ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಅಧಿಕಾರ ವಹಿಸದಾಗಿನಿಂದ ಸಂವಿಧಾನ, ನ್ಯಾಯಾಂಗ ಅಪಾಯದಲ್ಲಿದೆ ಎಂಬಂತಹ ವಿಮರ್ಷೆಗಳು ಕೇಳಿಬರುತ್ತಿದೆ. ಸಂವಿಧಾನವನ್ನು ಬದಲಾಯಿಸಿಯೇ ತೀರುತ್ತೇವೆ, ಕೆಂಪುಕೋಟೆಯಲ್ಲಿ ಭಗವಾಧ್ವಜ ಹಾರಿಸಿಯೇ ತೀರುತ್ತೇವೆ, ಭಾರತವನ್ನು ಹಿಂದೂ (hindu) ರಾಷ್ಟ್ರವಾಗಿಸಿಯೇ ತೀರುತ್ತೇವೆ ಎಂದು ಸಾಂವಿಧಾನಿಕ ಅಧಿಕಾರ ಹೊಂದಿರುವ ಬಿಜೆಪಿ ನಾಯಕರು ಹೇಳುತ್ತಾ ಬಂದಿರುವುದು ಮೇಲಿನ ವಿಮರ್ಷೆಗಳು ನಿಜವೆಂದೇ ಹೇಳುತ್ತವೆ.
ತನ್ನ ಅಧಿಕಾರ ದುರುಪಯೋಗ ಪಡಿಸಿ ತನಗಾಗದವರನ್ನು ನ್ಯಾಯಾಂಗದ ಮೂಲಕವೇ ಬಗ್ಗು ಬಡಿಯುತ್ತಿರುವ ಬಿಜೆಪಿಯ ದುರುಳತನ ಕೂಡಾ ಕಣ್ಣಮುಂದಿದೆ. ಆನಂದ್ ತೇಲ್ತುಂಬ್ಡೆ, ದಿವಂಗತ ಸ್ಟ್ಯಾನ್ ಸ್ವಾಮಿ, ಐಪಿಎಸ್ ಅಧಿಕಾರಿ ಸಂಜೀವ್ ಭಟ್, ವಿದ್ಯಾರ್ಥಿ ನಾಯಕ ಉಮರ್ ಖಾಲಿದ್, ಖಾಲಿದ್ ಸೈಫಿ, ಪ್ರೊಫೆಸರ್ ಹನಿ ಬಾಬು, ಸುಧಾ ಭಾರಧ್ವಾಜ್… ಹೆಸರಿಸುತ್ತಾ ಹೋದಷ್ಟು ಮುಗಿಯದಷ್ಟು ದೊಡ್ಡ ಪಟ್ಟಿಯಿದೆ. ಇವರೆಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಸರ್ಕಾರವನ್ನು ವಿರೋಧಿಸಿದವರು, ಬಿಜೆಪಿಯ ಅಜೆಂಡಾಗಳ ವಿರುದ್ಧ ನಿರಂತರ ಮಾತನಾಡಿದವರು. ಈವರಲ್ಲಿ ಬಹುತೇಕರನ್ನು ಯುಎಪಿಎ ಎಂಬ ಕರಾಳ ಕಾನೂನಿಡಿಯಲ್ಲಿ ಬಂಧಿಸಲಾಗಿದ್ದು ಎನ್ನುವುದು ವಾಸ್ತವ.
ಮುಸ್ಲಿಮರ (Muslim) ನರಮೇಧಕ್ಕೆ ಬಹಿರಂಗ ಕರೆ ನೀಡಿದವರು, ಗೋಲಿ ಮಾರೋ ಸಾಲೋಂಕಿ ಅನ್ನುತ್ತಾ ಗಲಭೆಗೆ ಪ್ರಚೋದನೆ ನೀಡಿದವರು, ಅತ್ಯಾಚಾರ ಮಾಡಿ ಕೊಂದು ಬಿಸಾಡಿದವರು ಇಲ್ಲಿ ಸ್ವತಂತ್ರವಾಗಿ ಹೊರಗಿರುವಾಗ ದಲಿತ-ದಮನಿತರ ಪರ ದನಿಯೆತ್ತಿದವರು ಜೈಲಿನಲ್ಲಿ ಕೊಳೆಯುತ್ತಿರುವುದು ಭಾರತದ ನ್ಯಾಯಾಂಗ ವ್ಯವಸ್ಥೆಯ ಆರೋಗ್ಯವನ್ನು ʼಚೆಕಪ್ʼ ಮಾಡುವಂತಹ ಅನಿವಾರ್ಯವನ್ನು ಸೃಷ್ಟಿಸಿದೆ.
ಅದರಲ್ಲೂ, ಮಾಜಿ ಸಿಜೆಐ ತಮ್ಮ ಅಧಿಕಾರವಧಿಯ ಮುಕ್ತಾಯದ ಕೆಲವೇ ದಿನಗಳಲ್ಲಿ ಆಡಳಿತ ಪಕ್ಷ ಬಿಜೆಪಿಯ ಸೀಟು ಪಡೆದು ರಾಜ್ಯ ಸಭಾ ಸದಸ್ಯರಾಗಿ ಆಯ್ಕೆಗೊಂಡದ್ದು ಈ ಆತಂಕವನ್ನು ಇಮ್ಮಡಿಗೊಳಿಸಿದೆ. ಅದಾಗ್ಯೂ, ದೇಶದ ನ್ಯಾಯಾಂಗದ ಮೇಲಿನ ಭರವಸೆಯನ್ನು ಉಳಿಸಿಕೊಳ್ಳಲು ನೆರವಾಗುವಂತಹ ನ್ಯಾಯಾಧೀಶರು ಕೂಡಾ ಇದ್ದಾರೆ. ಅದರಲ್ಲಿ ಒಬ್ಬರು ಮೊನ್ನೆ ರಾಜಸ್ಥಾನ ಹೈಕೋರ್ಟ್‌ನಿಂದ ನಿವೃತ್ತಿಯಾದ ಮುಖ್ಯ ನ್ಯಾಯಮೂರ್ತಿ ಅಖಿಲ್ ಖುರೇಶಿ.
ಅಕಿಲ್ ಖುರೇಷಿ (Akil Kureshi) ಹೆಸರು ರಾಷ್ಟ್ರಮಟ್ಟದಲ್ಲಿ ಮೊದಲು ಬೆಳಕಿಗೆ ಬರುವುದು 2010 ರಲ್ಲಿ. ಗುಜರಾತ್ ಹೈಕೋರ್ಟ್‌ನ (Gujarat Highcourt) ನ್ಯಾಯಾಧೀಶರಾಗಿದ್ದ ಖುರೇಶಿ, ಸೊಹ್ರಾಬುದ್ದೀನ್ ನಕಲಿ ಎನ್‌ಕೌಂಟರ್ (Sohrabuddin Encounter) ಪ್ರಕರಣದಲ್ಲಿ ಆಗಿನ ರಾಜ್ಯ ಗೃಹ ಸಚಿವ ಮತ್ತು ಬಿಜೆಪಿ ನಾಯಕ ಅಮಿತ್ ಶಾ ಅವರನ್ನು ಸಿಬಿಐ (CBI) ಕಸ್ಟಡಿಗೆ ಒಪ್ಪಿಸಿದಾಗ ಅವರ ಹೆಸರು ರಾಷ್ಟ್ರ ಮಾಧ್ಯಮಗಳಲ್ಲಿ ರಾರಾಜಿಸಿತ್ತು. ಆಡಳಿತ ಪಕ್ಷದ ಗೃಹಮಂತ್ರಿಯನ್ನೇ ಸಿಬಿಐ ಕಸ್ಟಡಿಗೆ ಕೊಡುವಷ್ಟು ದಿಟ್ಟತನದ ತೀರ್ಪು ನೀಡಿದ ನ್ಯಾಯಾಧೀಶರ ಕಡೆಗೆ ಬೆರಗುಗಣ್ಣಿನಿಂದ ದೇಶ ನೋಡಿತು.
ನಂತರ 2002ರ ಕೋಮುಗಲಭೆಯ ಸಂದರ್ಭದಲ್ಲಿ ನಡೆದ ನರೋಡಾ ಪಾಟಿಯಾ ಹತ್ಯಾಕಾಂಡಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಗುಜರಾತ್‌ನ ಮಾಜಿ ಸಚಿವೆ ಮಾಯಾ ಕೊಡ್ನಾನಿ (Maya Kodnani) ವಿರುದ್ಧ ತೀರ್ಪಾಗಲೀ, ಲೋಕಾಯುಕ್ತ ನೇಮಕಾತಿ ಪ್ರಕರಣದಲ್ಲಿ ಕೂಡಾ ನರೇಂದ್ರ ಮೋದಿ (Narendra Modi) ನೇತೃತ್ವದ ಗುಜರಾತ್ ಸರ್ಕಾರದ ವಿರುದ್ಧ ತೀರ್ಪಾಗಲೀ ಖುರೇಶಿ ಅವರ ವೃತ್ತಿಪರತೆಯನ್ನು ಬದ್ಧತೆಯನ್ನು ಸಾಬೀತುಪಡಿಸಿತು. ಆಳುವ ವರ್ಗದೊಂದಿಗೆ ರಾಜಿ ಮಾಡಿಕೊಳ್ಳದ ಅವರ ಗುಣದಿಂದ ಅವರು ಸರ್ಕಾರದ ಕೆಂಗಣ್ಣಿಗೆ ಗುರಿಯಾಗಬೇಕಾಯಿತು.
ಅಕಿಲ್ ಖುರೇಶಿ ಅವರ ಅಧಿಕಾರಾವಧಿ ಮತ್ತು ವರ್ಗಾವಣೆಗಳು ಸರ್ಕಾರಕ್ಕೆ ಖುರೇಶಿ ಮೇಲೆ ಇದ್ದ ಅಸಮಾಧಾನವನ್ನು ಪ್ರತಿಫಲಿಸಿತ್ತು. ದೇಶದ ಹೈಕೋರ್ಟ್‌ಗಳಲ್ಲಿ ಹಿರಿಯ ನ್ಯಾಯಾಧೀಶರಾಗಿದ್ದ ಖುರೇಶಿ ಅವರನ್ನು ವರ್ಗಾವಣೆ ಮಾಡಿರುವ ರೀತಿ ಹಾಗೂ ಸುಪ್ರೀಂ ಕೋರ್ಟ್ ಗೆ ಅವರನ್ನು ಬಡ್ತಿ ಮಾಡಲು ಸರ್ಕಾರ ನಿರಾಕರಿಸಿರುವುದು ಐವತ್ತಾರು ಇಂಚಿನ ಎದೆ ಹೊಂದಿರುವ ನರೇಂದ್ರ ಮೋದಿ ಹಾಗೂ ಬಿಜೆಪಿ ಸರ್ಕಾರದ ದುರುಳತನವನ್ನು ಬಯಲು ಮಾಡಿತ್ತು.
ಗುಜರಾತ್ ಮುಖ್ಯ ನ್ಯಾಯಮೂರ್ತಿಯಾಗಿದ್ದ ಸುಭಾಷ್ ರೆಡ್ಡಿ ಅವರನ್ನು ಸುಪ್ರೀಂ ಕೋರ್ಟ್‌ಗೆ ಬಡ್ತಿಗೊಳಿಸಿದಾಗ ತೆರವಾದ ಗುಜರಾತ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ಹಂಗಾಮಿಯಾಗಿ ಹಿರಿಯ ನ್ಯಾಯಮೂರ್ತಿಯಾಗಿದ್ದ ಖುರೇಶಿ ಅಧಿಕಾರ ವಹಿಸಿಕೊಳ್ಳಬೇಕಿತ್ತು. ಆದರೆ, ಖುರೇಶಿ ಅವರನ್ನು ಅಲ್ಲಿಂದ ಬಾಂಬೆ ಹೈಕೋರ್ಟ್‌ಗೆ ವರ್ಗಾಯಿಸಿ ಗುಜರಾತ್ ಮುಖ್ಯ ನ್ಯಾಯಮೂರ್ತಿ ಆಗದಂತೆ ಸರ್ಕಾರ ಕುತಂತ್ರ ಮಾಡಿತ್ತು.
