
ಕಾಂಗ್ರೆಸ್ ಪಕ್ಷ ಬಿಜೆಪಿ ವಿರುದ್ಧ 40 ಪರ್ಸೆಂಟ್ ಭ್ರಷ್ಟಾಚಾರದ ಆರೋಪ ಮಾಡಿಕೊಂಡೇ ಅಧಿಕಾರಕ್ಕೆ ಬಂದಿದ್ದು ಇತಿಹಾಸ.ಆದರೆ ಇದೀಗ ಕಾಂಗ್ರೆಸ್ ಸರ್ಕಾರ 2 ವರ್ಷ ಪೂರೈಸುವ ಮೊದಲೇ ಹಗರಣಗಳ ಸರಮಾಲೆ ತೆರೆದುಕೊಂಡಿದ್ದು, ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ಅಷ್ಟೇ ಅಲ್ಲದೆ ಉಪ ಚುನಾವಣೆ ಮೇಲೂ ಪರಿಣಾಮ ಬೀರುವ ಆತಂಕ ಎದುರಾಗಿದೆ.

ಮೊದಲಿಗೆ ಸಿಎಂ ಸಿದ್ದರಾಮಯ್ಯ ವಿರುದ್ಧ ಕೇಳಿ ಬಂದಿರುವ ಮುಡಾ ಹಗರಣ. ಸಿಎಂ ಸಿದ್ದರಾಮಯ್ಯ ಪ್ರಭಾವ ಬೀರದೆಯೇ ಸೈಟ್ಗಳನ್ನು ಬಿಜೆಪಿ ಸರ್ಕಾರವೇ ಕೊಟ್ಟಿರಬಹುದು. ಆದರೆ ಇದೀಗ ಕಾಂಗ್ರೆಸ್ ಪಕ್ಷದ ಮೇಲೆ ಸ್ವತಃ ಬಿಜೆಪಿಯೇ ತಿರುಗಿಬಿದ್ದಿದ್ದು, ಸಿಎಂ ಸಿದ್ದರಾಮಯ್ಯ ಪ್ರಭಾವ ಬೀರಿಯ ಸೈಟ್ ಪಡೆದಿದ್ದಾರೆ ಎಂದು ಆರೋಪಿಸಿದೆ. ಜೊತೆಗೆ ಕೋರ್ಟ್ ಕೂಡ ಈ ಬಗ್ಗೆ ತನಿಖೆ ನಡೆಸುವಂತೆ ಸೂಚನೆ ನೀಡಿರುವುದು ಸಿದ್ದರಾಮಯ್ಯ ಹಾಗು ಸರ್ಕಾರಕ್ಕೆ ಭಾರೀ ಹಿನ್ನಡೆ ತಂದೊಡ್ಡಿದೆ. ಸರ್ಕಾರ ಹಾಗು ಸಿದ್ದರಾಮಯ್ಯ ಎಷ್ಟು ಬಾರಿ ಸತ್ಯವಂತ ಎಂದು ಹೇಳಿಕೊಂಡರೂ ಅಕ್ರಮ ಅನ್ನೋದು ಜನರ ಮನಸ್ಸಲ್ಲಿ ಗಟ್ಟಿಯಾಗಿ ಬೇರೂರಿದೆ.
ರಾಜ್ಯದ ಜನರನ್ನು ಆತಂಕಕ್ಕೆ ಈಡು ಮಾಡಿರುವ ಮತ್ತೊಂದು ಸಮಸ್ಯೆ ಎಂದರೆ ವಕ್ಫ್ ಆಸ್ತಿ ವಿವಾದ. ಈಗಾಗಲೇ ಕಾಂಗ್ರೆಸ್ ಸರ್ಕಾರ ಎಂದರೆ ಮುಸ್ಲಿಮರನ್ನು ಓಲೈಕೆ ಮಾಡುವ ಪಕ್ಷ ಎನ್ನುವ ಹಣೆಪಟ್ಟಿ ಕಟ್ಟಿಕೊಂಡಿದ್ದು, ಇದೀಗ ಬಡ ರೈತರ ಜಮೀನಿನ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದು ಆಗುತ್ತಿರುವುದು ಮೂರೂ ವಿಧಾನಸಭಾ ಉಪಚುನಾವಣೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ದಟ್ಟವಾಗಿದೆ. ಕಾಂಗ್ರೆಸ್ ಸರ್ಕಾರಕ್ಕೆ ಶಕ್ತಿ ಕೊಟ್ಟಷ್ಟೂ ರೈತ ವಿರೋಧಿ ಕೆಲಸಗಳು ಆಗುತ್ತವೆ ಅನ್ನೋ ವಿಚಾರವನ್ನು ಬಿಜೆಪಿ ಬಿತ್ತುತಿದೆ.ಅದೂ ಅಲ್ಲದೆ ಚುನಾವಣಾ ದೃಷ್ಟಿಯಿಂದಲೇ ಸರ್ಕಾರ ತಾತ್ಕಾಲಿಕವಾಗಿ ಆದೇಶ ಹಿಂಪಡೆದಿದೆ ಎನ್ನುವುದೂ ಕೂಡ ಕಾಂಗ್ರೆಸ್ಗೆ ಹೊಡೆತ ಕೊಡುವ ಸಾಧ್ಯತೆಯಿದೆ.
ವಾಲ್ಮೀಕಿ ಹಗರಣದಲ್ಲಿ ಈಗಾಗಲೇ ಸಚಿವರಾಗಿದ್ದ ಬಿ ನಾಗೇಂದ್ರ ರಾಜೀನಾಮೆ ನೀಡಿದ್ದು, ಸರ್ಕಾರದ ಮಟ್ಟದಲ್ಲಿ ಲೋಪ ಆಗಿದೆ ಎನ್ನುವುದನ್ನು ಸ್ವತಃ ಸಿಎಂ ಸಿದ್ದರಾಮಯ್ಯ ಅವರೇ ಒಪ್ಪಿಕೊಂಡಿದ್ದಾರೆ.ಇನ್ನು ಇಡಿ ಅಧಿಕಾರಿಗಳು ತನಿಖೆ ನಡೆಸುತ್ತಿದೆ.ಸದ್ಯಕ್ಕೆ ಬೇಲ್ ಮೇಲೆ ಹೊರಬಂದಿರುವ ನಾಗೇಂದ್ರ ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆ ನಡೆಸುತ್ತಿದ್ದಾರೆ. ಆದರೆ ಎಸ್ಸಿ ಎಸ್ಟಿ ಸಮುದಾಯಕ್ಕೆ ಮೀಸಲಾದ ಹಣವನ್ನು ನುಂಗಿ ನೀರು ಕುಡಿದಿದ್ದಾರೆ ಎಂದು ಬಿಜೆಪಿ, ಜೆಡಿಎಸ್ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ತಪ್ಪು ಆಗಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ.