ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಪಕ್ಷದ ನೂತನ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರ ಬಗ್ಗೆ ಕೀಳು ಅಭಿರುಚಿಯ ಟೀಕೆಗಳನ್ನು ಮಾಡಿದ್ದ ಕಾಂಗ್ರೆಸ್ ಪಕ್ಷಕ್ಕೆ ಜೆಡಿಎಸ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ.
ಈ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಉತ್ತರಿಸಿರುವ ಜೆಡಿಎಸ್; ಕಾಂಗ್ರೆಸ್ ಪಕ್ಷ ಹಾಗೂ ಆ ಪಕ್ಷದ ನಾಯಕರ ಜನ್ಮ ಜಾಲಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿರುವ ಜೆಡಿಎಸ್, ಕಾಂಗ್ರೆಸ್ ಅನ್ನು ಕೊಳಕುಗ್ರೆಸ್ ಹಾಗೂ ಸ್ಕ್ಯಾಂಗ್ರೆಸ್ ಎಂದು ಜರೆದಿದೆ.
ಆಡಳಿತ ಪಕ್ಷಕ್ಕೆ ಆಕ್ರೋಶ, ಹತಾಶೆ, ಆತಂಕ, ಅನುಕಂಪ ಇರಬೇಕು, ತಪ್ಪಲ್ಲ. ಆದರೆ, ಹೊಟ್ಟೆಯಲ್ಲಿರುವ ಅಸಹ್ಯವನ್ನೆಲ್ಲ ಬಾಯಲ್ಲಿ ಕಾರಿಕೊಳ್ಳುವ ವಿಕೃತಿ ಮಾತ್ರ ಇರಲೇಬಾರದು. ಹೀಗಂತ ಹೇಳಲು ನಾವು ಗಂಭೀರವಾಗಿ ವಿಷಾದಿಸುತ್ತೇವೆ ಎನ್ನುತ್ತಲೇ, ನಾಮ ಹಾಕುವುದರಲ್ಲಿ ಪರಮ ನಿಸ್ಸೀಮ; ಅದಕ್ಕೆ ಸಾವಿರದೆಂಟು ಉದಾಹರಣೆ ಕೊಡಬಹುದು. ಈಗ ಹೇಳಿ; ಕೊಳಕುಮಂಡಲ ಯಾವುದು? ಅದೇ ಕಾಂಗ್ರೆಸ್ ಅಲಿಯಾಸ್ ಕೊಳಕುಗ್ರೆಸ್!! ಎಂದು ಚಾಟಿ ಬೀಸಿದೆ.
ಒಂದೆಡೆ ಆದಾಯ ತೆರಿಗೆಯವರಿಗೆ SST, YST ಬಾಬ್ತುಗಳ ಕಂತೆ ಕಂತೆ ಹಣ ಸಿಕ್ಕಿದೆ. ಸಿಎಂ, ಡಿಸಿಎಂ ಪಟಾಲಂ ಪರಿಶ್ರಮದಿಂದ ಬಾಚಿದ್ದ ಪಾಪದ ಹಣ ಕೈ ತಪ್ಪಿದೆ. ಐಟಿ, ಈಡಿ ಕುಣಿಕೆ ಯಾರಿಗೆಲ್ಲ ಬಿಗಿದುಕೊಳ್ಳಲಿದೆಯೋ ಗೊತ್ತಿಲ್ಲ. ಸಾಹುಕಾರ ಸಿವಕುಮಾರ ಸುಲ್ತಾನನಿಗೂ ಸಿಬಿಐ ಸಿಕ್ಕು ಬಿದ್ದಿದೆ. ಇದೆಲ್ಲಾ ಹೋಗಲಿ ಎಂದರೆ, ಕಾಂಗ್ರೆಸ್ ಸರ್ಕಾರಕ್ಕೆ 5 ತಿಂಗಳು ತುಂಬುವ ಮೊದಲೇ ಬೆಳಗಾವಿ ಜ್ವಾಲೆ ಭುಗಿಲೆದ್ದಿದೆ. ಅಂತಃಪುರದ ಕಲಹ ಹಾದಿಬೀದಿಗಳಲ್ಲಿ ಮೂರು ಕಾಸಿಗೆ ಬಿಕರಿಯಾಗುತ್ತಿದೆ. ಇನ್ನು ಕಕ್ಕಿಕೊಳ್ಳುವುದು ಬಿಟ್ಟರೆ ಇನ್ನೇನಿದೆ? ಎಂದು ಜೆಡಿಎಸ್ ಲೇವಡಿ ಮಾಡಿದೆ.
ಕಾಂಗ್ರೆಸ್ ವಕ್ರರೇಖೆಗಳ ಹೊಲಸುಗುಚ್ಛ!! ಅಷ್ಟಾವಕ್ರನ ಅಪರಾವತಾರಿ. ನಾಮ, ಪಂಗನಾಮ, ಉಂಡೆನಾಮಗಳೆಲ್ಲ ಅದರ ಆಜನ್ಮ ಆಸ್ತಿ ಎಂದು ಟೀಕಿಸಿರುವ ಜೆಡಿಎಸ್; ಕೊಳಕು ಮಂಡಲ, ಬಚ್ಚಲು ಬಾಯಿ ಎಂದರೆ ಅದು ಕಾಂಗ್ರೆಸ್ಸೇ.. ಈಗ ನಾಲಿಗೆ.. ನಾಲಿಗೆ ಎನ್ನುತ್ತಿದೆ, ಛೀ.. ಹೇಸಿಗೆ. ಜಾತ್ಯತೀತತೆ ಎನ್ನುವುದು ಆ ಕೊಳಕು ಪಕ್ಷದ ಥಳುಕು ಬಳಕಷ್ಟೇ. ಗೆಲ್ಲುವ ತನಕ ಜಾತ್ಯತೀತ, ಗೆದ್ದ ಮೇಲೆ ಜಾತಿಗಣಿತ! ತನ್ನ ಮುಖವನ್ನು ಕನ್ನಡಿಯಲ್ಲೂ ನೋಡಿಕೊಳ್ಳಲಾಗದ ದೈನೇಸಿ ಡರ್ಟಿಪಾರ್ಟಿ, ಪರರ ಹಂಗಿನಲ್ಲಿಯೆ ಬದುಕುವ ಪರಾವಲಂಬಿ! ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಸರಕಾರಗಳನ್ನು ಕೊಲ್ಲುವ, ಹೆಗಲು ಕೊಟ್ಟವರನ್ನೇ ಮೇಲೆತ್ತಿದ ಪಕ್ಷಗಳನ್ನೇ ಕೊಳಕುಮಂಡಲದಂತೆ ಕಚ್ಚುವ ಕೈ ಪಕ್ಷ ರಾಮಾಯಣ, ಮಹಾಭಾರತದಿಂದ ಎರವಲು ಪಡೆದದ್ದೇ ಅದೇ ಮಂಥರೆ, ಶಕುನಿಯ ಕುತಂತ್ರವನ್ನೇ. ಆಶ್ರಯ, ಅನ್ನ ಕೊಟ್ಟ ಪಕ್ಷಕ್ಕೇ ಕನ್ನ ಕೊರೆಯುವ, ಉಂಡ ಮನೆಗೇ ಎರಡನ್ನು ಬಗೆಯುವ ಮೀರ್ʼಸಾದಿಕರ ಆಡಂಬೋಲವೇ ಕಾಂಗ್ರೆಸ್. 75 ವರ್ಷದ ಈ ಪರದೇಸಿ ಪಕ್ಷದ್ದು ಸಮಾಜವಾದ, ಸಮತಾವಾದ, ಪ್ರಜಾಪ್ರಭುತ್ವವಾದ ಅಲ್ಲ, ಅದರದ್ದೇನಿದ್ದರೂ ‘ಮೀರುಸಾದಿಕವಾದ!’; ಆ ಹಸ್ತವಾಸಿ ಲೋಕವಿಖ್ಯಾತಿ ಎಂದು ಕಾಂಗ್ರೆಸ್ ಅನ್ನು ಜೆಡಿಎಸ್ ಮೂದಲಿಸಿದೆ.
ಕಾಂಗ್ರೆಸ್ ತನಗಿರುವ ಬಿರುದು ಬಾವಲಿಗಳನ್ನು ಇನ್ನೊಬ್ಬರ ಹಣೆಗೆ ಕಟ್ಟುವ ಕೀಳು ಕಸುಬಿಗೆ ಕೈ ಹಾಕಿದೆ. ಗೋಮುಖವ್ಯಾಘ್ರವೇ ಈಗ ಕುಮಾರಸ್ವಾಮಿ ಅವರನ್ನು ಗೋಸುಂಬೆ ಎಂದು ನಿಂದಿಸುತ್ತಿದೆ. ಅಕ್ರಮ, ಅವ್ಯವಹಾರ, ಅನಾಚಾರ.. ಅಷ್ಟೇ ಅಲ್ಲ, ವಾಮಾಚಾರದ ವೀರನೇ ರಾಜ್ಯ ಕಾಂಗ್ರೆಸ್ ಸಾರಥಿ ಎಂದು ಕಿಡಿಕಾರಿದೆ ಜೆಡಿಎಸ್.