ರಾಜ್ಯ ವಿಧಾನಸಭೆ ಚುನಾವಣೆಗೆ ಸಕಲ ತಯಾರಿ ನಡೆಯುತ್ತಿದೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮೂರು ಪಕ್ಷಗಳು ರಾಜ್ಯವನ್ನು ಸುತ್ತುತ್ತಿವೆ. ಈ ನಡುವೆ ರಾಜ್ಯ ಬಿಜೆಪಿ ಹಾಗು ಬಿಜೆಪಿ ಹೈಕಮಾಂಡ್ ಪ್ರತ್ಯೇಕವಾಗಿ ಸರ್ವೇ ಮಾಡಿಸಿದ್ದು, ಎರಡೂ ಸರ್ವೆಗಳಲ್ಲೂ ಹೆಚ್ಚು ಕಡಿಮೆ ಕಡಿಮೆ ಒಂದೇ ರೀತಿಯ ವರದಿ ಬಂದಿದೆ ಎನ್ನಲಾಗ್ತಿದೆ. ಬಹುತೇಕ ಈಗ ಇರುವ ಶಾಸಕರಲ್ಲಿ 30 ರಿಂದ 35 ಜನ ಶಾಸಕರು ಸೋಲನಪ್ಪುವ ಸಾಧ್ಯತೆ ಇದೆ ಎನ್ನುವ ಮಾಹಿತಿ ಸರ್ವೆ ವರದಿಯಲ್ಲಿ ಬಹಿರಂಗ ಆಗಿದೆ ಎನ್ನಲಾಗಿದೆ. ಬಿಜೆಪಿ ಎಷ್ಟೇ ಶ್ರಮ ವಹಿಸಿದರೂ ರಾಜ್ಯದಲ್ಲಿ ಈ ಬಾರಿ 65 ಸ್ಥಾನಗಳಲ್ಲಿ ಗೆಲುವು ಸಾಧಿಸಲು ಅಷ್ಟೇ ಶಕ್ತವಾಗಿದೆ ಎನ್ನುವ ಮಾಹಿತಿ ತಿಳಿದು ಭಾರತೀಯ ಜನತಾ ಪಾರ್ಟಿ ಶಾಸಕರಿಗೆ ಬಿಸಿ ಮುಟ್ಟಿಸಿದೆ. ಸೋಲುವ ಬಗ್ಗೆ ವರದಿ ಬಂದಿರುವ ಶಾಸಕರಿಗೆ ಈ ಬಾರಿ ಟಿಕೆಟ್ ಇಲ್ಲ ಎನ್ನುವ ಸಂದೇಶ ರವಾನೆ ಆಗಿದ್ದು ಬಿಜೆಪಿ ಶಾಸಕರು ಕ್ಷೇತ್ರಗಳಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡು ಸುತ್ತುವುದಕ್ಕೆ ಶುರು ಮಾಡಿದ್ದಾರೆ.
ಚುನಾವಣೆಯಲ್ಲಿ ಗೆಲ್ಲುವ ಬಗ್ಗೆ ವರದಿ ಬಂದರಷ್ಟೇ ಬಿಜೆಪಿ ಟಿಕೆಟ್..!
ಚುನಾವಣೆಯಲ್ಲಿ ಗೆಲುವು ಮಾತ್ರ ಆಯ್ಕೆಗೆ ಮಾನದಂಡ. ಯಾರು ಗೆಲುವು ಸಾಧಿಸುತ್ತಾರೆ ಆ ಅಭ್ಯರ್ಥಿಗಳಿಗೆ ಮಾತ್ರ ಟಿಕೆಟ್ ಎನ್ನುವುದು ಭಾರತೀಯ ಜನತಾ ಪಾರ್ಟಿಯ ಒನ್ ಲೈನ್ ಅಜೆಂಡಾ. ನಮ್ಮವರು ತಮ್ಮವರು ಎಂದು ಟಿಕೆಟ್ ನೀಡುವುದಿಲ್ಲ. ನಾವು ಸರ್ವೆ ಮಾಡಿಸುವ ವರದಿಯಲ್ಲಿ ಜುನರು ನಿಮ್ಮನ್ನು ಆಯ್ಕೆ ಮಾಡುತ್ತಾರೆ ಎನ್ನುವ ವರದಿ ಬರಬೇಕು. ಇಲ್ಲದಿದ್ರೆ ಯಾವ ಹೊಸ ಮುಖದ ಕಡೆಗೆ ಜನರು ಹೆಚ್ಚಿನ ಆಸ್ತಕ್ತಿ ತೋರಿಸುತ್ತಾರೆ, ಅವರಿಗೆ ಬಿಜೆಪಿ ಟಿಕೆಟ್ ಎಂದು ಈಗಾಗಲೇ ಬಿಜೆಪಿ ಶಾಸಕರಿಗೆ ಮನವರಿಕೆ ಮಾಡಲಾಗಿದೆ. ಇದೇ ಕಾರಣಕ್ಕೆ ಬೆಂಗಳೂರು ಮನೆಯ ಬಾಗಿಲು ಬಂದ್ ಮಾಡಿರುವ ಬಹುತೇಕ ಶಾಸಕರು ಕ್ಷೇತ್ರಗಳಲ್ಲಿ ಜನರ ಸಮಸ್ಯೆ ಆಲಿಸುವ ಜೊತೆಗೆ ಕಷ್ಟಸುಖಗಳಲ್ಲಿ ಭಾಗಿಯಾಗ್ತಿದ್ದಾರೆ. ಮತ್ತೊಂದು ಸುತ್ತಿನ ಸರ್ವೆ ಮಾಡುವ ನಿರೀಕ್ಷೆ ಇದ್ದು, ಎರಡನೇ ಬಾರಿಯ ವರದಿಯಲ್ಲಾದರೂ ಜನರು ತಮ್ಮ ಕಡೆಗೆ ನೋಡಬಹುದು ಎನ್ನುವುದು ಕೇಸರಿ ಪಕ್ಷದ ಶಾಸಕರ ನಿರೀಕ್ಷೆ.
ಈ ಬಾರಿ ಯಡಿಯೂರಪ್ಪ ಮಾತಿಗೆ ಕಿಮ್ಮತ್ತು ಸಿಗುವುದಿಲ್ಲ..!

ಕಳೆದ ಬಾರಿ ಕರ್ನಾಟಕದಲ್ಲಿ ಚುನಾವಣೆ ನಡೆದಾಗ ಯಡಿಯೂರಪ್ಪ ಅಂತಿಮ ನಾಯಕ ಎನ್ನುವಂತಿತ್ತು. ಯಾರೇ ಟಿಕೆಟ್ ಬೇಕು ಅಂದರೂ ಯಡಿಯೂರಪ್ಪ ಆಶೀರ್ವಾದ ಇದ್ದರೆ ಶಾಸಕರಾಗಿ ಆಯ್ಕೆಯಾಗಬಹುದು ಎನ್ನುವ ಲೆಕ್ಕಾಚಾರ ಇತ್ತು. ಸರ್ವೇ ರಿಪೋರ್ಟ್ನಲ್ಲಿ ಹೆಚ್ಚು ಕಡಿಮೆ ಬಂದಿದ್ದರೂ ಯಡಿಯೂರಪ್ಪ ಕೃಪಾಕಟಾಕ್ಷ ಇದ್ದರೆ ಟಿಕೆಟ್ ಸಿಗುತ್ತಿತ್ತು. ಬಿ ಫಾರಂ ಪಡೆದ ಬಳಿಕ ಗೆಲ್ಲಲು ಏನೇನು ಬೇಕೋ ಅದನ್ನು ಮಾಡಿ ಗೆದ್ದು ಬರುತ್ತಿದ್ದರು. ಆದರೆ ಈಗ ಪರಿಸ್ಥಿತಿ ಆ ರೀತಿಯಿಲ್ಲ. ಯಡಿಯೂರಪ್ಪ ರಾಷ್ಟ್ರೀಯ ಸಂಸದೀಯ ಮಂಡಳಿಯ ಸದಸ್ಯ ಆಗಿರಬಹುದು. ಆದರೆ ಯಡಿಯೂರಪ್ಪ ಮಾತಿಗೆ ಕಿಂಚಿತ್ತು ಬೆಲೆ ಸಿಗುವುದಿಲ್ಲ. ಈ ಬಾರಿ ಸ್ವತಃ ತಮ್ಮ ಸ್ವಂತ ಮಗನಿಗೆ ಟಿಕೆಟ್ ಕೊಡಿಸಲು ಯಡಿಯೂರಪ್ಪ ಅವರ ಕೈಲಿ ಆಗಲ್ಲ ಎನ್ನುವ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ. ಲಿಂಗಾಯತ ಸಮುದಾಯ ಮುನಿಸಿಕೊಳ್ಳಬಾರದು ಅನ್ನೋ ಕಾರಣ ಮತ್ತು ರಾಜ್ಯ ರಾಜಕಾರಣದಲ್ಲಿ ಮೂಗು ತೂರಿಸಬಾರದು ಅನ್ನೋ ಕಾರಣಕ್ಕೆ ಸಂಸದೀಯ ಮಂಡಳಿಯಲ್ಲಿ ಬಂಧಿಸಲಾಗಿದೆ ಎನ್ನುವುದು ಬಿಜೆಪಿ ವಲಯದ ಮಾತಾಗಿದೆ.
ಸ್ಥಾನಮಾನ ಇದ್ದರೆ ನಾಯಕ ಮಾತನಾಡಲು ಸಾಧ್ಯವಿಲ್ಲ..!
ಯಡಿಯೂರಪ್ಪ ಅವರಿಗೆ ಯಾವುದೇ ಸ್ಥಾನಮಾನ ಇಲ್ಲದೆ ಇದ್ದಾಗ ನೇರವಾಗಿ ಹೈಕಮಾಂಡ್ ನಿರ್ಧಾರವನ್ನೂ ಪ್ರಶ್ನೆ ಮಾಡುತ್ತಿದ್ದರು. ಶಿವಮೊಗ್ಗದ ಶಿಕಾರಿಪುರ ಕ್ಷೇತ್ರದಿಂದ ವಿಜಯೇಂದ್ರ ಸ್ಪರ್ಧೆ ಮಾಡಲಿದ್ದಾರೆ ಎಂದು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು. ಆದರೆ ಒಮ್ಮೆ ಸಂಸದೀಯ ಮಂಡಳಿಗೆ ಸದಸ್ಯರನ್ನಾಗಿ ಮಾಡಿದ ಬಳಿಕ ಬಿಜೆಪಿ ಹೈಕಮಾಂಡ್ ನಿರ್ಧಾರ ಮಾಡುತ್ತದೆ ಎನ್ನುತ್ತಾರೆ. ಯಾವುದೇ ನಾಯಕ ಜವಾಬ್ದಾರಿಗಳಿಂದ ಹೊರಗೆ ಇದ್ದಾಗ ಏನನ್ನು ಬೇಕಿದ್ದರೂ ಮಾತನಾಡಬಹುದು. ಆದರೆ ಒಮ್ಮೆ ಜವಾಬ್ದಾರಿ ಕೊಟ್ಟ ಬಳಿಕ ಬಹಿರಂಗವಾಗಿ ಮಾತನಾಡಲು ಸಾಧ್ಯವಿಲ್ಲ. ಇದೀಗ ಬಿಜೆಪಿಯಲ್ಲಿ ಯಡಿಯೂರಪ್ಪ ಸಮರ್ಥನೆ ಮಾಡಿಕೊಳ್ಳಬೇಕೇ ಹೊರತು ಬೇರೆ ಏನನ್ನೂ ಮಾತನಾಡುವಂತಿಲ್ಲ. ಒಂದು ವೇಳೆ ವಿಜಯೇಂದ್ರಗೆ ಟಿಕೆಟ್ ನೀಡದಿದ್ದರೂ ಯಡಿಯೂರಪ್ಪ ಯಾಕೆ ಟಿಕೆಟ್ ನೀಡಲಿಲ್ಲ ಎನ್ನುವುದನ್ನು ಹೇಳುತ್ತಾ ಸಮರ್ಥನೆಯನ್ನೇ ಮಾಡಿಕೊಳ್ಳಬೇಕು. ಇಲ್ಲದಿದ್ರೆ ಉನ್ನತ ಹುದ್ದೆಗೆ ಅವಮಾನ ಮಾಡಿದಂತೆ. ಯಡಿಯೂರಪ್ಪ ಅವರನ್ನು ಕಟ್ಟಿ ಹಾಕಿರುವ ಬಿಜೆಪಿ ನಾಯಕತ್ವ ಈ ಬಾರಿ ಅದೆಷ್ಟು ಮಂದಿಗೆ ಟಿಕೆಟ್ ನಿರಾಕರಿಸುತ್ತದೆ ಅನ್ನೋ ಲೆಕ್ಕಾಚಾರ ಬಿಜೆಪಿಯಲ್ಲಿ ನಡೆಯುತ್ತಿದೆ.









