ಮಂಗಳೂರು: ಕೊರಗಜ್ಜ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಜನರ ಆರಾಧ್ಯ ದೈವ. ಯಾವುದೇ ಸಮಸ್ಯೆ ಎದುರಾದರೂ ಮೊದಲು ಜನರು ಮೊರೆ ಹೋಗುವುದು ದೈವಕ್ಕೆ, ಅದು ಯಾವುದೇ ವಸ್ತು ಕಳುವಾದರು ಸರಿ, ಆರೋಗ್ಯ ಸಮಸ್ಯೆ,ಹೀಗೆ ಕೊರಗಜ್ಜನನ್ನು ಭಕ್ತಿಯಿಂದ ನಂಬುವ ಮಂದಿಗೆ ಅದೆಷ್ಟೋ ಕಾರಣಿಕ ಪವಾಡಗಳು ನಡೆದಿವೆ. ಇದೀಗ, ಮಂಗಳೂರಲ್ಲಿ ವರ್ಷದ ಹಿಂದೆ ಕಳವಾದ ಬೈಕ್ ಪವಾಡವೆಂಬಂತೆ ಬೈಕ್ ಮಾಲೀಕನಿಗೆ ಸಿಕ್ಕಿದೆ
ಕಾರಣಿಕ ಶಕ್ತಿಯನ್ನು ಮೆರೆಯುತ್ತಿರುವ ಕೊರಗಜ್ಜನ ಪವಾಡಕ್ಕೆ ಬೇಕಾದಷ್ಟು ನಿದರ್ಶನಗಳು ನಮಗೇ ಆಗಾಗ ಕಾಣಸಿಗುತ್ತವೆ. ಕರಾವಳಿಯಲ್ಲಿ ಮತ್ತೊಮ್ಮೆ ಕೊರಗಜ್ಜ ಪವಾಡ ನಡೆದಿದ್ದು, 2022ರ ಮಾರ್ಚ್‌ನಲ್ಲಿ ಮಂಗಳೂರಿನ ಬಲ್ಮಠದ ಹೋಟೆಲ್ ರೂಪ ಬಳಿ ಕಳುವಾದ ಬೈಕ್ ಒಂದೂವರೆ ವರ್ಷದ ಬಳಿಕ ಮಂಗಳೂರಲ್ಲಿ ಬೈಕ್ ಮಾಲೀಕ ನಾಗರಾಜ್ ಅವರಿಗೆ ಬೈಕ್ ಕಂಡಿದ್ದು, ಇದರ ಬೆನ್ನಲ್ಲೇ ಬೈಕ್ ಫಾಲೋ ಮಾಡಿ ತಮ್ಮ ಬೈಕ್ ಅನ್ನು ಹಿಂಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಮಂಗಳೂರು ನಗರದ ಹಸಿರು ದಳ ಸಂಯೋಜಕ, ಪರಿಸರವಾದಿ ನಾಗರಾಜ್ ಮಾಲೀಕರಾಗಿದ್ದು, 2022ರ ಮಾರ್ಚ್‌ನಲ್ಲಿ ಬಲ್ಮಠದ ಹೋಟೆಲ್ ರೂಪ ಬಳಿ ನಾಗರಾಜ್ ಅವರ ಅವೆಂಜರ್ ಬೈಕ್ ಕಳುವಾಗಿತ್ತು. ಈ ಬಗ್ಗೆ ಬಂದರು ಪೊಲೀಸರಿಗೆ ದೂರು ನೀಡಿದ್ದರು. ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಮಾಸ್ಕ್ ಧರಿಸಿದ ವ್ಯಕ್ತಿ ಬೈಕ್ ಕಳವು ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ಪೊಲೀಸರು ಬೈಕ್ ಸಿಗುವುದು ಅವಮಾನವೆಂದು ತನಿಖೆಯನ್ನು ಕೈ ಬಿಟ್ಟಿದ್ದರು.
ನಾಗರಾಜ್, ಗಲ್ಫ್ ನಲ್ಲಿದ್ದ ಸಂದರ್ಭ 2017ರಲ್ಲಿ ತನ್ನ ಸಹೋದರನಿಗೆ ಬೈಕ್ ಖರೀದಿಸಿ ಕೊಟ್ಟಿದ್ದರಂತೆ. ಇದು ಅವರ ಮೊದಲ ವಾಹನವಾಗಿದ್ದರಿಂದ ಅವೆಂಜರ್ ಬೈಕ್ ಜೊತೆಗೆ ಅವಿನಾಭಾವ ಸಂಬಂಧ ಹೊಂದಿದ್ದರಂತೆ. ಇದು ಕಳವಾದ ಬಳಿಕ ಬೇರೆ ವಾಹನ ಖರೀದಿ ಮಾಡಿರಲಿಲ್ಲ. ತನ್ನ ನೆಚ್ಚಿನ ಬೈಕ್ ಕಳ್ಳತನವಾದ ಹಿನ್ನೆಲೆ ಮಗನ ಬೇಸರ ಕಂಡು ನಾಗರಾಜ್ ಅವರ ತಾಯಿ ಕೊರಗಜ್ಜನ ಮೊರೆ ಹೋಗಿದ್ದಾರೆ. ಕುಟುಂಬದ ದೈವ-ದೇವರಿಗೆ ಹರಕೆ ಬೈಕ್ ಸಿಗುವಂತೆ ಪ್ರಾರ್ಥನೆ ಮಾಡಿದ್ದರು. ಈ ನಡುವೆ ಸೋಮವಾರ ಪವಾಡ ನಡೆದಿದೆ.

ಅಕ್ಟೋಬರ್ 9ರಂದು ನಾಗರಾಜ್ ತಮ್ಮ ಕಾಪಿಕಾಡ್ ಕಚೇರಿಯಲ್ಲಿ ಸಿಬ್ಬಂದಿಯಿಲ್ಲದ ಹಿನ್ನೆಲೆ ತಾನೇ ಕೊರಿಯರ್ ನೀಡಲು ಬಿಜೈ ಕೆಎಆರ್‌ಟಿಸಿಗೆ ತೆರಳಿದ್ದರಂತೆ. ಕೆಎಸ್ಸಾರ್ಟಿಸಿ ಬಳಿ ತಲುಪಿದ ಸಂದರ್ಭ ಕಳವಾದ ತನ್ನ ಬೈಕ್ ಅನ್ನು ಗಮನಿಸಿದ್ದಾರೆ. ತಕ್ಷಣವೇ ಎಚ್ಚೆತ್ತುಕೊಂಡ ನಾಗರಾಜ್ ನಂಬರ್ ಪ್ಲೇಟ್ ನೋಡಿ ಅವರ ಕಳವಾದ ಬೈಕ್ ಎಂಬುದನ್ನು ಖಾತ್ರಿ ಪಡಿಸಿಕೊಂಡು ಲಾಲ್‌ಬಾಗ್‌ನಿಂದ ಆ ಬೈಕ್‌ನ್ನು ಜೈಲು ರಸ್ತೆ ತಲುಪುವವರೆಗೂ ಹಿಂಬಾಲಿಸಿದ್ದಾರೆ. ಬಂಟ್ಸ್ ಹಾಸ್ಟೆಲ್ ಬಳಿ ನಾಗರಾಜ್ ಬೈಕನ್ನು ನಿಲ್ಲಿಸಲು ಸೂಚನೆ ನೀಡಿ, ಕಳವಾದ ಬೈಕ್‌ನ ಕೀ ಪಡೆದುಕೊಂಡಿದ್ದಾರೆ.
ಕಳವಾದ ಬೈಕ್ ಚಲಾಯಿಸುತ್ತಿದ್ದ ಹಿರಿಯ ನಾಗರಿಕರನ್ನು ವಿಚಾರಿಸಿದ ಸಂದರ್ಭ ಈ ಬೈಕನ್ನು ತನ್ನ ಸಂಸ್ಥೆಯ ಮಾಲೀಕರು ನೀಡಿರುವುದಾಗಿ ಹೇಳಿದ್ದಾರೆ ಎನ್ನಲಾಗಿದೆ. ಬೈಕ್ ಚಲಿಸುತ್ತಿದ್ದ ವ್ಯಕ್ತಿಯ ಮಾಲೀಕನ ಬಳಿ ವಿಚಾರಿಸಿದ ವೇಳೆ ‘ಬೈಕ್‌ನ್ನು ಹೋಟೆಲ್ ರೂಪ ಬಳಿಯ ಕಟ್ಟಡದ ನೆಲ ಮಾಳಿಗೆಯಲ್ಲಿ ಒಂದು ವರ್ಷದಿಂದ ನಿಲ್ಲಿಸಲಾಗಿದ್ದ ಹಿನ್ನೆಲೆ ಬಳಕೆಯಾಗದ ಕೀ ಮತ್ತು ಹೆಲೈಟ್ ಕಂಡು, ಬೈಕ್ ಸಂಪೂರ್ಣ ಧೂಳುಮಯವಾಗಿತ್ತು ಎಂದು ಹೇಳಿ ಮೊಬೈಲ್‌ನಲ್ಲಿದ್ದ ಬೈಕ್‌ನ ಹಳೇ ಫೊಟೋ ಕಳುಹಿಸಿದ್ದಾರೆ. ಬೈಕ್ ಮಾಲೀಕರಿಲ್ಲ ಎಂಬ ಕಾರಣಕ್ಕೆ ಕೆಲಸದವರಿಗೆ ಬೈಕ್ ಬಳಸಲು ಹೇಳಿದ್ದೆ’ ಎಂದು ವ್ಯಕ್ತಿ ಸಮರ್ಥನೆ ನೀಡಿದ್ದಾರೆ. ಒಟ್ಟಿನಲ್ಲಿ ದೈವ-ದೇವರ ಅನುಗ್ರಹದಿಂದ ಮತ್ತೆ ಬೈಕ್ ಸಿಕ್ಕಿದ್ದು, ಅಮ್ಮನ ಹರಕೆ ನಿಜಕ್ಕೂ ಫಲಿಸಿದೆ. ಅಮ್ಮನಿಗೂ ಬೈಕ್ ಸಿಕ್ಕಿದ್ದು ಖುಷಿ ನೀಡಿದೆ ಎಂದು ನಾಗರಾಜ್ ಸಂತಸ
ವ್ಯಕ್ತಪಡಿಸಿದ್ದಾರೆ.ನಾಗರಾಜ್ ಬೈಕ್ ಸವಾರನ ಜತೆ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದು, ಪೊಲೀಸರು ಮಾಲೀಕರಿಗೆ ಬೈಕ್ ಹಸ್ತಾಂತರಿಸಿದ್ದಾರೆ.