1990ರ ಕಾಶ್ಮೀರ ಗಲಭೆಯನ್ನೂ, ಕಾಶ್ಮೀರಿ ಪಂಡಿತರ ವಲಸೆಯನ್ನು ಆದರಿಸಿ ಮಾಡಿದ ಸಿನೆಮಾ ಎಂದು ವ್ಯಾಪಕ ಪ್ರಚಾರ ಗೈಯಲ್ಪಟ್ಟಿರುವ ʼದಿ ಕಾಶ್ಮೀರಿ ಫೈಲ್ಸ್ʼ ಚಿತ್ರಕ್ಕೆ ಬಸವರಾಜ್ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಕರ್ನಾಟಕದಲ್ಲಿ ತೆರಿಗೆ ವಿನಾಯಿತಿಯನ್ನು ನೀಡಿದೆ. ಆ ಮೂಲಕ ಸರ್ಕಾರ ಅಧಿಕೃತವಾಗಿ ಸಿನೆಮಾವನ್ನು ಪ್ರಚಾರ ಮಾಡಲು ಹೊರಟಿದೆ.
ಕರ್ನಾಟಕ ಸರ್ಕಾರ ಮಾತ್ರವಲ್ಲದೆ ಬಿಜೆಪಿ ನೇತೃತ್ವವಿರುವ ಗುಜರಾತ್, ಹರ್ಯಾಣ, ಮಧ್ಯಪ್ರದೇಶದಲ್ಲೂ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಲಾಗಿದೆ. ಆ ಮೂಲಕ ಖುದ್ದು ಬಿಜೆಪಿಯೇ ಸರ್ಕಾರದ ಮೂಲಕ ಸಿನೆಮಾವನ್ನು ಪ್ರಚಾರ ಮಾಡುತ್ತಿದೆ. ಅಂದರೆ, ಒಟ್ಟಾರೆ ಈ ಸಿನೆಮಾದಿಂದ ಬಿಜೆಪಿಗೆ ದೊಡ್ಡ ಮಟ್ಟದ ಲಾಭವಿದೆ.
ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ʼದಿ ಕಾಶ್ಮೀರಿ ಫೈಲ್ಸ್ʼ ಚಿತ್ರವನ್ನು ಬಿಡುಗಡೆಗೂ ಮೊದಲೇ ಬಲಪಂಥೀಯರು ವ್ಯಾಪಕ ಪ್ರಚಾರ ಮಾಡಿದರು. ʼಭಾರತದ ಸೆಕ್ಯುಲರ್‌ಗಳು ಮುಚ್ಚಿಹಾಕಿದ ಸತ್ಯವನ್ನುʼ ಅಗ್ನಿಹೋತ್ರಿ ಸಿನೆಮಾ ಮಾಡಿದ್ದಾರೆಂದು ಬಿಂಬಿಸಲಾಯಿತು. ಈ ಒಟ್ಟಾರೆ ಸಿನೆಮಾವು 1990 ರ ಕಾಶ್ಮೀರ ಗಲಭೆಯನ್ನು ʼಪಂಡಿತರ ನರಮೇಧʼ ಎಂದು ಬಿಂಬಿಸಿ ಒಂದು ಆಯಾಮವನ್ನು ಮಾತ್ರ ತೋರಿಸುತ್ತಿದೆ ಎಂಬ ವಿಶ್ಲೇಷಣೆಗಳು ಕೇಳಿ ಬಂದಿದೆ.
