ಮಾಜಿ ಸಚಿವ ಮುನಿರತ್ನ ( Munirathna ) ಅಧಿಕಾರಕ್ಕೆ ಬರುವುದಕ್ಕೆ ಹನಿಟ್ರ್ಯಾಪ್ ( Honey Trap ) ಎಂಬ ಅನೈತಿಕ ತಂತ್ರಗಾರಿಕೆಯನ್ನು ಬಳಸಿದ್ದರು ಎನ್ನುವ ಆರೋಪ ಕೇಳಿಬಂದಿದೆ. ಇಷ್ಟು ದಿನಗಳ ಕಾಲ ಜೊತೆಯಲ್ಲೇ ಇದ್ದಂತವರು ಮುನಿರತ್ನ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. ಮುಂಬರುವ ಬಿಬಿಎಂಪಿ ಚುನಾವಣೆ ( BBMP Election ) ಗಮನದಲ್ಲಿ ಇಟ್ಟುಕೊಂಡು ರಾಜರಾಜೇಶ್ವರಿ ನಗರ ( Rajarajeshwari Nagar ) ಕ್ಷೇತ್ರದ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಪಕ್ಷ ( Congress Party ) ಸಂಘಟನೆಗೆ ಕೈ ಹಾಕಿರುವ ಡಿ.ಕೆ ಶಿವಕುಮಾರ್ ( D.K. Shivakumar ) ಹಾಗು ಡಿ.ಕೆ ಸುರೇಶ್ ( D.K. Suresh ) ಹಾಲಿ ಶಾಸಕ ಮುನಿರತ್ನ ಬೆಂಬಲಿಗರಿಗೆ ಗಾಳ ಹಾಕಿದ್ದಾರೆ. ಈ ಮೂಲಕ ಮುನಿರತ್ನಗೆ ಬಿಗ್ ಶಾಕ್ ನೀಡಿದ್ದಾರೆ ಡಿಕೆ ಬ್ರದರ್ಸ್. ಇದರ ನಡುವೆ ಶಾಸಕ ಮುನಿರತ್ನ ಅತ್ಯಾಪ್ತ ಎಂದೇ ಗುರುತಿಸಿದ್ದ ಮಾಜಿ ಕಾರ್ಪೋರೇಟರ್ ವೇಲು ನಾಯ್ಕರ್ ಸಿಡಿಸಿರುವ ಬಾಂಬ್ ತೀವ್ರತೆ ಪಡೆದುಕೊಂಡಿದೆ.
ಶಾಸಕ ಮುನಿರತ್ನ ವಿರುದ್ಧ ವೇಲು ನಾಯ್ಕರ್ ಆರೋಪ..!
ಬಿಬಿಎಂಪಿ ಚುನಾವಣೆ ಹೊಸ್ತಿಲಲ್ಲಿ ಹನಿಟ್ರ್ಯಾಪ್ ಸದ್ದು ಮಾಡುತ್ತಿದೆ. ಶಾಸಕ ಮುನಿರತ್ನ ಆಪ್ತ ವೇಲು ನಾಯ್ಕರ್ ಹನಿಟ್ರ್ಯಾಪ್ ಆರೋಪ ಮಾಡಿದ್ದು, ಸ್ವತಃ ಶಾಸಕ ಮುನಿರತ್ನ ಹನಿಟ್ರ್ಯಾಪ್ ಮಾಡಿಸುತ್ತಿದ್ದರು ಎಂದಿದ್ದಾರೆ ಮಾಜಿ ಕಾರ್ಪೋರೇಟರ್ ವೇಲು ನಾಯ್ಕರ್. ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ ಆಗುವ ಕಾರ್ಯಕ್ರಮದಲ್ಲಿ ವೇಲು ನಾಯ್ಕರ್ ಈ ಗಂಭೀರ ಆರೋಪ ಮಾಡಿದ್ದಾರೆ. ಸಚಿವರಾಗಿದ್ದ ವೇಳೆ ಮುನಿರತ್ನ ಹನಿಟ್ರ್ಯಾಪ್ ಮಾಡಿಸುತ್ತಿದ್ದರು. ಕಳೆದ ಬಾರಿ ನಾವು ಮುನಿರತ್ನ ಅವರ ಪರ ಕೆಲಸ ಮಾಡಲು ನಾವು ಸಿದ್ಧರಿರಲಿಲ್ಲ. ಹಾಗಾಗಿ ಮುನಿರತ್ನ ನಿಮ್ಮಗಳ ಈಸ್ಟ್ ಮನ್ ಕಲರ್ ಪಿಕ್ಚರ್ ಇದೆ ತೋರಿಸ್ಲಾ ಇಲ್ಲ ಕೆಲಸ ಮಾಡ್ತಿರಾ ಅಂತ ಹೆದರಿಸುತ್ತಿದ್ದರು, ಇದೇ ಕಾರಣಕ್ಕಾಗಿ ಅನಿವಾರ್ಯವಾಗಿ ಬಿಜೆಪಿ ಪರ ಕೆಲಸ ಮಾಡಬೇಕಾಯ್ತು ಎಂದಿದ್ದಾರೆ.
RR ನಗರ, ಡಾಲರ್ಸ್ ಕಾಲೋನಿಯಲ್ಲಿ ಹನಿಟ್ರ್ಯಾಪ್ ಸ್ಟುಡಿಯೋ..!
ಸಚಿವರಾಗಿದ್ದ ವೇಳೆ ಹನಿಟ್ರ್ಯಾಪ್ ಮಾಡಿಸುವುದಕ್ಕೆ ಪ್ರತ್ಯೇಕವಾಗಿ ಎರಡು ಸ್ಟುಡಿಯೋಗಳನ್ನು ಮಾಡಿಕೊಂಡಿದ್ದರು. ಯಶವಂತಪುರ ಬಳಿಯ ಜೆಪಿ ಪಾರ್ಕ್‌ನಲ್ಲಿ ಹನಿಟ್ರ್ಯಾಪ್ಗಾಗಿ ಪ್ರತ್ಯೇಕ ಸ್ಟುಡಿಯೋ ಇದೆ. ಅದೇ ರೀತಿ ಡಾಲರ್ಸ್ ಕಾಲೊನಿಯಲ್ಲೂ ಒಂದು ಹನಿಟ್ರ್ಯಾಪ್ ಸ್ಟುಡಿಯೋ ಇದೆ ಎಂದಿದ್ದಾರೆ. ಹನಿಟ್ರ್ಯಾಪ್ ಮಾಡುವುದಕ್ಕೆ ಅಂತಾನೇ ಮುನಿರತ್ನ ಸ್ಟುಡಿಯೋ ಇಟ್ಟುಕೊಂಡಿದ್ದಾರೆ. ಆಂಟಿಯರನ್ನು ಬಳಸಿಕೊಂಡು ಹನಿಟ್ರ್ಯಾಪ್ ಮಾಡೋದು, ಆಮೇಲೆ ಹೆದರಿಸೋದು ಮುನಿರತ್ನ ಕಾಯಕ ಎಂದಿರುವ ವೇಲು ನಾಯ್ಕರ್, ಮುನಿರತ್ನ ಮಾಡಿದ ಮೊದಲ ಚಿತ್ರ ಆಂಟಿ ಪ್ರೀತ್ಸೆ. ಹೀಗಾಗಿ ಅವರು ಸಚಿವರಾದ ಮೇಲೂ ವಿಧಾನಸೌಧ ಚೇಂಬರ್ನಲ್ಲೆಲ್ಲ ಬರೀ ಆಂಟಿಯರೇ ಇರ್ತಿದ್ರು. ಸಿನಿಮಾ ಪ್ರೊಡ್ಯುಸರ್ ಅಲ್ವಾ ಹಾಗಾಗಿ ಹನಿಟ್ರ್ಯಾಪ್ ಮಾಡೋದು ಸಲೀಸು ಎಂದಿದ್ದಾರೆ.
ಸೋಲಿನ ಸೇಡು ಪಾಲಿಕೆಯಲ್ಲಿ ತೀರಿಸಲು ಕಸರತ್ತು..!
ವಿಧಾನಸಭಾ ಚುನಾವಣೆಯಲ್ಲಿ ಕುಸುಮಾ ಹನುಮಂತರಾಯಪ್ಪ ಕಾಂಗ್ರೆಸ್ ಅಭ್ಯರ್ಥಿ ಆಗಿ ಸೋಲುಂಡಿದ್ದರು. ಸ್ವತಃ ಸಂಸದ ಡಿ.ಕೆ ಸುರೇಶ್ ನೇತೃತ್ವದಲ್ಲಿ ಚುನಾವಣೆ ನಡೆದರೂ ಸೋಲು ಎದುರಾಗಿತ್ತು. ಆ ಸೋಲಿಗೆ ಪ್ರಮುಖ ಕಾರಣ ಶಾಸಕ ಮುನಿರತ್ನ ಆಪ್ತ ವಲಯದಲ್ಲಿ ಗುರುತಿಸಿದ್ದ ವೇಲು ನಾಯ್ಕರ್, ಮೋಹನ್ ಕುಮಾರ್, ಶ್ರೀನಿವಾಸ್ ಮೂರ್ತಿ ಎನ್ನುವುದನ್ನು ಮನಗಂಡ ಕಾಂಗ್ರೆಸ್ ನಾಯಕರು, ಆ ಮೂವರನ್ನು ಕಾಂಗ್ರೆಸ್ಗೆ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ಅವಧಿಯಲ್ಲಿ ಪಾಲಿಕೆ ಸದಸ್ಯರಾಗಿ ಆಯ್ಕೆ ಆಗಿದ್ದ ಈ ಮೂವರು, ಡಿಸಿಎಂ ಡಿ.ಕೆ ಶಿವಕುಮಾರ್ ಹಾಗೂ ಸಂಸದ ಡಿ.ಕೆ ಸುರೇಶ್ ಸಮ್ಮುಖದಲ್ಲೇ ಕಾಂಗ್ರೆಸ್ ಸೇರ್ಪಡೆ ಆಗಿದ್ದಾರೆ. ಕಾಂಗ್ರೆಸ್ ಸೇರುತ್ತಿದ್ದ ಹಾಗೆ ಮಾಜಿ ಸಚಿವ ಮುನಿರತ್ನ ವಿರುದ್ಧ ಗಂಭೀರ ಆರೋಪ ಮಾಡಿರುವುದು ಸಂಚಲನ ಸೃಷ್ಟಿಸಿದೆ.
ಕೃಷ್ಣಮಣಿ