ಕನ್ನಡ ರಂಗಭೂಮಿಗೆ ವಿಶೇಷ ಮೆರುಗು ತರುವ ಕಲೋಪಾಸಕರಲ್ಲಿ ಎದ್ದು ಕಾಣುವ ಕಲಾವಿದ
ನಾ ದಿವಾಕರ
“ ಕಲೆ ಎನ್ನುವುದು ವೈಯುಕ್ತಿಕವಾದುದು ಎನ್ನುವುದರ ಜೊತೆಗೆ ಅದು ತನ್ನ ಕಲಾತ್ಮಕ ಅಭಿವ್ಯಕ್ತಿ , ಅನನ್ಯತೆಯನ್ನು ನಿರಾಕರಿಸದೆ ಸ್ಫುಟಗೊಳಿಸುತ್ತಾ, ಅನ್ಯತೆ ಮತ್ತು ಅಪರಿಚತತೆಗಳನ್ನು ಸ್ಪಷ್ಟಗೊಳಿಸುತ್ತಾ, ಜನರನ್ನು ಪರಸ್ಪರ ಒಂದುಗೂಡಿಸಬಲ್ಲ ಶಕ್ತಿಯಾಗಿದೆ, ಯಾರು ಕಲೆಯ ಮೂಲಕ ಕಾಯಕ ಮಾಡುತ್ತಾರೋ ಅವರು ಶಾಂತಿಯ ಸಾರ್ವತ್ರಿಕ ಪ್ರತಿಪಾದಕರಾಗುತ್ತಾರೆ,,,,,, ” ಇದು ಸಾಹಿತ್ಯ ನೊಬೆಲ್ ಪ್ರಶಸ್ತಿ ವಿಜೇತ ನಾರ್ವೆ ದೇಶದ ನಾಟಕಕಾರ ಜಾನ್ ಪೋಸ್ಸೇ ಅವರ ರಂಗಭೂಮಿ ದಿನದ ಸಂದೇಶ. ಕಲೆ, ಸಾಹಿತ್ಯ, ಸಂಸ್ಕೃತಿ ಎಲ್ಲವೂ ಸಹ ವ್ಯಾವಹಾರಿಕವಾಗುತ್ತಾ, ವಾಣಿಜ್ಯೀಕರಣ ಪ್ರಕ್ರಿಯೆಯಲ್ಲಿ ಕಾರ್ಪೋರೇಟೀಕರಣದತ್ತ ಸಾಗುತ್ತಿರುವ ವರ್ತಮಾನದ ಸಂದಿಗ್ಧತೆಯ ನಡುವೆ ಇದಕ್ಕಿಂತಲೂ ಉತ್ತಮ ಸಂದೇಶವನ್ನು ನಿರೀಕ್ಷಿಸಲಾಗುವುದಿಲ್ಲ. ಜನಾಂಗ, ಜಾತಿ, ಮತ, ಧರ್ಮ, ಭಾಷೆ, ಪ್ರದೇಶ ಇನ್ನಿತರ ಯಾವುದೇ ಗಡಿಗಳನ್ನು ದಾಟಿ ಮಾನವ ಸಮಾಜದ ಅಂತರಂಗವನ್ನು ಹೊಕ್ಕು, ಅಲ್ಲಿರಬಹುದಾದ ಸೂಕ್ಷ್ಮ ಸಂವೇದನೆಗಳ ನಾಡಿಯ ಮಿಡಿತವನ್ನು ಗ್ರಹಿಸಬಲ್ಲ ಶಕ್ತಿ ಇರುವುದು ಕಲೆ ಎಂಬ ಒಂದು ಅಭಿವ್ಯಕ್ತಿ ಪ್ರಕಾರಕ್ಕೆ.

ಈ ಸಾರ್ವತ್ರಿಕ ಸತ್ಯವನ್ನು ಮನಗಾಣುತ್ತಲೇ, ಕಲೆಯ ವಿಭಿನ್ನ ಮಗ್ಗುಲುಗಳನ್ನು, ಪ್ರಕಾರಗಳನ್ನು ವಿಂಗಡಿಸುತ್ತಾ ಹೋದಾಗ ಅಲ್ಲಿ ನಮಗೆ ಶ್ರವ್ಯ ಕಲೆ, ದೃಶ್ಯ ಕಲೆ ಎಂಬ ಎರಡು ಉಪ ಪ್ರಕಾರಗಳು ಕಾಣುತ್ತವೆ. ಸಂಗೀತ, ಪಾರಂಪರಿಕ ಹರಿಕಥೆ ಇನ್ನಿತರ ಮಾದರಿಗಳು ಶ್ರವ್ಯ ಕಲೆಯಾದರೆ, ನೃತ್ಯ, ನಾಟಕ, ಯಕ್ಷಗಾನ, ಬಯಲಾಟ, ಆಧುನಿಕ ಯುಗದ ಚಲನಚಿತ್ರ ಇವೆಲ್ಲವೂ ದೃಶ್ಯಕಲೆಯಾಗಿ ಕಾಣುತ್ತವೆ. ದೃಶ್ಯ ಅಥವಾ ಪ್ರದರ್ಶನ ಕಲೆಗಳ ಪೈಕಿ ಅತ್ಯಂತ ಪ್ರಭಾವಶಾಲಿಯಾಗಿಯೂ , ಸಮಾಜದ ತಳಮಟ್ಟವನ್ನೂ ಸ್ಪರ್ಶಿಸಿ ಅಲ್ಲಿರಬಹುದಾದ ಸಾಮಾನ್ಯ ಜನರ ತವಕ ತಲ್ಲಣಗಳಿಗೆ ಸ್ಪಂದಿಸಿ ಇನ್ನೂ ಆಳದಲ್ಲಿ ಗೋಚರಿಸಬಹುದಾದ ಜಟಿಲ ಸಿಕ್ಕುಗಳಿಗೆ ಸಾಂತ್ವನ ಪರಿಹಾರಗಳನ್ನು ನೀಡುವ ಶಕ್ತಿಯಾಗಿಯೂ ಕಾಣುವುದು ರಂಗಭೂಮಿ ಅಥವಾ ನಾಟಕ ಕಲೆ. ಏಕ ವ್ಯಕ್ತಿಯಿಂದ ಹತ್ತಾರು ಕಲಾವಿದರನ್ನು ಒಳಗೊಳ್ಳಬಹುದಾದ ರಂಗಭೂಮಿಯ ಅಂತಃಸತ್ವ ಮತ್ತು ಧಾರಣಾ ಶಕ್ತಿ ಇರುವುದು, ಅಭಿವ್ಯಕ್ತಿಯಲ್ಲಿ ಮತ್ತು ಸಂದೇಶಾತ್ಮಕ ಸಂವಹನದಲ್ಲಿ.
ಸಂವಹನ ಕಲೆಯ ಭಿನ್ನ ಆಯಾಮ

ಸಂವಹನ ಎಂದಾಕ್ಷಣ ನಮಗೆ ಸಾಮಾನ್ಯವಾಗಿ ಮನಸ್ಸಿಗೆ ಹೊಳೆಯುವುದು ಸಂಭಾಷಣೆ ಅಥವಾ ಸಂವಾದ. ನಾಟಕ ಕಲೆಯಲ್ಲಿ ಕಲಾವಿದರೇ ಸಂಭಾಷಣೆಯ ಮೂಲಕ ಅಭಿವ್ಯಕ್ತಿಸುವುದನ್ನು ನೃತ್ಯ ಕಲೆಯಲ್ಲಿ ಹಿಂಬದಿಯ ಗಾಯನ ಅಥವಾ ವಾದ್ಯ ಸಂಗೀತ ಮಾಡುತ್ತದೆ. ಆಧುನಿಕ ಚಲನ ಚಿತ್ರರಂಗ ಮೂಕಿ ಯುಗದಿಂದ ಟಾಕಿ ಯುಗಕ್ಕೆ ಮನ್ವಂತರ ಹೊಂದಿದ ಮೇಲೆ ಉಂಟಾದಂತಹ ಬದಲಾವಣೆಗಳು ಕ್ರಾಂತಿಕಾರಿ ಸ್ವರೂಪದ್ದು. ಸಿನೆಮಾ ಎಂಬ ಮನರಂಜನಾ ಮಾಧ್ಯಮಗಳು ನಾಗರಿಕ ಜಗತ್ತನ್ನು ಪ್ರವೇಶಿಸಿದ ಹಲವಾರು ದಶಕಗಳ ಮುಂಚೆಯೇ ರಂಗಭೂಮಿ ಎಂಬ ಒಂದು ಪ್ರದರ್ಶನ ಕಲೆ ಸಂಭಾಷಣೆ, ಸಂವಾದ ಮತ್ತು ಹಾಡುಗಾರಿಕೆಯ ಮುಖಾಂತರ ಸಮಾಜದ ತಳಮಟ್ಟವನ್ನೂ ತಲುಪಿತ್ತು. ಭಾರತೀಯ ಚಿತ್ರರಂಗ ಇದೇ ಪ್ರಯೋಗದ ವಿಸ್ತರಣೆಯಾಗಿ ರೂಪುಗೊಂಡು ತದನಂತರ ವಿಪ್ಲವಕಾರಿ ಬದಲಾವಣೆಗಳನ್ನು ಅಳವಡಿಸಿರುವುದು ವಾಸ್ತವ.
ಈ ಚಾರಿತ್ರಿಕ ಹಿನ್ನೆಲೆಯೊಂದಿಗೆ ರಂಗಭೂಮಿಯಲ್ಲಿ ವಿಶಿಷ್ಟ ಕಲೆಯಾಗಿ ರೂಪುಗೊಂಡಿರುವ ಮೂಕಾಭಿನಯ ಅಥವಾ ಮೈಮ್ ರಂಗಕಲೆ ಮನಸ್ಸಿಗೆ ಹೊಳೆದ ಕೂಡಲೇ ನೆನಪಾಗುವುದು ಮೈಸೂರಿನ ಅಪ್ರತಿಮ ಕಲಾವಿದ ಮೈಮ್ ರಮೇಶ್. ತಮ್ಮ ಮೂಲ ನಾಮಕ್ಕೆ ಕಲೆಯ ಒಂದು ಪ್ರಕಾರವನ್ನೇ ಅಂಟಿಸಿಕೊಳ್ಳುವುದು ಅವರ ಆಯ್ಕೆಯಲ್ಲ ಅದು ರಂಗಾಸಕ್ತರು, ವಿಮರ್ಶಕರು, ಪ್ರೇಕ್ಷಕರು ಕಲ್ಪಿಸಿರುವ ಒಂದು ಅವಕಾಶ ಮತ್ತು ಹಿರಿಮೆ. ಈ ಮೈಮ್ ನಟನೆಯ ಮೂಲವನ್ನು ಪ್ರಾಚೀನ ಗ್ರೀಸ್‌ನಲ್ಲಿ ( ಕ್ರಿ ಪೂ 4-5ನೆಯ ಶತಮಾನದಲ್ಲಿ ) ಗುರುತಿಸಬಹುದು. ರೋಮ್ ಮತ್ತು ಇಟಲಿಯ ಕಲಾವಿದರಿಂದ ವಿಕಸನಗೊಂಡ ಈ ವಾಕ್ ರಹಿತ, ಸನ್ನೆ ಮತ್ತು ಅಭಿವ್ಯಕ್ತಿಯ ಕಲೆಗೆ ಔಪಚಾರಿಕವಾಗಿ ಸಾರ್ವತ್ರಿಕತೆ ದೊರೆತಿದ್ದು 19ನೆ ಶತಮಾನದ ಫ್ರಾನ್ಸ್‌ನಲ್ಲಿ.

