• Home
  • About Us
  • ಕರ್ನಾಟಕ
Thursday, October 23, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ

ನಿತ್ಯ ಬದುಕಿಗೆ ಹತ್ತಿರವಾಗುವ ಕವಿ – ಗುಲ್ಜಾರ್‌: ಸೂಕ್ಷ್ಮ ಸಂವೇದನೆಯ ಜನಪ್ರಿಯ ಕವಿಗೆ ಜ್ಞಾನಪೀಠ ದೊರೆತಿರುವುದು ಸ್ವಾಗತಾರ್ಹ

ನಾ ದಿವಾಕರ by ನಾ ದಿವಾಕರ
February 23, 2024
in ಅಂಕಣ
0
ನಿತ್ಯ ಬದುಕಿಗೆ ಹತ್ತಿರವಾಗುವ ಕವಿ – ಗುಲ್ಜಾರ್‌: ಸೂಕ್ಷ್ಮ ಸಂವೇದನೆಯ ಜನಪ್ರಿಯ ಕವಿಗೆ ಜ್ಞಾನಪೀಠ ದೊರೆತಿರುವುದು ಸ್ವಾಗತಾರ್ಹ
Share on WhatsAppShare on FacebookShare on Telegram

-ನಾ ದಿವಾಕರ

ಭಾರತದ ಪ್ರತಿಷ್ಠಿತ ಸಾಹಿತ್ಯ ಪ್ರಶಸ್ತಿ ಜ್ಞಾನಪೀಠ ಈ ವರ್ಷ ಗುಲ್ಜಾರ್‌ ಎಂಬ ಕಾವ್ಯನಾಮದೊಂದಿಗೆ ಭಾರತದ ಜನಮಾನಸದಲ್ಲಿ ಅಚ್ಚೊತ್ತಿರುವ ಜನಪ್ರಿಯ ಕವಿ ಸಂಪೂರಣ್‌ ಸಿಂಗ್‌ ಕಾಲ್ರಾ ಅವರಿಗೆ ದೊರೆತಿರುವುದು ಕಾವ್ಯಪ್ರಿಯರಿಗೆ ಖುಷಿ ನೀಡುವ ಸಂಗತಿ. ಸಾಹಿತ್ಯದ ಹಲವು ಪ್ರಕಾರಗಳಲ್ಲಿ ತನ್ನದೇ ಆದ ವೈಶಿಷ್ಟ್ಯ ಹಾಗೂ ಚಾರಿತ್ರಿಕ ಲಕ್ಷಣಗಳನ್ನು ಪಡೆದುಕೊಂಡಿರುವ ಕಾವ್ಯ ಸಮಾಜದ ಗರ್ಭದಿಂದಲೇ ಉಗಮಿಸುವ ಅಕ್ಷರ ರೂಪದ ಅಭಿವ್ಯಕ್ತಿ ಎನ್ನುವುದು ಚಾರಿತ್ರಿಕ ಸತ್ಯ. ಇದಮಿತ್ಥಂ ಎಂಬ ನಿಯಮಬದ್ಧತೆಗೆ ಒಳಪಡದೆ ತನ್ನದೇ ಆದ ವೈವಿಧ್ಯಮಯ ಕವಲುಗಳಲ್ಲಿ ಕಾವ್ಯ ಕೃಷಿ ದೇಶ ಭಾಷೆಗಳ ಗಡಿಗಳನ್ನು ಲಂಘಿಸಿ ತಳಮಟ್ಟದವರೆಗೂ ತನ್ನ ಅಂತರ್ಗತ ಅಭಿವ್ಯಕ್ತಿಯನ್ನು ಮುಟ್ಟಿಸುವುದನ್ನು ಇತಿಹಾಸದುದ್ದಕ್ಕೂ ಕಾಣಬಹುದು. ಆಧುನಿಕ ಭಾರತದ ಕಾವ್ಯ ಪರಂಪರೆ ರವೀಂದ್ರರಿಂದ ಇತ್ತೀಚಿನವರೆಗೂ ಈ ಕವಲುಗಳಲ್ಲೇ ಮತ್ತಷ್ಟು ಉಪಮಾರ್ಗಗಳನ್ನು ಶೋಧಿಸುತ್ತಾ ತನ್ನ ಅಸ್ತಿತ್ವವನ್ನು ಉಳಿಸಿಕೊಂಡುಬಂದಿದೆ.

ADVERTISEMENT

ಸಮಾಜ, ಸಮುದಾಯ, ಸಂಸ್ಕೃತಿ ಹಾಗೂ ಸಾಮಾನ್ಯ ಜನಜೀವನದ ಚಟುವಟಿಕೆಗಳ ನಡುವೆ ಕೆಲವೊಮ್ಮೆ ಸ್ವಯಂಭೂ ಎಂಬಂತೆ, ಕೆಲವೊಮ್ಮೆ ರಚನಾತ್ಮಕವಾಗಿ, ಇನ್ನು ಕೆಲವು ಸಂದರ್ಭಗಳಲ್ಲಿ ಶೂನ್ಯದಿಂದಲೇ ಉಗಮಿಸುವ ವ್ಯಕ್ತಿಗತ ಅಭಿವ್ಯಕ್ತಿಗಳು ಕಾವ್ಯದ ಹಾದಿಯಲ್ಲಿ ತನ್ನದೇ ಆದ ವೈವಿಧ್ಯತೆಗಳನ್ನೂ ಗಳಿಸಿಕೊಳ್ಳುತ್ತವೆ. ಬಹುಸಾಂಸ್ಕೃತಿಕ ನೆಲೆಗಳ ಭಾರತದ ಸಾಹಿತ್ಯ ಪರಂಪರೆಯಲ್ಲಿ ರಾಜಮಹಾರಾಜರಿಂದ ಪಾಮರರವರೆಗೂ ಪ್ರಭಾವಿಸಿರುವ ಕಾವ್ಯ ಕೃಷಿ ಇಂದಿಗೂ ಸಹ ಜನಮಾನಸವನ್ನು ಕ್ಲುಪ್ತವಾಗಿ ತಲುಪುವ ಒಂದು ಅಕ್ಷರ ಮಾರ್ಗವಾಗಿದೆ. ನೂರು ವರ್ಷದ ಹಿಂದೆ ಠಾಗೋರರು ಬರೆದ ಕವಿತೆಯೊಂದು ವರ್ತಮಾನದ ಸಮಾಜದಲ್ಲೂ ಪ್ರತಿಗಾಮಿ ಚಿಂತನೆಗಳಿಗೆ ಎಲೆಕ್ಟ್ರಿಕ್‌ ಶಾಕ್‌ ನೀಡುವುದನ್ನು ಗಮನಿಸಿದಾಗ (ಮಂಗಳೂರಿನ ಸಂತ ಜೆರೋಸಾ ಶಾಲೆಯ ಪ್ರಕರಣ) ಕಾವ್ಯದ ಅಂತಃಶಕ್ತಿ ಮತ್ತು ಸಾರ್ವಕಾಲಿಕತೆ ಅರ್ಥವಾಗುತ್ತದೆ.

ಒಬ್ಬ ಕವಿಯ ಉಗಮ ಮತ್ತು ಹಾದಿ: ಭಾರತೀಯ ಸಮಾಜವನ್ನು ಬೌದ್ಧಿಕವಾಗಿ ಪ್ರಾಚೀನತೆಯ ಕಡೆಗೆ ಕರೆದೊಯ್ಯುತ್ತಿರುವ ಸಾಂಪ್ರದಾಯಿಕ ಶಕ್ತಿಗಳ ಹಿಮ್ಮುಖ ಚಲನೆಯ ಪ್ರಯತ್ನಗಳ ನಡುವೆಯೇ ಜನಮಾನಸದ ಕವಿ, ಸಹೃದಯ-ಸಂವೇದನಾಶೀಲ-ಮನುಜಸೂಕ್ಷ್ಮತೆಯ ಕವಿ ಗುಲ್ಜಾರ್‌ ಅವರಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿರುವುದು ಕಾವ್ಯಪ್ರಿಯರಿಗಷ್ಟೇ ಅಲ್ಲದೆ ಸಮಾಜಮುಖಿಯಾಗಿ ಆಲೋಚನೆ ಮಾಡುವ ಎಲ್ಲರಿಗೂ ಮುದ ನೀಡುವ ಸಂದರ್ಭ. ಬಾಲಿವುಡ್‌ ಚಿತ್ರಗಳ ಮೂಲಕ ದೇಶವ್ಯಾಪಿಯಾಗಿ ಪರಿಚಿತರಾಗಿರುವ ಗುಲ್ಜಾರ್‌ ಅವರಲ್ಲಿ ಒಬ್ಬ ಶ್ರೇಷ್ಠ ಕವಿ ಇರುವುದು ಅವರ ಅಕ್ಷರ ಕೃಷಿಯೊಳಗೆ ಹೊಕ್ಕು ನೋಡಿದಾಗ ತಿಳಿಯುತ್ತದೆ. 1934ರ ಆಗಸ್ಟ್‌ 18ರಂದು ಅವಿಭಜಿತ ಭಾರತದ ಜೇಲಮ್‌ ಜಿಲ್ಲೆಯಲ್ಲಿ ಜನಿಸಿದ ಸಂಪೂರಣ್‌ ಸಿಂಗ್‌ ಕಾಲ್ರಾ ತಮ್ಮ ಎಳೆ ವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡು, ಮಲತಾಯಿಯ ಅವಗಣನೆಗೆ ತುತ್ತಾಗಿ ಬೆಳೆದವರು. ತಂದೆಯ ಪುಟ್ಟ ಅಂಗಡಿಯಲ್ಲೇ ಹೆಚ್ಚು ಬಾಲ್ಯವನ್ನು ಕಳೆದ ಗುಲ್ಜಾರ್‌ ತಮ್ಮ ವ್ಯಾಸಂಗದಲ್ಲಿ ಹೆಚ್ಚು ಆಸಕ್ತಿ ತೋರಿದವರಲ್ಲ. ಆದರೆ ಬಾಲ್ಯದಿಂದಲೇ ವಿಶ್ವಕವಿ ರವೀಂದ್ರನಾಥ ಠಾಗೋರ್‌ ಮತ್ತು ಶರತ್‌ ಚಂದ್ರ ಚಟರ್ಜಿ ಅವರಿಂದ ಪ್ರಭಾವಿತರಾಗಿದ್ದರು.

ವಿಭಜನೆಯ ಭೀಕರ ದಿನಗಳನ್ನು ಎದುರಿಸಿದ ಗುಲ್ಜಾರ್‌ ಅವರ ಕುಟುಂಬ ಮೊದಲು ಅಮೃತಸರದಲ್ಲಿ ಬೀಡುಬಿಟ್ಟು ನಂತರ ದೆಹಲಿಗೆ ಬಂದು ನೆಲೆಸಿತ್ತು. ತಂದೆಯನ್ನು ಕಾಡಿದ್ದ ಬಡತನ ಗುಲ್ಜಾರ್‌ ಅವರನ್ನು ಹಿಮ್ಮೆಟ್ಟಿಸಲಿಲ್ಲ. ಪೆಟ್ರೋಲ್‌ ಬಂಕ್‌ ಒಂದರಲ್ಲಿ ನೌಕರಿ ಮಾಡುತ್ತಾ ತಮ್ಮ ವ್ಯಾಸಂಗ ಮುಂದುವರೆಸಿದ್ದರು. ಕೆಲವು ವರ್ಷಗಳ ನಂತರ ಮುಂಬಯಿಗೆ ಬಂದ ಗುಲ್ಜಾರ್‌ ಅಲ್ಲಿ ತಮ್ಮ ಕರ್ಮಭೂಮಿಯನ್ನೂ ಕಂಡುಕೊಂಡರು. ಅವರಲ್ಲಿದ್ದ ಸಾಹಿತ್ಯಾಸಕ್ತಿ, ಅಧ್ಯಯನಶೀಲತೆ ಮತ್ತು ಸೂಕ್ಷ್ಮ ಸಂವೇದನೆಗಳು ಗುಲ್ಜಾರ್‌ ಅವರನ್ನು ಸಾಹಿತ್ಯ ವಲಯಕ್ಕೆ ಪ್ರವೇಶಿಸುವಂತೆ ಮಾಡಿತ್ತು. ಮೋಟಾರು ಗ್ಯಾರೇಜ್‌ ಒಂದರಲ್ಲಿ ದುಡಿಯುತ್ತಲೇ ಗುಲ್ಜಾರ್‌ ಮುಂಬಯಿಯ ಸಾಹಿತಿಗಳೊಡನೆ ಸಂಪರ್ಕ ಬೆಳೆಸಿಕೊಂಡರು. ಪ್ರಗತಿಪರ ಲೇಖಕರ ಸಂಘದ ಸಭೆಗಳಲ್ಲಿ ಭಾಗವಹಿಸತೊಡಗಿದರು. ಅಲ್ಲಿ ಆ ದಿನಗಳ ಪ್ರಸಿದ್ಧ ಗೀತರಚನೆಕಾರ ಶೈಲೇಂದ್ರ ಅವರ ಪರಿಚಯವಾಗಿದ್ದು ಗುಲ್ಜಾರ್‌ ಅವರ ಬದುಕಿಗೆ ಹೊಸ ತಿರುವು ನೀಡಿತ್ತು.

ಸುಂದರ ಉದ್ಯಾನದ ಕುಸುಮ:
1950-60ರ ದಶಕ ಈಗ ಬಾಲಿವುಡ್‌ ಎನ್ನಲಾಗುವ ಹಿಂದಿ ಚಿತ್ರರಂಗದ ಸುವರ್ಣಯುಗ. ಆ ಕಾಲಘಟ್ಟದ ಸಿನೆಮಾ ಹಾಡುಗಳಲ್ಲಿ ಮನರಂಜನೆಯ ಜೊತೆಗೇ ಶುದ್ಧ ಕಾವ್ಯಸ್ಪರ್ಶ ಇರುತ್ತಿತ್ತು. ಸಾಹಿರ್‌ ಲುಧಿಯಾನ್ವಿ, ಶೈಲೇಂದ್ರ, ಶಕೀಲ್‌ ಬದಾಯುನಿ, ಮಜರೂಹ್‌ ಸುಲ್ತಾನ್‌ಪುರಿ, ಹಸರತ್‌ ಜೈಪುರಿ, ಕೈಫಿ ಅಜ್ಮಿ, ಮುಂತಾದ ಕವಿಗಳು ಸಿನೆಮಾ ಸಂಗೀತಕ್ಕೆ ಪೂರಕವಾದ ಹಾಡು/ಪದ್ಯ/ಕವಿತೆಗಳನ್ನು ರಚಿಸಲಾರಂಭಿಸಿದ್ದರು. ಈ ಪರಂಪರೆಯ ಬಹುಪಾಲು ಕವಿಗಳು ಎಡಪಂಥೀಯ ಚಿಂತನೆಗಳಿಂದ ಪ್ರಭಾವಿತರಾಗಿದ್ದುದರಿಂದ, ಅವರ ಕಾವ್ಯಕುಂಚದಿಂದ ಮೂಡಿದ ಸಾಲುಗಳು ಜನಮಾನಸಕ್ಕೆ ಹತ್ತಿರವಾಗಿರುತ್ತಿದ್ದವು. ಇಂತಹ ದಿಗ್ಗಜರ ನಡುವೆಯೇ ಅರಳಿದ ಕಾವ್ಯ ಕುಸುಮ ಗುಲ್ಜಾರ್‌. 1960ರ ಆದಿಯಲ್ಲಿ ಬಿಮಲ್‌ ರಾಯ್‌ ಅವರ ʼ ಬಂದಿನಿ ʼ ಗುಲ್ಜಾರ್ ಅವರ ಕಾವ್ಯಪಯಣದ ಮೊದಲ ಹೆಜ್ಜೆ. ಸಂಗೀತ ನಿರ್ದೇಶಕ ಎಸ್.ಡಿ. ಬರ್ಮನ್‌ ಮತ್ತು ಕವಿ ಶೈಲೇಂದ್ರ ಅವರ ನಡುವೆ ಏರ್ಪಟ್ಟ ತಾತ್ಕಾಲಿಕ ಮನಸ್ತಾಪ, ಗುಲ್ಜಾರ್‌ಗೆ ಬಾಗಿಲು ತೆರೆದಂತಾಗಿತ್ತು. ಶೈಲೇಂದ್ರ ಅವರ ಸಲಹೆಯ ಮೇಲೆ ಬಿಮಲ್‌ ರಾಯ್‌ ಅವರನ್ನು ಸಂಪರ್ಕಿಸಿದ ಗುಲ್ಜಾರ್‌ ಈ ಚಿತ್ರದಲ್ಲಿ ರಚಿಸಿದ ತಮ್ಮ ಮೊದಲ ಗೀತೆ “ ಮೋರ ಗೋರ ಅಂಗ್‌ ಲೈ ಲೆ ಮೊಹೆ ಶ್ಯಾಮ್‌ ರಂಗ್‌ ದೈ ದೇ ” ಇಂದಿಗೂ ಸಂಗೀತ ಪ್ರಿಯರ ಮನತಣಿಸುತ್ತಲೇ ಇದೆ. 1962 ರಲ್ಲಿ ತೆರೆಕಂಡ ಬಲರಾಜ್‌ ಸಹಾನಿ ನಟಿಸಿದ ಕಾಬೂಲಿವಾಲಾ ಚಿತ್ರದ “ ಗಂಗಾ ಆಯೆ ಕಹ್ಞಾಂಸೇ ಗಂಗಾ ಜಾಯೇ ಕಹ್ಞಾಂ ರೇ ” ಹಾಡು ಇಂದಿಗೂ ಗುನುಗುನಿಸಬಹುದಾದ ಸುಂದರ ಕವಿತೆ.

ಬಿಮಲ್‌ ರಾಯ್‌ ಅವರ ಸಹಾಯಕರಾಗಿ ಕೆಲ ಕಾಲ ಸಕ್ರಿಯರಾಗಿದ್ದ ಗುಲ್ಜಾರ್‌ ಖ್ಯಾತ ನಟಿ ಮೀನಾಕುಮಾರಿ ಅವರೊಂದಿಗೂ ಆಪ್ತ ಸಂಬಂಧ ಬೆಳೆಸಿಕೊಂಡಿದ್ದುದು ಈಗ ದಂತಕತೆಯಾಗಿದೆ. ಮೀನಾ ಕುಮಾರಿ ಗಂಭೀರವಾಗಿ ಅಸ್ವಸ್ಥರಾಗಿದ್ದ ಸಮಯದಲ್ಲಿ ಅವರಿಗೆ ರಂಜಾನ್‌ ಉಪವಾಸ ಮಾಡಲು ಬಿಡದೆ, ಅವರ ಪರವಾಗಿ ತಾವು ಉಪವಾಸ ಮಾಡಿದ್ದ ಗುಲ್ಜಾರ್‌, ಆಕೆಯ ನಿಧನದ ನಂತರವೂ ಕೆಲ ಕಾಲ ರಂಜಾನ್‌ ಉಪವಾಸವನ್ನು ಆಚರಿಸುತ್ತಿದ್ದರು ಎಂದು ಹೇಳಲಾಗುತ್ತದೆ. ಗುಲ್ಜಾರ್‌ ಅವರಿಂದ ಪ್ರೇರಿತರಾದ ಮೀನಾ ಕುಮಾರಿ ಕೆಲವು ಗಜಲ್‌ಗಳನ್ನೂ ರಚಿಸಿರುವುದು ಗಮನಾರ್ಹ ಸಂಗತಿ. ಗುಲ್ಜಾರ್‌ ಅವರ ಮೊದಲ ಬಾಲಿವುಡ್‌ ಚಿತ್ರ ಮೇರೇ ಅಪ್ನೆ ಚಿತ್ರದಲ್ಲಿ ಮೀನಾಕುಮಾರಿ ಪ್ರಧಾನ ಪಾತ್ರವಾಗಿ ನಟಿಸಿದ್ದರು. ಆಕೆಯ ನಿಧನಾನಂತರ ಆ ಕಾಲದ ಮೇರು ನಟಿ ಎನಿಸಿಕೊಂಡಿದ್ದ ರಾಖಿ ಅವರೊಂದಿಗೆ ಗುಲ್ಜಾರ್‌ ಮದುವೆಯಾಗಿದ್ದರು. ಈಗ ದಂಪತಿಗಳು ವಿಚ್ಚೇದನ ಪಡೆಯದೇ ಬೇರೆಯಾಗಿದ್ದಾರೆ. ತಮ್ಮ ಒಂದು ಕವಿತೆಯಲ್ಲಿ ಗುಲ್ಜಾರ್‌ “ ಸಂಜೆಯಿಂದಲೇ ನನ್ನ ಕಣ್ಣುಗಳು ತೇವವಾದಂತಿವೆ ಇಂದು ಮತ್ತೆ ನಿಮ್ಮ ಗೈರು ಕಾಡುತ್ತಿದೆ ” ಎಂದು ಹೇಳುವಾಗ ಬಹುಶಃ ಅವರ ಬದುಕಿನ ಈ ಕ್ಷಣಗಳೂ ಎದುರಾಗುತ್ತವೆ.

ಕವಿ, ಕಾದಂಬರಿಕಾರ, ಕತೆಗಾರ, ಗೀತರಚನೆಕಾರ, ಚಿತ್ರಕತೆ ಲೇಖಕ, ನಾಟಕಕಾರ, ಸಂಭಾಷಣೆಕಾರ, ನಿರ್ಮಾಪಕ, ನಿರ್ದೇಶಕ, ಬುದ್ಧಿಜೀವಿ ಹೀಗೆ ಹಲವು ಗುಣವಿಶೇಷಣಗಳಿಗೆ ಭಾಜನರಾಗುವ ಗುಲ್ಜಾರ್‌ ಮೂಲತಃ ಒಬ್ಬ ಸಂವೇದನಾಶೀಲ ಕವಿ. ಪದ್ಯ ಮತ್ತು ಗದ್ಯ ಎರಡೂ ಪ್ರಕಾರಗಳಲ್ಲಿ ಅವರ ಬರಹಗಳು ಹೊಸ ಹೊಳಹುಗಳನ್ನು ನೀಡುವುದನ್ನು ಗುರುತಿಸಬಹುದು. 1971ರಲ್ಲಿ ನಿರ್ಮಿಸಿದ ಮೇರೆ ಅಪ್ನೆ ಚಿತ್ರದಿಂದ ಇತ್ತೀಚಿನ ಸ್ಯಾಮ್‌ಬಹದ್ದೂರ್‌ವರೆಗೆ ಅವರ ಚಲನಚಿತ್ರದ ಪಯಣ ಸಾಗಿದೆ. ಸಾಮಾಜಿಕ ಸಂದೇಶದೊಂದಿಗೇ ಮನುಜ ಸಂಬಂಧಗಳ ಸೂಕ್ಷ್ಮತೆಗಳನ್ನು ತೆರೆದಿಡುವ ಕಥಾಹಂದರಗಳು ಗುಲ್ಜಾರ್‌ ಅವರ ಚಿತ್ರಗಳಲ್ಲಿ ಕಾಣಬಹುದಾದ ಲಕ್ಷಣ. ಆಶೀರ್ವಾದ್‌, ಆನಂದ್‌, ಕಾಮೋಷಿ ಮುಂತಾದ ಚಿತ್ರಗಳಿಗೆ ಚಿತ್ರಕತೆ ಮತ್ತು ಸಂಭಾಷಣೆ ಬರೆದ ಗುಲ್ಜಾರ್‌ ನಂತರ ಪರಿಚಯ್‌, ಕೋಶಿಶ್‌, ಅಚಾನಕ್‌, ಆಂಧಿ ಮುಂತಾದ ಹಲವು ಸೃಜನಾತ್ಮಕ ಚಿತ್ರಗಳನ್ನೂ ನಿರ್ಮಿಸಿದ್ದಾರೆ.

ಕಾಮೋಷಿ ಚಿತ್ರದ “ ಹಮ್ನೆ ದೇಖೀ ಹೈ ಇನ್‌ ಆಂಖೋಂ ಕೆ ಮೆಹಕ್ತಿ ಖುಷ್‌ಬೂ ” ಎಂಬ ಹಾಡಿನಲ್ಲಿ ಬರುವ “ ಪ್ಯಾರ್‌ ಕೋ ಪ್ಯಾರ್‌ ಹಿ ರೆಹನೇ ದೋ ಇಸೆ ಕೋಯೀ ನಾಮ್‌ ನಾ ದೋ ” ಎಂಬ ಸಾಲುಗಳು ಗುಲ್ಜಾರ್‌ ಅವರ ಮನುಜ ಸೂಕ್ಷ್ಮತೆ ಮತ್ತು ಸಂವೇದನೆಯನ್ನು ಎತ್ತಿತೋರಿಸುತ್ತವೆ. ಮನುಜ ಪ್ರೀತಿಗೆ ಹೆಸರನ್ನು ಆರೋಪಿಸುವ ಮೂಲಕ ಸಂಬಂಧಗಳಿಗೆ ವಿಭಿನ್ನ ಕಲ್ಪಿತ ಅರ್ಥಗಳನ್ನು ನೀಡುವ ಮಾನವ ಸಮಾಜದ ರೀತಿ ರಿವಾಜುಗಳಿಗೆ ಗುಲ್ಜಾರ್‌ ಈ ಸಾಲುಗಳ ಮೂಲಕ ಪ್ರತಿಕ್ರಯಿಸುತ್ತಾರೆ. ಎಸ್‌. ಡಿ. ಬರ್ಮನ್‌ ಅವರಿಂದ ಇತ್ತೀಚಿನ ಎ.ಆರ್.‌ ರೆಹಮಾನ್-ಶಂಕರ್‌ ಎಹಸಾನ್‌ ಲಾಯ್‌ ಅವರವರೆಗೆ ಎಲ್ಲ ತಲೆಮಾರಿನ ಸಂಗೀತ ದಿಗ್ದರ್ಶಕರೊಂದಿಗೆ ಒಡನಾಟ ಹೊಂದಿರುವ ಗುಲ್ಜಾರ್‌ ಎಲ್ಲ ಪೀಳಿಗೆಗಳಿಗೂ ತಲುಪುವಂತಹ ಸಾಹಿತ್ಯವನ್ನೂ ರಚಿಸುತ್ತಲೇ ಬಂದಿರುವುದು ಅವರ ಕಾವ್ಯಕೃಷಿಯ ಸಾರ್ವಕಾಲಿಕತೆಗೆ ಸಾಕ್ಷಿ.

1977ರಲ್ಲಿ ಬಿಡುಗಡೆಯಾದ ಕಿನಾರಾ ಚಿತ್ರದ “ ನಾಮ್‌ ಗುಮ್‌ ಹೋ ಜಾಯೇಗಾ ಚೆಹರಾ ಏ ಬದಲ್‌ ಜಾಯೆಗಾ ಮೇರಿ ಆವಾಜ್‌ ಹೀ ಪೆಹಚಾನ್‌ ಹೈ ” ಎಂಬ ಹಾಡಿನಲ್ಲಿ ಗುಲ್ಜಾರ್‌ ಎಲ್ಲ ಕಲಾವಿದರ ಜೀವನಾಭಿಲಾಷೆಯನ್ನು ಬಿಂಬಿಸುತ್ತಾರೆ. ದಿವಂಗತ ಲತಾ ಮಂಗೇಶ್ಕರ್‌ ಅವರ ನೆಚ್ಚಿನ ಗೀತೆಯಾಗಿದ್ದ ಈ ಹಾಡು ವಿಶೇಷವಾಗಿ ಎಲ್ಲ ಗಾಯಕರಿಗೂ ಅನ್ವಯಿಸುವಂತಹುದು. ಸೈಗಲ್‌ ಅವರಿಂದ ಲತಾ ದೀದಿಯವರೆಗೆ ನಮ್ಮ ನಡುವೆ ಇಲ್ಲವಾಗಿರುವ ಎಲ್ಲ ಗಾಯಕರೂ ಜನಮಾನಸದಲ್ಲಿ ಜೀವಂತವಾಗಿರುವುದು ಅವರ ಮಧುರ ಧ್ವನಿಯಿಂದಲೇ. ಗುಲ್ಜಾರ್‌ ಅವರ ಕವಿತಾ ಸ್ಫೂರ್ತಿ ಮತ್ತು ಸೃಜನಶೀಲ ಅಭಿವ್ಯಕ್ತಿಯ ದ್ಯೋತಕವಾಗಿ ಇಂತಹ ಹಲವು ಹಾಡುಗಳನ್ನು ಗುರುತಿಸಬಹುದು. ಮೌಸಮ್‌ ಚಿತ್ರದ “ ರುಕೇ ರುಕೇ ಸೆ ಕದಮ್‌ ” ಹಾಡಿನ ಪ್ರತಿಯೊಂದು ಸಾಲಿನಲ್ಲೂ ಮನುಜ ಸಂಬಂಧಗಳ ಸೂಕ್ಷ್ಮ ತಂತುಗಳನ್ನು ಗುರುತಿಸಬಹುದು. ಗುಲಾಮಿ ಚಿತ್ರದಲ್ಲಿ ಒಂದು ಯುಗಳ ಗೀತೆಯ ಪಲ್ಲವಿಯನ್ನು ಗುಲ್ಜಾರ್‌ ಪಂಜಾಬಿ ಭಾಷೆಯಲ್ಲಿ ಬರೆಯುತ್ತಾರೆ. “ ಝಿಹಾಲ್‌-ಎ-ಮಿಸ್ಕಿನ್‌ ಮಕುನ್‌ ಬ ರಂಜಿಶ್‌ ಬಹಾಲೆ ಹಿಜ್ರಾ ಬೇಚಾರ ದಿಲ್‌ ಹೈ ” ಎಂಬ ಸಾಲುಗಳನ್ನು ಲತಾ ದೀದಿ ಅಷ್ಟೇ ಸುಲಲಿತವಾಗಿ ಹಾಡಿದ್ದಾರೆ. ಇದೇ ಹಾಡಿನಲ್ಲಿ ಬರುವ ಎರಡು ಸಾಲುಗಳು “ ತುಮ್ಹಾರಿ ಪಲ್‌ಕೋಂ ಸೆ ಗಿರ್‌ ಕೆ ಶಬನಮ್‌ ಹಮಾರಿ ಆಂಖೋಂ ಮೆ ರುಕ್‌ ಗಯೀ ಹೈ ” ( ನಿನ್ನ ರೆಪ್ಪೆಗಳಿಂದ ಜಾರಿದ ಇಬ್ಬನಿ ನನ್ನ ಕಣ್ಣುಗಳಲ್ಲಿ ಬಂದು ನೆಲೆಸಿದೆ) ಎಂತಹ ಅದ್ಭುತ ಶಾಯರಿ.

ಸಾಹಿತ್ಯ ಕೃಷಿಯ ನಡಿಗೆ:
ಇಂತಹ ಹಲವು ಶಾಯರಿಗಳನ್ನು ತಮ್ಮ ಸಿನಿಮಾ ಗೀತೆಗಳ ಮೂಲಕ ಗುಲ್ಜಾರ್‌ ಸಿನಿ ಪ್ರಿಯರಿಗೆ, ಕಾವ್ಯಾಸಕ್ತರಿಗೆ ನೀಡಿದ್ದಾರೆ. ಒಟ್ಟು 17 ಚಿತ್ರಗಳನ್ನು ನಿರ್ದೇಶಿಸಿರುವ ಗುಲ್ಜಾರ್‌ ಪ್ರತಿಯೊಂದು ಚಿತ್ರವನ್ನೂ ಕಾವ್ಯಾತ್ಮಕವಾಗಿಸಿರುವುದೇ ಅಲ್ಲದೆ, ಮನುಜ ಸಂಬಂಧಗಳ ಸೂಕ್ಷ್ಮ ಎಳೆಗಳನ್ನು ವಿಭಿನ್ನ ಶೈಲಿಯಲ್ಲಿ ತೆರೆದಿಡುತ್ತಾರೆ. ಮಾತೃಭಾಷೆ ಪಂಜಾಬಿ ಆದರೂ ಉರ್ದು ಭಾಷೆಯಲ್ಲೇ ತಮ್ಮ ಸಾಹಿತ್ಯ ರಚನೆಯಲ್ಲಿ ತೊಡಗಿರುವ ಗುಲ್ಜಾರ್‌ ಉರ್ದು ಒಂದು ಅಪ್ಪಟ ಹಿಂದೂಸ್ತಾನಿ ಭಾಷೆ ಎಂದೇ ಪರಿಗಣಿಸುತ್ತಾರೆ. ತಮ್ಮ ದಿನಚರಿಯನ್ನೂ ಉರ್ದು ಭಾಷೆಯಲ್ಲೇ ಬರೆಯುತ್ತಾರೆ. ಉರ್ದು ಭಾಷೆಯ ಕಲಿಕೆ ಮತ್ತು ಸಾಹಿತ್ಯ ರಚನೆಗೆ ಮೂಲ ಕಾರಣರಾದ ತಮ್ಮ ಗುರು ಪಾಕಿಸ್ತಾನದ ಅಹಮದ್‌ ನದೀಂ ಖಜ್ಮಿ ಮತ್ತು ಉರ್ದು ವಿಮರ್ಶಕ ಗೋಪಿ ಚಂದ್‌ ನಾರಂಗ್‌ ಅವರನ್ನು ಗುಲ್ಜಾರ್‌ ಹೆಮ್ಮೆಯಿಂದ ನೆನೆಯುತ್ತಾರೆ. ಹಿಂದಿ ಚಲನಚಿತ್ರದಲ್ಲಿ ಮಾತನಾಡುವ ಶೇ 70-80ರಷ್ಟು ಭಾಷೆ ಉರ್ದು ಆಗಿರುವುದನ್ನು ನೆನಪಿಸುವ ಗುಲ್ಜಾರ್‌, ಇತ್ತೀಚಿನ ದಿನಗಳಲ್ಲಿ ಉರ್ದು ಲಿಪಿಯ ಬಳಕೆ ಕ್ಷೀಣಿಸುತ್ತಿದ್ದರೂ ಭಾಷೆ ಜೀವಂತವಾಗಿದೆ ಎನ್ನುತ್ತಾರೆ.

24 ಕೃತಿಗಳು, ೨ ಸಣ್ಣ ಕಥೆಗಳು, 52 ಶೇರ್-ಶಾಯರಿಗಳು, 68 ಕವಿತೆಗಳು, 38 ಗಜಲ್‌ಗಳನ್ನು ರಚಿಸಿರುವ ಗುಲ್ಜಾರ್‌ ಸಿನೆಮಾಗಳಿಗೆ 800ಕ್ಕೂ ಹೆಚ್ಚು ಗೀತೆಗಳನ್ನು ಬರೆದಿದ್ದಾರೆ. ಐದು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು, 22 ಫಿಲಂಫೇರ್‌ ಪ್ರಶಸ್ತಿಗಳು, ಒಂದು ಅಕಾಡೆಮಿ ಪ್ರಶಸ್ತಿ, ಒಮ್ಮೆ ಗ್ರಾಮಿ ಪ್ರಶಸ್ತಿಗೆ ಭಾಜನರಾಗಿರುವ ಗುಲ್ಜಾರ್‌ 2002ರಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 2004ರಲ್ಲಿ ಪದ್ಮಭೂಷಣ್‌, 2013ರಲ್ಲಿ ದಾದಾ ಸಾಹೆಬ್‌ ಪಾಲ್ಕೆ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸಿನೆಮಾ ರಂಗದೊಡನೆ ನಿರಂತರ ಒಡನಾಟ ಇದ್ದರೂ ತಮ್ಮ ಮೂಲ ಸಾಹಿತ್ಯ ಕೃಷಿಯಿಂದ ವಿಮುಖರಾಗದೆ ಗುಲ್ಜಾರ್‌ ಕಾವ್ಯಕೃಷಿಯಲ್ಲಿ ತೊಡಗಿದ್ದಾರೆ. ಸೃಜನಶೀಲತೆ ಮತ್ತು ಸಮಾಜಮುಖಿ ಧೋರಣೆ ಇಲ್ಲದ ಸಾಹಿತ್ಯ‌ ಜನಪ್ರಿಯವಾದರೂ ಸಾಮಾನ್ಯವಾಗಿ ಗ್ರಾಂಥಿಕವಾಗಿಯೇ ಉಳಿದುಬಿಡುತ್ತದೆ. ಗುಲ್ಜಾರ್ ಇದನ್ನು ಮೀರಿದ ಒಬ್ಬ ಕವಿಯಾಗಿ, ಸಾಹಿತಿಯಾಗಿ, ಕಲಾವಿದರಾಗಿ ನಮ್ಮ ನಡುವೆ ಇದ್ದಾರೆ. 89ರ ಹರೆಯದಲ್ಲೂ ತಮ್ಮ ಅಕ್ಷರ ಬೇಸಾಯವನ್ನು ಮುಂದುವರೆಸಿದ್ದಾರೆ.

ಯಾವುದೇ ಪ್ರಶಸ್ತಿಗೆ ಹೆಚ್ಚು ಗೌರವ ಸಮ್ಮಾನ ಸಲ್ಲುವುದು ಅದಕ್ಕೆ ಭಾಜನರಾದ ವ್ಯಕ್ತಿ ಮತ್ತು ವ್ಯಕ್ತಿತ್ವಗಳ ಮೂಲಕ. ಭಾರತದ ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿಯೂ ಸಹ ಸೃಜನಶೀಲ ಕವಿ ಗುಲ್ಜಾರ್‌ ಅವರ ಮುಡಿಗೇರುವ ಮೂಲಕ ತನ್ನ ಗೌರವವನ್ನು ಹೆಚ್ಚಿಸಿಕೊಂಡಿದೆ. 1950-60ರ ಸುವರ್ಣಯುಗದ ಸುಮಧುರ ಹೂದೋಟದಲ್ಲಿ ಅರಳಿದ ಗುಲ್ಜಾರ್‌ ಹೆಸರಿನ ಸಾಹಿತ್ಯ ಕುಸುಮ ತನ್ನ ಅಕ್ಷರ ಸೌಗಂಧವನ್ನು ಇನ್ನೂ ಹಲವು ವರ್ಷಗಳ ಕಾಲ ಪಸರಿಸುತ್ತಾ, ಶತಾಯುಷಿಯಾಗಿ ಬಾಳಲಿ ಎಂಬ ಆಶಯದೊಡನೆ, ಕವಿ ಗುಲ್ಜಾರ್‌ ಅವರಿಗೆ ಹೃದಯ ಪೂರ್ವಕ ಅಭಿನಂದನೆಗಳು.

Previous Post

ಎಂಎಸ್ ಪಿ , ಆರ್ಥಿಕ ಸಂಪನ್ಮೂಲಗಳ ಸಮಾನ ಹಂಚಿಕೆಗೆ ಕೇಂದ್ರವನ್ನು ಒತ್ತಾಯಿಸಿ ನಿರ್ಣಯ ಅಂಗೀಕಾರ

Next Post

ಇಂದಿನಿಂದ 4ನೇ ಟೆಸ್ಟ್‌: ಭಾರತಕ್ಕೆ ಸರಣಿ ಗೆಲುವಿನ ನಿರೀಕ್ಷೆ: ಕಮ್‌ಬ್ಯಾಕ್‌ ತವಕದಲ್ಲಿ ಇಂಗ್ಲೆಂಡ್‌…

Related Posts

Top Story

CM Siddaramaiah: ಗಾಂಧಿನಗರ ವಿಧಾನಸಭಾ ಕ್ಷೇತ್ರದ ಚಿಕ್ಕಪೇಟೆಯ ಆಧುನೀಕರಣಕ್ಕೆ ಚಾಲನೆ ನೀಡಿದ ಸಿಎಂ..!!

by ಪ್ರತಿಧ್ವನಿ
October 21, 2025
0

ದಿನೇಶ್ ಗುಂಡೂರಾವ್ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಮಾತ್ರ ಶ್ರಮಿಸುವ ಜನಮುಖಿ ಶಾಸಕ: ಸಿ.ಎಂ ಮೆಚ್ಚುಗೆ ದಿನೇಶ್ ಗುಂಡೂರಾವ್ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಮಾತ್ರ ಶ್ರಮಿಸುವ ಜನಮುಖಿ ಶಾಸಕರು....

Read moreDetails

DK Shivakumar: 4 ಸಾವಿರ ಕೋಟಿ ವೆಚ್ಚದಲ್ಲಿ 500 ಕಿ.ಮೀ ರಸ್ತೆಗೆ ವೈಟ್‌ ಟಾಪಿಂಗ್ ಡಿಪಿಆರ್ ಸಿದ್ಧತೆ..!!

October 21, 2025

Green Kannada Movie: ರಾಜ್ ವಿಜಯ್ ನಿರ್ದೇಶನದ “ಗ್ರೀನ್” ಚಿತ್ರ ಈ ವಾರ ತೆರೆಗೆ..!!

October 21, 2025

ನೀಲಕಂಠ ಫಿಲಂಸ್ ಹಾಗೂ ಧರ್ಮಶ್ರೀ ಎಂಟರ್ ಪ್ರೈಸಸ್ ನಿರ್ಮಾಣದ ವಿಭಿನ್ನ ಶೀರ್ಷಿಕೆಯ “4.30 – 6 ಮುಹೂರ್ತ. ನಾಲ್ವರು ಕಾಣಿಸುತ್ತಿಲ್ಲ” ಚಿತ್ರಕ್ಕೆ ಚಾಲನೆ

October 19, 2025

DK Shivakumar: ಗುತ್ತಿಗೆದಾರಾರ ನೋವು ಅರ್ಥವಾಗುತ್ತದೆ, ಆದರೆ ಯಾರೂ ಸರ್ಕಾರಕ್ಕೆ ಬೆದರಿಕೆ ಹಾಕಲು ಸಾಧ್ಯವಿಲ್ಲ..!!

October 19, 2025
Next Post
ಇಂದಿನಿಂದ 4ನೇ ಟೆಸ್ಟ್‌: ಭಾರತಕ್ಕೆ ಸರಣಿ ಗೆಲುವಿನ ನಿರೀಕ್ಷೆ: ಕಮ್‌ಬ್ಯಾಕ್‌ ತವಕದಲ್ಲಿ ಇಂಗ್ಲೆಂಡ್‌…

ಇಂದಿನಿಂದ 4ನೇ ಟೆಸ್ಟ್‌: ಭಾರತಕ್ಕೆ ಸರಣಿ ಗೆಲುವಿನ ನಿರೀಕ್ಷೆ: ಕಮ್‌ಬ್ಯಾಕ್‌ ತವಕದಲ್ಲಿ ಇಂಗ್ಲೆಂಡ್‌...

Please login to join discussion

Recent News

BSY ವಿರುದ್ಧ ಪೊಕ್ಸೋ ಕೇಸ್- ಆದೇಶ ಕಾಯ್ದಿರಿಸಿದ ಹೈಕೋರ್ಟ್
Top Story

BSY ವಿರುದ್ಧ ಪೊಕ್ಸೋ ಕೇಸ್- ಆದೇಶ ಕಾಯ್ದಿರಿಸಿದ ಹೈಕೋರ್ಟ್

by ಪ್ರತಿಧ್ವನಿ
October 23, 2025
ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಬೆಂಬಲಿಕ ಶಾಸಕ ಕಿಡಿ
Top Story

ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಬೆಂಬಲಿಕ ಶಾಸಕ ಕಿಡಿ

by ಪ್ರತಿಧ್ವನಿ
October 23, 2025
ಒಕ್ಕೂಟ ಸರ್ಕಾರದ ಅನುದಾನ ತಾರತಮ್ಯ ಚರ್ಚೆ- ಸಿದ್ದರಾಮಯ್ಯ ವಿರುದ್ಧ ಜೋಷಿ ಕಿಡಿ
Top Story

ಒಕ್ಕೂಟ ಸರ್ಕಾರದ ಅನುದಾನ ತಾರತಮ್ಯ ಚರ್ಚೆ- ಸಿದ್ದರಾಮಯ್ಯ ವಿರುದ್ಧ ಜೋಷಿ ಕಿಡಿ

by ಪ್ರತಿಧ್ವನಿ
October 23, 2025
ಡಿಕೆಶಿಯನ್ನ ಗಂಗಾನದಿಯಲ್ಲಿ ಮುಳುಗಿಸಿದಂತಾಗಿದೆ
Top Story

ಡಿಕೆಶಿಯನ್ನ ಗಂಗಾನದಿಯಲ್ಲಿ ಮುಳುಗಿಸಿದಂತಾಗಿದೆ

by ಪ್ರತಿಧ್ವನಿ
October 23, 2025
Home Minister G. Parameshwar: ಸತೀಶ್ ಜಾರಕಿಹೊಳಿ ನಾಯಕತ್ವ ಮಾತು : ಗೃಹ ಸಚಿವ ಜಿ.ಪರಮೇಶ್ವರ್ ಸ್ಪಷ್ಟನೆ
Top Story

Home Minister G. Parameshwar: ಸತೀಶ್ ಜಾರಕಿಹೊಳಿ ನಾಯಕತ್ವ ಮಾತು : ಗೃಹ ಸಚಿವ ಜಿ.ಪರಮೇಶ್ವರ್ ಸ್ಪಷ್ಟನೆ

by ಪ್ರತಿಧ್ವನಿ
October 23, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

BSY ವಿರುದ್ಧ ಪೊಕ್ಸೋ ಕೇಸ್- ಆದೇಶ ಕಾಯ್ದಿರಿಸಿದ ಹೈಕೋರ್ಟ್

BSY ವಿರುದ್ಧ ಪೊಕ್ಸೋ ಕೇಸ್- ಆದೇಶ ಕಾಯ್ದಿರಿಸಿದ ಹೈಕೋರ್ಟ್

October 23, 2025
ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಬೆಂಬಲಿಕ ಶಾಸಕ ಕಿಡಿ

ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಬೆಂಬಲಿಕ ಶಾಸಕ ಕಿಡಿ

October 23, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada