ಮಡಿಕೇರಿ, ಕೊಡಗು ಜಿಲ್ಲೆ ಸೇರಿದಂತೆ ರಾಜ್ಯದ ಹಲವಾರು ಕಡೆಗಳಲ್ಲಿ ಕಾಡು ಕೋಣ (ಕಾಟಿ), ಇತರ ವನ್ಯಜೀವಿಗಳ ಕಳ್ಳ ಬೇಟೆ, ಹತ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಳವಾಗಿದ್ದು, ಈ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಅರಣ್ಯ ಸಚಿವರು ಅರಣ್ಯ ಇಲಾಖೆಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಆದೇಶ ನೀಡಿ ಸೂಕ್ತ ಕ್ರಮ ಕೈಗೊಂಡು ವರದಿ ಸಲ್ಲಿಸಲು ಸೂಚಿಸಿದ್ದಾರೆ.
ರಾಜ್ಯದ ದಟ್ಟಾರಣ್ಯಗಳಲ್ಲಿ ಈಗಾಗಲೇ ಅರಣ್ಯ ಇಲಾಖೆಯ ಬೇಟೆ ತಡೆಯಲೆಂದೇ ಕಳ್ಳ ಬೇಟೆ ತಡೆ ತಂಡ(Anti poaching squad) ಇದ್ದರೂ ಮಲೆನಾಡಿನ ಕೆಲ ಭಾಗಗಳಲ್ಲಿ ಮಾಂಸಕ್ಕಾಗಿ ಪ್ರಾಣಿಗಳ ಹತ್ಯೆ ನಡೆಯುತ್ತಿರುವುದು ಸತ್ಯ. ರಾಜ್ಯದ ಪುಟ್ಟ ಜಿಲ್ಲೆ ಕೊಡಗು ವಿಫುಲ ವನ್ಯ ಜೀವಿಗಳಿರುವ ಪ್ರದೇಶವಾಗಿದ್ದು ಇಲ್ಲಿ ಕಳ್ಳ ಬೇಟೆ ನಡೆಯುತ್ತಿರುವುದು ಹಲವು ಪ್ರಕರಣಗಳಿಂದ ಬೆಳಕಿಗೆ ಬಂದಿದೆ.
ನಾಗರಹೊಳೆ ಅರಣ್ಯದಂಚಿನ ಕೊಡಗು ಅರಣ್ಯ ವೃತ್ತದ ಕುಶಾಲನಗರ ವಲಯದ ಮಾಲ್ದಾರೆ, ಆನೆಚೌಕೂರು, ಮಡಿಕೇರಿ ವಲಯಗಳಲ್ಲಿ ಒಟ್ಟು ಏಳು ಕಾಡುಕೋಣಗಳ ಹತ್ಯೆಯಾಗಿದ್ದು, ಈ ಬಗ್ಗೆ ಮಾಧ್ಯಮ ವರದಿಯಾಗಿದ್ದನ್ನು ಗಂಭೀರವಾಗಿ ಪರಿಗಣಿಸಿದ ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಸರಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಅರಣ್ಯ, ಪರಿಸರ, ಜೀವಿಶಾಸ್ತ ಇಲಾಖೆಯವರಿಗೆ ಈ ಬಗ್ಗೆ ತಮ್ಮ ಕಛೇರಿಗೆ ವರದಿ ಸಲ್ಲಿಸಿ, ಸೂಕ್ತ ಕಾನೂನು ಕ್ರಮ ವಹಿಸಿ, ಅಗತ್ಯ ಗಸ್ತು ಹೆಚ್ಚಳ ಮಾಡಿ ವನ್ಯಜೀವಿ ಸಂರಕ್ಷಣೆ ಮಾಡಲು ಸೂಚಿಸಿ ಆದೇಶ ಹೊರಡಿಸಿದ್ದಾರೆ. ಈ ಬಗ್ಗೆ ಸರಕಾರದ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾ ಅಧಿಕಾರಿಗಳಿಗೆ ವರದಿ ನೀಡಲು ಆದೇಶ ಹೊರಡಿಸಿದ್ದು, ಎಲ್ಲಾ ವಲಯಗಳಲ್ಲಿ ಗಸ್ತು ಹೆಚ್ಚಿಸಿ ಕಳ್ಳ ಬೇಟೆ ನಿಯಂತ್ರಣ ಮಾಡಿ ವನ್ಯಜೀವಿಗಳ ಸಂರಕ್ಷಣೆಗಾಗಿ ಸೂಕ್ತ ಕ್ರಮವಹಿಸಲು ಸೂಚಿಸಿದ್ದಾರೆ. ಕೊಡಗಿನಲ್ಲಿ ಕಾಡುಕೋಣ ಸೇರಿದಂತೆ ಇತರ ವನ್ಯಜೀವಿಗಳನ್ನು ಬೇಟೆಯಾಡಿ, ಮಾಂಸ ಮಾಡಿ ಮಾರಾಟ ಮಾಡುವ ಮಾಫಿಯಾಗಳು ನಡೆಯುತ್ತಿದ್ದು, ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಅಂಚಿನ ಅರಣ್ಯ ಪ್ರದೇಶ, ವನ್ಯಜೀವಿ ಅಭಯಾರಣ್ಯಗಳಲ್ಲಿ ಮಾತ್ರವಲ್ಲದೆ, ಖಾಸಗಿ ತೋಟಗಳು, ದೇವರಕಾಡು, ಮೀಸಲು ಅರಣ್ಯ ಪ್ರದೇಶದಲ್ಲಿ, ಡೀಮ್ಡ್ ಫಾರೆಸ್ಟ್ಗಳಲ್ಲೂ ಅರಣ್ಯ ಇಲಾಖೆ ಅಗತ್ಯ ಸಿಬ್ಬಂದಿಗಳನ್ನು ನೇಮಕ ಮಾಡಿ ಗಸ್ತು ಹೆಚ್ಚಳ ಮಾಡಿ ಬೇಟೆ ನಿಯಂತ್ರಣಕ್ಕೆ ಸೂಕ್ತ ಕ್ರಮ ವಹಿಸುವಂತೆ ಆದೇಶದಲ್ಲಿ ಸೂಚಿಸಿದ್ದಾರೆ.