ಬೆಂಗಳೂರು;ಏ.04.ರಾಜ್ಯದಲ್ಲಿ ಅತಂತ್ರ ವಿಧಾನಸಭೆ ಬರುವುದು ನಿಚ್ಚಳ ಆಗುತ್ತಿದೆ. ಆದರೆ ಈ ಬಾರಿ ನಿಜವಾಗಿಯೂ ಯಾರು ಯಾರೊಂದಿಗೆ ಮೈತ್ರಿ ಮಾಡಿಕೊಳ್ತಾರೆ ಎನ್ನುವುದು ಜನಸಾಮಾನ್ಯರಲ್ಲಿ ಮೂಡಿರುವ ಪ್ರಶ್ನೆ. ಜೆಡಿಎಸ್ ಕಿಂಗ್ ಮೇಕರ್ ಆಗಲಿದ್ದು, ಜೆಡಿಎಸ್ ಕಾಂಗ್ರೆಸ್ ಜೊತೆಗೆ ಸರ್ಕಾರ ರಚನೆ ಮಾಡುತ್ತಾ..? ಅಥವಾ ಬಿಜೆಪಿ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಸರ್ಕಾರ ಮಾಡುತ್ತಾ ಎನ್ನುವುದು ಕುತೂಹಲ ಮೂಡಿಸಿದೆ. ಇದರ ನಡುವೆ ಕಾಂಗ್ರೆಸ್ ಹಾಗು ಬಿಜೆಪಿ ನಡುವೆ ಚುನಾವಣಾ ಪೂರ್ವ ಮೈತ್ರಿ ಲೆಕ್ಕಾಚಾರ ಆರಂಭವಾಗಿದೆ ಎನ್ನುವ ಮಾತುಗಳು ಚರ್ಚೆ ಆಗುತ್ತಿವೆ. ಇದಕ್ಕೆ ಪೂರಕ ಎನ್ನುವಂತೆ ಮಂಡ್ಯದ ಕಾಂಗ್ರೆಸ್ ನಾಯಕ ಎನ್ ಚಲುವರಾಯಸ್ವಾಮಿ ಹಾಗು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಒಟ್ಟಿಗೆ ಕುಳಿತು ಇಸ್ಪೀಟ್ ಆಟವಾಡುತ್ತಿರುವ ಫೋಟೋಗಳು ಬಿಡುಗಡೆ ಆಗಿದೆ. ಇದರ ಬೆನ್ನಲ್ಲೇ ನಾಗಮಂಗಲ ಬಿಜೆಪಿ ಅಭ್ಯರ್ಥಿಯಾಗುತ್ತಿರುವ ಫೈಟರ್ ರವಿ ಚಲುವರಾಯಸ್ವಾಮಿ ಕಾರಿನ ಬಳಿ ನಿಂತು ಮಾತನಾಡುತ್ತಿರುವ ಫೋಟೋ ಕೂಡ ವೈರಲ್ ಆಗಿದೆ. ಅಂದರೆ ನಾಗಮಂಗಲದಲ್ಲಿ ಜೆಡಿಎಸ್ ಅಭ್ಯರ್ಥಿ ಹಾಲಿ ಶಾಸಕ ಸುರೇಶ್ ಗೌಡರನ್ನು ಸೋಲಿಸಲು ರಣತಂತ್ರ ರೂಪಿಸಲಾಗಿದೆ ಎನ್ನುವುದು ಕಾಣಿಸುತ್ತಿದೆ.
ಮಂಡ್ಯದಲ್ಲಿ ಈ ಬಾರಿ ಮತ್ತೆ ಕುಂತಂತ್ರ ರಾಜಕಾರಣ – HDK
ಸಿ.ಟಿ ರವಿ ಹಾಗು ಎನ್. ಚಲುವರಾಯಸ್ವಾಮಿ ಅವರ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಚಾರದ ಬಗ್ಗೆ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದು, ಸ್ನೇಹಿತರು, ಕಳೆದ ಲೋಕಸಭಾ ಚುನಾವಣೆ ವೇಳೆ ಬಿಜೆಪಿ ಹಾಗು ಕಾಂಗ್ರೆಸ್ನವರು ಒಟ್ಟಾಗಿ ಚುನಾವಣಾ ಕೆಲಸ ಮಾಡಿದ್ರು. ಕಳೆದ ಲೋಕಸಭಾ ಚುನಾವಣೆ ಬಳಿಕ ಮತ್ತೊಮ್ಮೆ ಇದೀಗ ಕೆಲವು ಕ್ಷೇತ್ರಗಳಲ್ಲಿ ಹೊಂದಾಣಿಕೆ ರಾಜಕೀಯ ಮಾಡಲು ಮುಂದಾಗಿದ್ದಾರೆ ಎಂದು ಬಹುತೇಕ ಕ್ಷೇತ್ರಗಳಲ್ಲಿ ಈಗಾಗಲೇ ಯೋಜನೆ ರೂಪಿಸಿದ್ದಾರೆ. ಆದರೆ ಮಂಡ್ಯದಲ್ಲಿ ಜೆಡಿಎಸ್ ಪಕ್ಷಕ್ಕೆ ಜನರು ಎಂದಿಗೂ ಮೋಸ ಮಾಡಲ್ಲ, ಕಳೆದ ಲೋಕಸಭಾ ಚುನಾವಣೆಯಲ್ಲೂ ಜನರು ಮೋಸ ಮಾಡಲಿಲ್ಲ, ಆದರೆ ಕಾಂಗ್ರೆಸ್ – ಬಿಜೆಪಿ ಕುತಂತ್ರಕ್ಕೆ ಫಲ ಸಿಕ್ಕಿತ್ತು. ಆದರೆ ಈ ಬಾರಿ ಜನರು ನಿಶ್ಚಯ ಮಾಡಿದ್ದಾರೆ. ಕಾಂಗ್ರೆಸ್-ಬಿಜೆಪಿ ಒಟ್ಟಿಗೆ ಹೊಂದಾಣಿಕೆ ರಾಜಕೀಯ ಮಾಡಿದರೂ ಜೆಡಿಎಸ್ ಜಯ ದಾಖಲಿಸಲಿದೆ ಎಂದಿದ್ದಾರೆ. ಕಾಂಗ್ರೆಸ್-ಬಿಜೆಪಿ ಹೊಂದಾಣೀಕೆ ರಾಜಕೀಯಕ್ಕೆ ರೈತಸಂಘವೂ ಸಾಥ್ ನೀಡ್ತಿದೆ ಎಂದಿರುವ ಕುಮಾರಸ್ವಾಮಿ ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಏನಾಗ್ತಿದೆ ಎನ್ನುವುದನ್ನು ಒಮ್ಮೆ ನೋಡಿ ಎಂದಿದ್ದಾರೆ.
50ಕ್ಕೂ ಹೆಚ್ಚು ಕ್ಷೇತ್ರದಲ್ಲಿ ಕಾಂಗ್ರೆಸ್-ಬಿಜೆಪಿ ಮೈತ್ರಿ..!
ಕಾಂಗ್ರೆಸ್ ಹಾಗು ಬಿಜೆಪಿ ಜೆಡಿಎಸ್ ಪಕ್ಷವನ್ನು ಸೋಲಿಸಬೇಕು, ಇಬ್ಬರಲ್ಲಿ ಒಬ್ಬರಿಗೆ ಮಾತ್ರ ಅಧಿಕಾರ ಸಿಗುವಂತಾಗಬೇಕು ಅನ್ನೋ ಕಾರಣಕ್ಕೆ ಹೋಮದಾಣಿಕೆ ಮಾಡಿಕೊಳ್ತಿದ್ದಾರೆ ಎನ್ನುವುದು ಸದ್ಯಕ್ಕೆ ಸಿಕ್ಕಿರುವ ಮಾಹಿತಿ. ಕಳೆದ ಬಾರಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಿಂದ ಶಾಸಕರು ರಾಜೀನಾಮೆ ಕೊಟ್ಟು ಬಿಜೆಪಿಗೆ ಹೋಗುವಂತೆ ಸೂಚನೆ ಕೊಟ್ಟಿದ್ದೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅನ್ನೋ ಮಾತು ಕೂಡ ಕೇಳಿ ಬಂದಿತ್ತು. ಇದೀಗ ಮದ್ದೂರಿನಲ್ಲಿ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡುತ್ತಿರುವ ಉದಯ್ ಗೌಡ ಕೂಡ ಸರ್ಕಾರ ಬೀಳಿಸುವ ಟೀಂನಲ್ಲೇ ಇದ್ದರು ಎನ್ನುವುದು ಕೂಡ ಒಂದು ಆರೋಪ. ಇನ್ನು ನೆಲಮಂಗಲದಲ್ಲಿ ಬಿಜೆಪಿ ಅಭ್ಯರ್ಥಿ ಆಗುವ ಹುಮ್ಮಸ್ಸಿನಲ್ಲಿದ್ದ ಎಂವಿ ನಾಗರಾಜ್ಗೆ ಈ ಬಾರಿ ಬಿಜೆಪಿ ಟಿಕೆಟ್ ಸಿಗುವ ಸಾಧ್ಯತೆಗಳು ಕಡಿಮೆ ಎನ್ನಲಾಗಿದ್ದು, ಈಗಾಗಲೇ ಟಿಕೆಟ್ ಘೋಷಣೆ ಆಗಿರುವ ಕಾಂಗ್ರೆಸ್ ಅಭ್ಯರ್ಥಿ ಜೊತೆಗೆ ಎಂವಿ ನಾಗರಾಜ್ ಗುಪ್ತ್ ಗುಪ್ತ್ ಸಭೆ ಮಾಡಿರುವ ದೃಶ್ಯಗಳು ಕೂಡ ಎಲ್ಲೆಡೆ ವೈರಲ್ ಆಗಿದೆ. ಸರಿ ಸುಮಾರು 50 ಕ್ಷೇತ್ರಗಳಲ್ಲಿ ಕಾಂಗ್ರೆಸ್-ಬಿಜೆಪಿ ಹೊಂದಾಣಿಕೆ ರಾಜಕೀಯ ಮಾಡಲು ಮುಂದಾಗಿವೆ ಎನ್ನೋದು ಹೊಸ ಸುದ್ದಿ.
ರಾಷ್ಟ್ರಮಟ್ಟದಲ್ಲಿ ಕಿತ್ತಾಟ, ರಾಜ್ಯಮಟ್ಟದಲ್ಲಿ ಹೊಂದಾಣಿಕೆ..!
ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಹಾಗು ಬಿಜೆಪಿ ಎರಡೂ ಪಕ್ಷಗಳು ಕಿತ್ತಾಡುತ್ತಿದ್ದು, ರಾಜ್ಯಮಟ್ಟದಲ್ಲಿ ಕೆಲವು ಕಡೆ ಹೊಂದಾಣಿಗೆ ಬೆಸುಗೆ ಹಾಕಿವೆ ಎನ್ನುವುದು ಭಾರೀ ಚರ್ಚೆಯನ್ನು ಹುಟ್ಟುಹಾಕಿವ ವಿಚಾರ. ಕಾಂಗ್ರೆಸ್ ಪಕ್ಷ ಈಗಾಗಲೇ ವರುಣಾದಿಂದ ಸಿದ್ದರಾಮಯ್ಯಗೆ ಟಿಕೆಟ್ ಘೋಷಣೆ ಮಾಡಿದ್ದು, ಬಿಜೆಪಿ ಹೈಕಮಾಂಡ್ ಕೂಡ ವಿಜಯೇಂದ್ರ ಅವರನ್ನು ಎದುರಾಳಿಯನ್ನಾಗಿ ಮಾಡುವ ನಿರ್ಧಾರ ಮಾಡಿತ್ತು. ಆದರೆ ಟಿಕೆಟ್ ಘೋಷಣೆಗೂ ಮುನ್ನವೇ ಯಡಿಯೂರಪ್ಪ ವಿಜಯೇಂದ್ರ ಶಿಕಾರಿಪುರದಿಂದಲೇ ಸ್ಪರ್ಧೆ ಮಾಡಲಿದ್ದಾರೆ ಎಂದು ಬಹಿರಂಗ ಮಾಡಿದ್ದಾರೆ. ಕಳೆದ ಬಾರಿ ಮುಖ್ಯಮಂತ್ರಿ ಆಗಲು ಸಿದ್ದರಾಮಯ್ಯ ಸಾಥ್ ಕೊಟ್ಟಿದ್ದರು. ಇದೀಗ ಸಿದ್ದರಾಮಯ್ಯ ಸಿಎಂ ಆಗಲು ಯಡಿಯೂರಪ್ಪ ಪರೋಕ್ಷವಾಗಿ ಸಾಥ್ ಕೊಡುತ್ತಿದ್ದಾರೆ ಎನ್ನುವುದು ಇತ್ತೀಚಿನ ದಿನಗಳ ರಾಜಕಾರಣ ನೋಡಿದಾಗ ಎನಿಸುತ್ತಿದೆ. ಆದರೆ ಜೆಡಿಎಸ್ ಅತಂತ್ರ ಸರ್ಕಾರ ಬರಲಿದ್ದು, ನಾವೇ ಕಿಂಗ್ ಮೇಕರ್ ಎಂದುಕೊಂಡಿತ್ತು. ಆದರೆ ಇದೀಗ ಕಾಂಗ್ರೆಸ್ ಹಾಗು ಬಿಜೆಪಿ ಒಳಮೈತ್ರಿ ಮಾಡಿಕೊಳ್ತಿರೋದು ಜೆಡಿಎಸ್ ಆಸೆಗೆ ತಣ್ಣೀರು ಎನ್ನುವಂತಾಗಿದೆ. ಹಳೇ ಮೈಸೂರು ಭಾಗ ಸಂಪೂರ್ಣವಾಗಿ ಜೆಡಿಎಸ್ ಜೊತೆಗೆ ನಿಂತರೆ ಕಾಂಗ್ರೆಸ್ – ಬಿಜೆಪಿ ಜಂಟಿ ಪ್ಲ್ಯಾನ್ ತಲೆಕೆಳಗಾಗಲಿದೆ.
ಕೃಷ್ಣಮಣಿ