ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಎರಡನೇ ವಿಮಾನ ನಿಲ್ದಾಣ ನಿರ್ಮಾಣ ಆಗುವ ನಿರೀಕ್ಷೆ ಇದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿರುವುದರಿಂದ ರಾಜ್ಯ ರಾಜಧಾನಿಗೆ ಮತ್ತೊಂದು ವಿಮಾನ ನಿಲ್ದಾಣದ ಅಗತ್ಯ ಇದೆ ಎಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಎಂಡಿ ಮತ್ತು ಸಿಇಒ ಹರಿ ಮರರ್ ಹೇಳಿದ್ದಾರೆ.
ಬುಧವಾರ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, 2032 – 33ರ ಹೊತ್ತಿಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೂ ವಾರ್ಷಿಕ 9.2 ಕೋಟಿ ಪ್ರಯಾಣಿಕರನ್ನು ನಿರ್ವಹಿಸಲಿದೆ ಎಂದು ಅಂದಾಜಿಸಲಾಗಿದೆ. ಈ ವರ್ಷ 4 ಕೋಟಿ ಪ್ರಯಾಣಿಕರು ನಮ್ಮ ವಿಮಾನ ನಿಲ್ದಾಣದಲ್ಲಿ ಸಂಚರಿಸಲಿದ್ದಾರೆ. ಅದಕ್ಕಾಗಿ ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣದ ಅಗತ್ಯ ಇದೆ ಎಂದು ಹೇಳಿದರು.
ನಮ್ಮ ವಿಮಾನ ನಿಲ್ದಾಣದ 30+30 ವರ್ಷದ ರಿಯಾಯಿತಿ ಅವಧಿಯ ಮೊದಲಾರ್ಧದಲ್ಲಿಯೇ ಪೂರ್ತಿ ಪ್ರಯಾಣಿಕರ ಸಾಮರ್ಥ್ಯವನ್ನು ತಲುಪುತ್ತಿದ್ದು, ಈ ಹಿನ್ನೆಲೆ ಪ್ರಯಾಣಿಕರ ದಟ್ಟಣೆಯನ್ನು ಕಡಿಮೆ ಮಾಡಲು ಹೊಸ ವಿಮಾನ ನಿಲ್ದಾಣ ಆಗಬೇಕು ಎಂದು ಹೇಳಿದ್ದಾರೆ. ವಿಮಾನ ನಿಲ್ದಾಣಕ್ಕಾಗಿ ಎರಡು ವರ್ಷಗಳ ಮುಂಚೆಯೇ ಭೂಮಿ ಗುರುತಿಸಿ, ಅದನ್ನು ಸ್ವಾಧೀನಪಡಿಸಿಕೊಳ್ಳುವ ಕೆಲಸ ಆಗಬೇಕಿತ್ತು ಎಂದು ಅವರು ಹೇಳಿದ್ದು, ಸರ್ಕಾರದ ಮುಂದೆ ಈ ಯೋಜನೆ ಇದೆ ಎಂದು ಹೇಳಿದ್ದಾರೆ.