ಶ್ರದ್ಧಾನಂಬಿಕೆಗಳು ವ್ಯಕ್ತಿನೆಲೆಯಂದಾಚೆ ಸಾಂಸ್ಥೀಕರಣಗೊಂಡಾಗ ಆಚರಣೆ-ಮೌಢ್ಯ ಆಕ್ರಮಿಸುತ್ತದೆ

ನಾ ದಿವಾಕರ
ಭಾಗ 3
ಸಂವಹನ ಮಾಧ್ಯಮ ಮತ್ತು ಪ್ರಚಾರ ಕ್ರಿಯೆ
ಆದರೆ ಈ ರೀತಿಯ ವಿದ್ಯಮಾನಗಳನ್ನು, ದೆವ್ವ ಮೆಟ್ಟುವ ಅಥವಾ ಸತ್ತವರು ದೆವ್ವವಾಗಿ ಬಂದು ಕಾಡುವ ಕಲ್ಪಿತ ಕತೆಗಳನ್ನು ಟಿವಿ ಧಾರಾವಾಹಿಗಳು, ಸಿನೆಮಾಗಳು ಒಂದು ಲಾಭದಾಯಕ ಕಚ್ಚಾವಸ್ತುವಾಗಿ ಪರಿಗಣಿಸುವುದರಿಂದ, ಇಂತಹ ದೃಶ್ಯ ಮಾಧ್ಯಮಗಳು ಜನಸಾಮಾನ್ಯರಲ್ಲಿನ ಅವೈಚಾರಿಕತೆ ಮತ್ತು ಮೌಢ್ಯವನ್ನು ಮತ್ತಷ್ಟು ಹೆಚ್ಚಿಸುತ್ತವೆ. ಇದನ್ನು ಮನರಂಜನೆಯ ದೃಷ್ಟಿಯಿಂದ ನೋಡುವುದು ಸಹಜವಾದರೂ, ವಾಸ್ತವದಲ್ಲಿ ಸಮಾಜದ ಒಂದು ವರ್ಗದಲ್ಲಿ ಇದನ್ನೇ ಸತ್ಯ ಎಂದು ನಂಬುವ ಜನಸಂಖ್ಯೆಯೂ ಇರುವುದರಿಂದ, ಅವರಲ್ಲಿ ಮೂಢ ನಂಬಿಕೆಗಳು ಹೆಚ್ಚಾಗುತ್ತವೆ. ದುರ್ಬಲ ಮನಸ್ಸಿನ ವ್ಯಕ್ತಿಗಳಿಗೆ ಇದು ನಿಜ ಜೀವನದಲ್ಲೂ ಕಾಡಬಹುದಾದ ಮಾನಸಿಕ ಸಮಸ್ಯೆಯಾಗಿ ತಲೆದೋರುತ್ತದೆ. ಡಿಜಿಟಲ್ ಯುಗದಲ್ಲಿ ದೃಶ್ಯ ಮಾಧ್ಯಮಗಳು ಮಾರುಕಟ್ಟೆ ಪ್ರೇರಿತವಾಗಿರುವುದರಿಂದ, ಇಂತಹ ಕಲ್ಪಿತ ಕತೆಗಳನ್ನು ತೋರಿಸುವುದು ಲಾಭದಾಯಕವಾಗಿ ಪರಿಣಮಿಸುತ್ತದೆ. ಇದರ ಜವಾಬ್ದಾರಿಯನ್ನು ಯಾರ ಮೇಲೆ ಹೊರಿಸುವುದು ?
ಈ ಮೌಢ್ಯಾಚರಣೆಗಳನ್ನು ಪೋಷಿಸಿ, ಸಮಾಜದ ಕೆಳಸ್ತರದವರೆಗೂ ಪ್ರಭಾವಶಾಲಿಯಾಗಿ ತಲುಪಿಸುವಲ್ಲಿ ಆಧುನಿಕ ವಿದ್ಯುನ್ಮಾನ ತಂತ್ರಜ್ಞಾನ ಅದ್ಭುತವಾಗಿ ಬಳಕೆಯಾಗುತ್ತಿರುವುದು ವಿಡಂಬನೆ ಅಲ್ಲವೇ ? ಉಪಗ್ರಹದ ಮೂಲಕ ರವಾನೆಯಾಗುವ ಮಾಹಿತಿ ದತ್ತಾಂಶಗಳನ್ನು ಹಿಡಿದಿಟ್ಟುಕೊಳ್ಳುವ ಆಂಡ್ರಾಯ್ಡ್ ಮೊಬೈಲ್ ಫೋನ್‌ಗಳ ಮೂಲಕವೇ, ಇದೇ ಮೌಢ್ಯಗಳನ್ನೂ ಹರಡಲಾಗುತ್ತಿದೆ. ವ್ಯಕ್ತಿಗತ ನಂಬಿಕೆಗಳು ಯಾವುದೇ ವ್ಯಕ್ತಿಯನ್ನು ಹಾದಿ ತಪ್ಪಿಸದೆ ಹೋದರೂ, ಅದನ್ನೇ ಬಳಸಿಕೊಂಡು ಬೆಳೆಸಲಾಗುವ ಮೌಢ್ಯಾಚರಣೆಗಳು ಇಡೀ ಸಮಾಜದ ದಿಕ್ಕು ತಪ್ಪಿಸುವುದನ್ನು ಎಲ್ಲ ಸ್ತರಗಳಲ್ಲೂ ಗುರುತಿಸಬಹುದು. ಜನಸಮೂಹಗಳನ್ನು ಸಮ್ಮೋಹನಗೊಳಿಸುವ ಒಂದು ತಂತ್ರಗಾರಿಕೆ ಇಲ್ಲಿ ನೆರವಾಗುತ್ತದೆ. ಕ್ರೈಸ್ತ ಧರ್ಮಪ್ರಚಾರಕರು, ಅನೇಕ ಆಧ್ಯಾತ್ಮಿಕ ಗುರುಗಳು, ಬಾಬಾಗಳು, ಸ್ವಾಮೀಜಿಗಳು, ಇದೇ ತಂತ್ರವನ್ನು ಅನುರಿಸಿಯೇ ತಮ್ಮ ಹಿಂಬಾಲಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಾರೆ. ಕಳೆದ ವರ್ಷ ಉತ್ತರ ಭಾರತದಲ್ಲಿ ಗುರೂಜಿಯೊಬ್ಬರ ಪಾದ ಧೂಳಿಯನ್ನು ಸ್ಪರ್ಶಿಸುವ ಸಲುವಾಗಿ ಭಕ್ತಾದಿಗಳು ನುಗ್ಗಿದಾಗ, ಹತ್ತಾರು ಜನರು ಕಾಲ್ತುಳಿತಕ್ಕೊಳಗಾಗಿ ಮೃತಪಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು.

