‘ಘಜನಿ’, ‘7 ಆಮ್ ಅರಿವು’, ‘ತುಪಾಕಿ’, ‘ಕತ್ತಿ’, ‘ದರ್ಬಾರ್’ ಮುಂತಾದ ಸೂಪರ್ ಹಿಟ್ ತಮಿಳು ಚಿತ್ರಗಳ ನಿರ್ದೇಶಕರಾದ ಎ.ಆರ್. ಮುರುಗದಾಸ್, ಈಗ ಸದ್ದಿಲ್ಲದೆ ಒಂದು ಚಿತ್ರವನ್ನು ನಿರ್ಮಿಸಿದ್ದಾರೆ. ಇತ್ತೀಚೆಗೆ ಆ ಚಿತ್ರದ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಅಧಿಕೃತವಾಗಿ ಘೋಷಿಸಿದ್ದಾರೆ.
ಮುರುಗದಾಸ್ ನಿರ್ಮಾಣದ ಚಿತ್ರದ ಹೆಸರು ‘ಆಗಸ್ಟ್ 16, 1947’. ಹೆಸರು ಕೇಳಿದರೆ, ಇದು ಸ್ವಾತಂತ್ರ್ಯ ಸಂಗ್ರಾಮ ಕಥೆ ಇದ್ದಿರಬಹುದು ಎಂದನಿಸಬಹುದು. ಹೌದು, ಇದು ಸ್ವಾತಂತ್ರ್ಯ ಸಂಗ್ರಾಮದ ಕಥೆಯೇ. ಆದರೆ, ಇದುವರೆಗೂ ಯಾರೂ ಹೇಳದ ಮತ್ತು ತೋರಿಸದ ಒಂದು ವಿಭಿನ್ನ ಮತ್ತು ವಿಶೇಷ ಕಥೆಯನ್ನು ಈ ಚಿತ್ರದಲ್ಲಿ ತೋರಿಸಲಾಗುತ್ತಿದೆ.. ಬ್ರಿಟಿಷ್ ಸಾಮ್ರಾಜ್ಯದ ಎದುರು ಒಂದು ಸಣ್ಣ ಹಳ್ಳಿಯ ಜನ ತೊಡೆ ತಟ್ಟಿ ನಿಲ್ಲುವುದರ ಜೊತೆಗೆ, ಹೇಗೆ ನಿದ್ದೆ ಕೆಡಿಸಿದರು ಎಂಬುದನ್ನು ಈ ಚಿತ್ರದ ಮೂಲಕ ಹೇಳಲಾಗಿದೆ.
ಅಂದಹಾಗೆ, ಚಿತ್ರಕ್ಕೆ ಕಥೆ ಬರೆಯುವುದರ ಜೊತೆಗೆ ನಿರ್ದೇಶನ ಮಾಡಿದ್ದಾರೆ ನವನಿರ್ದೇಶಕ ಎನ್.ಎಸ್. ಪೊನ್ ಕುಮಾರನ್. ಇದೊಂದು ಪ್ಯಾನ್ ಇಂಡಿಯಾ ಚಿತ್ರವಾಗಿದ್ದು ತಮಿಳು, ತೆಲುಗು, ಕನ್ನಡ, ಹಿಂದಿ ಮತ್ತು ಮಲಯಾಳಂನಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ.
ಪರ್ಪಲ್ ಬುಲ್ ಎಂಟರ್ಟೈನ್ಮೆಂಟ್ ಅರ್ಪಿಸಿ, ಎ.ಆರ್. ಮುರುಗದಾಸ್, ಓಂಪ್ರಕಾಶ್ ಭಟ್ ಮತ್ತು ನರಸೀರಾಮ್ ಚೌಧರಿ ಜಂಟಿಯಾಗಿ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ಗೌತಮ್ ಕಾರ್ತಿಕ್, ನವನಟಿ ರೇವತಿ, ಪುಗಳ್ ಸೇರಿದಂತೆ ಹಲವು ಪ್ರತಿಭಾವಂತ ನಟ-ನಟಿಯರು ಅಭಿನಯಿಸಿದ್ದಾರೆ.
ಅಂದಹಾಗೆ, ‘ಆಗಸ್ಟ್ 16, 1947’ ಚಿತ್ರವು ಏಪ್ರಿಲ್ 07ರಂದು ಚಿತ್ರ ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ.