಗಳು ಮಾತುಕತೆಗಳಲ್ಲಿ ಮಂಡಿಸಲ್ಪಟ್ಟಿಲ್ಲವೆಂದು ಹೆದರಿದ್ದರು. ಅಶ್ರಫ್ ಗಣಿ ಅಫ್ಘಾನಿಸ್ತಾನ ಅಧ್ಯಕ್ಷರಾಗಿದ್ದಾಗ ಸಹ, ತಾಲಿಬಾನ್‌ನ್ನು ಸರ್ಕಾರದ ಜೊತೆ ಶಾಮೀಲು ಮಾಡಲಾಗುತ್ತದೆ ಎಂಬ ವದಂತಿ ಹಬ್ಬಿದಾಗ ಮಾಧ್ಯಮ ಮತ್ತು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಮಹಿಳೆಯರ ಭದ್ರತೆ, ಸ್ವಾತಂತ್ರ್ಯ ಮತ್ತು ಶಿಕ್ಷಣದ ಬಗ್ಗೆ ಮಹಿಳೆಯರು ಧ್ವನಿ ಎತ್ತಿದ್ದರು. ಆದರೆ ಅವರ ಮಾತಿಗೆ ಆಗ ಯಾರೂ ಕಿವಿ ಕೊಟ್ಟಿರಲಿಲ್ಲ.
ಕಾಬೂಲ್ ಅನ್ನು ವಶಪಡಿಸಿಕೊಂಡ ನಂತರ, ಅನೇಕ ತಾಲಿಬಾನ್ ನಾಯಕರು ಬಾಲಕಿಯರ ಶಿಕ್ಷಣವು ತಾಲಿಬಾನ್‌ನ ಆದ್ಯತೆಯಾಗಿದೆ ಮತ್ತು ಮಹಿಳೆಯರು ಹಿಜಾಬ್-ಬುರ್ಖಾ ಧರಿಸಿಕೊಂಡು ಆಫೀಸ್ನಲ್ಲಿ ಕೆಲಸ ಮಾಡುವುದನ್ನು ಮುಂದುವರಿಸಬಹುದು ಎಂದು ಅಂತಾರಾಷ್ಟ್ರೀಯ ಮಾಧ್ಯಮವನ್ನು ನಂಬಿಸಿದ್ದರು. ಆದರೆ ವಾಸ್ತವದಲ್ಲಿ, 1996 ರಿಂದ 2001 ರವರೆಗಿನ ಅವರ ಆಡಳಿತದಲ್ಲಿ ಮಾಡಿದಂತೆಯೇ ಮಹಿಳೆಯರ ಹಕ್ಕುಗಳನ್ನು ಕಿತ್ತುಕೊಂಡಿದ್ದಾರೆ.
ಮೊದಲು, ತಾಲಿಬಾನ್ ವಿಶ್ವವಿದ್ಯಾನಿಲಯಗಳ ತರಗತಿಗಳಲ್ಲಿ ಹುಡುಗಿಯರ ಮತ್ತು ಹುಡುಗರ ಎರಡು ಪ್ರತ್ಯೇಕ ಸಾಲುಗಳಿರುವಂತೆ, ಅವುಗಳ ನಡುವೆ ಪರದೆ ಇಡುವಂತೆ ಆದೇಶಿಸಿತು. ಆನಂತರ ಮಾರ್ಚ್ 2022 ರ ಹೊತ್ತಿಗೆ, ತಾಲಿಬಾನ್ ಸೆಕೆಂಡರಿ ಸ್ಕೂಲ್‌ಗಳಿಗೆ ಹುಡುಗಿಯರು ಹೋಗುವುದನ್ನು ನಿಷೇಧಿಸಿತು. ಈಗ ಅಲ್ಲಿ ಹುಡುಗಿಯರು ಪ್ರಾಥಮಿಕ ಶಿಕ್ಷಣಕ್ಕೆ ಮಾತ್ರ ಅರ್ಹತೆ ಪಡೆದುಕೊಳ್ಳುತ್ತಾರೆ. ಇದಲ್ಲದೆ, ತಾಲಿಬಾನ್ ನ ಅಗ್ರ ನಾಯಕರಾಗಿರುವ ಹಿಬಾತುಲ್ಲಾ ಅಖಂಡ್ಜಾದಾ ಅವರು ಸಂಪೂರ್ಣವಾಗಿ ದೇಹ ಮುಚ್ಚದೆ ಮಹಿಳೆಯರು ಹೊರಬರಬಾರದು ಎಂದು ಆದೇಶ ನೀಡಿದ್ದಾರೆ. ಈ ತಾರತಮ್ಯ ಮತ್ತು ಕಠಿಣ ಮನೋಭಾವದಿಂದಾಗಿ, ಸಾವಿರಾರು ಮಹಿಳೆಯರು ತಮ್ಮ ಸರ್ಕಾರಿ ಮತ್ತು ಸರ್ಕಾರೇತರ ಉದ್ಯೋಗಗಳನ್ನು ತೊರೆಯಬೇಕಾಗಿ ಬಂತು.
ಸಮಸ್ಯೆಗಳ ಹೊರತಾಗಿಯೂ ಈ ಶತಮಾನದ ಮೊದಲ ಎರಡು ದಶಕಗಳಲ್ಲಿ ಮಹಿಳಾ ಉದ್ಯಮಿಗಳು, ವಕೀಲರು, ವೈದ್ಯರು, ಕಲಾವಿದರು, ಮತ್ತು ಪತ್ರಕರ್ತರು ಅಫ್ಘಾನಿಸ್ತಾನದಿಂದ ಹೊರಹೊಮ್ಮಿದ್ದರು. ಅವರಲ್ಲಿ ಅನೇಕರು ದೇಶವನ್ನು ಬಿಡಬೇಕಾಯಿತು, ಮತ್ತು ಕೆಲವರು ಭೂಗತವಾಗಿ ಬದುಕುತ್ತಿದ್ದಾರೆ. ಇವತ್ತಿನ ತಾಲಿಬಾನ್ ಆಡಳಿತದಲ್ಲಿ ಒಬ್ಬ ಮಹಿಳೆಗೆ ಒಂಟಿಯಾಗಿ ಪ್ರಯಾಣಿಸಲೂ ಅನುಮತಿ ನೀಡಲಾಗುತ್ತಿಲ್ಲ.
ಕೆಲವು ತಿಂಗಳ ಹಿಂದೆ, ವಿದೇಶಗಳಲ್ಲಿರುವ ಅಫ್ಘಾನ್ ಹುಡುಗಿಯರ ಗುಂಪೊಂದು ಅಫಘಾನ್ ಮಹಿಳೆಯರ ಸಾಂಪ್ರದಾಯಿಕ ಉಡುಗೆಯನ್ನು ಪ್ರದರ್ಶಿಸುವ ಕುಟುಂಬದ ಕೆಲವು ಹಳೆಯ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ತೇಲಿಬಿಟ್ಟು ತಾಲಿಬಾನ್ ಪ್ರಸ್ತುತ ಹೇರಿರುವ ಸಂಪೂರ್ಣ ದೇಹ ಮುಚ್ಚುವ ವಸ್ತ್ರದ ವಿರುದ್ಧ ಪ್ರತಿಭಟನೆ ನಡೆಸಿದ್ದರು. ತಾಲಿಬಾನ್ ಅಫ್ಘಾನಿಸ್ತಾನದಲ್ಲಿ ಸಂಸ್ಕೃತಿಯ ಹೆಸರಿನಲ್ಲಿ ಅರೇಬಿಕ್ ಶೈಲಿಯ ಉಡುಪುಗಳನ್ನು ಉತ್ತೇಜಿಸುತ್ತಿದೆ ಎಂಬುವುದು ಅವರ ಆರೋಪವಾಗಿತ್ತು.1996 ರಲ್ಲಿ ಅಧಿಕಾರ ವಹಿಸಿಕೊಂಡಾಗಲೂ ಸಹ ತಾಲಿಬಾನ್ ಶಾಲೆಗಳಲ್ಲಿ ಅರೇಬಿಕ್ ಅನ್ನು ಪರಿಚಯಿಸಲು ಪ್ರಯತ್ನಿಸಿತ್ತು. ಆದರೆ ದರಿ ಮತ್ತು ಪಾಶ್ತೋ ಭಾಷೆಗಳ ಪ್ರಾಬಲ್ಯದಿಂದಾಗಿ, ಅವರು ಯಶಸ್ವಿಯಾಗಿರಲಿಲ್ಲ.
