
ಮುಡಾ ಹಗರಣ ಸದ್ದು ಮಾಡುತ್ತಿರುವಾಗಲೇ ಕಾಂಗ್ರೆಸ್‌ನಲ್ಲಿ ಶುರುವಾದ ರಹಸ್ಯ ಸಭೆಗಳ ಸರಣಿ, ಇಂದು ಭಾನುವಾರವೂ ಮುಂದುವರಿದಿದೆ. ರಹಸ್ಯ ಸಭೆ ಏನಿಲ್ಲ ಏನಿಲ್ಲ ಎನ್ನುತ್ತಲೇ ಸರಣಿ ಸಭೆಗಳು ಗುಟ್ಟು ಗುಟ್ಟಾಗಿ ನಡೆಯುತ್ತಲೇ ಇದೆ. ಇವತ್ತು ತುಮಕೂರಿನಲ್ಲಿ ಪರಮೇಶ್ವರ್ ಒಡೆತನದ ಸಿದ್ಧಾರ್ಥ ಇಂಜಿನಿಯರಿಂಗ್ ಕಾಲೇಜ್‌ನ ಅತಿಥಿ ಗೃಹದಲ್ಲಿ ಸತೀಶ್ ಜಾರಕಿಹೊಳಿ ಭೇಟಿಯಾಗಿ ಕುತೂಹಲ ಮೂಡಿಸಿದ್ದಾರೆ. ರಹಸ್ಯ ಬಳಿಕ ಮಾತನಾಡಿದ ಸತೀಶ್ ಜಾರಕಿಹೊಳಿ ಊಟಕ್ಕೆ ಬಂದಿದ್ದೆ ಎಂದಿದ್ದಾರೆ.
ಈ ತಿಂಗಳ ಆರಂಭದಲ್ಲಿ ಡಾ ಜಿ ಪರಮೇಶ್ವರ್ ಮನೆಗೆ ಸ್ವತಃ ಡಿಸಿಎಂ ಡಿಕೆ ಶಿವಕುಮಾರ್ ಭೇಟಿ ನೀಡಿ ಗಂಟೆಗಳ ಕಾಲ ಚರ್ಚೆ ನಡೆಸಿದ್ರು. ಅದ್ರ ಬೆನ್ನಲ್ಲೇ ಪರಮೇಶ್ವರ್ ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಕುತೂಹಲ ಮೂಡಿಸಿದ್ರು. ಆ ಬಳಿಕ ದಲಿತ ಸಮುದಾಯದ ಘಟಾನುಘಟಿ ನಾಯಕರಾದ ಸಚಿವರಾದ ಮಹದೇವಪ್ಪ ನಿವಾಸಕ್ಕೆ ಭೇಟಿ ನಿಡಿದ್ದ ಪರಮೇಶ್ವರ್, ಸತೀಶ್ ಜಾರಕಿಹೊಳಿ, ರಹಸ್ಯ ಚರ್ಚೆ ನಡೆಸಿದ್ರು. ಆದರೆ ಚಕ್ಕುಲಿ ನಿಪ್ಪಟ್ಟು ತಿಂದು ಹೋದ್ರು ಅಂದಿದ್ರು ಸಚಿವ ಮಹದೇವಪ್ಪ.

ದಲಿತ ಸಮುದಾಯಕ್ಕೆ ಸಿಎಂ ಸ್ಥಾನ ಅನ್ನೋ ಚರ್ಚೆ ನಡುವೆ ದೆಹಲಿಗೆ ಹಾರಿದ್ದ ಸಚಿವ ಸತೀಶ್ ಜಾರಕಿಹೊಳಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದರು. ಇದು ರಾಜಕಾರಣಕ್ಕೆ ಮತ್ತೆ ಗುಮಾನಿ ಹುಟ್ಟುಹಾಕಿತ್ತು. ಅದರ ಬೆನ್ನಲ್ಲೇ ಇವತ್ತು ಪರಮೇಶ್ವರ್ ಭೇಟಿ ಮಾಡಿದ್ದಾರೆ. ಯಾವುದೋ ಕಾರ್ಯಕ್ರಮಕ್ಕೆ ಬಂದಿದ್ರು. ಊಟ ಆಗಿರಲಿಲ್ಲ, ಇಲ್ಲೆ ಬಂದು ಊಟ ಮಾಡಿ ಹೋದ್ರು ಅಂತಾ ಮತ್ತೆ ಪರಮೇಶ್ವರ್ ಊಟದ ಕಥೆ ಹೇಳಿದ್ದಾರೆ. ಇದ್ರ ನಡುವೆ ಸತೀಶ್ ಜಾರಕಿಹೊಳಿ ಮುಂದಿನ ಸಿಎಂ ಅನ್ನೋ ಕೂಗು ಹಾಕಿದ್ದಾರೆ ಬೆಂಬಲಿಗರು.
ರಹಸ್ಯ ಸಭೆ ನಡೆಯುತ್ತಿರೋದು ಕೂಡ ಸತ್ಯ.. ದಲಿತ ಸಮುದಾಯದ ನಾಯಕರು ಲೆಕ್ಕಾಚಾರ ಹಾಕುತ್ತಿರುವುದೂ ಸತ್ಯ. ಆದರೆ ಸಿಎಂ ಸಿದ್ದರಾಮಯ್ಯ ಕುರ್ಚಿಯಿಂದ ಇಳಿಯಲ್ಲ ಅಂತಾ ಹೇಳ್ತಿರೋದು ಸತ್ಯ. ಒಂದು ವೇಳೆ ಮುಡಾ ಪ್ರಕರಣದಲ್ಲಿ ಒಂದು ವೇಳೆ ಸಿದ್ದರಾಮಯ್ಯ ರಾಜೀನಾಮೆ ನೀಡಿದರೆ..! ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಆಗುವುದನ್ನು ತಪ್ಪಿಸಲು ಸಕಲ ಸಿದ್ಧತೆಗಳು ನಡೆಯುತ್ತಿರೋದು ಕೂಡ ಸತ್ಯ. ಆದರೆ ಏನಿಲ್ಲ ಏನಿಲ್ಲ ಎಂದು ಕಾಂಗ್ರೆಸ್‌ನಲ್ಲಿ ಒಂದು ವರ್ಗ ಸಿದ್ದತೆ ಮಾಡಿಕೊಳ್ತಿದೆ. ಆದರೆ ಸಿಎಂ ರಾಜೀನಾಮೆ ನೀಡ್ತಾರಾ..? ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಬೇಕಿದೆ.
