ಸಮಕಾಲೀನ ಭಾರತದ ಸಾಮಾಜಿಕ ಚರಿತ್ರೆಯನ್ನು ಸೂಕ್ಷ್ಮವಾಗಿ ಗಮನಿಸಿದಾಗ ಎರಡು ಸಂಗತಿಗಳು ಮುಖಾಮುಖಿಯಾಗುತ್ತವೆ. ಮೊದಲನೆಯದು, ನಿಸರ್ಗದತ್ತ ಅಥವಾ ಜಾತಿ-ಧರ್ಮ ಕೇಂದ್ರಿತ ದ್ವೇಷಾಸೂಯೆ ಪ್ರಚೋದಿತ ಅಥವಾ ರಾಜಕೀಯ ಪ್ರೇರಿತ ಅಸಹಜ ಸಾವುಗಳನ್ನು ಮೌನವಾಗಿ ಸಹಿಸಿಕೊಳ್ಳುವ ಮತ್ತು ಉತ್ತರದಾಯಿತ್ವ ನಿರೀಕ್ಷಿಸದ ಧಾರಣಾ ಶಕ್ತಿಯನ್ನು ನಮ್ಮ ಸಮಾಜ ರೂಢಿಸಿಕೊಂಡಿದೆ ಎಂಬ ಕಲ್ಪನೆ.

ಎರಡನೆಯದು ಸಹಜೀವಿಗಳಿಂದಲೇ ಅತ್ಯಾಚಾರ-ಹತ್ಯೆಗೊಳಗಾಗುವ ಅಥವಾ ಸ್ತ್ರೀ ದ್ವೇಷ, ಜಾತಿ-ಮತದ್ವೇಷದ ಕಾರಣ ಕೊಲೆಯಾಗುವ ಪ್ರಸಂಗಗಳಲ್ಲಿ , ಇಂತಹ ದಾರುಣ ಸಾವುಗಳು ಇಡೀ ಸಮಾಜವನ್ನು ವಿಚಲಿತಗೊಳಿಸುವುದಿಲ್ಲ ಅಥವಾ ಕೊಲೆಯಾದವರ-ಕೊಲೆ ಮಾಡಿದವರ ಅಸ್ಮಿತೆಯ ಆಧಾರದಲ್ಲಿ ಸಮಾಜ ಸಾವಿಗೆ ಸ್ಪಂದಿಸುತ್ತದೆ.

ಈ ಅಸೂಕ್ಷ್ಮತೆ ಕಳೆದ ನಾಲ್ಕು ದಶಕಗಳ ಸಾಂಸ್ಕೃತಿಕ ರಾಜಕಾರಣ ಮತ್ತು ಮತೀಯವಾದದ ನೆಲೆಯಲ್ಲಿ ಸಾಮಾಜಿಕ ಸಂವೇದನೆಯನ್ನೇ ನಾಶಗೊಳಿಸಿರುವುದು ವರ್ತಮಾನದ ದುರಂತ. ಈ ವಿಷಮ ವಾತಾವರಣದಲ್ಲೇ ಉದ್ದೇಶಿತ ಹತ್ಯೆಗಳನ್ನು ಸಂಭ್ರಮಿಸುವ ಒಂದು ಸಮಾಜವೂ ಸಹ ಅಸ್ತಿತ್ವ ಪಡೆದುಕೊಂಡಿದೆ.
ಹಾಗಾಗಿಯೇ 1980ರ ನೆಲ್ಲಿಯಿಂದ 2002ರ ಗುಜರಾತ್‌ವರೆಗೆ ಸಂಭವಿಸಿರುವ ಸಾಹೂಹಿಕ ಹತ್ಯೆಗಳು ಇತಿಹಾಸದ ವಿಸ್ಮೃತಿಗೆ ಸೇರಿವೆ. ಮಹಿಳಾ ದೌರ್ಜನ್ಯದ ಪ್ರಕರಣಗಳಿಗೆ, ಸಫ್ದಾರ್ ಹಷ್ಮಿಯಿಂದ ಗೌರಿಯವರೆಗೆ ಉತ್ತರದಾಯಿತ್ವವನ್ನೇ ವಹಿಸದ ಒಂದು ಸಮಾಜವೂ ಸಹ ನಮ್ಮ ನಡುವೆ ಸೃಷ್ಟಿಯಾಗಿದೆ. ಈ ಸಾಮಾಜಿಕ ಧೋರಣೆಯೇ ವ್ಯವಸ್ಥೆಯ ಎಲ್ಲ ಸ್ತರಗಳನ್ನೂ, ಎಲ್ಲ ಸಾಂಸ್ಥಿಕ ನೆಲೆಗಳನ್ನೂ ವ್ಯಾಪಿಸಿರುವುದು, ನವ ಭಾರತದಲ್ಲಿ ʼ ಅಸಹಜ ಸಾವುಗಳು ʼ ಅನಾಥವಾಗಿ ಪರಿಣಮಿಸಿವೆ. ಅಪರಾಧಿಕ ಜಗತ್ತು ನಿರುಮ್ಮಳವಾಗಿದೆ.