ತಾಲಿಬಾನ್ ಕಳೆದ ಒಂದು ವರ್ಷದಿಂದ ಅಫ್ಘಾನಿಸ್ತಾನದಲ್ಲಿ ಅಧಿಕಾರದಲ್ಲಿದೆ. ಮಹತ್ವದ ದೇಶಗಳೆಂದು ಗುರುತಿಸಲ್ಪಡುವ ಯಾವ ದೇಶಗಳೂ ತಾಲಿಬಾನ್ ಮತ್ತು ಅವರ ಸರ್ಕಾರಕ್ಕೆ ಇನ್ನೂ ಮಾನ್ಯತೆ ನೀಡಿಲ್ಲ. ಆದರೆ ಹೆಚ್ಚಿನ ಸರ್ಕಾರಗಳು ತಾಲಿಬಾನ್ ನಾಯಕರೊಂದಿಗೆ ಸಂಪರ್ಕದಲ್ಲಿದೆ. ಅಲ್ಲಿನ ನಾಗರಿಕರು ಮಾನವೀಯ ನೆರವು, ವಿಶೇಷವಾಗಿ ಆಹಾರ, ಔಷಧ ಮತ್ತು ಇತರ ವೈದ್ಯಕೀಯ ಸೌಲಭ್ಯಗಳನ್ನು ಎದುರು ನೋಡುತ್ತಿದ್ದಾರೆ. ಆದರೆ ಶಿಕ್ಷಣ ಮತ್ತು ಸಾರ್ವಜನಿಕ ಆರೋಗ್ಯಲ್ಲಿ ಹೂಡಿಕೆ ಮಾಡದಿದ್ದರೆ ಒಂದು ದೇಶ ಸ್ವಾವಲಂಬಿ ಆಗುವುದಾದರೂ ಹೇಗೆ? ಅಫಘಾನ್ ಮಹಿಳೆಯರ ಸಮಸ್ಯೆಗಳ ಬಗ್ಗೆ ಮಾತನಾಡಲು ವಿಶ್ವ ನಾಯಕರು ಏಕೆ ಹಿಂಜರಿಯುತ್ತಿದ್ದಾರೆ?
ಒಂದು ವರ್ಷದ ಹಿಂದೆ, ಪ್ರಾಥಮಿಕ ಶಾಲೆಗಳಲ್ಲಿ ಅಫ್ಘಾನಿಸ್ತಾನದಲ್ಲಿ ಹುಡುಗಿಯರ ದಾಖಲಾತಿ 40 ಶೇಕಡಕ್ಕಿಂತ ಹೆಚ್ಚಿತ್ತು. ಈಗ ಹುಡುಗಿಯರು ಬಲವಂತವಾಗಿ ಮನೆಯಲ್ಲಿಯೇ ಉಳಿಯುತ್ತಿದ್ದಾರೆ. ಇತ್ತೀಚೆಗಷ್ಟೇ ನಾಲ್ಕು ನೂರು ಖಾಸಗಿ ಶಾಲೆಗಳನ್ನು ಸ್ಥಗಿತಗೊಳಿಸಲಾಯಿತು. ಇದು ಸುಮಾರು 10,000 ವಿದ್ಯಾರ್ಥಿಗಳ ಪರಿಣಾಮ ಬೀರಲಿದೆ ಎಂದು ಅಂದಾಜಿಸಲಾಗಿದೆ. ಕೆಲವರು ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ತಮ್ಮ ಕುಟುಂಬಗಳನ್ನು ಪಾಕಿಸ್ತಾನ, ಇರಾನ್ ಮತ್ತು ಟರ್ಕಿಗೆ ಸ್ಥಳಾಂತರಿಸಿದ್ದಾರೆ.
2010 ರಿಂದ 2020 ರವರೆಗೆ, ಕೆಲವು ಸರ್ಕಾರಿ ಮತ್ತು ಖಾಸಗಿ ವಿಶ್ವವಿದ್ಯಾನಿಲಯಗಳು ಯುವ ಅಫಘಾನಿನ ಶೈಕ್ಷಣಿಕ ಆಶೋತ್ತರಗಳನ್ನು ತೀರಿಸಲು ನೆರವಾಗಿದ್ದವು. ದೇಶ ಮತ್ತು ಸಮಾಜವನ್ನು ಪುನರ್ನಿರ್ಮಾಣ ಮಾಡಲು ಕೊಡುಗೆ ನೀಡಲು ಸಾವಿರಾರು ಯುವ ಅಫಘಾನ್ ಮಹಿಳೆಯರು ಅಲ್ಲಿ ತಂತ್ರಜ್ಞಾನ ಮತ್ತು ಇಂಗ್ಲಿಷ್ ಕಲಿತಿದ್ದರು. ಅಫಘಾನ್ ಮಹಿಳೆಯರ ಹೊಸ ರಾಜಕೀಯ ನಾಯಕತ್ವವೂ ಹೊರಹೊಮ್ಮಿತ್ತು. ಆದರೆ ಇದ್ದಕ್ಕಿದ್ದಂತೆ, ಸನ್ನಿವೇಶವು ಬದಲಾಯಿತು ಮತ್ತು ಮಹಿಳೆಯರನ್ನು ಮನೆಯಲ್ಲೇ ಇರುವಂತೆ ಒತ್ತಾಯಿಸಲಾಯಿತು.
ಆಗಸ್ಟ್ 13ರಂದು ಮಹಿಳೆಯರ ಗುಂಪೊಂದು ಕಾಬೂಲ್ ನ ಬೀದಿಗಳಲ್ಲಿ ಮಹಿಳೆಯರು ಶಿಕ್ಷಣ, ಉದ್ಯೋಗ ಮತ್ತು ಸ್ವಾತಂತ್ರ್ಯಕ್ಕೆ ಒತ್ತಾಯಿಸಿ ಮೆರವಣಿಗೆ ನಡೆಸಿತು. ಈ ಮೆರವಣಿಗೆ ಕಾಬೂಲ್‌ನ ಶಿಕ್ಷಣ ಸಚಿವಾಲಯದ ಮುಂಭಾಗವನ್ನು ತಲುಪಿದಾಗ, ಸಶಸ್ತ್ರ ತಾಲಿಬಾನ್ ಹೋರಾಟಗಾರರು ಪ್ರತಿಭಟನಾಕಾರರಿಗೆ ಗುಂಡು ಹೊಡೆದು ಅವರನ್ನು ಚದುರಿಸಿದರು. ಅನೇಕ ಮಹಿಳೆಯರ ದೂರವಾಣಿಗಳು ಸಹ ಕಿತ್ತುಕೊಳ್ಳಲಾಯಿತು. ತಾಲಿಬಾನ್ ಆಡಳಿತ ವಹಿಸಿಕೊಂಡು ಒಂದು ವರ್ಷವಾದರೂ ಅಫ್ಘಾನಿಸ್ತಾನದಲ್ಲಿ ಹಿಂಸಾಚಾರ ನಿಂತಿಲ್ಲ. ಪ್ರತಿ ವಾರವೂ ಸ್ಫೋಟಗಳು ನಡೆಯುತ್ತವೆ, ಮಕ್ಕಳನ್ನು ಒಳಗೊಂಡಂತೆ ಮುಗ್ಧ ನಾಗರಿಕರನ್ನು ಕೊಲ್ಲಲಾಗುತ್ತಿದೆ.
ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿರುಧ್ಧ ಯಾವೊಬ್ಬ ವಿಶ್ವ ನಾಯಕರೂ ಮಾತಾಡುತ್ತಿಲ್ಲ. ಅಲ್ಲಿನ ಮಹಿಳೆಯರು ಅನುಭವಿಸುತ್ತಿರುವ ಹತಾಶೆಯಿಂದ ಮಾನಸಿಕ ಆರೋಗ್ಯ ಸವಾಲುಗಳೂ ಕಾಡಬಹುದು. ಮಹಿಳೆಯರು, ಅದರಲ್ಲೂ ಯುವತಿಯರು ಸಾರ್ವಜನಿಕ ಜಾಗದಲ್ಲಿ ಉಸಿರಾಡಲೇ ಕಷ್ಟಪಡುತ್ತಿದ್ದಾರೆ. ಅಫ್ಘಾನಿಸ್ತಾನದ ಬಾಲಕಿಯರಿಗಾಗಿ ಒಂದು ಗಟ್ಟಿ ಧ್ವನಿಯಲ್ಲಿ ಈಗ ವಿಶ್ವ ನಾಯಕರು ಮಾತಾಡಬಾರದೇಕೆ? ಆಡಳಿತವು ಹೇರಿರುವ ನಿರ್ಬಂಧಗಳನ್ನು ಪ್ರಶ್ನಿಸಬಾರದೇಕೆ?
ಮೂಲ: ಸಂಜೀವ್ ರೈ, ಡೆಕ್ಕನ್ ಹೆರಾಲ್ಡ್
(ಸಂಜೀವ್ ರೈ ಓರ್ವ ಶಿಕ್ಷಣ ತಜ್ಞ ಮತ್ತು ‘ಓಪನ್ ಐಡಿಯಾಸ್’ ಶಾಲೆಯ ಸಂಸ್ಥಾಪಕ, ಅಫ್ಘಾನಿಸ್ತಾನದಲ್ಲಿ ಕೆಲಸ ಮಾಡುವ ಅಂತರರಾಷ್ಟ್ರೀಯ ಎನ್‌ಜಿಒ ಒಂದಕ್ಕೆ ಶಿಕ್ಷಣ ಸಲಹೆಗಾರರಾಗಿ ಕೆಲಸ ಮಾಡಿದ್ದಾರೆ)