ಬಹುತೇಕ ಟಿವಿ ವಾಹಿನಿಗಳಲ್ಲಿ ಮುಂಜಾನೆಯ ಆರಂಭಿಕ ಎರಡು ಗಂಟೆಗಳು ಈ ರೀತಿಯ ಮೌಢ್ಯತೆಯನ್ನು ಹರಡಲೆಂದೇ ಮೀಸಲಾಗಿರಿಸಲಾಗುತ್ತದೆ. ದೈವಶ್ರದ್ಧಾ ಭಕ್ತಿ ಕೇಂದ್ರಗಳಾಗಿರಬೇಕಾದ ದೇವಾಲಯಗಳನ್ನು ಪವಾಡ ಕೇಂದ್ರಗಳಾಗಿ ಪರಿವರ್ತಿಸುವ ಒಂದು ಬೌದ್ಧಿಕ ಕಸರತ್ತು ಈ ಟಿವಿ ಕಾರ್ಯಕ್ರಮಗಳಲ್ಲಿ ನಡೆಯುತ್ತದೆ. ನಿತ್ಯ ಭವಿಷ್ಯ ಹೇಳುವ ನೆಪದಲ್ಲಿ ಆ ದಿನದಂದು ನಿರ್ದಿಷ್ಟ ರಾಶಿ/ನಕ್ಷತ್ರದ ವ್ಯಕ್ತಿಗಳಿಗೆ ಕಟ್ಟುಪಾಡುಗಳನ್ನು ವಿಧಿಸಲಾಗುತ್ತದೆ. ಇದನ್ನು ಎಷ್ಟು ಜನರು ಅನುಸರಿಸುತ್ತಾರೆ ಎನ್ನುವುದಕ್ಕಿಂತಲೂ, ಟಿವಿ ಸ್ಟುಡಿಯೋಗಳಲ್ಲಿ ಕುಳಿತು ಕರೆ ಮಾಡುವ ವ್ಯಕ್ತಿಗಳ ಧ್ವನಿಯ ಆಧಾರದಲ್ಲಿ ಅವರ ಗುಣಲಕ್ಷಣಗಳನ್ನು ನಿರ್ವಚಿಸುವ ಅಥವಾ ಅವರ ಗ್ರಹಚಾರವನ್ನು ನಿರ್ಧರಿಸುವ ಕಾರ್ಯಕ್ರಮಗಳಿಗೆ ಬಹುತೇಕ ವಾಹಿನಿಗಳು ಮುಕ್ತ ಅವಕಾಶ ಕಲ್ಪಿಸುತ್ತವೆ. ಸಿಗಂಧೂರು ಚೌಡೇಶ್ವರಿ ದೇವಾಲಯದಲ್ಲಿ ಅಮಾವಾಸ್ಯೆಯ ದಿನ ನಡುರಾತ್ರಿ ನಡೆಯುವ ವಿಶೇ಼ಷ ಪೂಜೆಯ ಸಂದರ್ಭದಲ್ಲಿ, ಜನರು ತಮ್ಮ ಕುಂದುಕೊರತೆಗಳನ್ನು ಚೀಟಿಯಲ್ಲಿ ಬರೆದು, ದೇವಿಗೆ ಅರ್ಪಿಸುವುದರಿಂದ ಎಲ್ಲ ಸಂಕಷ್ಟಗಳೂ ನಿವಾರಣೆಯಾಗುತ್ತದೆ ಎಂಬ ನಂಬಿಕೆಯೂ ಗಾಢವಾಗಿದೆ.
ಇದೇ ತಂತ್ರವನ್ನು ಒಮ್ಮೆ ಬ್ರಹ್ಮಾಂಡ ಗುರೂಜಿ ಮೈಸೂರಿನ ಕಲಾಮಂದಿರದಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಅನುಸರಿಸಿದ್ದರು. ಕಿಕ್ಕಿರಿದು ತುಂಬಿದ್ದ ಕಲಾಮಂದಿರದಲ್ಲಿ ನೆರೆದಿದ್ದ ಜನರು ಅವರನ್ನು ನೋಡಲೆಂದೇ ಬಂದಿದ್ದರಿಂದ ಆಸಕ್ತಿಯಿಂದ ಕೇಳಿದ್ದರು. ತಮ್ಮ ವೈಯುಕ್ತಿಕ-ಕೌಟುಂಬಿಕ ಸಮಸ್ಯೆಗಳನ್ನು ಚೀಟಿಯಲ್ಲಿ ಬರೆದು, ಜನ್ಮ ರಾಶಿ ನಕ್ಷತ್ರವನ್ನು ನಮೂದಿಸಿ, ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಲು ಹೇಳಿದಾಗ ನೂರಾರು ಲಕೋಟೆಗಳು ರಾಶಿ ಬಿದ್ದಿದ್ದವು. ಇದರಿಂದ ಎಷ್ಟು ಜನರಿಗೆ ಉಪಯೋಗವಾಯಿತು ? ಇದಕ್ಕೆ ಉತ್ತರವೇ ದೊರೆಯುವುದಿಲ್ಲ. ಆದರೆ ಗುರೂಜಿಯ ಜನಪ್ರಿಯತೆ ಹೆಚ್ಚಾದುದಂತೂ ಸತ್ಯ. (ಇಲ್ಲಿ ಏನು ಮಾತನಾಡುತ್ತಾರೆ ಎಂಬ ಕುತೂಲಹದಿಂದಲೇ ನಾನು ಮತ್ತು ಈಗ ನಮ್ಮೊಡನಿಲ್ಲದ ಗೆಳೆಯ ಮುದ್ದುಕೃಷ್ಣ ಹೋಗಿದ್ದೆವು). ಇದೇ ತಂತ್ರವನ್ನು ಈಗ ಹಲವು ದೇವಾಲಯಗಳಲ್ಲೂ ಅನುಸರಿಸಲಾಗುತ್ತದೆ.

ಇದು ಎಷ್ಟರ ಮಟ್ಟಿಗೆ ಫಲಕಾರಿಯಾಗುತ್ತದೆ, ಎಷ್ಟು ಜನರ ಬದುಕನ್ನು ಹಸನಾಗಿಸುತ್ತದೆ, ಎಷ್ಟು ಜನರ ಕಷ್ಟಗಳನ್ನು ಪರಿಹರಿಸುತ್ತದೆ ಎನ್ನಲು ಯಾವುದೇ ಪುರಾವೆಗಳನ್ನೂ ಕೊಡಲಾಗುವುದಿಲ್ಲ. ಏಕೆಂದರೆ ದೈವೀಕ ನಂಬಿಕೆಗಳನ್ನಾಧರಿಸಿರುವುದರಿಂದ ಇಲ್ಲಿ ಉತ್ತರದಾಯಿತ್ವದ ಪ್ರಶ್ನೆಯೇ ಉದ್ಭವಿಸುವುದಿಲ್ಲ. ತಮ್ಮ ಬೇಡಿಕೆ ಈಡೇರದಿದ್ದರೂ, ಭಕ್ತಾದಿಗಳು ʼ ನಮ್ಮ ಕರ್ಮ- ಹಣೆಬರಹ ʼ ಎಂದು ಸಮಾಧಾನಪಟ್ಟುಕೊಳ್ಳುತ್ತಾರೆ. ಮೂಢ ನಂಬಿಕೆಗಳನ್ನು ವಿಸ್ತರಿಸಿ, ಛೇದಿಸಿ, ಭೇದಿಸಿ, ವಿಂಗಡಿಸಿ ನೋಡಿದಾಗ, ವೈಜ್ಞಾನಿಕ ತಳಹದಿ ಅಥವಾ ತರ್ಕವೇ ಇಲ್ಲದ ಹಲವಾರು ರೀತಿಯ ನಂಬಿಕೆಗಳು ವಿದ್ಯಾವಂತ ಸಮಾಜವನ್ನೂ ಆವರಿಸಿರುವುದನ್ನು ಗಮನಿಸಬಹುದು. ಇಲ್ಲಿ ಭಕ್ತಿ-ಭಾವ ಶ್ರದ್ಧೆಗಿಂತಲೂ ಸಾಂಸ್ಥೀಕರಣಗೊಂಡ ಆಚರಣೆಗಳು ಪ್ರಧಾನ ಪಾತ್ರ ವಹಿಸುತ್ತವೆ ಮತ್ತು ಪ್ರಭಾವಶಾಲಿಯಾಗುತ್ತವೆ. ಇದನ್ನು ನಂಬಿ ಅನುಕರಿಸುವವರು ಎಷ್ಟು ಜನ ಇದ್ದಾರೆ ಎನ್ನುವುದಕ್ಕಿಂತಲೂ, ಸಮಾಜದಲ್ಲಿ ವೈಚಾರಿಕ ಪ್ರಜ್ಞೆ ಬೆಳೆಸಬೇಕಾದ ಟಿವಿ ವಾಹಿನಿಗಳು ಇಂತಹ ಅವೈಜ್ಞಾನಿಕ ಮೌಢ್ಯಾಚರಣೆಯನ್ನು ಪ್ರೋತ್ಸಾಹಿಸುವುದರ ಔಚಿತ್ಯವನ್ನು ಇಲ್ಲಿ ಪ್ರಶ್ನಿಸಬೇಕಾಗುತ್ತದೆ.
ಪೂಜಾ ಕೇಂದ್ರಗಳ ವ್ಯಾಪಕ ಪ್ರಭಾವ
ಆಧುನೀಕರಣಗೊಂಡ ನಗರ ಪ್ರದೇಶಗಳಲ್ಲಿ ಗಮನಿಸಬೇಕಾದ ವ್ಯಾಪಕವಾಗಿರುವ ಮತ್ತೊಂದು ವಿದ್ಯಮಾನ ಎಂದರೆ ಶನಿದೇವರ ದೇವಸ್ಥಾನಗಳು ಹೆಚ್ಚು ಜನರನ್ನು ಆಕರ್ಷಿಸುತ್ತಿರುವುದು ಮತ್ತು ನಾಗದೋಷವನ್ನು ಪರಿಹರಿಸುವ ಧಾರ್ಮಿಕ ಕೇಂದ್ರಗಳು ಹೆಚ್ಚಾಗಿರುವುದು. ಶನಿಕಾಟ ಮತ್ತು ಸರ್ಪದೋಷ ಈ ಎರಡೂ ಸಹ ಸಾಮಾನ್ಯ ಜನರನ್ನು ಭೀತಿಗೊಳಪಡಿಸುವ ಸಮಸ್ಯೆಗಳು. ಆದರೆ ಇದು ಗ್ರಾಮೀಣ ಪ್ರದೇಶಕ್ಕಿಂತಲೂ ನಗರಗಳಲ್ಲಿನ ಮಧ್ಯಮ ವರ್ಗಗಳನ್ನು, ಹಿತವಲಯದಲ್ಲಿರುವವರನ್ನು ಹೆಚ್ಚಾಗಿ ಆಕರ್ಷಿಸುತ್ತಿದೆ. ನಾಗರ ಕಲ್ಲು ಪ್ರತಿಷ್ಠಾಪನೆ ಮಾಡುವುದರಿಂದ, ಪ್ರತಿ ಶನಿವಾರ ಶನಿದೇವರ ದರ್ಶನ ಪಡೆದು, ಎಳ್ಳೆಣ್ಣೆಯ ದೀಪ ಹಚ್ಚುವುದರಿಂದ ದೋಷ ಪರಿಹಾರವಾಗುತ್ತದೆ ಎಂಬ ನಂಬಿಕೆ ಗಾಢವಾಗಿ ಕಲಿತವರಲ್ಲೂ ಬೇರೂರಿದೆ. ಹಾಗಾಗಿಯೇ ಈ ದೇವಸ್ಥಾನಗಳ ಮುಂದೆ ಪ್ರತಿ ಶನಿವಾರ ನೂರಾರು ಜನ ಸೇರುತ್ತಾರೆ, ಪ್ರತಿಯೊಂದು ಬಡಾವಣೆಯಲ್ಲೂ ಇದನ್ನು ಗಮನಿಸಬಹುದು. ಇವರ ಪೈಕಿ ವಿದ್ಯಾವಂತರೇ ಹೆಚ್ಚಾಗಿ ಕಾಣುವುದು ವಿಪರ್ಯಾಸವಾದರೂ ಸತ್ಯ.

ಈ ಪರಿಹಾರೋಪಾಯಗಳಿಗೆ ತರ್ಕ ಅಥವಾ ವೈಜ್ಞಾನಿಕ ಪುರಾವೆ ಇದೆಯೇ ? ತಮಗೆದುರಾಗಿರುವ ಸಮಸ್ಯೆ ಪರಿಹಾರವಾದರೆ ಸಾಕು ಎಂಬ ಧಾವಂತದಲ್ಲಿರುವ ಜನಸಾಮಾನ್ಯರಿಗೆ ಈ ಪ್ರಶ್ನೆ ಕಾಡುವುದೇ ಇಲ್ಲ. ಶನಿಗ್ರಹವನ್ನು ಒಂದು ದೇವರಾಗಿ ಭಾವಿಸುವ ಜನಸಂಖ್ಯೆಯೇ ನಮ್ಮಲ್ಲಿ ಹೆಚ್ಚಾಗಿರುವುದರಿಂದ, ಹಾವು ಹಾಲು ಕುಡಿಯುತ್ತದೆ, ಹಾವನ್ನು ಕೊಂದರೆ ಹನ್ನೆರಡು ವರ್ಷ ಅದು ದ್ವೇಷ ಸಾಧಿಸುತ್ತದೆ, ಸರ್ಪದೋಷದಿಂದ ಸಂಸಾರಗಳಲ್ಲಿ ಸಮಸ್ಯೆ ಉಲ್ಬಣಿಸುತ್ತದೆ, ಶನಿಕಾಟ ಏಳು ವರ್ಷದ ಕಾಲ ಕಾಡುತ್ತದೆ, ಎಂದು ಕಲಿತವರನ್ನೂ ನಂಬಿಸುವ ಜ್ಯೋತಿಷಿಗಳು ಮತ್ತು ಗುರೂಜಿಗಳು ಈ ʼ ಧಾರ್ಮಿಕ ಕೇಂದ್ರಗಳನ್ನು ʼ ಜನಪ್ರಿಯಗೊಳಿಸುತ್ತವೆ. ಇಲ್ಲಿ ತನ್ನ ಮೂಲಾರ್ಥದಲ್ಲಿ ಧರ್ಮ ಇರುವುದಕ್ಕಿಂತಲೂ ಹೆಚ್ಚಾಗಿ, ಅದರ ಸುತ್ತ ಕಟ್ಟಲಾದ ಮೂಢ ನಂಬಿಕೆಗಳು, ಅವೈಚಾರಿಕ ಕಲ್ಪನೆಗಳು ಹೆಚ್ಚು ಮೇಲುಗೈ ಸಾಧಿಸಿರುತ್ತವೆ. ಇದನ್ನು ಅಲ್ಲಗಳೆಯುವ, ಪವಾಡಗಳನ್ನು ಬಯಲಿಗೆಳೆಯುವ ಪ್ರಯತ್ನಗಳನ್ನು ಮಾಡಲಾಗುತ್ತಿದ್ದರೂ, ಅದು ಹೆಚ್ಚು ಜನರನ್ನು ತಲುಪಲು ಸಾಧ್ಯವಾಗುತ್ತಿಲ್ಲ, ಏಕೆಂದರೆ ಸಾಮಾನ್ಯ ಜನರ, ತಳಸಮಾಜದ ಮತ್ತು ಮಧ್ಯಮ ವರ್ಗಗಳ ಜೀವನೋಪಾಯದ ಆರ್ಥಿಕ ಬಿಕ್ಕಟ್ಟಗಳು ಮಾರುಕಟ್ಟೆ ಆರ್ಥಿಕತೆಯ ಪರಿಣಾಮವಾಗಿ ಹೆಚ್ಚಾಗುತ್ತಲೇ ಇವೆ.