ಅದೇ ವೇಳೆ, ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು 8 ವರ್ಷಗಳು ಕಳೆದಿದೆ. ಕಶ್ಮೀರಿ ಪಂಡಿತರನ್ನು ಧ್ವೇಷದ ಪ್ರಚಾರಕ್ಕಾಗಿ ಬಳಸುವ ಬಿಜೆಪಿ ಅವರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಿಲ್ಲ ಎನ್ನುವುದು ವಾಸ್ತವ. ಆದರೆ ಈ ಅಂಶವನ್ನು ಈ ಸಿನೆಮಾ ಎಲ್ಲೂ ಚರ್ಚಿಸುವುದಿಲ್ಲ ಬಿಡಿ. ಕಾಶ್ಮೀರ ಪಂಡಿತರು ಮೋದಿ ಆಡಳಿತದಲ್ಲಿಯೇ ಎಷ್ಟು ಬಾರಿ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸಿದರು, ಅದರಲ್ಲಿ ಅವರಿಗೆ ಸಿಕ್ಕ ಪರಿಹಾರಗಳೇನು ಅನ್ನುವುದೆಲ್ಲಾ ಇನ್ನೊಂದು ದೊಡ್ಡ ಕತೆ. ಅಂತಹ ಕೆಲವೊಂದಿಷ್ಟು ವರದಿಗಳು ಇಲ್ಲಿದೆ.
ಹಾಗೇ ನೋಡಿದರೆ, ಸ್ವತಂತ್ರ ಭಾರತದಲ್ಲಿ ನಡೆದ ಮಾರಣಹೋಮಗಳು, ಜನಾಂಗೀಯ ಹತ್ಯಾಕಾಂಡಗಳು ದಲಿತರ ಹಾಗೂ ಮುಸ್ಲಿಮರ ಮೇಲೆ ನಡೆದದ್ದೇ ಹೆಚ್ಚು. ಹಾಗೆಂದು ಕಶ್ಮೀರಿ ಪಂಡಿತರ ನೋವು ನೋವಲ್ಲ ಎಂದಲ್ಲ. ಆದರೆ, ಅದನ್ನು ಬಿಜೆಪಿ ಹಾಗೂ ಸಂಘ ಪರಿವಾರ ವ್ಯವಸ್ಥಿತವಾಗಿ ಮುಸ್ಲಿಮರ ವಿರುದ್ಧ ಧ್ವೇಷ ಹರಡಲು ಬಳಸುತ್ತಿದೆ ಎನ್ನುವುದು ಆತಂಕಕಾರಿ.

ಈ ಸಿನೆಮಾವು ಕಶ್ಮೀರಿ ಪಂಡಿತರು ಯಾಕೆ ವಲಸೆ ಹೋಗಿದ್ದಾರೆ ಎನ್ನುವುದನ್ನು ಒಂದೇ ಆಯಾಮದಲ್ಲಿ ಚಿತ್ರಿಸಿ ಇತಿಹಾಸವನ್ನು ತನಗೆ ಬೇಕಾದ ಹಾಗೇ ವೈಭವೀಕರಿಸಿದೆ. ಕಶ್ಮೀರಿ ಪಂಡಿತರು ವಲಸೆ ಹೋಗಿರುವುದು ಸುಳ್ಳಲ್ಲ. ಹಾಗಂತ ಸಿನೆಮಾದಲ್ಲಿ ಚಿತ್ರಿಸಿರುವುದು ಎಲ್ಲವೂ ಸತ್ಯವಲ್ಲ.
ವಿಪರ್ಯಾಸವೆಂದರೆ, ಈ ಸಿನೆಮಾದ ದೃಶ್ಯವನ್ನೇ ಇತಿಹಾಸ ಎಂದು ನಂಬುವ ದೊಡ್ಡ ವರ್ಗದ ವೀಕ್ಷಕರಿದ್ದಾರೆ. ಈಗಾಗಲೇ, ಚಿತ್ರಮಂದಿರದಲ್ಲಿ ಸಿನೆಮಾ ನೋಡಿ ಭಾವುಕರಾಗಿ ಪ್ರತಿಕ್ರಿಯಿಸುತ್ತಿರುವ ವೀಕ್ಷಕರು, ʼಹಿಂದೂಗಳು ನೋಡಬೇಕಾದ ಚಿತ್ರ, ಹಿಂದೂಗಳು ಒಗ್ಗಟ್ಟಾಗಬೇಕು, ನಿಜವಾದ ಇತಿಹಾಸವನ್ನು ತೋರಿಸಿದ್ದಾರೆʼ ಎಂದೆಲ್ಲಾ ಹೇಳುತ್ತಿರುವುದು ಸಿನೆಮಾ ಸಾಮಾನ್ಯ ಜನರ ಮೇಲೆ ಬೀರಿರುವ ಪ್ರಭಾವವನ್ನು ವಿವರಿಸುತ್ತದೆ.
ಪಂಡಿತರಿಗಾಗಿ ಕೆಲಸ ಮಾಡುವ ಕಾಶ್ಮೀರಿ ಸಂಘರ್ಷ ಸಮಿತಿ ಪರಿಷತ್ ಅಧ್ಯಯನ ವರದಿ ಪ್ರಕಾರ 1990 ರಿಂದ 2007 ರ ವರೆಗೆ 399 ಪಂಡಿತರ ಕೊಲೆಯಾಗಿದೆ. ಅದೇ ವೇಳೆ ಸುಮಾರು 15,000 ಕ್ಕೂ ಅಧಿಕ ಕಾಶ್ಮೀರ ಮುಸ್ಲಿಮರ ಕೊಲೆಯೂ ನಡೆದಿದೆ. (ಆದರೆ, ಆರ್‌ಟಿಐ ಮಾಹಿತಿ ಪ್ರಕಾರ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರು 1,724 ಜನರನ್ನು ಕೊಂದಿದ್ದಾರೆ, ಇದರಲ್ಲಿ 89 ಮಂದಿ ಕಾಶ್ಮೀರಿ ಪಂಡಿತರು.)
ಆರ್‌ಟಿಐ ಕಾರ್ಯಕರ್ತ ಪಿಪಿ ಕಪೂರ್ ಅವರು ಕೇಳಿದ ಪ್ರಶ್ನೆಗೆ ಶ್ರೀನಗರದ ಜಿಲ್ಲಾ ಪೊಲೀಸ್ ಪ್ರಧಾನ ಕಛೇರಿಯ ಡಿಎಸ್‌ಪಿ ಅವರು “1990 ರಲ್ಲಿ ಉಗ್ರಗಾಮಿತ್ವ ಪ್ರಾರಂಭವಾದಾಗಿನಿಂದ 89 ಕಾಶ್ಮೀರಿ ಪಂಡಿತರು ದಾಳಿಯಲ್ಲಿ ಕೊಲ್ಲಲ್ಪಟ್ಟರು” ಎಂದು ಮಾಹಿತಿ ನೀಡಿದರು ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
(ಮಾಹಿತಿಯ ಪ್ರಕಾರ, “89 ಕಾಶ್ಮೀರಿ ಪಂಡಿತರನ್ನು ಹೊರತುಪಡಿಸಿ, ಅದೇ ಅವಧಿಯಲ್ಲಿ 1,635 ಇತರ ಧರ್ಮದ ಜನರು ಸಹ ಕೊಲ್ಲಲ್ಪಟ್ಟರು.”)
ಇವೆಲ್ಲವೂ ಕೂಡಾ ಮಾಡಿದ್ದು ಕಾಶ್ಮೀರದ ಸಾಮಾನ್ಯ ಮುಸ್ಲಿಮರಲ್ಲ, ಬದಲಾಗಿ ಉಗ್ರವಾದಿಗಳು ಎನ್ನುವ ವಾಸ್ತವ ಅಂಶವನ್ನು ನಾವು ಅಲ್ಲಗೆಳೆಯಬಾರದು. ಆದರೆ, ಇದು ಒಟ್ಟಾರೆ ಮುಸ್ಲಿಮರ ವಿರುದ್ಧ ಧ್ವೇಷಕ್ಕೆ ನಾಂದಿಯಾಗುತ್ತಿದೆ. ಆ ಧ್ವೇಷವನ್ನು ಮತವಾಗಿ, ತಮ್ಮೆಲ್ಲಾ ವೈಫಲ್ಯಕ್ಕೆ ಉತ್ತರವಾಗಿ ಬಳಸುವ ಬಿಜೆಪಿಗೆ ಇದು ಬಹುದೊಡ್ಡ ಲಾಭ ತಂದು ಕೊಡಲಿದೆ. ಹಾಗಾಗಿಯೇ ಈ ಸಿನೆಮಾಗೆ ತೆರಿಗೆ ವಿನಾಯಿತಿ ನೀಡಿರುವುದು.
