
ರಾಜ್ಯಾದ್ಯಂತ ಕೃಷಿ ಜಾರಿದಳ ಕಾರ್ಯಚರಣೆ ಚುರುಕುಗೊಳಿಸಲಾಗಿದೆ. ಇತರೇ ಇಲಾಖೆಗಳ ಸಹಕಾರವನ್ನು ಪಡೆಯಲಾಗುತ್ತಿದೆ ಪ್ರತಿದಿನ ಪ್ರಕರಣಗಳನ್ನು ಪತ್ತೆಹಚ್ಚಿ ದೂರು ದಾಖಲಿಸಲಾಗುತ್ತಿದೆ. ಆಗಸ್ಟ್ 7ರಂದು ಚಿಕ್ಕಮಗಳೂರು ಜಿಲ್ಲೆ ಬಾಳೆಹೊನ್ನೂರು ಠಾಣಾ ವ್ಯಾಪ್ತಿಯ ಸಿಗೋಡು ಸುಭಾಷನಗರದಲ್ಲಿ ಲಾರಿ ಹಾಗೂ 290 ಚೀಲ ಯೂರಿಯಾ ರಸಗೊಬ್ಬರವನ್ನು ವಶಪಡಿಸಿಕೊಳ್ಳಲಾಗಿದೆ.
ಇಲಾಖೆಗೆ ದೊರೆತ ನಿಖರ ಮಾಹಿತಿ ಆಧಾರಿಸಿ ಕೊಪ್ಪ ತಾಲ್ಲೂಕಿನ ಸಿಗೋಡು ಸುಭಾಷನಗರ ವೇಮನಹಳ್ಳಿ ರಸ್ತೆಯಲ್ಲಿ ಲಾರಿ ಸಂ: ಕೆಎ-03 ಎಎ-3924ನಲ್ಲಿ ತುಂಬಿದ್ದ 220 ಚೀಲ ಯೂರಿಯಾ ಹಾಗೂ ಮನೆಯ ಗೋದಾಮಿನಲ್ಲಿ ಇರಿಸಿದ್ದ 79 ಚೀಲ ಯೂರಿಯಾ ರಸಗೊಬ್ಬರವನ್ನು ವಶಪಡಿಸಕೊಳ್ಳಲಾಗಿದೆ.
ದಾಸ್ತಾನು ಮಾಡಿದ್ದ ವಿಲ್ಫ್ರೆಡ್ ಕ್ಲೋಡ್ ಲೋಬೋ ಅವರ ಬಳಿ ಯಾವುದೇ ಮಾರಾಟ ಪರವಾನಗಿ, ಇನ್‌ವಾಯ್ಸ್, ಇ-ವೇ ಬಿಲ್‌ಗಳು ಇಲ್ಲದ ಕಾರಣ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದುಕೊಂಡು ಕಾನೂನು ಕ್ರಮ ಜರುಗಿಸಲಾಗಿದೆ.

ಚನ್ನಗಿರಿಯಲಿ 550 ಚೀಲ ಗೊಬ್ಬರ ವಶ
ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಆಯುಕ್ತರು (ಜಾರಿ) ಶಿವಮೊಗ್ಗ ಜಿಲ್ಲೆಯ ಚನ್ನಗಿರಿ ವ್ಯಾಪ್ತಿಯಲ್ಲಿ ರಸ್ತೆ ಜಾಗೃತಿ ನಡೆಸುತ್ತಿದ್ದ ಸಂದರ್ಭದಲ್ಲಿ ಯೂರಿಯಾ ಸಾಗಿಸುತ್ತಿದ್ದ ವಾಹನ ತಪಾಸಣೆ ನಡೆಸಲಾಯಿತು. ಈ ಸಂದರ್ಭದಲ್ಲಿ ಲಾರಿಯಲ್ಲಿ ಇದ್ದ ಸರಕಿಗೂ ಇನ್‌ವಾಯ್ಸ್ನಲ್ಲಿ ಇರುವ ನಮೂದಿಗೂ ವ್ಯತ್ಯಾಸಗಳು ಇದ್ದ ಕಾರಣ ಕೃಷಿ ಇಲಾಖೆ ಅಧಿಕಾರಿಗಳೂ ಸೇರಿ ಸಮನ್ವಯ ಮಾಡಿ ಲಾರಿ ಮಾಲಿಕರಿಗೆ ಹಾಗೂ ಇತರೇ ಸಂಬಂಧಪಟ್ಟವರಿಗೆ ನೋಟಿಸ್ ಜಾರಿ ಮಾಡಿ ನಿರ್ದಿಷ್ಟ ಉತ್ತರ ಬಾರದ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿಕೊಂಡು 550 ಮೂಟೆ ಯೂರಿಯಾ ಗೊಬ್ಬರವನ್ನು ವಶಕ್ಕೆ ಪಡೆಯಲಾಗಿದೆ.