ಸುಶಿಕ್ಷಿತ ಸಮಾಜದ ವೈರುಧ್ಯಗಳು
ಮಾರುಕಟ್ಟೆ ಆರ್ಥಿಕ ವ್ಯವಸ್ಥೆ ಪರಿಹರಿಸಲಾಗದ ಜೀವನ ನಿರ್ವಹಣೆಯ ಸಮಸ್ಯೆಗಳ ಪರಿಹಾರವನ್ನು ಸಾಮಾನ್ಯ ಜನರು ದೈವೀಕ ಶಕ್ತಿಗಳಲ್ಲಿ, ಅತೀತತೆಯಲ್ಲಿ ಮತ್ತು ಅದರ ಸುತ್ತ ಕಟ್ಟಲಾಗುವ ಮೂಢ ನಂಬಿಕೆಗಳ ಆಚರಣೆಯಲ್ಲಿ ಕಂಡುಕೊಳ್ಳುತ್ತಾರೆ. ಸಮಾಜಶಾಸ್ತ್ರೀಯ ನೆಲೆಯಲ್ಲಿ ನೋಡಿದಾಗ ಇದು ಮಾನವ ಸಮಾಜದ ಸಹಜ ಪ್ರವೃತ್ತಿಯಾಗಿದ್ದು, ವಿಶ್ವವ್ಯಾಪಿಯಾಗಿ ಶತಮಾನಗಳಿಂದಲೂ ಬೆಳೆದುಬಂದಿದೆ. ಆದರೆ ಈ ಮನೋಭಾವಕ್ಕೆ ಮದ್ದು ನೀಡುವ ಜವಾಬ್ದಾರಿ ಇರುವ ವೈಜ್ಞಾನಿಕ ಪ್ರಜ್ಞೆಯ ಸಮಾಜವೊಂದು ನಮ್ಮ ನಡುವೆ ಇದೆ ಅಲ್ಲವೇ ? ಈ ಸಮಾಜವೇ ಕೆಲವೊಮ್ಮೆ ಜನರ ಭಾವನೆಗಳಿಗೆ ಸ್ಪಂದಿಸುವ ಸಲುವಾಗಿ ಅವರ ಮೌಢ್ಯಗಳನ್ನು ಅನುಮೋದಿಸುತ್ತದೆ. ವೈದ್ಯಕೀಯ ಕ್ಷೇತ್ರದಲ್ಲಿ ಇದನ್ನು ಕಾಣಬಹುದು. ಸಾವು ಬದುಕಿನ ನಡುವೆ ಹೋರಾಡುವ ವ್ಯಕ್ತಿ ದೇವರ ಮೊರೆ ಹೋಗುವುದು ಸಹಜ. ಆದರೆ ಶಸ್ತ್ರಚಿಕಿತ್ಸೆಯ ಮೂಲಕ ವ್ಯಕ್ತಿಯ ದೈಹಿಕ/ಮಾನಸಿಕ ಊನವನ್ನು ವೈಜ್ಞಾನಿಕ ವಿಧಾನಗಳ ಮೂಲಕ ವಾಸಿ ಮಾಡುವ ವೈದ್ಯರೂ ʼ ದೈವಕೃಪೆ ʼ ಎಂದು ಧ್ವನಿಸುವುದು, ಬಾಹ್ಯಾಕಾಶ ನೌಕೆಯ ಉಡಾವಣೆಯ ಯಶಸ್ಸಿಗಾಗಿ ದೇವರನ್ನು ಮೊರೆಹೋಗುವುದು, ಡಿಜಿಟಲ್ ಯುಗದಲ್ಲೂ ಕಾಣಬಹುದಾದ ವೈಚಿತ್ರ್ಯ.

ಅಧ್ಯಯನ, ಸಂಶೋಧನೆ ಮತ್ತು ಜೈವಿಕ ದೇಹ ಶಾಸ್ತ್ರದ ವೈಜ್ಞಾನಿಕ ಸಾಕ್ಷಿ ಪುರಾವೆಗಳನ್ನು ಆಧರಿಸಿ ಮನುಷ್ಯ ಜೀವಿಯ ರೋಗ ರುಜಿನಗಳನ್ನು ವಾಸಿ ಮಾಡುವ ವೈದ್ಯಕೀಯ ಕ್ಷೇತ್ರವನ್ನೂ ಈಗ ಔಷಧೀಯ ಕ್ಷೇತ್ರದ ಕೆಲವು ಪರಿಹಾರ ಸೂತ್ರಗಳು ಆವರಿಸಿವೆ. ಹರ್ಬಾಲೈಫ್, ಹೀಲಿ ಮುಂತಾದ ಚಿಕಿತ್ಸಕ ಮಾದರಿಗಳು ಹೆಚ್ಚು ಹೆಚ್ಚು ಜನರನ್ನು, ವಿಶೇಷವಾಗಿ ಮಧ್ಯಮ ವರ್ಗಗಳನ್ನು, ಉಳ್ಳವರನ್ನು ಆಕರ್ಷಿಸುತ್ತಿರುವುದನ್ನು ನಗರಗಳಲ್ಲಿ ಹೆಚ್ಚಾಗಿ ಕಾಣಬಹುದು. ಈ ಚಿಕಿತ್ಸಕ ಮಾದರಿಗಳ ಫಲಾನುಫಲಗಳು, ಪರಿಣಾಮ/ಅಡ್ಡಪರಿಣಾಮಗಳು ಏನೇ ಇದ್ದರೂ, ಇದು ಉತ್ತರದಾಯಿತ್ವ ಇಲ್ಲದೆಯೇ ಚಾಲ್ತಿಯಲ್ಲಿರುವುದು ವಾಸ್ತವ. ವೈದ್ಯಕೀಯ ಕ್ಷೇತ್ರದಲ್ಲಿರುವ ಮಾರುಕಟ್ಟೆ ತಂತ್ರಗಾರಿಕೆ, ಅನಗತ್ಯ ತಪಾಸಣೆಗಳು, ಕಾರ್ಪೋರೇಟ್ ಆಸ್ಪತ್ರೆಗಳು ಅನುಸರಿಸುವ ಲಾಭಕೋರ ಮಾರ್ಗಗಳು, ಜನಸಾಮಾನ್ಯರನ್ನು ಈ ವೈದ್ಯಕೀಯೇತರ ಚಿಕಿತ್ಸಕ ಮಾದರಿಗಳಿಗೆ ದುಂಬಾಲು ಬೀಳುವಂತೆ ಮಾಡುತ್ತದೆ. ಈ ವೈದ್ಯಕೀಯ ಮೌಢ್ಯಕ್ಕೆ ಕಾರಣ ಮತ್ತು ಜವಾಬ್ದಾರಿ ಯಾರ ಹೆಗಲಿಗೆ ಏರಿಸುವುದು ?
ವಿಶಾಲ ನೆಲೆಯಲ್ಲಿ ವೈಚಾರಿಕ ಪ್ರಜ್ಞೆ
ಈ ವಿಶಾಲ ದೃಷ್ಟಿಕೋನದಿಂದ, ದೊಡ್ಡ ಕ್ಯಾನ್ವಾಸ್‌ನಲ್ಲಿಟ್ಟು ಮೂಢ ನಂಬಿಕೆಗಳು ಮತ್ತು ಮೌಢ್ಯಾಚರಣೆಗಳನ್ನು ವಿಶ್ಲೇಷಿಸುವಾಗ ಎರಡು ನೆಲೆಗಳಲ್ಲಿ ವರ್ಗೀಕರಿಸಬಹುದು. ಮೊದಲನೆಯದು ಧಾರ್ಮಿಕವಾಗಿ ತಾವು ನಂಬಿಕೊಂಡು ಬಂದ ಅತೀತ-ಅತೀಂದ್ರಿಯ ಶಕ್ತಿಗಳ ಮೇಲಿನ ಅಪಾರ ವಿಶ್ವಾಸ ಮತ್ತು ಅವಲಂಬನೆಗೊಳಗಾಗುವ ಜನಸಮೂಹ ಒಂದೆಡೆಯಾದರೆ, ಮೂಲತಃ ಧರ್ಮ ಎನ್ನುವ ಒಂದು ಕಲ್ಪನೆಯಲ್ಲಿ ಇಲ್ಲದಿದ್ದರೂ, ಗ್ರಾಂಥಿಕವಾಗಿ ಸೃಷ್ಟಿಸಲಾಗಿರುವ ಆಚರಣಾತ್ಮಕ ನಿರೂಪಣೆಗಳನ್ನು (Narratives) ಆಧರಿಸಿ, ಸಾಂಸ್ಥೀಕರಣಕ್ಕೊಳಗಾದ ಧರ್ಮಗಳು ಸಮಾಜದಲ್ಲಿ ಹರಡುವ ಆಚರಣೆಗಳು. ಇದು ಕೇವಲ ಹಿಂದೂ ಧರ್ಮಕ್ಕೆ ಸೀಮಿತವಲ್ಲ ಎನ್ನುವುದನ್ನೂ ಗಮನಿಸಬೇಕು. ಕ್ರೈಸ್ತರ ಆಸ್ಪತ್ರೆಗಳಲ್ಲಿ ಏಸು ಕ್ರಿಸ್ತನನ್ನು, ಮುಸ್ಲಿಮರ ಆಸ್ಪತ್ರೆಗಳಲ್ಲಿ ಪ್ರವಾದಿಗಳನ್ನು ರಕ್ಷಣೆಗಾಗಿ ಆಶ್ರಯಯಿಸುವಂತೆಯೇ ಹಿಂದೂಗಳ ಆಸ್ಪತ್ರೆಗಳಲ್ಲಿ ಮೂರ್ತೀಕರಿಸಿದ ದೇವರುಗಳನ್ನು ಆಶ್ರಯಿಸಲಾಗುತ್ತದೆ.

ಸಮಾಜದ ಎಲ್ಲ ಸ್ತರಗಳಲ್ಲಿ ವಿದ್ಯಾವಂತ-ಅನಕ್ಷರಸ್ಥ-ಸುಶಿಕ್ಷಿತ ಜನರ ನಡುವೆಯೂ ಮೂಢ ನಂಬಿಕೆಗಳು ಯಾವುದೋ ಒಂದು ರೀತಿಯಲ್ಲಿ ಆಚರಿಸಲ್ಪಡುವುದನ್ನು ಕಾಣಬಹುದು. ಇದು ಕೇವಲ ಭಾರತಕ್ಕೆ ಅಥವಾ ಹಿಂದೂ ಧರ್ಮಕ್ಕೆ ಸೀಮಿತವಲ್ಲ. ವಿಶ್ವದ ಎಲ್ಲ ಸಮಾಜಗಳಲ್ಲೂ ವಿಭಿನ್ನ ಆಯಾಮಗಳಲ್ಲಿ ಕಾಣುತ್ತದೆ. ಆದರೆ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ವಿಜ್ಞಾನ-ತಂತ್ರಜ್ಞಾನ ಕ್ಷೇತ್ರವನ್ನು ಪ್ರತಿನಿಧಿಸುವ ವೈದ್ಯಕೀಯ, ವೈಜ್ಞಾನಿಕ ಜಗತ್ತಿನಲ್ಲಿ ದೈವತ್ವದ ಕಲ್ಪನೆಗೆ ಹೆಚ್ಚು ಪ್ರಾಧಾನ್ಯತೆ ಇರುವುದಿಲ್ಲ. ಭಾರತದ ಸಾಂಪ್ರದಾಯಿಕ ಸಮಾಜ ಮತ್ತು ಶತಮಾನಗಳಿಂದ ಧಾರ್ಮಿಕ ಬೋಧನೆಗಳ ಪ್ರಭಾವಕ್ಕೊಳಗಾಗಿರುವ ಜನಸಮುದಾಯಗಳು ಇದರಿಂದ ಹೊರಬರಬೇಕಾದರೆ ವೈಜ್ಞಾನಿಕ ಜಗತ್ತಿನ ಅಪಾರ ಪರಿಶ್ರಮ ಬೇಕಾಗುತ್ತದೆ. ಶಾಲಾ ಕಾಲೇಜುಗಳ ವಿಜ್ಞಾನ ಬೋಧನೆ ಮತ್ತು ಕಲಿಕೆ ಕೇವಲ ಜೀವನ ನಿರ್ವಹಣೆಯ ನೆಲೆಯಲ್ಲಿ ಉದ್ಯೋಗಾವಕಾಶದ ನೆಲೆಯಲ್ಲಿ ನಡೆಯುವುದರಿಂದ, ವಿಜ್ಞಾನದ ಶಿಕ್ಷಣಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವವನ್ನು ಬಿತ್ತುವ ಒಂದು ಶೈಕ್ಷಣಿಕ ಕ್ರಮ ಅಥವಾ ಮಾದರಿ (Academic way or model ) ನಮ್ಮ ಶೈಕ್ಷಣಿಕ ವಲಯದಲ್ಲಿ ಸ್ಥಾಪಿತವಾಗಿಲ್ಲ.