ಚಾಲ್ತಿಯಲ್ಲಿರುವ ನಿಯಮದ ಪ್ರಕಾರ, ಹೊಸ ಮುಖ್ಯ ನ್ಯಾಯಮೂರ್ತಿ ನೇಮಕವಾಗುವವರೆಗೆ ಹೈಕೋರ್ಟ್‌ನ ಅತ್ಯಂತ ಹಿರಿಯ ನ್ಯಾಯಾಧೀಶರು ಸ್ವಯಂಚಾಲಿತವಾಗಿ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗುತ್ತಾರೆ. ಹಾಗಿದ್ದರೂ, ಅಕ್ಟೋಬರ್ 29, 2018 ರಂದು ಅಂಗೀಕರಿಸಿದ ನಿರ್ಣಯದಲ್ಲಿ, ಸುಪ್ರೀಂ ಕೋರ್ಟ್ ಕೊಲಿಜಿಯಂ ನ್ಯಾಯಮೂರ್ತಿ ಖುರೇಶಿ ಅವರನ್ನು ಬಾಂಬೆ ಹೈಕೋರ್ಟ್‌ಗೆ (ಕಿರಿಯ) ನ್ಯಾಯಾಧೀಶರನ್ನಾಗಿ ವರ್ಗಾಯಿಸಲು ಶಿಫಾರಸು ಮಾಡಿತು.
ಖುರೇಶಿ ವರ್ಗಾವಣೆಯನ್ನು ನವೆಂಬರ್ 1 ರಂದು ಅವರಿಗೆ ತಿಳಿಸಲಾಗಿತ್ತು ಹಾಗೂ ನವೆಂಬರ್ 15 ರೊಳಗೆ ಬಾಂಬೆ ಹೈಕೋರ್ಟ್‌ನಲ್ಲಿ ಅಧಿಕಾರ ವಹಿಸಿಕೊಳ್ಳುವಂತೆ ಸೂಚಿಸಲಾಗಿತ್ತು. ಹೀಗಾಗಿ, ಮುಖ್ಯ ನ್ಯಾಯಮೂರ್ತಿ ರೆಡ್ಡಿ ಅವರನ್ನು ಸುಪ್ರೀಂ ಕೋರ್ಟ್‌ಗೆ ಬಡ್ತಿಗೊಳಿಸಿದ ನಂತರ ಖುರೇಶಿ ಕೇವಲ ಎರಡು ವಾರಗಳ ಕಾಲ ಗುಜರಾತ್ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಲಿದ್ದರು. ಆದರೆ ಕೇಂದ್ರ ಸರ್ಕಾರಕ್ಕೆ ಈ ಅಲ್ಪಾವಧಿಯ ಅವಧಿ ಕೂಡಾ ಮುಖ್ಯ ನ್ಯಾಯಮೂರ್ತಿಯಾಗಿ ಖುರೇಶಿ ಇರುವುದು ಸುತಾರಂ ಇಷ್ಟವಿರಲಿಲ್ಲ ಎಂದು ತೋರುತ್ತದೆ. ಖುರೇಶಿ ಬದಲು ಎರಡನೇ ಹಿರಿಯ ನ್ಯಾಯಾಧೀಶ ನ್ಯಾಯಮೂರ್ತಿ ಎಎಸ್ ದವೆ ಅವರನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ಸರ್ಕಾರ ನೋಟಿಸ್ ನೀಡಿತು.