ಬಾಲ್ಯದಲ್ಲೇ ಚಿಗುರಿದ ಪ್ರತಿಭೆ
ಮೈಸೂರಿನ ಅಥವಾ ಕರ್ನಾಟಕದ ರಂಗಭೂಮಿಯ ಮಟ್ಟಿಗೆ ಈ ಮೈಮ್ ಕಲೆ ನಮ್ಮ ನಡುವಿನ ಆತ್ಮೀಯ ಕಲಾವಿದ ಮೈಮ್ ರಮೇಶ್ ಅವರೊಂದಿಗೇ ಗುರುತಿಸಿಕೊಳ್ಳುತ್ತದೆ. ಕಲೆ ಎನ್ನುವುದು ವಂಶವಾಹಿಯಾಗಿ ಬರುತ್ತದೆ ಅಥವಾ ತಲೆಮಾರುಗಳ ಮೂಲಕ ದಾಟಿ ಒಬ್ಬರೊಳಗೆ ತನ್ನ ಅಸ್ತಿತ್ವ ಕಂಡುಕೊಳ್ಳುತ್ತದೆ ಎಂಬ ಪಾರಂಪರಿಕ/ಸಾಂಪ್ರದಾಯಿಕ ತಿಳುವಳಿಕೆಯ ನಡುವೆ, ಮೈಮ್ ರಮೇಶ್ ಅವರತ್ತ ಕಣ್ಣು ಹೊರಳಿದಾಗ, 1957ರಲ್ಲಿ ಜಾರಪ್ಪ ಪೂಜಾರಿ-ಲಲಿತ ಎಂಬ ದಂಪತಿಗಳಿಗೆ, ಮಂಗಳೂರಿನಲ್ಲಿ ಜನಿಸಿದ ಈ ಕಲಾವಿದನಿಗೆ ಚಿಕ್ಕ ವಯಸ್ಸಿನಲ್ಲೇ ಆಸಕ್ತಿ ಮೂಡಿ ನೋಡಲಾರಂಭಿಸಿದ ಕರ್ನಾಟಕದ ಪಾರಂಪರಿಕ ಕಲೆ ಯಕ್ಷಗಾನವೇ, ಏಕಲವ್ಯನ ಪಾಲಿಗೆ ದ್ರೋಣಾಚಾರ್ಯರ ಹಾಗೆ , ನಾಟಕ ಕಲೆಯನ್ನು ಕಲಿಸುವ ಶಾಲೆಯಾಗಿ ಪರಿಣಮಿಸಿತ್ತು. ಯಕ್ಷಗಾನವನ್ನು ನೋಡುತ್ತಾ ರಮೇಶ್ ಅವರಲ್ಲಿ ಮೂಡಿದ ಕಲಾಸಕ್ತಿ ಅವರನ್ನು ಕಲೋಪಾಸಕರನ್ನಾಗಿ ಮಾಡಿದ್ದು ತುಳು ನಾಟಕಗಳು.
ಚಿಕ್ಕಂದಿನಲ್ಲೇ ತುಳು ರಂಗಭೂಮಿಯನ್ನು ಪ್ರವೇಶಿಸಿದ ರಮೇಶ್ ತದನಂತರ ಕೆಲವು ತುಳು ನಾಟಕಗಳ ನಿರ್ದೇಶನವನ್ನೂ ಮಾಡಿದ್ದಾರೆ. ಒಳಹೊಕ್ಕ ಮೇಲೆ ಹಿಂತಿರುಗಿ ನೋಡದ ಹಾಗೆ ಆಯಸ್ಕಾಂತೀಯ ಶಕ್ತಿಯನ್ನು ಹೊಂದಿರುವ ರಂಗಕಲೆ ಇವರನ್ನು ಪ್ರೌಢಾವಸ್ಥೆಯ ವೇಳೆಗೇ ರಂಗಭೂಮಿಯನ್ನೇ ತಮ್ಮ ವೃತ್ತಿ, ಪ್ರವೃತ್ತಿ ಮತ್ತು ಜೀವನ ಮಾರ್ಗವನ್ನು ಮಾಡಿಕೊಳ್ಳುವಂತೆ ಮಾಡಿದ್ದು, 1975ರಲ್ಲಿ ಜನಸಾಮಾನ್ಯರ ನಡುವಿನಿಂದಲೇ ಉಗಮಿಸಿ, ಜನಮುಖಿಯಾಗಿ, ಸಮಾಜದ ಸೂಕ್ಷ್ಮ ಸಂವೇದನೆಗಳಿಗೆ ಥಟ್ಟನೆ ಸ್ಪಂದಿಸುವಂತಹ ಒಂದು ಸೈದ್ಧಾಂತಿಕ ವೇದಿಕೆಯನ್ನು ಸೃಷ್ಟಿಸಿದ ʼ ಸಮುದಾಯ ರಂಗ ತಂಡ ʼ . ಉಗಮ ನಗರ ಕೇಂದ್ರಿತವಾದರೂ ಸಮುದಾಯದ ಬೇರುಗಳಿರುವುದು ಗ್ರಾಮೀಣ ಸಮಾಜದಲ್ಲಿ ಮತ್ತು ಅಲ್ಲಿನ ಜನಸಂಸ್ಕೃತಿಯ ನೆಲೆಯಲ್ಲಿ. ಈ ಜನಾಂದೋಲನ ರೂಪದ ರಂಗ ಪ್ರಯೋಗಗಳ ಜಗತ್ತಿಗೆ ಪ್ರವೇಶಿಸಿದ ಮೇಲೆ, ಮೈಮ್ ರಮೇಶ್ ವೃತ್ತಿಯ ಏಣಿಯಲ್ಲಿ ಏರುತ್ತಲೇ ಇರುವುದು ಅವರ ಕಲಾರಾಧನೆಯ ಅಂತಃಸತ್ವಕ್ಕೆ ಸಾಕ್ಷಿ.

ರಂಗಭೂಮಿಯ ಹೆಜ್ಜೆಗುರುತುಗಳು
ಹವ್ಯಾಸಿ ರಂಗಭೂಮಿಯಲ್ಲಿ ಕಾಲೂರಿದರೂ ಅದರಿಂದಾಚೆಗೂ ಸಹ ರಂಗಪ್ರಯೋಗಗಳಿಗೆ ಸದಾ ತೆರೆದ ಮನಸ್ಸನ್ನು ಹೊಂದಿದ್ದ ಮೈಮ್ ರಮೇಶ್ ಯಕ್ಷಗಾನವನ್ನೂ ರೂಢಿಸಿಕೊಂಡಿದ್ದು ಕದ್ರಿ ವಿಷ್ಣು ಎಂಬ ವಿದ್ವಾಂಸರ ಪರಿಶ್ರಮದಿಂದ ಕೆಲವು ಯಕ್ಷಗಾನಗಳಲ್ಲಿ ನಟಿಸಿದ ಮೇಲೆ ಅವರಲ್ಲಿ ರಂಗಾಸಕ್ತಿಯ ವೈವಿಧ್ಯಮಯ ರೆಕ್ಕೆಗಳು ಬಿಚ್ಚಿಕೊಳ್ಳಲಾರಂಭಿಸಿದ್ದು ಸಹಜ ಪ್ರಕ್ರಿಯೆಯೇ ಎನಿಸುತ್ತದೆ. ಏಕೆಂದರೆ ಕಲಾತ್ಮಕ ದೃಷ್ಟಿಯಿಂದ ಯಕ್ಷಗಾನ ಇಂತಹ ಪ್ರೇರಕ ಶಕ್ತಿಯನ್ನು ಹೊಂದಿದೆ. ಹಾವ ಭಾವ, ದೇಹಭಾಷೆ, ಸಂವಹನ ಶೈಲಿ, ನೃತ್ಯ ನಡಿಗೆ ಆಂಗಿಕ ಅಭಿನಯ ಮತ್ತು ನವರಸ ಭಾವಗಳನ್ನು ಒಮ್ಮೆಲೆ ಕಲಿಸುವ ಈ ಕಲೆ ಮೈಮ್ ರಮೇಶ್ ಅವರನ್ನು ಹವ್ಯಾಸಿ ರಂಗಭೂಮಿಯ ಕಡೆಗೆ ಸಹಜವಾಗಿ ಸೆಳೆದಿತ್ತು. ಈ ಹಂತದಲ್ಲಿ ಮೂರು ವರ್ಷಗಳ ಕಾಲ ಬಾದಲ್ ಸರ್ಕಾರ ಅವರ ಗರಡಿಯಲ್ಲಿ ಪಳಗಿದ ಮೇಲೆ ರಮೇಶ್ ಆಯ್ಕೆ ಮಾಡಿಕೊಂಡಿದ್ದು ಮೂಕಾಭಿನಯದ ವಿಶಿಷ್ಟ ಕಲೆ ಅಥವಾ ಮೈಮ್ ಕಲೆ. ಇದರ ಹೊರತಾಗಿ ಯು ಎಸ್ ಕೃಷ್ಣರಾವ್ ಅವರಲ್ಲಿ ಎಂಟು ವರ್ಷಗಳ ಕಾಲ (1980-87) ಭರತನಾಟ್ಯವನ್ನೂ ಕಲಿತಿದ್ದು, ರಮೇಶ್ ಅವರೊಳಗೆ ಸುಪ್ತವಾಗಿದ್ದ ಕಲಾವಿದ ಕನ್ನಡ ರಂಗಭೂಮಿಯನ್ನು ಶ್ರೀಮಂತಗೊಳಿಸಿದ್ದು ವಾಸ್ತವ.
ಈ ನಡುವೆಯೇ ಕಳೆದ ನಾಲ್ಕು ದಶಕಗಳಿಂದ ತಮ್ಮ ವಿಶೇಷ ಮೈಮ್ ಕಲೆಯನ್ನು ರಂಗಪ್ರಯೋಗಗಳ ಮೂಲಕ ಬಿತ್ತರಿಸುತ್ತಾ ನಡೆದಿರುವ ರಮೇಶ್ 1989ರಿಂದಲೂ ಮೈಸೂರು ರಂಗಾಯಣವನ್ನು ತಮ್ಮ ವೃತ್ತಿಯ ಕರ್ಮಭೂಮಿಯಾಗಿ ಆಯ್ದುಕೊಂಡಿದ್ದಾರೆ.ಈ 49 ವರ್ಷಗಳ ರಂಗಸೇವೆಯಲ್ಲಿ ರಮೇಶ್ ಕೇವಲ ನಟರಾಗಿ ಕಾಲ ಕಳೆಯಲಿಲ್ಲ. ಸಂಘಟಕರಾಗಿಯೂ, ನಿರ್ದೇಶಕರಾಗಿಯೂ, ತರಬೇತುದಾರರಾಗಿಯೂ, ಸಮಾಜಮುಖಿ ಕಾರ್ಯಕರ್ತರಾಗಿಯೂ ಕ್ರಿಯಾಶೀಲರಾಗಿದ್ದಾರೆ. ಅರಸೀಕೆರೆ, ಮಂಗಳೂರು, ಕಾಸರಗೋಡು, ಕುಂಬ್ಳೆ ಮತ್ತು ಮೈಸೂರಿನಲ್ಲಿ ಅಭಿನಯ, ಅಭಿವ್ಯಕ್ತ, ಆಯನ, ಗಡಿನಾಡು ಕಲಾವಿದರು, ಪ್ರಕೃತಿ, ಟಚ್ ಅಂಡ್ ಫ್ಲೈ ಹೆಸರಿನ ಹವ್ಯಾಸಿ ತಂಡಗಳನ್ನು ಕಟ್ಟಿ ಬೆಳೆಸಿದ್ದು ರಮೇಶ್ ಅವರ ಹಿರಿಮೆ. ಇವೆಲ್ಲವನ್ನೂ ಮೀರಿ ಮೈಸೂರಿನಲ್ಲಿ ರಮೇಶ್ ಆರಂಭಿಸಿದ ಜಿ.ಪಿ.ಐ.ಈ.ಅರ್ ರಂಗತಂಡ ಈಗ ಮೂರು ದಶಕಗಳನ್ನು ಪೂರೈಸಿ ಇಂದಿಗೂ ತನ್ನ ಕ್ರಿಯಾಶೀಲತೆ ಮತ್ತು ಪ್ರಯೋಗಶೀಲತೆಯನ್ನು ಮುಂದುವರೆಸಿದೆ.

ಜಿ.ಪಿ.ಐ.ಈ.ಅರ್ ತಂಡದ ನಡಿಗೆ
ಮೂರು ದಶಕಗಳ ಹಿಂದೆ ರಮೇಶ್ ಸ್ಥಾಪಿಸಿದ ಈ ತಂಡದ ಉಗಮವಾದದ್ದು, ಬಿ.ವಿ. ಕಾರಂತರ ಮಾರ್ಗದರ್ಶನದಲ್ಲಿ ಮೈಸೂರಿನಲ್ಲಿ ಸ್ಥಾಪನೆಯಾದ ರಂಗಾಯಣದ ಅಂಗಳದಲ್ಲಿ. ಅಂದರೆ ರಂಗಾಯಣದಲ್ಲಿ ಪ್ರತಿದಿನ ಮುಂಜಾನೆ 6 ರಿಂದ ರಾತ್ರಿ 10ರವರೆಗೆ ನಡೆಯುತ್ತಿದ್ದ ರಂಗ ತರಬೇತಿಯಲ್ಲಿ ಪಳಗಿದ ರಮೇಶ್ , ಮೂಲತ ಹಾರು ಹಕ್ಕಿಯ ಸ್ವಭಾವದವರು. ಇದು ಈಗಲೂ ಅವರೊಂದಿನ ಒಡನಾಟದಲ್ಲಿ ಗುರುತಿಸಬಹುದು. ಈ ಸ್ವಭಾವವೇ ಅವರಲ್ಲಿ ತನ್ನದೇ ಆದ ಒಂದು ರಂಗ ಸೇವೆಯ ಚೌಕಟ್ಟನ್ನು ರೂಪಿಸಿಕೊಳ್ಳುವ ವಾಂಛೆಯನ್ನು ಬೆಳೆಸಿದ್ದು ಎಂದರೆ ಅತಿಶಯೋಕ್ತಿಯಲ್ಲ. ಮೂರು ವರ್ಷಗಳ ಕಠಿಣ ತರಬೇತಿ ಕಳೆದು, ತದನಂತರ ಮುಂಜಾನೆ 10ರಿಂದ ಆರಂಭವಾಗತೊಡಗಿದಾಗ ಬೆಳಗಿನ ಸಮಯದಲ್ಲಿ ಕಾಲೇಜು ಯುವಕರ ನಡುವೆ ತಮ್ಮ ರಂಗಕಲೆಯನ್ನು ಪಸರಿಸಲು ಆರಂಭಿಸಿದ್ದು ಜಿ.ಪಿ.ಐ.ಈ.ಅರ್ ತಂಡದ ಉಗಮಕ್ಕೆ ಕಾರಣವಾಯಿತು.
ಈ ಸಂಸ್ಥೆಯ ಮೂರು ದಶಕಗಳ ಸಾಧನೆಯನ್ನು ನೆನೆಯುವ ಸ್ಮರಣ ಸಂಚಿಕೆಯಲ್ಲಿ ಒಂದೆಡೆ ರಮೇಶ್ “ ನನ್ನಪ್ಪ ಸತ್ತಮೇಲೆ ನನಗೆ ನನ್ನವರು ಯಾರೂ ಇರಲಿಲ್ಲ,,,, ” ಎಂದು ಬರೆಯುತ್ತಾರೆ. ಇದನ್ನು ಓದಿದಾಗ ಕರುಳು ಚುರುಕ್ ಎನ್ನದಿರುವುದಿಲ್ಲ. ಆದರೆ ʼ ನನ್ನವರಾರೂ ಇಲ್ಲ ʼ ಎಂಬ ಅನಾಥ ಭಾವನೆಯೇ ವ್ಯಕ್ತಿಯೊಳಗೆ ಕಲಾಸಕ್ತಿಯನ್ನು ಉದ್ಧೀಪನಗೊಳಿಸುವ ಮೂಲ ಶಕ್ತಿ ಎನ್ನುವುದನ್ನು ರಮೇಶ್ ಜಿ.ಪಿ.ಐ.ಈ.ಅರ್ ಸ್ಥಾಪಿಸುವ ಮೂಲಕ ನಿರೂಪಿಸಿದ್ದಾರೆ. ಸಮಾಜ ಪರಿವರ್ತನೆಯ ಶಕ್ತಿಯನ್ನು ತನ್ನ ಒಡಲಲ್ಲೇ ಇರಿಸಿಕೊಂಡಿರುವ ರಂಗಕಲೆಯನ್ನೇ ಬಳಸಿಕೊಂಡು, ಈ ಸತ್ವವನ್ನು ಸಾಕಾರಗೊಳಿಸಲು ಬೇಕಾದ ಅಂತರ್ ಶಕ್ತಿಯನ್ನು ವರ್ಧಿಸಿ, ಮುಂದುವರೆಸಲು ಶಕ್ತರಾದ ಯುವ ಪೀಳಿಗೆಯ ನಡುವೆ ರಂಗಕಲೆಯನ್ನು ರೂಢಿಸುವ ಒಂದು ಕಾಯಕವನ್ನು ರಮೇಶ್ ಜಿ.ಪಿ.ಐ.ಈ.ಅರ್ ಮೂಲಕ ಸಾರ್ಥಕಗೊಳಿಸುತ್ತಾ ಬಂದಿದ್ದಾರೆ. ಹಣಕಾಸು ಅಥವಾ ಆದಾಯದ ವ್ಯಾಮೋಹವಿಲ್ಲದೆ, ಸಾರ್ವಜನಿಕ ಸನ್ಮಾನ ಪ್ರಶಸ್ತಿ ಅಥವಾ ವಿಶಾಲ ಸಮಾಜದ ಔದಾರ್ಯಗಳ ಹಂಗಿಲ್ಲದೆ, ರಮೇಶ್ ಕಟ್ಟಿರುವ ಜಿ.ಪಿ.ಐ.ಈ.ಅರ್ ಒಂದು ಸ್ವಾಯತ್ತ, ಸ್ವತಂತ್ರ ಕಲಾ ಸಂಸ್ಥೆಯಾಗಿ ಕನ್ನಡ ರಂಗಭೂಮಿಯನ್ನು ಬೆಳೆಸುತ್ತಾ ಬಂದಿರುವುದು, ಅವರ ಕಲೋಪಾಸನೆಗೆ ಹಿಡಿದ ಕನ್ನಡಿ.

ಮೈಸೂರಿನಲ್ಲಿ ಪ್ರತಿವರ್ಷ ಬೇಸಿಗೆಯಲ್ಲಿ ನಡೆಯುವ ʼ ಚಿಣ್ಣರ ಮೇಳ ʼ ಚಿಗುರೊಡೆದದ್ದೂ ಇದೇ ಜಿ.ಪಿ.ಐ.ಈ.ಆರ್ ತಂಡದ ಕಲ್ಪನೆಯಲ್ಲಿ. ಮೊದಲ ಬಾರಿಗೆ 1995ರಲ್ಲಿ ಈ ತಂಡದಿಂದಲೇ ಆಯೋಜಿಸಲ್ಪಟ್ಟ ಚಿಣ್ಣರ ಮೇಳ ತದನಂತರದಲ್ಲಿ, 1997ರಿಂದ ರಂಗಾಯಣದಿಂದ ನಡೆಸಲ್ಪಡುತ್ತಿದೆ. ಮಕ್ಕಳಲ್ಲಿ ವಿಶೇಷ ಆಸಕ್ತಿ ಇರುವ ಮೈಮ್ ರಮೇಶ್ ಈ ಮೇಳದ ಮೂಲಕ ಎಳೆಯ ಮಕ್ಕಳಲ್ಲೇ ಕೂಡಿ ಆಡಿ ಬದುಕುವ ಒಂದು ಜೀವನ ಕಲೆಯನ್ನು ರೂಢಿಸುವ ಪ್ರಯತ್ನವನ್ನು ಮಾಡಿದ್ದರು. ಮೈಮ್ ಅವರ ಗರಡಿಯಲ್ಲಿ ಪಳಗಿರುವ ಹಲವಾರು ಕಲಾವಿದರು ಇಂದು ಟಿ ವಿ ಧಾರಾವಾಹಿಗಳಲ್ಲಿ, ಸಿನಿಮಾಗಳಲ್ಲಿ, ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಕೆಲವರು ಅತ್ಯುತಮ ಕಲಾವಿದರಾಗಿ ರೂಪುಗೊಂಡಿದ್ದಾರೆ. ತಾವು ಬೆಳೆಯುತ್ತಲೇ ತಮ್ಮೊಡನೆ ಸಮಾಜದ ಯುವ ತಲೆಮಾರನ್ನೂ ಬೆಳೆಸುವ ಔದಾತ್ಯವನ್ನು ಮೈಮ್ ರಮೇಶ್ ಆರಂಭದಿಂದಲೇ ರೂಢಿಸಿಕೊಂಡಿರುವುದು ಅವರ ವೈಶಿಷ್ಟ್ಯ .
ಅಭಿನಯ-ನಿರ್ದೇಶನದ ಹಾದಿಯಲ್ಲಿ
ರಂಗಾಯಣ ಪ್ರವೇಶಿಸುವ ಮುನ್ನವೇ, ಅಂದರೆ 1989ರವರೆಗೆ ರಮೇಶ್ ವೈವಿಧ್ಯಮಯ ನಾಟಕಗಲ್ಲಿ, ಪ್ರಸಿದ್ಧ ನಿರ್ದೇಶಕರ ನಡುವೆ ನಟಿಸಿರುವುದು ಅವರ ವೈವಿಧ್ಯಮಯ ಕಲಾಭಿವ್ಯಕ್ತಿಗೆ ಸಾಕ್ಷಿಯಾಗಿ ಕಾಣುತ್ತದೆ. ಪ್ರಸನ್ನ, ಸೇತುರಾಂ, ಶ್ರೀನಿವಾಸ ಪ್ರಭು ಮುಂತಾದವರ ನಿರ್ದೇಶನದಲ್ಲಿ ಒಟ್ಟು 14 ನಾಟಕಗಳಲ್ಲಿ ನಟಿಸಿದ್ದ ರಮೇಶ್ ತಮ್ಮ ಕಲಾಭಿವ್ಯಕ್ತಿಯನ್ನು ಗಾಂಧಿ, ಜೂಲಿಯಸ್ ಸೀಸರ್, ಬೇಲಿ ಮತ್ತು ಹೊಲ ಕತ್ತಲೆ ದಾರಿ ದೂರ ಮೊದಲಾದ ನಾಟಕಗಳಲ್ಲಿ ಪ್ರದರ್ಶಿಸಿದ್ದಾರೆ. 1989ರ ನಂತರದಲ್ಲಿ ರಂಗಾಯಣದಲ್ಲಿ ನಡೆದಿರುವ ಬಹುತೇಕ ನಾಟಕಗಳ ಒಂದು ಭಾಗವಾಗಿ ರಮೇಶ್ ಕಾಣಿಸಿಕೊಂಡಿದ್ದಾರೆ. ನಟನೆಯೊಂದಿಗೇ ನಿರ್ದೇಶನವನ್ನೂ ವೃತ್ತಿಯಾಗಿಸಿಕೊಂಡು, ರಂಗಸೇವೆ ಸಲ್ಲಿಸಿರುವ ರಮೇಶ್ ನಿರ್ದೇಶಿಸಿರುವ ನಾಟಕಗಳ ಸಂಖ್ಯೆ 56 ಮತ್ತು ತುಳು ನಾಟಕಗಳು 5.