ನಾಗರಿಕ ಜಗತ್ತಿನಲ್ಲಿ ಆಚರಣೆಗೊಳಪಡುವ ನಿರ್ದೇಶಿತ ಮೌಢ್ಯಗಳನ್ನು ಮತ್ತು ಧಾರ್ಮಿಕ ಗ್ರಂಥಗಳಲ್ಲಿ ಲಿಖಿತವಾಗಿ ನಮೂದಿಸಲ್ಪಡುವ ಅವೈಚಾರಿಕ ಕ್ರಿಯೆಗಳನ್ನು ಸಮಾನಾಂತರವಾಗಿ ನೋಡಿದಾಗ, ಮೊದಲನೆಯದು ವೈಜ್ಞಾನಿಕ ಸಮಾಜ, ವೈಚಾರಿಕ ಜಗತ್ತಿನ ಬೆಳವಣಿಗೆಗೆ ಕಂಟಕಪ್ರಾಯವಾಗಿ ಕಾಣುತ್ತವೆ. ಎರಡನೆಯ ಮಾದರಿಯು ವ್ಯಕ್ತಿಗತವಾಗಿ ಅಥವಾ ಕೌಟುಂಬಿಕ ನೆಲೆಯಲ್ಲಿರುವುದರಿಂದ ಹೊರ ಸಮಾಜಕ್ಕೇನೂ ಅಪಾಯವಾಗದಿರಬಹುದು, ಆದರೆ ಧರ್ಮ ಅಥವಾ ಧಾರ್ಮಿಕತೆಯನ್ನು ಸಾಂಸ್ಥೀಕರಿಸುವ ಸಮಾಜದ ಒಂದು ವರ್ಗ ಈ ಆಚರಣೆಗಳನ್ನು ಸಾಮಾಜೀಕರಣಕ್ಕೊಳಪಡಿಸಿ, ಸಾರ್ವತ್ರೀಕರಿಸುವುದರಿಂದ, ಯುವ ಸಮಾಜದಲ್ಲಿನ ವೈಜ್ಞಾನಿಕ ಪ್ರಜ್ಞೆಯನ್ನು ದುರ್ಬಲಗೊಳಿಸುತ್ತದೆ ಅಥವಾ ನಾಶಪಡಿಸುತ್ತದೆ. ದೈವತ್ವದ ಅಸ್ತಿತ್ವವನ್ನೇ, ದೇವರು ಎಂಬ ಮೂಲ ಕಲ್ಪನೆಯನ್ನೇ ನಿರಾಕರಿಸುವ ಅನೇಕ ಬೌದ್ಧಿಕ ಚಳುವಳಿಗಳು, ಗ್ರಾಂಥಿಕ ಪ್ರಯತ್ನಗಳು ಭಾರತದಲ್ಲೂ ನಡೆದಿವೆ. ನಡೆಯುತ್ತಲೇ ಇವೆ.

ಆದರೆ ದೇವರಿಲ್ಲ, ದೇವರಿಲ್ಲ ಎಂದು ಸಾರುತ್ತಾ ನಾಸ್ತಿಕತೆಯನ್ನೇ ಸಾಮಾಜಿಕ ಪ್ರಜ್ಞೆಯಾಗಿ ಪರಿವರ್ತಿಸುವ ಪೆರಿಯಾರ್ ಅವರ ವೈಚಾರಿಕತೆಯ ಬೃಹತ್ ಆಂದೋಲನ ತಮಿಳುನಾಡಿನಲ್ಲಿ ವ್ಯಾಪಕವಾಗಿ, ಜನಸಾಮಾನ್ಯರ ನಡುವೆ ಕ್ರಿಯಾಶೀಲವಾಗಿದ್ದರೂ, ಇಂದು ತಮಿಳುನಾಡಿನಲ್ಲೇ ಅತಿ ಹೆಚ್ಚು ದೇವಸ್ಥಾನಗಳು, ಪೂಜಾ ಸ್ಥಳಗಳು, ಮೂಢ ನಂಬಿಕೆಗಳು, ಮೌಢ್ಯಾಚರಣೆಗಳು ಇರುವ ಒಂದು ವಿರೋಧಾಭಾಸವನ್ನೂ ಗುರುತಿಸಬೇಕಾಗಿದೆ. ಅಂದರೆ, ಮೂಲತಃ ಜನಸಾಮಾನ್ಯರು ತಮ್ಮದೇ ಆದ ಕಾರಣಗಳಿಗಾಗಿ ದೈವತ್ವ-ಅತೀತ ಶಕ್ತಿ-ಅತೀಂದ್ರಿಯ ಶಕ್ತಿಗಳಲ್ಲಿ ನಂಬಿಕೆ ಇರಿಸಿ ತಮ್ಮ ಜೀವನದ ಸಂಕಷ್ಟಗಳ ಪರಿಹಾರಕ್ಕೆ ಮೊರೆಹೋಗುವ ಸಾಂಪ್ರದಾಯಿಕ ತಿಳುವಳಿಕೆ ಭಾರತೀಯ ಸಮಾಜದಲ್ಲಿ ಇಂದಿಗೂ ಅಧಿಕವಾಗಿಯೇ ಇದೆ. ಈ ಸಮಾಜದ ನಡುವೆ ಸಾಮಾನ್ಯ ಜನರ ನಂಬಿಕೆ-ಶ್ರದ್ಧೆಗಳಿಂದಾಚೆಗೆಗೆ, ಶೈಕ್ಷಣಿಕವಾಗಿ, ಬೌದ್ಧಿಕವಾಗಿ ವೈಚಾರಿಕ ಪ್ರಜ್ಞೆ ಮತ್ತು ವೈಜ್ಞಾನಿಕ ಮನೋಭಾವವನ್ನು ಸ್ಥಾಪಿಸಲು ಪ್ರಯತ್ನಿಸಬೇಕಿದೆ.