ಆದರೆ, ಎಲ್ಲಾ ರೂಢಿಗಳನ್ನು ಮುರಿದಂತೆ ತೋರುವ ಈ ನಿರ್ದಾರಕ್ಕೆ ಸುಪ್ರೀಂ ಕೋರ್ಟ್ ಕೊಲಿಜಿಯಂ ಆಕ್ಷೇಪ ಸಲ್ಲಿಸಿತು. ಕೊಲಿಜಿಯಂ ಆಕ್ಷೇಪದ ಬಳಿಕ, ಬಾಂಬೆ ಹೈಕೋರ್ಟ್‌ನ ನ್ಯಾಯಾಧೀಶರಾಗಿ ಅಧಿಕಾರ ವಹಿಸಿಕೊಳ್ಳುವ ಮೊದಲು ಎರಡು ವಾರಗಳ ಅಲ್ಪಾವಧಿಗೆ ಗುಜರಾತ್ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ಜಸ್ಟೀಸ್ ಖುರೇಶಿ ಅವರನ್ನು ನೇಮಕ ಮಾಡುವ ಹೊಸ ಅಧಿಸೂಚನೆಯನ್ನು ಕೇಂದ್ರವು ಹೊರಡಿಸಿತು.
ಅದಷ್ಟೇ ಅಲ್ಲ, ಮತ್ತೆ ಕೂಡಾ ಖುರೇಶಿ ಅವರ ವಿರುದ್ಧ ಸರ್ಕಾರ ಹಗೆ ಸಾಧಿಸಿಲು ಹವಣಿಸಿದೆ. ಬಾಂಬೆ ಹೈಕೋರ್ಟ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದ ನ್ಯಾಯಮೂರ್ತಿ ಖುರೇಶಿ ಅವರನ್ನು ಮಧ್ಯಪ್ರದೇಶ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಿಸಲು ಮೇ 2019 ರಲ್ಲಿ ಕೊಲಿಜಿಯಂ ಶಿಫಾರಸು ಮಾಡಿತ್ತು. ಆದರೆ, ಆಗಸ್ಟ್ 2019 ರಲ್ಲಿ ಖುರೇಶಿ ಅವರ ಶಿಫಾರಸು ಫೈಲ್ ಅನ್ನು ಕೇಂಧ್ರ ಸರ್ಕಾರ ಹಿಂದಕ್ಕೆ ಕಳುಹಿಸಿತು. ತದನಂತರ, ಸೆಪ್ಟೆಂಬರ್ 20 ರಂದು ಕೊಲಿಜಿಯಂ ತನ್ನ ಹಿಂದಿನ ನಿರ್ಣಯವನ್ನು ಮಾರ್ಪಡಿಸಿ ಮಧ್ಯಪ್ರದೇಶ ಹೈಕೋರ್ಟ್‌ನ ಬದಲಿಗೆ ತ್ರಿಪುರಾ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾಯಮೂರ್ತಿ ಖುರೇಶಿ ಅವರನ್ನು ನೇಮಿಸಲು ನಿರ್ಧರಿಸಿತು.
ಖುರೇಶಿ ಮೇಲೆ ಸರ್ಕಾರಕ್ಕೆ ಇದ್ದ ಅಸಹನೆಯೇ ಈ ಎಲ್ಲಾ ಪ್ರಹಸನಗಳ ಹಿಂದೆ ಇರುವುದು ಎನ್ನುವುದು ಇದೀಗ ಬಹಿರಂಗ ಗುಟ್ಟಾಗಿ ಉಳಿದಿದೆ. ಅದರಲ್ಲೂ ಇತ್ತೀಚೆಗೆ ಬಿಡುಗಡೆಯಾದ ಮಾಜಿ ಸಿಜೆಐ ರಂಜನ್ ಗೊಗೊಯ್ (CJI Ranjan Gogoi) ಅವರ ಜೀವನ ಚರಿತ್ರೆ ‘ಜಸ್ಟೀಸ್ ಫಾರ್ ದಿ ಜಡ್ಜ್’ (Justice for the