ಕೇರಳದ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ಭೇಟಿ ನೀಡಬೇಕು ಎಂದು ತಿರುವನಂತಪುರದ ಕ್ರಿಶ್ಚಿಯನ್ ಪಾದ್ರಿಯೊಬ್ಬರು ಚರ್ಚ್ನಲ್ಲಿ ಕೆಲಸ ಮಾಡಲು ನೀಡಿದ್ದ ಪರವಾನಗಿಯನ್ನು ಹಿಂತಿರುಗಿಸಿ, ವೃತ್ತಿ ತೊರೆದಿದ್ದಾರೆ.
ಮಾಲೆ ಧರಿಸಿ 41 ದಿನಗಳ ವೃತ ಕೈಗೊಂಡು ಶಬರಿಮಲೆಯ ಅಯ್ಯಪ್ಪ ದೇವರ ದರ್ಶನ ಪಡೆಯಲು ಕೇರಳದ ‘ರೇವ್ ಮನೋಜ್ ಕೆ.ಜಿ.’ ಎನ್ನುವ ಪಾದ್ರಿ ಆಂಗ್ಲಿಕನ್ ಚರ್ಚ್ ಆಫ್ ಇಂಡಿಯಾ ಅಡಿಯಲ್ಲಿ ಬರುವ ಚರ್ಚ್ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ.
“ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ತೆರಳುವ ನಿರ್ಧಾರದ ಬಗ್ಗೆ ಚರ್ಚ್ನ ಆಡಳಿತವು ನನ್ನನ್ನು ಪ್ರಶ್ನಿಸಿ ಈ ನಿರ್ಧಾರವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ, ವಿವರಣೆಯನ್ನು ನೀಡಿ ಎಂದು ಕೇಳಿತ್ತು. ವಿವರಣೆ ನೀಡುವ ಬದಲು ಪಾದ್ರಿಯಾಗಿ ಅಧಿಕಾರ ಸ್ವೀಕರಿಸುವಾಗ ನೀಡಿದ್ದ ಪರವಾನಗಿ ಮತ್ತು ಐಡಿ ಕಾರ್ಡ್ನ್ನು ವಾಪಸ್ ನೀಡಿದ್ದೇನೆ” ಎಂದು ರೇವ್ ಮನೋಜ್ ಪಿಟಿಐಗೆ ತಿಳಿಸಿದ್ದಾರೆ.
“ನಾನು ಚರ್ಚ್ನ ಸಿದ್ಧಾಂತಗಳಿಗೆ ತಕ್ಕಂತೆ ಕೆಲಸ ಮಾಡುವವನಲ್ಲ. ದೇವರ ಸಿದ್ಧಾಂತವನ್ನು ಅಳವಡಿಸಿಕೊಂಡವನು, ದೇವರು ಜಾತಿ, ಧರ್ಮ, ನಂಬಿಕೆಯನ್ನು ಲೆಕ್ಕಿಸದೆ ಪ್ರೀತಿ ಮಾಡು ಎನ್ನುತ್ತಾರೆ. ಹೀಗಿದ್ದಾಗ ಚರ್ಚ್ಅನ್ನು ಪ್ರೀತಿಸಬೇಕೋ ಅಥವಾ ದೇವರನ್ನೊ ಎನ್ನುವ ನಿರ್ಧಾರ ನಿಮಗೆ ಬಿಟ್ಟಿದ್ದು” ಎಂದು ಹೇಳಿದ್ದಾರೆ.
ರೇವ್ ಮನೋಜ್ ಪಾದ್ರಿಯಾಗುವುದಕ್ಕಿಂತ ಮುನ್ನ ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದರು.
ಆಧ್ಯಾತ್ಮಿಕ ಬೋಧನೆಗಳಿಗೆ ದೃಢೀಕೃತ ಮಾಹಿತಿಗಳನ್ನು ಕಲೆಹಾಕಲು ಪಾದ್ರಿಯಾಗಿದೆ ಎನ್ನುವ ಅವರು “ನಾನು ಯಾವ ತಪ್ಪನ್ನೂ ಮಾಡಿಲ್ಲ ಎನ್ನುವ ನಂಬಿಕೆ ಇದೆ, ಹಿಂದೂ ಧರ್ಮವನ್ನು ಅದರ ಆಚರಣೆಗಳನ್ನು ಮೀರಿ ಅರ್ಥಮಾಡಿಕೊಳ್ಳುವುದು ನನ್ನ ಉದ್ದೇಶ” ಎಂದು ಹೇಳಿದ್ದಾರೆ.
ಈ ಬಗ್ಗೆ ಚರ್ಚ್ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ವರದಿ ತಿಳಿಸಿದೆ.