ಬೆಂಗಳೂರು : ದೇವನಹಳ್ಳಿ: ರೈತರಿಂದ ಭೂಮಿ ಪಡೆದು ನ್ಯಾಯಯುತ ಪರಿಹಾರ ನೀಡಬೇಕಾದ ಕೆಐಎಡಿಬಿ ವ್ಯವಸ್ಥೆಯಲ್ಲೇ ಇದೀಗ ಹಲವು ಗಂಭೀರ ಆರೋಪಗಳು ಕೇಳಿಬರುತ್ತಿವೆ. ದೇವನಹಳ್ಳಿ ವಿಶೇಷ ಭೂಸ್ವಾಧೀನ ಕಚೇರಿಯ ಕಾರ್ಯವೈಖರಿ ಹಾಗೂ ಅಧಿಕಾರಿಗಳ ಪಾತ್ರದ ಬಗ್ಗೆ ರೈತರು ಮತ್ತು ಸಾರ್ವಜನಿಕರಲ್ಲಿ ಹಲವು ಪ್ರಶ್ನೆಗಳು ಮೂಡಿವೆ.

ವಿಶೇಷ ಭೂಸ್ವಾಧೀನಾಧಿಕಾರಿ ಮಮತಾ ಅವರ ಮೇಲ್ವಿಚಾರಣೆಯಲ್ಲಿರುವ ಕಚೇರಿಯಲ್ಲಿ ವಾರಸುದಾರರಿಲ್ಲದ ಜಮೀನಿಗೆ 8.54 ಕೋಟಿ ಪರಿಹಾರ ಹಣ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಈ ಪ್ರಕರಣದ ಸಂಪೂರ್ಣ ದಾಖಲೆಗಳನ್ನು ಪರಿಶೀಲಿಸಿ ತನಿಖೆ ನಡೆಸಬೇಕಿದೆ. ಪರಿಹಾರ ಬಿಡುಗಡೆಗೆ ಮುನ್ನ ಜಮೀನಿನ ಮಾಲೀಕತ್ವ ಮತ್ತು ವಾರಸುದಾರಿಕೆ ಪರಿಶೀಲನೆ ನಡೆದಿತ್ತೇ? ಕಡತವನ್ನು ಯಾರು ಪರಿಶೀಲಿಸಿದರು? ಅಂತಿಮವಾಗಿ ಹಣ ಬಿಡುಗಡೆಗೆ ಯಾರು ಜವಾಬ್ದಾರರು? ಎಂಬ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ಬೇಕಾಗಿದೆ.
ಮಮತಾ ಅವರ ಅಧೀನದಲ್ಲಿ ಕಾರ್ಯನಿರ್ವಹಿಸುವ ಕೆಐಎಡಿಬಿ ಮ್ಯಾನೇಜರ್ ಮಂಜುನಾಥ್ ಪಾತ್ರದ ಬಗ್ಗೆಯೂ ಹಲವು ಆರೋಪಗಳು ಕೇಳಿಬರುತ್ತಿವೆ. ಭೂಸ್ವಾಧೀನ ಕಡತಗಳ ವಿಲೇವಾರಿ ಹಾಗೂ ಪರಿಹಾರ ಪ್ರಕ್ರಿಯೆಯಲ್ಲಿ ಮಂಜುನಾಥ್ ಅವರ ಪ್ರಭಾವ ಹೆಚ್ಚಾಗಿದೆ ಎಂಬ ಮಾತುಗಳು ರೈತರ ವಲಯದಲ್ಲಿ ಕೇಳಿಬರುತ್ತಿವೆ. ಮ್ಯಾನೇಜರ್ ಮಂಜುನಾಥ್ ಅವರ ‘ಒಕೆ’ ಇಲ್ಲದೆ ಕೆಲವು ಕಡತಗಳು ಮುಂದೆ ಸಾಗುವುದಿಲ್ಲವೇ? ಎಂಬ ಪ್ರಶ್ನೆಯೂ ಇದೀಗ ಎದುರಾಗಿದೆ.