ಕೊಂದವರು ಯಾರು ? ಪ್ರಶ್ನೆಯೋ ಜಿಜ್ಞಾಸೆಯೋ ?
ಈ ಸಂದಿಗ್ಧತೆಯ ನಡುವೆಯೇ ಕರ್ನಾಟಕದ ಮಹಿಳಾ ಸಮೂಹ ಇದೇ 16ರಂದು “ ಕೊಂದವರು ಯಾರು ? ” ಮಹಿಳಾ ನ್ಯಾಯ ಸಮಾವೇಶವನ್ನು ಹಮ್ಮಿಕೊಂಡಿದೆ. ಕಳೆದ ನಾಲ್ಕು ದಶಕಗಳಲ್ಲಿ ಅತ್ಯಾಚಾರ, ದೌರ್ಜನ್ಯ, ಹತ್ಯೆಗೀಡಾಗಿರುವ ಅಮಾಯಕ ಮಹಿಳೆಯರ ಸಾವಿಗೆ ಯಾರು ಕಾರಣ ಎಂಬುದಷ್ಟೇ ಈ ಆಂದೋಲನದ ಪ್ರಶ್ನೆ. ʼಕೊಂದವರುʼ ಎಂಬ ಪದವನ್ನು ಬಿಡಿಸಿ ನೋಡಬೇಕಿಲ್ಲ. ಏಕೆಂದರೆ ಸಹಜೀವಿಯ ಜೀವ ತೆಗೆದ ಪ್ರತಿಯೊಬ್ಬ ವ್ಯಕ್ತಿಯೂ ಕೊಂದವನೇ ಆಗಿರುತ್ತಾನೆ. ಆದರೆ ʼ ಕೊಲೆಯಾದವರು ʼ ಎಂಬ ಪದವನ್ನು ಛೇದಿಸಿ ನೋಡಿದಾಗ, ಮಹಿಳಾ ದೌರ್ಜನ್ಯದ ಚೌಕಟ್ಟಿನಲ್ಲಿ ನಮಗೆ ನಾನಾ ಆಯಾಮಗಳು ಕಾಣುತ್ತವೆ.

ಅತ್ಯಾಚಾರ-ದೌರ್ಜನ್ಯಕ್ಕೀಡಾದ ಮತ್ತು ಈ ಪುರುಷ ಕ್ರೌರ್ಯದ ಮುಂದುವರಿಕೆಯಾಗಿ ಹತ್ಯೆಗೀಡಾಗುವ ಮಹಿಳೆಯ ದೃಷ್ಟಿಯಲ್ಲಿ ನೋಡಿದಾಗ, ಅಲ್ಲಿ ʼ ಕೊಲೆ ʼ ಎನ್ನುವ ಪದ ಭೌತಿಕ, ಲೌಕಿಕ, ಬೌದ್ಧಿಕ ಹಾಗೂ ಜೈವಿಕ ನೆಲೆಗಳಲ್ಲಿ ಬಿಚ್ಚಿಕೊಳ್ಳುತ್ತದೆ. ಒಬ್ಬ ಪುರುಷನಿಂದ ಅಥವಾ ಸಾಮೂಹಿಕವಾಗಿ ಅತ್ಯಾಚಾರಕ್ಕೀಡಾಗಿ ಬದುಕುಳಿದಿರುವ ಮಹಿಳೆಯಾಗಲೀ, ಹತ್ಯೆಗೀಡಾದ ಮಹಿಳೆಯಾಗಲೀ ಕಳೆದುಕೊಳ್ಳುವುದು ಕೇವಲ ಉಸಿರಾಟವನ್ನಲ್ಲ, ಅಸ್ತಿತ್ವ-ಅಸ್ಮಿತೆಯನ್ನಲ್ಲ. ಆಕೆಯ ಬದುಕುವ ಹಕ್ಕು, ಹೆಣ್ಣಿನ ಘನತೆ, ಸ್ವಾಯತ್ತತೆ, ಸಮಾನತೆ, ಸೋದರಿತ್ವ ಮತ್ತು ಸಂವಿಧಾನದತ್ತ ಹಕ್ಕುಗಳೆಲ್ಲವನ್ನೂ ಕಳೆದುಕೊಳ್ಳುತ್ತಾಳೆ. ಸಾಂಪ್ರದಾಯಿಕ ಸಮಾಜದ ದೃಷ್ಟಿಯಲ್ಲಿ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಾಳೆ. ಸಾಂಸ್ಕೃತಿಕ ಜಗತ್ತಿನ ಕರ್ಮಠ ಸಮಾಜದಲ್ಲಿ ಅಸ್ಮಿತೆಯನ್ನೂ ಕಳೆದುಕೊಳ್ಳುತ್ತಾಳೆ. ಈ ಕೊಲೆಯನ್ನು ಹೇಗೆ ನಿರ್ವಚಿಸುವುದು ? ಇದು ಕಾನೂನು ಪದಕೋಶದಲ್ಲಿ ಗೋಚರಿಸದಿರುವ ಒಂದು ವಿದ್ಯಮಾನ.

ನವ ಭಾರತದ ಡಿಜಿಟಲ್ ಯುಗದಲ್ಲಿ ಇಂತಹ ಹೀನ ಅಪರಾಧಗಳನ್ನು ಕ್ಷಮಿಸಿಬಿಡುವ ಸಾಂಸ್ಥಿಕ ಧೋರಣೆಯನ್ನೂ ನಾವು ಕಾಣುತ್ತಿದ್ದೇವೆ. ಉತ್ತರಪ್ರದೇಶದಲ್ಲಿ ತನ್ನ ಮನೆಯ ಫ್ರಿಡ್ಜ್‌ನಲ್ಲಿ ಗೋಮಾಂಸ ಇಟ್ಟಿದ್ದ ಕಾರಣಕ್ಕೆ ಮತಾಂಧರಿಂದ ಹತ್ಯೆಯಾದ ಅಕ್ಲಾಖ್‌ನ ಹಂತಕರ ವಿರುದ್ಧ ಮೊಕದ್ದಮೆಯನ್ನು ಅಲ್ಲಿನ ಸರ್ಕಾರವೇ ಹಿಂಪಡೆಯುವ ಮೂಲಕ ಹೊಸ ಪರಂಪರೆಗೆ ನಾಂದಿ ಹಾಡಿದೆ. ಬಿಲ್ಕಿಸ್ ಬಾನೋ ಪ್ರಕರಣದಲ್ಲಿ ಅತ್ಯಾಚಾರಿಗಳನ್ನು ಸುಸಂಸ್ಕೃತರೆಂದು ಪರಿಗಣಿಸಿ ಬಿಡುಗಡೆ ಮಾಡಿದ ನಂತರ ಅಪರಾಧಿಗಳನ್ನು ಜನಪ್ರತಿನಿಧಿಗಳೇ ಸಾರ್ವಜನಿಕವಾಗಿ ಸನ್ಮಾನಿಸಿದ ಪ್ರಸಂಗಕ್ಕೆ, ಉತ್ತರ ಪ್ರದೇಶ ಸರ್ಕಾರದ ಈ ಕ್ರಮ ಸಾಂವಿಧಾನಿಕ ರೂಪ ನೀಡಿದೆ.

ಇದೇನೂ ಅಚ್ಚರಿಯ ಸಂಗತಿಯಲ್ಲ. ಮತಾಂಧರಿಂದ ಕೊಲೆಗೀಡಾಗುವ ವ್ಯಕ್ತಿಗಳ ಸಾವನ್ನು ಸಂಭ್ರಮಿಸಿದ ಕ್ಷಣಗಳಿಗೂ ನಾವು ಸಾಕ್ಷಿಯಾಗಿದ್ದೇವೆ. ಹಾಗೆಯೇ ಭಿನ್ನ ತತ್ವ-ಸಿದ್ಧಾಂತಗಳನ್ನು ಅನುಸರಿಸುವ ವಿದ್ವತ್ ವಲಯದ ಪ್ರತಿನಿಧಿಗಳ ಸಹಜ ಸಾವನ್ನೂ ಸಂಭ್ರಮಿಸುವ ಸಂಸ್ಕೃತಿಗೂ ಮುಖಾಮುಖಿಯಾಗಿದ್ದೇವೆ. ಇದನ್ನು ಅಸೂಕ್ಷ್ಮತೆ ಎನ್ನುವುದಕ್ಕಿಂತಲೂ ಅಮಾನುಷತೆಯೆಂದು ನಿರ್ವಚಿಸಬಹುದು. ಇದರ ಮತ್ತೊಂದು ಮಗ್ಗುಲನ್ನು 13 ವರ್ಷಗಳ ಹಿಂದೆ ನಡೆದ ಸೌಜನ್ಯ ಎಂಬ ಬಾಲಕಿಯ ಅತ್ಯಾಚಾರ-ಹತ್ಯೆಯ ಪ್ರಕರಣದಲ್ಲಿ ಕಾಣಬಹುದು. ಇಂತಹ ಹಲವಾರು ಕೊಲೆಗಳು ಹೇಗೆ ಸಂಭವಿಸಿವೆ ? ಡಿಸೆಂಬರ್ ೧೬ರ ಮಹಿಳಾ ಸಮಾವೇಶದ ಪ್ರಶ್ನೆಯೂ ಇದೇ ಅಲ್ಲವೇ ?