ಭವಿಷ್ಯದ ಹಾದಿಯಲ್ಲಿ,,,,,,
ಈ ವೈಚಾರಿಕತೆಯನ್ನು ಹರಡುವಲ್ಲಿ, ಯುವ ಸಮಾಜದಲ್ಲಿ ಮನದಟ್ಟಾಗುವಂತೆ, ವೈಜ್ಞಾನಿಕವಾಗಿ ಬದುಕುವ ವಿಧಾನಗಳನ್ನು ಕಲಿಸುವ ನಿಟ್ಟಿನಲ್ಲಿ ಶೈಕ್ಷಣಿಕ ಮಾದರಿಗಳನ್ನು (Academic Models) ಮತ್ತು ಸಾಮಾಜಿಕ ವಿಧಾನಗಳನ್ನು (Social Ways and means) ರೂಪಿಸುವಲ್ಲಿ ಭಾರತೀಯ ಸಮಾಜ ಸೋತಿದೆ. ಡಿಜಿಟಲ್ ಯುಗದ ಮಾರುಕಟ್ಟೆ ಆರ್ಥಿಕತೆಯಲ್ಲಿ, ತಳಸಮಾಜದ ದೈನಂದಿನ ಬದುಕು ನಿರ್ವಹಣೆಯ ಸಂಕಷ್ಟಗಳು ಹೆಚ್ಚಾಗುತ್ತಲೆ ಇರುವುದರಿಂದ, ಸಂವಹನ ಮಾಧ್ಯಮಗಳನ್ನು, ಶಿಕ್ಷಣ ವ್ಯವಸ್ಥೆಯನ್ನು ಮತ್ತು ನಾಗರಿಕ ಪ್ರಪಂಚವನ್ನು ನಿಯಂತ್ರಿಸಿ ನಿರ್ದೇಶಿಸುವ ಔದ್ಯಮಿಕ ಪ್ರಪಂಚವೊಂದು ಈ ವೈಚಾರಿಕ-ವೈಜ್ಞಾನಿಕ ಮಾದರಿಗಳನ್ನು ನಿರ್ಮಿಸುವ ಅವಕಾಶಗಳನ್ನೇ ಕಸಿದುಕೊಳ್ಳುತ್ತದೆ ಅಥವಾ ಸಂಕುಚಿತಗೊಳಿಸುತ್ತದೆ. ಇದನ್ನು ಮೀರಿ ವೈಚಾರಿಕತೆಯನ್ನು ಒಂದು ಚಳುವಳಿಯ ರೂಪದಲ್ಲಿ ಮುಂದೊಯ್ಯಲು ಸಾಧ್ಯವಾಗದಿರುವುದಕ್ಕೆ ಆರ್ಥಿಕ-ಮಾನವ ಸಂಪನ್ಮೂಲಗಳ ಕೊರತೆ ಒಂದು ಕಾರಣವಾದರೆ, ರಾಜಕೀಯ ಪಕ್ಷಗಳ-ಸರ್ಕಾರಗಳ ನಿರಾಸಕ್ತಿ ಮತ್ತೊಂದು ಕಾರಣವಾಗಿ ಕಾಣುತ್ತದೆ. ಇದರ ನಡುವೆಯು ಸಾಹಿತ್ಯಿಕವಾಗಿ, ರಂಗಭೂಮಿಯ ಮೂಲಕ, ಬೌದ್ಧಿಕ ಚಟುವಟಿಕೆಗಳ ಮೂಲಕ ಇದನ್ನು ಸಾಧಿಸಲು ಯತ್ನಿಸುತ್ತಿರುವ ಹಲವು ಸಂಘಟನೆಗಳೂ ನಮ್ಮ ನಡುವೆ ಇದೆ.

ಈ ಪ್ರಯತ್ನಗಳನ್ನು ಸಾಂವಿಧಾನಿಕ ಚೌಕಟ್ಟಿನೊಳಗೇ ತಳಸಮಾಜವನ್ನು, ಅಲ್ಲಿನ ಕಟ್ಟಕಡೆಯ ವ್ಯಕ್ತಿಯನ್ನು ತಲುಪುವ ಮಾರ್ಗಗಳನ್ನು ಡಿಜಿಟಲ್ ಯುಗದಲ್ಲಿ ಪರಿಶೋಧಿಸಬೇಕಿದೆ. ಇದು ಎಲ್ಲ ಸಮಾಜಗಳಲ್ಲಿ ಆಗಬೇಕಾದ ಒಂದು ಕೆಲಸ ಆಗಿದೆ. ಸಾಂಪ್ರದಾಯಿಕ ಸಮಾಜದಲ್ಲಿ ಇದಕ್ಕೆ ಎದುರಾಗುವ ಅಡೆತಡೆಗಳನ್ನು ನಿವಾರಿಸಿಕೊಳ್ಳುತ್ತಲೇ, ಮಿಲೆನಿಯಂ ಜಗತ್ತನ್ನು ಪ್ರತಿನಿಧಿಸುವ ಯುವ ಸಂಕುಲವನ್ನು ವೈಜ್ಞಾನಿಕ ಸಮಾಜದೆಡೆಗೆ ಕರೆದೊಯ್ಯುವ ಜವಾಬ್ದಾರಿಯನ್ನು ನಾಗರಿಕ ಸಂಘಟನೆಗಳು, ವಿಚಾರವಾದಿ ವೇದಿಕೆಗಳು, ವಿಜ್ಞಾನ ವೇದಿಕೆಗಳು ಮತ್ತು ಸಾಂಘಿಕವಾಗಿ ಪ್ರಗತಿಪರ-ಎಡಪಂಥೀಯ ಸಂಘಟನೆಗಳು ಹೊರಬೇಕಿದೆ. ಆಗ ನಾವು ಭವಿಷ್ಯದ ಭಾರತವನ್ನು ನೈಜ ವೈಜ್ಞಾನಿಕ ಸಮಾಜವಾಗಿ ಕಟ್ಟಲು ಸಾಧ್ಯವಾಗುತ್ತದೆ. ಇದು ಸುಲಭ ಸಾಧ್ಯವಲ್ಲ ಆದರೆ ಅಸಾಧ್ಯವೂ ಅಲ್ಲ.
( ಈ ಲೇಖನದಲ್ಲಿ ಪ್ರಧಾನವಾಗಿ ಧರ್ಮ ಎಂಬ ಪದವನ್ನು ಆಚರಣಾತ್ಮಕ-ಜೀವನ ವಿಧಾನದ ನೆಲೆಯಲ್ಲಿ ವ್ಯಾಖ್ಯಾನಿಸಲಾಗಿದೆ. ಮತ ಮತ್ತು ಧರ್ಮದ ನಡುವೆ ಇರುವ ವ್ಯತ್ಯಾಸ ಈ ಲೇಖನದ ವಸ್ತುವಿಗೆ ಹೆಚ್ಚು ಪ್ರಸ್ತುತ ಎನಿಸಲಾರದು)
-೦-೦-೦-೦-೦-