ಇದನ್ನೂ ಓದಿ : ನಾ.ದಿವಾಕರ ಕಂಡಂತೆ ರಂಗ ಸಂತೆಯಲ್ಲಿ ಕಬೀರನ ಸಾಮರಸ್ಯ ಧ್ವನಿ..!
ಇದರ ಜೊತೆಗೆ, ಕೆಲವು ಕಡತಗಳ ಕೆಲಸ ಮಧ್ಯವರ್ತಿಗಳ ಜೊತೆ ಮ್ಯಾನೇಜರ್ ಮಂಜುನಾಥ್ ಶಾಮೀಲಾಗಿದ್ದಾರೆ ಎಂಬ ಆರೋಪಗಳೂ ಕೇಳಿಬರುತ್ತಿವೆ. ರೈತರು ತಮ್ಮದೇ ಭೂಮಿಯ ಪರಿಹಾರ ಪಡೆಯಲು ಮಧ್ಯವರ್ತಿಗಳ ಮೊರೆ ಹೋಗಬೇಕಾದ ಪರಿಸ್ಥಿತಿ ಇದ್ದರೆ, ಅದು ಆಡಳಿತ ವ್ಯವಸ್ಥೆಯ ಗಂಭೀರ ವೈಫಲ್ಯವಲ್ಲವೇ?
ಇನ್ನು ಮಮತಾ ಅವರ ಪಿಎ ಪಾವನಿ ಅವರ ಕಾರ್ಯವೈಖರಿಯ ಬಗ್ಗೆಯೂ ದೂರುಗಳು ಕೇಳಿಬರುತ್ತಿವೆ. ಪಾವನಿ ಅವರು ಗುತ್ತಿಗೆ ಆಧಾರದ ನೌಕರಿಯಾಗಿದ್ದು, ಕಚೇರಿಗೆ ಭೇಟಿ ನೀಡುವ ರೈತರೊಂದಿಗೆ ಗೌರವಯುತವಾಗಿ ನಡೆದುಕೊಳ್ಳದೆ ಏಕವಚನದಲ್ಲಿ ಮಾತನಾಡುತ್ತಾರೆ ಮತ್ತು ಶಿಷ್ಟಾಚಾರ ಪಾಲಿಸುವುದಿಲ್ಲ ಎಂಬ ಆರೋಪವಿದೆ.

ಒಟ್ಟಿನಲ್ಲಿ ಮಮತಾ ಮತ್ತು ಅವರ ಸಿಬ್ಬಂದಿ ಕಾರ್ಯವೈಖರಿ, ಜವಾಬ್ದಾರಿ ಮತ್ತು ಕಚೇರಿಯಲ್ಲಿನ ನಿರ್ಧಾರ ಪ್ರಕ್ರಿಯೆಯನ್ನು ಸಮಗ್ರವಾಗಿ ಪರಿಶೀಲಿಸುವ ಅಗತ್ಯವಿದೆ. ಇಷ್ಟೆಲ್ಲಾ ಆರೋಪಗಳು ಕೇಳಿ ಬರುತಿದ್ದರೂ ಸಹ ಸಚಿವರಾದ ಎಂ. ಬಿ. ಪಾಟೀಲ್ ಮತ್ತು ಹಿರಿಯ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ಸುಮ್ಮನೆ ಕುಳಿತಿರಿವುದು ಅನುಮಾನಾಸ್ಪದ ಸಂಗತಿ. ಮುಂದಿನ ದಿನಗಳಲ್ಲಿ ಇನ್ನಷ್ಟು ದಾಖಲೆಗಳೊಂದಿಗೆ ಇವರ ಇನ್ನು ಹಲವು ಅಕರ್ಮಗಳನ್ನು ಸರ್ಕಾರದ ಮುಂದಿಟ್ಟು ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಂಡು ರೈತರಿಗೆ ಸೂಕ್ತ ಪರಿಹಾರ ಸಿಗುವಂತಾಗಲಿ.