ನೈತಿಕ ಅಧಃಪತನದ ಸಂಕೇತವಾಗಿ
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅರಮನೆಯ ಸಮೀಪದಲ್ಲೇ ನಡುರಾತ್ರಿ ಅತ್ಯಾಚಾರಕ್ಕೊಳಗಾಗಿ ಹತ್ಯೆಗೀಡಾದ ಬಲೂನು ಮಾರುವ ಹುಡುಗಿಯ ಸಾವಿಗೆ ಈ ಪ್ರಶ್ನೆಯೂ ಕೇಳಿಬರಲಿಲ್ಲ. ಹೀಗೆ ನಿಗೂಢ ಲೋಕಕ್ಕೆ ಸರಿದುಹೋಗಿರುವ ನೂರಾರು ದೌರ್ಜನ್ಯ, ಹತ್ಯೆಯ ಪ್ರಕರಣಗಳನ್ನು ಹಾಥ್ರಸ್‌ನಿಂದ ಮೈಸೂರಿನವರೆಗೂ ಕಾಣಬಹುದು. ಈ ಎಲ್ಲ ಪ್ರಕರಣಗಳಲ್ಲಿ ಉದ್ಭವಿಸುವ ಒಂದೇ ಪ್ರಶ್ನೆ ಎಂದರೆ ʼ ಕೊಂದವರು ಯಾರು ? ʼ ಇದು ಪ್ರಶ್ನೆಯೇ ಹೊರತು, ಕೊಂದವರು ಯಾರು ಎಂದು ಬೊಟ್ಟು ಮಾಡಿ ತೋರಿಸುವ ದಾರ್ಷ್ಟ್ಯದ ನಿರೂಪಣೆ ಅಲ್ಲ. ತನ್ನ ಸಹಜೀವಿಯ ಕ್ರೌರ್ಯಕ್ಕೆ ಬಲಿಯಾಗಿರುವ ಸಮಾಜದ ಯಾವುದೇ ವ್ಯಕ್ತಿಯ ಬಗ್ಗೆ ಈ ಪ್ರಶ್ನೆ ಸಹಜವಾಗಿ ಉದ್ಭವಿಸುತ್ತದೆ. ಈ ಮಾನವೀಯ ಪ್ರಶ್ನೆಗಳು ಉತ್ತರದಾಯಿಗಳಿಲ್ಲದ ಸಮಾಜದಲ್ಲಿ ಜಿಜ್ಞಾಸೆಗಳಾಗಿ ಚರಿತ್ರೆಯ ವಿಸ್ಮೃತಿಗೆ ಸೇರುವುದು, ಸಮಾಜದ ನೈತಿಕ ಅಧಃಪತನದ ಸಂಕೇತ, ಸಾಂಸ್ಕೃತಿಕ ಅವನತಿಯ ಸೂಚಕ.

ಆದರೆ ಸಮಕಾಲೀನ ಭಾರತೀಯ ಸಮಾಜದಲ್ಲಿ ಇಂತಹ ನೂರಾರು ಪ್ರಕರಣಗಳು ʼ ಕೊಂದವರು-ದೌರ್ಜನ್ಯ ಎಸಗಿದವರು ಯಾರಿರಬಹುದು ʼಎಂಬ ಜಿಜ್ಞಾಸೆಯಲ್ಲೇ ಕಳೆದು ಹೋಗಿವೆ. ಈ ಜಿಜ್ಞಾಸೆಯನ್ನು ಮಾನವೀಯ ದೃಷ್ಟಿಯಿಂದ ಪರಿಗಣಿಸಿ ಶೋಧಿಸುವ ಜವಾಬ್ದಾರಿಯನ್ನು ನಮ್ಮ ಆಧುನಿಕ ಸಮಾಜಗಳು ಹೊತ್ತುಕೊಂಡಿಲ್ಲ. ಏಕೆಂದರೆ ಈ ಎಲ್ಲ ಪ್ರಕರಣಗಳಲ್ಲಿ ನೊಂದವರು ತಳಸಮಾಜದ ಸದಸ್ಯರು. ಅಸಹಾಯಕ ಮಹಿಳೆಯರು ಅಪರೂಪಕ್ಕೆ ಮೇಲ್ಪದರದ, ಮೇಲ್ಜಾತಿಯ, ಮೇಲ್ವರ್ಗಕ್ಕೆ ಸೇರಿದವರಾಗಿರುತ್ತಾರೆ. ಲಿಂಗ ಸೂಕ್ಷ್ಮತೆ ಅಥವಾ ಮನುಜ ಸೂಕ್ಷ್ಮತೆ ಕನಿಷ್ಠ ಮಟ್ಟದಲ್ಲಿದ್ದರೂ ಸಹ ಅಂತಹ ಸಮಾಜದಲ್ಲಿ ಈ ಅಮಾನುಷ ಘಟನೆಗಳು ಜಿಜ್ಞಾಸೆಗಳಾಗಿ, ಶಾಶ್ವತ ಪ್ರಶ್ನೆಗಳಾಗಿ ಉಳಿಯುವುದಿಲ್ಲ.

ಮತ್ತೊಂದು ಆಯಾಮದಲ್ಲಿ ಹೇಳುವುದಾದರೆ, ಒಂದು ನೈತಿಕ ಸಮಾಜದಲ್ಲಿ, ಜವಾಬ್ದಾರಿಯುತ ಆಳ್ವಿಕೆಯಲ್ಲಿ, ಮಾನವೀಯ ಸಂಸ್ಕೃತಿಯಲ್ಲಿ ಇಂತಹ ಕ್ರೌರ್ಯಗಳು ಸಮ್ಮಾನ, ಸನ್ಮಾನ, ಸಂಭ್ರಮ, ಮನ್ನಣೆ ಪಡೆಯುವುದು ಊಹಿಸಲಸಾಧ್ಯ.
ಈ ಸಂಕೀರ್ಣ ಪ್ರಶ್ನೆಗಳ ನಡುವೆಯೇ ಕರ್ನಾಟಕದ ಮಹಿಳಾ ಸಂಕುಲ “ಕೊಂದವರು ಯಾರು ,,,? ” ಎಂದು ಸಾಮೂಹಿಕವಾಗಿ ಕೇಳುತ್ತಿದೆ. ಈ ಪ್ರಶ್ನೆಗೆ ಉತ್ತರಿಸಬೇಕಾದವರು ಯಾರು ? ಸರ್ಕಾರಗಳು, ಕಾನೂನು ವ್ಯವಸ್ಥೆ, ಆಡಳಿತ, ಜನಪ್ರತಿನಿಧಿಗಳು ಮತ್ತು ವಿಶಾಲ ಸಮಾಜ (Broader society) . ಸಮಾಜದಲ್ಲಿ, ನಾಗರಿಕ ಜಗತ್ತಿನಲ್ಲಿ ಜೀವಿಸುವ ಮನುಷ್ಯರಿಗೆ ಆತ್ಮಸಾಕ್ಷಿ ಎನ್ನುವುದು ಸಾರ್ವತ್ರಿಕವಾಗಿ ಇರುವುದಾದರೆ, ಈ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಆದರೆ ನಮ್ಮ ಸಮಾಜದಲ್ಲಿ ʼ ಆತ್ಮಸಾಕ್ಷಿ ʼಯ ಔದಾತ್ಯವೇ ಸತ್ತುಹೋಗಿದೆ. ತಾನು ಮಾಡಿದ ತಪ್ಪನ್ನು ಒಪ್ಪಿಕೊಳ್ಳಬೇಕು ಎನ್ನುವುದು ಕಾಲ್ಪನಿಕ (Utopian) ಆಲೋಚನೆ ಎನ್ನುವಂತಾಗಿದೆ. ಬಹುಶಃ ಮಾನವ ಸಮಾಜ ಇದನ್ನೂ ಎಂದೋ ಮರೆತುಹೋಗಿದೆ.

ನೊಂದ ಮನಸ್ಸುಗಳ ಪ್ರಶ್ನೆ
ಆದರೆ ಹೀನ ಅಪರಾಧಗಳನ್ನು ಎಸಗುವ ವ್ಯಕ್ತಿಗಳು, ಸಂಸ್ಥೆಗಳು ಮತ್ತು ಗುಂಪುಗಳು ಯಾವುದು ಎಂದು ಗೊತ್ತಿರುವ ಸಮಾಜ ನಿಷ್ಕ್ರಿಯ ಮೌನ ವಹಿಸುವುದು ಅಪರಾಧಗಳಿಗಿಂತಲೂ ಕ್ರೂರ ವರ್ತನೆ ಅಲ್ಲವೇ ? ಈ ಮನೋಗುಣ ಬೆಳೆಸಿಕೊಳ್ಳಲು ಔಪಚಾರಿಕ ಶಿಕ್ಷಣದ ಅಗತ್ಯವಿಲ್ಲ ಅಥವಾ ಯಾವುದೇ ದಾರ್ಶನಿಕ ಬೋಧನೆಯ ಅವಶ್ಯಕತೆಯೂ ಇಲ್ಲ. ಲೌಕಿಕ ಬದುಕಿನಲ್ಲಿ ಸಹಮಾನವರೊಡನೆ ಬದುಕಬೇಕಾದರೆ ಬೇಕಾಗುವ ಮಾನವೀಯ ಮೌಲ್ಯಗಳು, ಸಾಮಾಜಿಕ ನೈತಿಕತೆ ಮತ್ತು ಸಾಂಸ್ಕೃತಿಕ ಬದ್ಧತೆ ಸಮಾಜದ ಎಲ್ಲ ಸ್ತರಗಳಲ್ಲೂ ಇದ್ದರೆ ಸಹಜವಾಗಿ ಈ ನಿರ್ದಯಿ ಮೌನ ಕಾಣುವುದೂ ಇಲ್ಲ, ಸಹನೀಯವೂ ಆಗುವುದಿಲ್ಲ. ನವ ಭಾರತೀಯ ಸಮಾಜದಲ್ಲಿ ಇಲ್ಲವಾಗುತ್ತಿರುವುದು ಈ ಮೌಲ್ಯಗಳೇ.

ಮೌಲ್ಯಗಳ ವ್ಯಾಪ್ತಿಯಲ್ಲಿ ಗುರುತಿಸಬಹುದಾದ ಮನುಜ ಸಂವೇದನೆ, ಸೂಕ್ಷ್ಮತೆ, ಅಂತಃಕರಣ, ಜೀವಪರತೆ, ಎಲ್ಲರನ್ನೂ ಪ್ರೀತಿಸುವ ಔದಾತ್ಯ ಮತ್ತು ಸಹಜೀವಿಗಳ ವಿರುದ್ಧ ನಡೆಯುವ ಯಾವುದೇ ರೀತಿಯ ಕ್ರೌರ್ಯ ಮತ್ತು ಹಿಂಸೆಯನ್ನು ತಡೆಗಟ್ಟುವ ಗುಣ , ಇವೆಲ್ಲವೂ ನಾಗರಿಕತೆಯ ಲಕ್ಷಣಗಳಲ್ಲವೇ ? ಈ ಗುಣಗಳನ್ನು ಹುಟ್ಟಿನಿಂದಲೇ ಗುರುತಿಸಲಾಗುವುದಿಲ್ಲ ಅಥವಾ ಜಾತಿ-ಧರ್ಮದ ಅಸ್ಮಿತೆಗಳ ಚೌಕಟ್ಟುಗಳಲ್ಲಿ ನಿರ್ವಚಿಸಲಾಗುವುದಿಲ್ಲ. ಇದು ನಮ್ಮ ಸಾಮಾಜಿಕ ಪರಿಸರವನ್ನು, ಶೈಕ್ಷಣಿಕ ವ್ಯವಸ್ಥೆಯನ್ನು, ಆಧ್ಯಾತ್ಮಿಕ-ಧಾರ್ಮಿಕ ವಾತಾವರಣವನ್ನು, ಸಾಂಸ್ಕೃತಿಕ ಆಚರಣೆಗಳನ್ನು ಅವಲಂಬಿಸುತ್ತದೆ. ಮಾನವೀಯತೆ ಮಾನವನ ಸಹಜ ಗುಣ ಎಂದು ಹೇಳುವ ದಾರ್ಷ್ಟ್ಯ ಸಾಧ್ಯವೇ ಇಲ್ಲದಂತಹ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಇದು ರೂಢಿಸಿಕೊಳ್ಳಬಹುದಾದ ಒಂದು ಗುಣವಾಗಿ ಪರಿಣಮಿಸಿದೆ. ಮಾನವನ ಲೌಕಿಕ ಅಭ್ಯುದಯದ ಹಾದಿಯಲ್ಲಿ ಆಧುನಿಕ ಸಮಾಜ ಕಂಡುಕೊಳ್ಳಬೇಕಾದ ಆತ್ಮವಿಮರ್ಶಕ ಸತ್ಯ ಇದು.

ಭಾರತ ಸಾಗುತ್ತಿರುವ ಹಾದಿಯಲ್ಲಿ
ಭಾರತೀಯ ಸಮಾಜ ಈ ಹಾದಿಯನ್ನು ಸನ್ಮಾರ್ಗವಾಗಿ ಕಟ್ಟುವುದರಲ್ಲಿ ವಿಫಲವಾಗಿರುವುದರಿಂದಲೇ, ಸೂಕ್ಷ್ಮ ಸಂವೇದನೆ, ಉತ್ತರದಾಯಿತ್ವ , ಸಾಮಾಜಿಕ ಜವಾಬ್ದಾರಿ, ಸಾಮೂಹಿಕ ಹೊಣೆಗಾರಿಕೆ ಮೊದಲಾದ ಔದಾತ್ಯಗಳು ಕಣ್ಮರೆಯಾಗಿವೆ. ಈ ನೆಲೆಯಲ್ಲಿ ನಿಂತು ಡಿಸೆಂಬರ್ 16ರಂದು ಮಹಿಳಾ ಸಮೂಹದಿಂದ ಧ್ವನಿಸುವ “ ಕೊಂದವರು ಯಾರು? ” ಎಂಬ ಪ್ರಶ್ನೆಯನ್ನು ನೋಡಬೇಕಿದೆ. ಇದಕ್ಕೆ ಯಾರು ಉತ್ತರಿಸಬೇಕು ? ಸರ್ಕಾರವೋ, ಸಮಾಜವೋ, ವ್ಯವಸ್ಥೆಯೋ ಅಥವಾ ಸಂಸ್ಕೃತಿಯೋ ? ಅಥವಾ ಈ ಪ್ರಶ್ನೆಗೆ ಕಾರಣವಾಗಿರುವ ದುಷ್ಟ ಕೃತ್ಯಗಳಿಗೆ, ಕ್ರೂರ ಹಿಂಸೆಗೆ, ಅಮಾನುಷ ವರ್ತನೆಗೆ ಉತ್ತರದಾಯಿತ್ವ ಯಾರು ವಹಿಸಬೇಕು ? ಉತ್ತರದಾಯಿತ್ವದ ಪ್ರಶ್ನೆ ಬಂದಾಗ ಅಪರಾಧಿಗಳಷ್ಟೇ ಕಾಣುವುದಿಲ್ಲ, ಇಂತಹ ಅಪರಾಧಿಗಳಿಗೆ ರಕ್ಷಣೆ ನೀಡುವ ಸಂಸ್ಥೆ, ಸಂಘಟನೆ, ಸಮಾಜ, ಸರ್ಕಾರ ಮತ್ತು ವ್ಯವಸ್ಥೆ ಎಲ್ಲವೂ ಗೋಚರಿಸುತ್ತದೆ.

“ಕೊಂದವರು ಯಾರು? ” ಎಂಬ ಕೂಗು ಎರಡು ತಿಂಗಳಿಂದ ಧ್ವನಿಸುತ್ತಿದೆ. ಚಾರಿತ್ರಿಕವಾಗಿ ದಶಕಗಳಿಂದಲೂ ಭಿನ್ನ ಸಂದರ್ಭಗಳಲ್ಲಿ ಕೇಳಿಸುತ್ತಲೇ ಇದೆ. ಸಮಾಜದಲ್ಲಿ ಕನಿಷ್ಠ ಮಾನವೀಯ ಮೌಲ್ಯಗಳು ಉಳಿದಿದ್ದರೆ, ಈ ಪ್ರಶ್ನೆಯನ್ನು ಕೇಳುತ್ತಿರುವ ಅಪಾರ ಜನಸ್ತೋಮಕ್ಕೆ ಉತ್ತರ ಕೇಳಿಬರುತ್ತಿತ್ತು. ಈ ಪ್ರಶ್ನೆಯ ಹಿನ್ನೆಲೆಯಾಗಿ “ನೊಂದವರು ಯಾರು ?” ಎಂಬ ಪ್ರಶ್ನೆಯೂ ನಮ್ಮ ಸಮಾಜವನ್ನು ಕಾಡುತ್ತಿತ್ತು. ವಿಪರ್ಯಾಸವೆಂದರೆ ವರ್ತಮಾನದ ಸಮಾಜದಲ್ಲಿ ನೊಂದವರು, ಸಂತ್ರಸ್ತರು, ದೌರ್ಜನ್ಯಕ್ಕೊಳಗಾದವರು, ಎಲ್ಲವನ್ನೂ ಕಳೆದುಕೊಂಡವರು ಅಪರಾಧಿಗಳ ಸ್ಥಾನದಲ್ಲಿ ನಿಲ್ಲುತ್ತಿದ್ದಾರೆ. .ಈ ಅಸಹಾಯಕ ಜೀವಗಳಿಗೆ ನ್ಯಾಯ ನೀಡುವಂತೆ ಆಗ್ರಹಿಸುವ ಆತ್ಮಸಾಕ್ಷಿ ಇರುವ ಮನಸ್ಸುಗಳು ಶಿಕ್ಷಾರ್ಹ ಅಪರಾಧಿಗಳ ಸ್ಥಾನದಲ್ಲಿ ನಿಂತಿವೆ. ನೊಂದವರ ನೋವಿಗೆ ಸ್ಪಂದಿಸುವ ವಿವೇಕವನ್ನು ಮತ್ತು ಅಂತಃಕರಣವನ್ನು ಕಳೆದುಕೊಂಡಿರುವ ಸಮಾಜದಲ್ಲಿ ಮಾತ್ರ ಇದು ಸಂಭವಿಸಲು ಸಾಧ್ಯ.

ಇಂತಹ ಸಮಾಜವನ್ನು ಭಿನ್ನ ಆಯಾಮಗಳಲ್ಲಿ, ಸ್ತರಗಳಲ್ಲಿ ಪ್ರತಿನಿಧಿಸುವ ಪ್ರತಿಯೊಬ್ಬ ವ್ಯಕ್ತಿಯೂ ಉತ್ತರದಾಯಿಯಾಗಬೇಕಿದೆ. ನಮ್ಮ ವ್ಯವಸ್ಥೆಯ ಸಹಭಾಗಿಗಳು, ಸಮಾಜದ ಸಂಯೋಜಕರು ಮತ್ತು ನಿರ್ವಾಹಕರು, ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಫಲಾನುಭವಿಗಳು, ಅಧಿಕಾರ ರಾಜಕಾರಣದ ವಾರಸುದಾರರು, ಜಾತಿ ಧರ್ಮ ಮತ್ತು ಅಧ್ಯಾತ್ಮ ಜಗತ್ತಿನ ವಾರಸುದಾರರು ಹಾಗೂ ಭವಿಷ್ಯ ಭಾರತವನ್ನು ಕಟ್ಟಲು ನೀರೆರೆಯುತ್ತಿರುವ ಶೈಕ್ಷಣಿಕ-ಬೌದ್ಧಿಕ ವಲಯದ ವಕ್ತಾರರು, ಅಕ್ಷರ ಲೋಕವನ್ನು ಶ್ರೀಮಂತಗೊಳಿಸುತ್ತಿರುವ ಸಾರಸ್ವತ ಲೋಕದ ಪ್ರತಿನಿಧಿಗಳು, ಜನಪದೀಯ-ಆಧುನಿಕ ಸಂಸ್ಕೃತಿಯ ರಕ್ಷಣೆಗಾಗಿ ಶ್ರಮಿಸುತ್ತಿರುವ ಸಂವೇದನಾಶೀಲ ಮನಸ್ಸುಗಳು ಎಲ್ಲರೂ ಸಹ ಉತ್ತರದಾಯಿತ್ವದ ನೊಗಕ್ಕೆ ಹೆಗಲು ನೀಡಬೇಕಿದೆ. ಇದು ಸಾಮೂಹಿಕ ಜವಾಬ್ದಾರಿ.

ರಾಜ್ಯಾದ್ಯಂತ ಧ್ವನಿಸುತ್ತಿರುವ “ ಕೊಂದವರು ಯಾರು?” ಪ್ರಶ್ನೆ ವ್ಯಕ್ತಿ ಕೇಂದ್ರಿತವಲ್ಲ ಅಥವಾ ಸಮುದಾಯ ಕೇಂದ್ರಿತವಲ್ಲ. ಅದು ಮಹಿಳೆಯ ಘನತೆ, ಗೌರವ, ಸ್ವಾಭಿಮಾನ, ಬದುಕುವ ಹಕ್ಕು ಮತ್ತು ಜೈವಿಕ ಸ್ವಾಯತ್ತತೆಯ ಪ್ರಶ್ನೆ. ತಮ್ಮ ಆಳವಾದ ನೋವಿಗೆ ಸ್ಪಂದಿಸದ, ವ್ರಣವಾಗುತ್ತಿರುವ ಗಾಯಗಳಿಗೆ ಮುಲಾಮು ಹಚ್ಚದ, ಅಸಹಜ ಸಾವುಗಳಿಗೆ ಮರುಗದ, ತಮ್ಮ ಮೇಲಿನ ದೌರ್ಜನ್ಯಗಳ ಕಡೆ ಕಣ್ಣೆತ್ತಿಯೂ ನೋಡದ ಒಂದು ಸಮಾಜದ ಮುಂದೆ ಈ ಪ್ರಶ್ನೆ ನಿಂತಿದೆ. ಉತ್ತರಿಸುವ ನೈತಿಕ ಜವಾಬ್ದಾರಿ ಯಾರದು ? ಈ ಪ್ರಶ್ನೆ ಜಿಜ್ಞಾಸೆಯಾಗಿ ಉಳಿಯದೆ ಉತ್ತರ ಪಡೆಯುವಂತಾದರೆ ನಮ್ಮ ಆಧುನಿಕತೆ, ನಾಗರಿಕತೆ ಮತ್ತು ಸಾಂಸ್ಕೃತಿಕ ಏಳಿಗೆ ಸಾರ್ಥಕತೆ ಪಡೆಯುತ್ತದೆ. ಈ ದೃಷ್ಟಿಯಿಂದಲೇ ಬೆಳ್ತಂಗಡಿಯತ್ತ ನೋಡೋಣ. ನಾವು ಎತ್ತ ಸಾಗುತ್ತಿದ್ದೇವೆ ಎಂಬ ಪ್ರಶ್ನೆಗೆ ಅಲ್ಲಿ ಉತ್ತರ ದೊರೆಯಲಿದೆ.