ಇಷ್ಟೇ ಅಲ್ಲದೆ ದ. ರಾ.ಬೇಂದ್ರೆಯವರ ಕುಣಿಯೋಣ ಬಾರೆ ಮತ್ತು ಟಚ್ ಎಂಬ ನೃತ್ಯವನ್ನೂ ನಿರ್ದೇಶಿಸಿರುವ ರಮೇಶ್, ನಿರ್ದೇಶಿಸಿದ ಮಕ್ಕಳ ನಾಟಕಗಳ ಸಂಖ್ಯೆ 8. ಬೀದಿ ನಾಟಕಗಳು 9 ಮತ್ತು ಸ್ವತಃ ನಿರ್ದೇಶಿಸಿದ ಮೂಕಾಭಿನಯ ಪ್ರದರ್ಶನಗಳು 8. ಮಕ್ಕಳ ನಾಟಕಗಳ ಪೈಕಿ ಅಲಿಬಾಬ ಮತ್ತು ನಲವತ್ತು ಕಳ್ಳರು ಹಾಗೂ ಕಿಂದರಜೋಗಿ ಚಿರಸ್ಥಾಯಿಯಾಗಿ ರಂಗಾಸಕ್ತರ ಮನಸ್ಸಿನಲ್ಲಿ ಉಳಿಯುವಂತಹುದು. ಬೆಲ್ಚಿ, ನರಗುಂದ ಬಂಡಾಯ ಮೊದಲಾದ ಸಮಾಜಮುಖಿ ಧೋರಣೆಯ ಬೀದಿ ನಾಟಕಗಳನ್ನೂ ರಮೇಶ್ ನಿರ್ದೇಶಿಸಿದ್ದಾರೆ. ಐದು ನೂರಕ್ಕೂ ಹೆಚ್ಚು ಏಕವ್ಯಕ್ತಿ ಪ್ರದರ್ಶನಗಳನ್ನು ನೀಡಿರುವ ರಮೇಶ್ ರಾಜ್ಯದ ಹಲವಾರು ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಮೂಕಾಭಿನಯವನ್ನು ನಿರ್ದೇಶಿಸಿದ್ದಾರೆ. ಕೆರೆಗೆ ಹಾರ, ಪುಣ್ಯಕೋಟಿ, ಶೂದ್ರ ತಪಸ್ವಿ ಮುಂತಾದ ಹಲವು ನಾಟಕಗಳಿಗೆ ನೃತ್ಯ ನಿರ್ದೇಶನವನ್ನೂ ಮಾಡಿರುವುದು ರಮೇಶ್ ಅವರ ಕಲಾವೈವಿಧ್ಯತೆಗೆ ಸಾಕ್ಷಿಯಾಗಿ ನಿಂತಿವೆ.
ಪ್ರದರ್ಶನ ಕಲೆಯ ವಿಭಿನ್ನ ಆಯಾಮಗಳಲ್ಲೂ ಪರಿಣತಿ ಪಡೆದಿರುವ ರಮೇಶ್, ಯಕ್ಷಗಾನ, ಭರತನಾಟ್ಯ, ಕಂಸಾಳೆ, ವೀರಗಾಸೆ, ಕಥಕ್ಕಳಿ, ಭೂತ ನೃತ್ಯ ಮತ್ತು ಕೆಲವು ಪಾಶ್ಚಾತ್ಯ ನೃತ್ಯಗಳಲ್ಲೂ ಪರಿಣತಿ ಪಡೆದಿದ್ದಾರೆ. ರಂಗಭೂಮಿಯಲ್ಲಿ ರಂಗದ ಮೇಲಿನ ಕಲೆಯಷ್ಟೇ ಮುಖ್ಯವಾಗುವುದು ತೆರೆಯ ಹಿಂದಿನ ಪರಿಶ್ರಮ ಮತ್ತು ಕಲಾ ವಿನ್ಯಾಸ. ಮೈಮ್ ರಮೇಶ್ ಈ ಅಂಗಳದಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ. ಮುಖವಾಡ ತಯಾರಿಸುವುದು, ರಂಗವಿನ್ಯಾಸ, ಏರೋಬಿಕ್ಸ್, ವಸ್ತ್ರ ವಿನ್ಯಾಸ, ಕತ್ತಿವರಸೆ ಹೀಗೆ ವಿವಿಧ ಆಯಾಮಗಳಲ್ಲಿ ರಮೇಶ್ ತಮ್ಮ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದಾರೆ. ತಮ್ಮ ಈ ಸಾಧನೆಯ ಹಾದಿಯಲ್ಲಿ ಹಲವು ವಿದೇಶ ಪ್ರವಾಸಗಳನ್ನು ಕೈಗೊಂಡಿರುವ ರಮೇಶ್ ರಂಗಾಯಣದ ಜೊತೆ ಅಮೆರಿಕ, ಜರ್ಮನಿ, ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡಿನ ಲಂಡನ್‌ನಲ್ಲಿ ನಾಟಕ ಪ್ರದರ್ಶನ ನೀಡಿದ್ದಾರೆ. ಭಾರತೀಯ ರಂಗಭೂಮಿಯ ಹಲವು ಖ್ಯಾತನಾಮರೊಡನೆ ಕೆಲಸ ಮಾಡಿದ ಹಿರಿಮೆಗೂ ರಮೇಶ್ ಪಾತ್ರರಾಗಿದ್ದಾರೆ.

ಕಲೋಪಾಸಕನ ದೀರ್ಘ ಪಯಣ
ಈ ರಂಗ ಪಯಣದಲ್ಲಿ ಮೈಮ್ ರಮೇಶ್ ಒಬ್ಬ ವಿಶಿಷ್ಟ ಕಲಾವಿದನಾಗಿ, ವಿಭಿನ್ನ ಆಯಾಮಗಳ ಕಲೋಪಾಸಕನಾಗಿ ಕಾಣುವುದು ಸಹಜ ಎನಿಸುವಷ್ಟು ಮಟ್ಟಿಗೆ ಅವರ ಬದ್ಧತೆ ಮತ್ತು ರಂಗಾಸಕ್ತಿಯನ್ನು ಗುರುತಿಸಬಹುದು. ಮೈಸೂರು ರಂಗಾಯಣ ತನ್ನ ಮೌಲ್ಯಗಳನ್ನೇ ಕಳೆದುಕೊಂಡು, ಸಾಂಸ್ಕೃತಿಕ ರಾಜಕಾರಣದ ಆಡುಂಬೊಲವಾಗಿ ಕಾಣತೊಡಗಿದಾಗ, ರಮೇಶ್ ಅವರಲ್ಲಿದ್ದ ತೊಳಲಾಟ, ನೋವು, ಸಿಟ್ಟು ಮತ್ತು ಅಂತರ್ ವೇದನೆ, ರಂಗಾಯಣ ಉಳಿಸಿ ಹೋರಾಟದ ಸಂದರ್ಭದಲ್ಲಿ ಸ್ಪಟಿಕ ಸ್ಪಷ್ಟವಾಗಿ ಕಂಡಿತ್ತು. ಒಮ್ಮೆಲೆ ಆ ದುರ್ದಿನಗಳು ಕಳೆದು ರಂಗಾಯಣ ಪೀಡಮುಕ್ತವಾದಾಗ ಅವರು ಸಂಭ್ರಮಿಸಿದ ರೀತಿ, ಇತರರನ್ನೂ ಉತ್ತೇಜಿಸಿದ ರೀತಿ, ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ. ಇದು ಒಬ್ಬ ಕಲೋಪಾಸಕನ ಅಂತಃಶಕ್ತಿ ಮತ್ತು ಶ್ರದ್ಧೆಯ ಪ್ರತೀಕವಾಗಿ ನನಗಂತೂ ಕಂಡಿತ್ತು.
ಈ ವಿಶಿಷ್ಟ ಕಲಾವಿದನಿಗೆ ಮತ್ತು ಆತನ ಅಪ್ರತಿಮ ಪ್ರತಿಭೆಗೆ ಪ್ರಶಸ್ತಿ ಸಮ್ಮಾನಗಳು ಮಾನದಂಡವಾಗುವುದಿಲ್ಲ. ಎಷ್ಟು, ಯಾರಿಂದ ಪ್ರಶಸ್ತಿ ಬಂದಿದೆ ಎಂಬ ಮಾಪನವನ್ನು ಹಿಡಿದು ಮೈಮ್ ರಮೇಶ್ ಅವರ ಕಲಾಪ್ರತಿಭೆಯನ್ನು ನಿಷ್ಕರ್ಷೆ ಮಾಡಲೂ ಆಗುವುದಿಲ್ಲ. ಮಾಡಕೂಡದು ಸಹ. ಏಕೆಂದರೆ ಮೈಮ್ ರಮೇಶ್ ಮೈಮ್ ರಂಗಕಲೆಗೆ ಕನ್ನಡ ರಂಗಭೂಮಿಯಲ್ಲಿ ಒಂದು ಚಿರಸ್ಥಾಯಿ ಸ್ಥಾನಮಾನವನ್ನು ಕಲ್ಪಿಸಿಕೊಟ್ಟಿರುವ ಮೇರು ಪ್ರತಿಭೆ. ಮೈಮ್ ಮತ್ತು ರಮೇಶ್ ಇವರೆಡೂ ಪದಗಳನ್ನು ಬೇರ್ಪಡಿಸಲಾಗದಷ್ಟು ಪರಸ್ಪರ ಬೆರೆತುಹೋಗಿರುವುದೇ ಇದಕ್ಕೆ ಸಾಕ್ಷಿ. ರಮೇಶ್ ಪಡೆದಿರುವ ಜಾನಪದ ಪರಿಷತ್ ಪ್ರಶಸ್ತಿ, ನಾಟಕ ಅಕಾಡೆಮಿ ಪ್ರಶಸ್ತಿ, ಸಿಜಿಕೆ ರಂಗ ಪುರಸ್ಕಾರ, ಚಂದನ ವಾಹಿನಿಯ ಪ್ರಶಸ್ತಿಗಳು ಇವರ ಪ್ರತಿಭೆಗೆ ಸಂದಂತಹ ಗೌರವ. ದಕ್ಷಿಣ ಭಾರತ ಕಲಾವಿದರ ವೇದಿಕೆಯಿಂದ ʼ ಕಲೈ ಸಲ್ವಾಂ ʼ ಪ್ರಶಸ್ತಿ ಪಡೆದ ಏಕೈಕ ಕನ್ನಡ ಕಲಾವಿದರಾಗಿರುವುದು ಕನ್ನಡ ರಂಗಭೂಮಿಯ ಮತ್ತು ಸಾಂಸ್ಕೃತಿಕ ಲೋಕದ ಹಿರಿಮೆ.
ಈ ಎಲ್ಲ ಪ್ರಶಸ್ತಿಗಳಿಗೆ ಮುಕುಟ ಇಟ್ಟಂತೆ, ಕರ್ನಾಟಕ ಸರ್ಕಾರ 2025ರ ರಾಜ್ಯೋತ್ಸವ ಪ್ರಶಸ್ತಿ ನೀಡುವ ಮೂಲಕ ಮೈಮ್ ರಮೇಶ್ ಅವರ ಪ್ರತಿಭೆಯನ್ನು ಗುರುತಿಸಿ ಗೌರವಿಸಿರುವುದು ಮೈಮ್ ಕಲೆಗೆ ಮತ್ತು ರಂಗಭೂಮಿಗೇ ಸಂದ ಒಂದು ಗೌರವ ಎನ್ನಬಹುದು. ಈ ಹಲವು ಪ್ರಶಸ್ತಿಗಳಿಂದಾಚೆ ನೋಡಿದಾಗ ಮೈಮ್ ರಮೇಶ್ ಒಬ್ಬ ಸಮಾಜಮುಖಿ ಚಿಂತಕನಾಗಿ, ಜನಪರ ಕಾಳಜಿ ಇರುವ ಕಾರ್ಯಕರ್ತರಾಗಿ, ರಂಗಕಲೆಯನ್ನು ತಳಮಟ್ಟದವರೆಗೂ ಕೊಂಡೊಯ್ದು ಹೊಸ ತಲೆಮಾರಿಗೆ ಈ ಕಲೆಯನ್ನು ತಲುಪಿಸುವ ಕಲೋಪಾಸಕನಾಗಿ ನಮ್ಮ ನಡುವೆ ಇದ್ದಾರೆ. ರಾಜ್ಯೋತ್ಸವ ಪ್ರಶಸ್ತಿಗಾಗಿ ರಮೇಶ್ ಅವರನ್ನು ಅಭಿನಂದಿಸುತ್ತಲೇ, ಇದನ್ನೂ ದಾಟಿ ಅವರು ರಾಜ್ಯದ ರಂಗಾಸಕ್ತರ ಮನಸ್ಸಿನಲ್ಲಿ ಪಡೆದಿರುವ ಒಂದು ಆಪ್ತ ಸ್ಥಾನ, ಆತ್ಮೀಯ ಪ್ರೀತಿ ವಿಶ್ವಾಸಗಳು ಮೈಮ್ ರಮೇಶ್ ಅವರನ್ನು ವಿಶಿಷ್ಟ ರಂಗಕರ್ಮಿಯಾಗಿ ಕರ್ನಾಟಕದ ರಂಗಭೂಮಿಯ ಚರಿತ್ರೆಯಲ್ಲಿ ಸ್ಥಾಪಿಸುತ್ತವೆ.
-೦-೦-೦-