ಇದು ಒಟ್ಟಾರೆ, ಸದ್ಯ ಕಾಶ್ಮೀರದಲ್ಲಿ ನಡೆಸುತ್ತಿರುವ ನಾಗರಿಕ ದೌರ್ಜನ್ಯಗಳನ್ನು ಸಮರ್ಥಿಸಲು ಬಳಸಲ್ಪಡುವ ಅಪಾಯ ಹೆಚ್ಚಿದೆ.
ಈ ದೇಶದಲ್ಲಿ ಈಗಾಗಲೇ ಫ್ಯಾಸಿಸಂ ಅತಿಗೆ ಬಂದು ತಲುಪಿದೆ. ಮುಸ್ಲಿಮರ ಮೇಲೆ ನಡೆಯುವ ದಾಳಿಗಳು ಸಾಮಾನ್ಯವಾಗಿಬಿಟ್ಟಿದೆ. ಸಾರ್ವಜನಿಕ ಸ್ಥಳಗಳಿಂದ ʼಮುಸ್ಲಿಂ ಗುರುತನ್ನುʼ ಇಲ್ಲವಾಗಿಸುವ ಕ್ರಿಯೆ ವ್ಯಾಪಕವಾಗಿದೆ. ಮುಸ್ಲಿಮರ ಜನಾಂಗೀಯ ನಿರ್ಮೂಲನೆಗೆ ಕಾವಿಧಾರಿಗಳು ಬಹಿರಂಗ ಕರೆ ನೀಡುತ್ತಿದ್ದಾರೆ. ಈ ಪ್ರಕ್ರಿಯೆಗೆ ಇನ್ನಷ್ಟು ʼನೈತಿಕ ಬಲʼ ಬರಲು ಕಾಶ್ಮೀರಿ ಪಂಡಿತರ ಹತ್ಯಾಕಾಂಡವನ್ನು ತೀವ್ರವಾಗಿ ಪ್ರಚಾರ ಪಡಿಸಲಾಗುತ್ತಿದೆ.
ಮೇಲ್ಮೈಗೆ ಸೆಕ್ಯುಲರ್ ಗಳ ವಿರುದ್ಧ ಆಕ್ರೋಶಗೊಂಡಂತೆ ಕಂಡರೂ ಇದರ ಎಲ್ಲಾ ಭೀಕರತೆಯನ್ನು ಮುಸ್ಲಿಮರು ಅನುಭವಿಸಲಿದ್ದಾರೆ. ಕೇವಲ ಕಳೆದ ನಾಲ್ಕು ತಿಂಗಳಲ್ಲಿ ಉತ್ತರ ಭಾರತದ 6 ರಾಜ್ಯಗಳಲ್ಲಿ ಮುಸ್ಲಿಮರ ವಿರುದ್ಧ 89 ಜನಾಂಗೀಯ ದಾಳಿಗಳು ನಡೆದಿದೆ. ಆ ಹಿನ್ನೆಲೆಯಲ್ಲಿ ಈ ಚಿತ್ರವು ಇಂತಹ ಜನಾಂಗೀಯ ದಾಳಿಗೆ ಇನ್ನಷ್ಟು ನೈತಿಕ ಸಮರ್ಥನೆಯನ್ನು ನೀಡಲು ಬಳಸಲಾಗುತ್ತದೆ ಎನ್ನುವ ಆತಂಕ ಎದುರಾಗಿದೆ. ಸಂಪೂರ್ಣ ದ್ವೇಷಪೂರಿತ ಪ್ರತಿಕ್ರಿಯೆ ಒಂದು ಸಿನೆಮಾಗೆ ಸಿಗುತ್ತಿರುವು ಬಹುಷ ಇದೇ ಮೊದಲ ಬಾರಿ. ಇಂತಹ ಚಿತ್ರಗಳು ನಿರ್ಮಾಣಗೊಳ್ಳುವುದು, ಅದು ವಿಜೃಂಭಿಸಲ್ಪಡುವುದು ಭಾರತದ ಸಾಂಸ್ಕೃತಿಕ ಲೋಕದ ಅವನತಿಯ ಘೋರ ಸೂಚನೆ.