Judge) ಕೃತಿಯಲ್ಲಿ ಸುಪ್ರೀಂ ಕೋರ್ಟ್ ಕೊಲಿಜಿಯಂ ಹೈಕೋರ್ಟ್ ನ್ಯಾಯಾಧೀಶರ ಉನ್ನತೀಕರಣ ಮತ್ತು ವರ್ಗಾವಣೆಗಳ ಕುರಿತು ತೆಗೆದುಕೊಂಡ ಹಲವಾರು ವಿವಾದಾತ್ಮಕ ನಿರ್ಧಾರಗಳ ಬಗ್ಗೆ ಉಲ್ಲೇಖಿಸಿದ್ದಾರೆ. ಕೊಲಿಜಿಯಂ ತೆಗೆದುಕೊಂಡ ನಿರ್ಧಾರಗಳ ಹಿಂದಿನ ಕಾರಣಗಳನ್ನು ಸಾರ್ವಜನಿಕವಾಗಿ ಪ್ರಕಟಿಸದಿದ್ದರೂ, ಗೊಗೊಯ್ ಅವರ ಆತ್ಮಚರಿತ್ರೆಯು ನ್ಯಾಯಮೂರ್ತಿ ಅಕಿಲ್ ಕುರೇಶಿ, ನ್ಯಾಯಮೂರ್ತಿ ವಿಕೆ ತಾಹಿಲ್ ರಮಣಿ, ನ್ಯಾಯಮೂರ್ತಿ ಪ್ರದೀಪ್ ನಂದಜೋಗ್ ಮತ್ತು ಜಸ್ಟೀಸ್ ರಾಜೇಂದ್ರ ಮೆನನ್ ಸೇರಿದಂತೆ ಹಲವಾರು ಪ್ರಮುಖ ಉನ್ನತಿಗಳು ಮತ್ತು ವರ್ಗಾವಣೆಗಳ ಹಿಂದಿನ ಸತ್ಯ ಮತ್ತು ಸಂದರ್ಭಗಳನ್ನು ಬಹಿರಂಗಪಡಿಸಿದೆ ಎಂದು ಇಂಡಿಯಾ ಟುಡೆಯಲ್ಲಿ ಅಂಕಣಗಾರ್ತಿ ನಳಿನಿ ಶರ್ಮಾ ಬರೆದಿದ್ದಾರೆ.
ಖುರೇಶಿ ಅವರು ನೀಡಿದ್ದ ತೀರ್ಪುಗಳು ಸರ್ಕಾರದ ಅಸಮಾಧಾನಕ್ಕೆ ಕಾರಣವಾಗಿದ್ದವು, ಹಾಗಾಗಿ ಅವರ ಮೇಲೆ ಸರ್ಕಾರಕ್ಕೆ ನಕರಾತ್ಮಕ ಅಭಿಪ್ರಾಯ ಇತ್ತು ಎಂದು ಇಂಡಿಯಾ ಟುಡೆ ಲೇಖನದಲ್ಲಿ ಬರೆದಿದ್ದರು.
ಆದರೆ, ಸರ್ಕಾರಕ್ಕೆ ತನ್ನ ಬಗ್ಗೆ ನಕರಾತ್ಮಕ ಅಭಿಪ್ರಾಯ ಇರುವುದು ನನ್ನ ಸ್ವಾತಂತ್ರ್ಯವನ್ನು ಸಾಬೀತುಪಡಿಸುತ್ತದೆ ಎಂದು ಅಕಿಲ್ ಖುರೇಶಿ ತಮ್ಮ ವಿದಾಯ ಭಾಷಣದಲ್ಲಿ ಹೇಳಿದ್ದಾರೆ.
ನಿವೃತ್ತಿಗೂ ಮುನ್ನ ರಾಜಸ್ಥಾನ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿದ್ದ ಖುರೇಷಿ, ಶನಿವಾರ ಮಾಡಿದ ವಿದಾಯ ಭಾಷಣದಲ್ಲಿ, ನನ್ನ ನ್ಯಾಯಾಂಗ ತೀರ್ಮಾನದಿಂದಾಗಿ ಸರ್ಕಾರವು ನನ್ನ ಬಗ್ಗೆ ನಕರಾತ್ಮಕ ಅಭಿಪ್ರಾಯವನ್ನು ಹೊಂದಿರುವುದು ನನ್ನ ನ್ಯಾಯಾಂಗ ಸ್ವಾತಂತ್ರ್ಯವನ್ನು ಸಾಬೀತುಪಡಿಸುತ್ತದೆ ಖುರೇಶಿ, ʼಹೆಮ್ಮೆಯಿಂದʼ ತೆರಳುತ್ತಿದ್ದೇನೆ ಎಂದು ಹೇಳಿದ್ದಾರೆ.
ʼನಾನು ತೆಗೆದ ಪ್ರತಿಯೊಂದು ತೀರ್ಮಾನ ಕೂಡಾ ನನ್ನ ಕಾನೂನು ತಿಳುವಳಿಕೆಯಿಂದ ಕೂಡಿರುವಂತಹದ್ದು, ನಾನು ನೀಡುವ ತೀರ್ಪಿನ ಪರಿಣಾಮಗಳು ನನ್ನ ಮೇಲೆ ಬೀರಬಹುದೆಂಬ ಭಯದಿಂದ ಯಾವ ತೀರ್ಪನ್ನೂ ನೀಡಿಲ್ಲ ಎಂಬ ಹೆಮ್ಮೆಯೊಂದಿಗೆ ನಾನು ತೆರಳುತ್ತಿದ್ದೇನೆ. ನನ್ನ ನ್ಯಾಯಾಂಗ ತೀರ್ಮಾನಗಳು ಸರ್ಕಾರಕ್ಕೆ ನನ್ನ ಬಗ್ಗೆ ನಕರಾತ್ಮಕ ಅಭಿಪ್ರಾಯ ಹೊಂದುವಂತೆ ಮಾಡಿದ್ದರೆ, ಅದನ್ನು ನನ್ನ ನ್ಯಾಯಾಂಗ ಸ್ವತಂತ್ರಕ್ಕೆ ಲಭಿಸಿದ ಪ್ರಮಾಣಪತ್ರವೆಂದು ನಾನು ಭಾವಿಸುತ್ತೇನೆ ಎಂದು ಹೇಳುತ್ತಾ ಕುರೇಶಿ ನಿರ್ಗಮಿಸಿದ್ದಾರೆ.
ಇದೇ ವೇಳೆ, ತನ್ನ ಕಿರಿಯ ಸಹೋದ್ಯೋಗಿಗಳಿಗೆ, ಹೊಸ ತಲೆಮಾರಿನ ವಕೀಲರಿಗೆ ಸಲಹೆ ನೀಡಿದ ಖುರೇಶಿ, ʼನೇರ ಮಾರ್ಗಗಳ ಮೂಲಕ ಸಾಧಿಸಿದ ಯಶಸ್ಸು ಮಧುರವಾಗಿರುತ್ತದೆ. ರಾಜಿ ಮಾಡಿಕೊಂಡು ಸಿಗುವ ಯಶಸ್ಸಿಗಿಂತ ತತ್ವ ಬದ್ಧ ಜೀವನದಿಂದ ಉಂಟಾಗುವ ವೈಫಲ್ಯವು ಹೆಚ್ಚು ತೃಪ್ತಿಕರವಾಗಿದೆ ಎಂದು ಹೇಳಿದ್ದಾರೆ.
ಸರ್ಕಾರದ ಪರ, ಆಳುವ ಪರ ಗಿಂಜಿಕೊಂಡು ಹೋಗುವ ಅಧಿಕಾರಿಗಳು, ನ್ಯಾಯಾಧೀಶರುಗಳು ಖುರೇಶಿ ಅಂತಹವರಿಂದ ಕಲಿಯುವುದು ಸಾಕಷ್ಟಿದೆ. ಖುರೇಶಿ ಅವರು ವಿದಾಯ ಭಾಷಣದಲ್ಲಿ ನೀಡಿದ ಸಲಹೆಯನ್ನು ಪ್ರಾಮಾಣಿಕವಾಗಿ ಸ್ವೀಕರಿಸುವ ನ್ಯಾಯಾಧೀಶರು, ವಕೀಲರು, ಅಧಿಕಾರಿಗಳ ಸಂತತಿ ನೂರ್ಮಡಿಯಾಗಲಿ. ಭಾರತದ ನ್ಯಾಯಾಂಗ ವ್ಯವಸ್ಥೆಗೆ ಹಿಡಿದಿರಬಹುದಾದ ಜಿಡ್ಡನ್ನು ಇವರಂತಹವರ ಪ್ರಾಮಣಿಕತೆಗಳು ಕರಗಿಸಲಿ.