• Home
  • About Us
  • ಕರ್ನಾಟಕ
Friday, August 22, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ದಿಕ್ಕೆಟ್ಟ ಸಮಾಜವೂ ಅವನತಿಯ ಹಾದಿಯೂ

ನಾ ದಿವಾಕರ by ನಾ ದಿವಾಕರ
September 6, 2024
in Top Story, ಅಂಕಣ, ಇದೀಗ, ಕರ್ನಾಟಕ, ಜೀವನದ ಶೈಲಿ, ದೇಶ, ರಾಜಕೀಯ, ವಿಶೇಷ
0
Share on WhatsAppShare on FacebookShare on Telegram

ನವ ಭಾರತ ಸಾಗುತ್ತಿರುವ ಹಾದಿಯಲ್ಲಿ ಚರಿತ್ರೆಯ ಅಳಿದುಳಿದ ಔದಾತ್ಯಗಳೂ ಅಳಿಸಿಹೋಗುತ್ತಿವೆ

ADVERTISEMENT

ಚಾರಿತ್ರಿಕವಾಗಿ  ಭಾರತೀಯ ಸಮಾಜ ತನ್ನ ಒಡಲಲ್ಲಿ  ಎಷ್ಟೇ ಅಮಾನುಷ ಪದ್ಧತಿಗಳನ್ನು, ಸಾಮಾಜಿಕ ಅನಿಷ್ಠಗಳನ್ನು, ಅಪಮಾನಕರ ಸಾಂಸ್ಕೃತಿಕ  ಆಚರಣೆಗಳನ್ನು ಇಟ್ಟುಕೊಂಡು ಬಂದಿದ್ದರೂ, ವಿಶ್ವ ಭೂಪಟದಲ್ಲಿ ಭಾರತ ತನ್ನ ಸಾಂಸ್ಕೃತಿಕ ಚಿಂತನೆಗಳಿಗೆ , ಉದಾತ್ತ ಬೌದ್ಧಿಕ ಆಲೋಚನೆಗಳಿಗೆ ಹಾಗೂ ಅನುಕರಣೀಯ ಸಾಮಾಜಿಕ ಚಿಂತನಾವಾಹಿನಿಗಳಿಗೆ ತನ್ನದೇ ಆದ ಪ್ರತಿಷ್ಠಿತ ಸ್ಥಾನ ಗಳಿಸಿದೆ. ಇದಕ್ಕೆ ಕಾರಣ ಈ ಅಪಸವ್ಯಗಳ ಹೊರತಾಗಿಯೂ ಭಾರತದ ನೆಲ ಸಂಸ್ಕೃತಿಯು ಸೃಷ್ಟಿಸಿರುವ ಲೌಕಿಕ-ಆಧ್ಯಾತ್ಮಿಕ ಹಾಗೂ ವೈಚಾರಿಕ ಚಿಂತನೆಯ ನೆಲೆಗಳು. ಇಲ್ಲಿನ ನೆಲಮೂಲ ಸಂಸ್ಕೃತಿಯಲ್ಲಿ ಅಡಗಿದ್ದ ಮಾನವೀಯ ಮೌಲ್ಯಗಳನ್ನು ಶ್ರೇಣೀಕೃತ ಜಾತಿ ಚೌಕಟ್ಟುಗಳಲ್ಲಿ ಶೋಧಿಸದೆ, ತಳಮಟ್ಟದ ಸಾಮಾನ್ಯ ಜನಜೀವನದ ನಡುವೆ ಹುಡುಕಾಡಿದರೆ ಈ ವಾಸ್ತವದ ಅರಿವು ಮೂಡುತ್ತದೆ.

ಈ ದರ್ಶನಗಳನ್ನು ಮಾನವ ಜಗತ್ತಿನ ಮುಂದೆ ತೆರೆದಿಟ್ಟ ದಾರ್ಶನಿಕರು, ತತ್ವಶಾಸ್ತ್ರಜ್ಞರು ಹಾಗೂ ಸಮಕಾಲೀನ ಭಾರತದ ಸಮಾಜ ಸುಧಾರಕರು ಭಾರತವನ್ನು ಒಂದು ಬಹುತ್ವದ ನಾಡು ಎಂದು ಗುರುತಿಸಿರುವುದೇ ಅಲ್ಲದೆ ಇಲ್ಲಿನ ಬಹುಸಾಂಸ್ಕೃತಿಕ ವೈವಿಧ್ಯತೆಗಳನ್ನು ಸಮ್ಮಾನಿಸುತ್ತಲೇ ಭವಿಷ್ಯದ ತಲೆಮಾರುಗಳಿಗೆ ಒಂದು ಮಾದರಿ ಸಮಾಜದ ಕಲ್ಪನೆಯನ್ನು ಬಿಟ್ಟುಹೋಗಿದ್ದಾರೆ. ಮಾನವ ಸಮಾಜ ಅಥವಾ ಅದನ್ನು ನಿರ್ದೇಶಿಸುವ ಯಾವುದೇ ಸಂಸ್ಕೃತಿ ನಿಂತ ನೀರಿನಂತೆ ಜಡಗಟ್ಟುವುದಿಲ್ಲ. ನಾಗರಿಕತೆಯ ಬೆಳವಣಿಗೆಯೊಂದಿಗೇ ಸಾಮಾಜಿಕ ಜೀವನ ಮಾರ್ಗಗಳನ್ನು ಪರಿಷ್ಕರಿಸಿಕೊಳ್ಳುತ್ತಾ, ಆಧುನಿಕತೆಗೆ ತೆರೆದುಕೊಳ್ಳುತ್ತಾ ತನ್ನನ್ನು ತಾನು ಕಟ್ಟಿಕೊಳ್ಳುತ್ತದೆ. ಭಾರತವೂ ಇದಕ್ಕೆ ಹೊರತಾದದ್ದಲ್ಲ. ಭಾರತದ ನೆಲಮೂಲ ಸಂಸ್ಕೃತಿಯಲ್ಲಿ ಇರುವ ಈ ತಾತ್ವಿಕತೆಯೇ ದೇಶವನ್ನು ಇಂದಿಗೂ ಕಾಪಾಡಿಕೊಂಡು ಬಂದಿದೆ.

ವೈವಿಧ್ಯತೆಯ ನೆಲೆಗಳಲ್ಲಿ ಭಾರತ

ಆಹಾರ, ಉಡುಪು, ಜೀವನಶೈಲಿ, ಸಾಂಸ್ಕೃತಿಕ ಮಾದರಿ ಹಾಗೂ ಧಾರ್ಮಿಕ ಆಚರಣೆ, ಈ ಎಲ್ಲ ನೆಲೆಗಳಲ್ಲೂ ವೈವಿಧ್ಯತೆಯನ್ನು ಪೋಷಿಸಿಕೊಂಡು ಬಂದಿರುವ ಭಾರತೀಯ ಸಮಾಜದಲ್ಲಿ ಜಾತಿಗಳಿರುವಷ್ಟೇ ಸಂಖ್ಯೆಯಲ್ಲಿ ಆಹಾರ ಪದ್ಧತಿಗಳೂ ಇವೆ. ಪ್ರತಿ ಇನ್ನೂರು ಕಿಲೋಮೀಟರ್‌ ವ್ಯಾಪ್ತಿಯಲ್ಲಿ ಒಂದು ಹೊಸ ಸಂಸ್ಕೃತಿ, ಆಚರಣೆ, ಉಡುಪು, ಭಾಷೆ ಅಥವಾ ಜೀವನಪದ್ಧತಿಯನ್ನು ಕಾಣಬಹುದಾದ ದೇಶ ಭಾರತ. ಈ ವೈವಿಧ್ಯತೆಯೇ ದೇಶದ ಜೀವಾಳ ಮತ್ತು ಉಸಿರು. ಶ್ರೇಣೀಕೃತ ಜಾತಿ ವ್ಯವಸ್ಥೆಯ ಕ್ರೌರ್ಯ ಮತ್ತು ಅಮಾನುಷತೆಯ ನಡುವೆಯೂ ಈ ವೈವಿಧ್ಯಮಯ ಸಮಾಜ ತನ್ನ ಅಂತಃಸತ್ವವನ್ನು ಉಳಿಸಿಕೊಂಡು ಬಂದಿರುವುದಕ್ಕೆ ಕಾರಣ, ಶೋಷಕ-ಮೇಲ್ಜಾತಿಗಳ ಅಥವಾ ಸಮಾಜದ ಪ್ರಬಲ ವರ್ಗಗಳ ಔದಾರ್ಯವೇನೂ ಅಲ್ಲ, ಬದಲಾಗಿ ತಳಸಮಾಜದ ಜನತೆಯ ಹೃದಯವೈಶಾಲ್ಯ ಮತ್ತು ಸಹಬಾಳ್ವೆಯ ಮನಸ್ಥಿತಿ.

ಅಮಾನುಷ ಶೋಷಣೆಯನ್ನೂ ಸಹಿಸಿಕೊಂಡು ಬಾಳುವ ತಳಸ್ತರ ಸಮಾಜದ ಅತಿರೇಕದ ಸಹಿಷ್ಣುತೆಯ ನಡುವೆಯೇ ಭಾರತೀಯ ಸಮಾಜದಲ್ಲಿ ಅಮಾನುಷ ಶೋಷಣೆಯನ್ನು ಸಾಂಸ್ಥಿಕವಾಗಿ ಸಮರ್ಥಿಸಿಕೊಳ್ಳುವ ಆತ್ಮಘಾತುಕತೆಯನ್ನೂ ಗುರುತಿಸಲು ಸಾಧ್ಯ. ಪ್ರಾಚೀನ ಅಥವಾ ಮಧ್ಯಕಾಲೀನ ಯುಗದಲ್ಲಿ ಇಂತಹ ಒಂದು ಮನಸ್ಥಿತಿ ಇದ್ದುದನ್ನು ಗುರುತಿಸಿದ್ದೇವೆ. ಇದೇ ಮನಸ್ಥಿತಿಯನ್ನು ಧರ್ಮಶಾಸ್ತ್ರಗಳ ಮೂಲಕ, ಸಾಂಪ್ರದಾಯಿಕ ಆಚರಣೆಗಳ ಮೂಲಕ ಸಲಹಿ ಬೆಳೆಸುವ ಒಂದು ಸಮಾಜವನ್ನೂ ಭಾರತ ಪೋಷಿಸಿಕೊಂಡು ಬಂದಿದೆ. ಸ್ಮೃತಿ ದರ್ಶನಗಳ ಮೂಲಕ ಅಮಾನವೀಯ ಎನಿಸಬಹುದಾದ ಸಮಾಜದ ವರ್ತನೆಗಳಿಗೆ, ಜಾತಿ ಶ್ರೇಣಿಯ ಶ್ರೇಷ್ಠ-ಕನಿಷ್ಠ ಪರಿಕಲ್ಪನೆಗಳ ನೆಲೆಯಲ್ಲಿ  ಸಾಂಸ್ಥಿಕ ಅಧಿಕೃತತೆಯನ್ನು ನೀಡಿದ ಚರಿತ್ರೆಯನ್ನೂ ಭಾರತ ಕಂಡಿದೆ. ಈ ಮಧ್ಯಕಾಲೀನ ಯುಗದಲ್ಲೂ ಭಿನ್ನ ಆಹಾರ ಪದ್ಧತಿಗಳನ್ನು ಸಹಿಸಿಕೊಂಡೇ ಭಾರತೀಯ ಸಮಾಜ ಬದುಕಿದೆ. ಆದರೆ ಜಾತಿಶ್ರೇಷ್ಠತೆಯ ನೆಲೆಯಲ್ಲಿ ಕೆಳಸ್ತರ ಸಮಾಜದ ಆಹಾರ ಪದ್ಧತಿಗಳನ್ನು ನಿಕೃಷ್ಟವಾಗಿ ನೋಡುವ, ಬಹಿಷ್ಕೃತಗೊಳಿಸುವ ಒಂದು ಪರಂಪರೆಗೂ ಈ ಸಮಾಜ ಸಾಕ್ಷಿಯಾಗಿದೆ.

ಆದರೆ ಚರಿತ್ರೆಯ ಯಾವುದೇ ಕಾಲಘಟ್ಟದಲ್ಲೂ ವ್ಯಕ್ತಿ/ಸಮುದಾಯ/ಸಮಾಜದ ಆಹಾರ ಸೇವನೆ ದಂಡನಾರ್ಹ ಅಪರಾಧವಾಗಿ ಪರಿಗಣಿಸಲ್ಪಟ್ಟಿರುವುದು ಕಾಣುವುದಿಲ್ಲ. ಭಾರತ ಕಂಡಂತಹ ಊಳಿಗಮಾನ್ಯ ರಾಜಪ್ರಭುತ್ವದ ಉಚ್ಛ್ರಾಯ ಹಂತದಲ್ಲೂ ಸಹ ಆಹಾರ ಸೇವನೆ ಎನ್ನುವುದು ಸಮುದಾಯಗಳನ್ನು ಅಡ್ಡಡ್ಡಲಾಗಿ ವಿಂಗಡಿಸುವ ಒಂದು ಅಸ್ತ್ರವಾಗಿತ್ತು, ಭಿನ್ನ ಆಹಾರ ಸೇವಿಸುವ ಸಮುದಾಯಗಳನ್ನು ಬಹಿಷ್ಕೃತರಾಗಿಸುವ ಅಥವಾ ಅಸ್ಪೃಶ್ಯರನ್ನಾಗಿಸುವ ಒಂದು ಹೀನ ಜಾತಿ ವ್ಯವಸ್ಥೆಯನ್ನೂ ಭಾರತ ಸಲಹಿದೆ. ಆದರೆ ಈ ಚಾರಿತ್ರಿಕ ಹಂತಗಳಲ್ಲೂ , ಊಳಿಗಮಾನ್ಯ-ರಾಜಪ್ರಭುತ್ವಗಳ ನಡುವೆಯೂ, ವ್ಯಕ್ತಿಗತ ಆಹಾರ ಸೇವನೆ ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸಿದ ಪ್ರಸಂಗಗಳು ಕಾಣುವುದಿಲ್ಲ. ಸಾಮಾಜಿಕ ಬಹಿಷ್ಕಾರ-ಅಸ್ಪೃಶ್ಯತೆ-ಹೊರಗುಳಿಸುವಿಕೆಯಂತಹ ಕ್ರೂರ ಪದ್ಧತಿಗಳ ನಡುವೆಯೂ, ಈ ಮಟ್ಟಿಗೆ ಮನುಷ್ಯನಿಗೆ ತನ್ನಿಚ್ಚೆಯಂತೆ ಆಹಾರ ಸೇವಿಸುವ ಹಕ್ಕು ಲಭ್ಯವಾಗಿತ್ತು.

ಶೋಷಣೆ-ತಾರತಮ್ಯಗಳ ನಡುವೆ

ಇದೇ ಪ್ರಾಚೀನ-ಮಧ್ಯಕಾಲೀನ ಯುಗದ ಮತ್ತೊಂದು ಚಿತ್ರಣವನ್ನು ಗಮನಿಸಿದಾಗ, ಮಹಿಳೆ ಶತಮಾನಗಳಿಂದಲೂ ಪಿತೃಪ್ರಧಾನ ವ್ಯವಸ್ಥೆಯಲ್ಲಿ ಶೋಷಣೆಗೊಳಗಾಗುತ್ತಲೇ ಇರುವುದೂ ಕಾಣುತ್ತದೆ. ಭಾರತೀಯ ಸಮಾಜವನ್ನು ನಿರ್ದೇಶಿಸುತ್ತಿದ್ದ ರಾಜಪ್ರಭುತ್ವ-ಊಳಿಗಮಾನ್ಯ ಆಳ್ವಿಕೆ, ಶ್ರೇಣೀಕೃತ ಜಾತಿ ವ್ಯವಸ್ಥೆ ಹಾಗೂ ಧಾರ್ಮಿಕ ಆಚರಣೆಗಳಲ್ಲಿ ಮಹಿಳೆಯನ್ನು ಪುರುಷಾಧಿಪತ್ಯದ ಅಧೀನಕ್ಕೆ ಒಳಗಾಗಿ ಬದುಕಬೇಕಾದ ಸಮುದಾಯವಾಗಿ ಕಾಣುವ ಪರಂಪರೆಯನ್ನೂ ನಾವು ಗುರುತಿಸಬಹುದು. ಮತ್ತದೇ ಧರ್ಮಶಾಸ್ತ್ರಗಳು ಮಹಿಳಾ ದೌರ್ಜನ್ಯಗಳನ್ನೂ ಜಾತಿ ಶ್ರೇಣಿಗನುಗುಣವಾಗಿ ವರ್ಗೀಕರಿಸುವ ಮೂಲಕ, ಕೆಳಸ್ತರ ಸಮಾಜದ ಮಹಿಳೆಯರ ಮೇಲಿನ ದೌರ್ಜನ್ಯಗಳಿಗೆ ಸಾಂಸ್ಥಿಕ ಅಧಿಕೃತತೆಯನ್ನೂ ನೀಡಿದ್ದವು. ʼ ನ್ಯಾಯ ʼ ಎಂಬ ಅಮೂರ್ತ ಕಲ್ಪನೆಯನ್ನು ಜಾತಿ ಧರ್ಮಗಳ ಚೌಕಟ್ಟಿನೊಳಗಿಟ್ಟು ನಿರ್ವಚಿಸುವ ಮೂಲಕ ಸಾಮಾಜಿಕ ಅಪರಾಧಗಳಿಗೂ ಸಾಂದರ್ಭಿಕ ಮನ್ನಣೆ ನೀಡುವ ಒಂದು ಪರಂಪರೆಗೆ ಇದು ನಾಂದಿ ಹಾಡಿತ್ತು.

ಆದಾಗ್ಯೂ ಭಾರತದ ಗ್ರಾಮೀಣ ಸಮಾಜಗಳಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರ, ದೌರ್ಜನ್ಯಗಳನ್ನು ಖಂಡಿಸುವ, ಶಿಕ್ಷೆಗೊಳಪಡಿಸುವ, ದಂಡಿಸುವ ಚರಿತ್ರೆಯನ್ನೂ ನಾವು ಗುರುತಿಸಬಹುದು. ಹೆಣ್ಣುಮಕ್ಕಳ ಗೌರವ ಘನತೆಯನ್ನು ಊರ ಘನತೆಯೊಂದಿಗೆ ಸಮೀಕರಿಸುವ ಮೂಲಕ ಅತ್ಯಾಚಾರ ಎಸಗಿದವರನ್ನು ಬಹಿಷ್ಕರಿಸುವ, ಶಿಕ್ಷಿಸುವ ಚಾರಿತ್ರಿಕ ಪ್ರಸಂಗಗಳು ಗ್ರಾಮೀಣ ಭಾರತದ ಇತಿಹಾಸದಲ್ಲಿ ಹೇರಳವಾಗಿ ಕಾಣುತ್ತವೆ. ಮಹಿಳೆಯನ್ನು ಅಧೀನದಲ್ಲಿಟ್ಟುಕೊಳ್ಳುವ ಒಂದು ಅಸ್ತ್ರವಾಗಿ ಬಳಸಲಾಗುವ ತಾರತಮ್ಯ, ದೌರ್ಜನ್ಯಗಳಿಗೆ ಜಾತಿಶ್ರೇಣಿಯ ಲೇಪ ನೀಡುವ ಮೂಲಕ ಮೇಲ್ಜಾತಿಯ ಸಾಮಾಜಿಕ ಪ್ರಾಬಲ್ಯವನ್ನು ಯಥಾಸ್ಥಿತಿಯಲ್ಲಿರಿಸಿಕೊಳ್ಳುವ ಕ್ರೂರ ಆಡಳಿತ ವ್ಯವಸ್ಥೆಯೂ ಈ ಕಾಲಘಟ್ಟದಲ್ಲಿ ಕಂಡುಬರುತ್ತದೆ. ಆದರೆ ಈ ಯಾವುದೇ ಸಂದರ್ಭಗಳಲ್ಲೂ ಅತ್ಯಾಚಾರಿಗಳನ್ನು, ಹಂತಕರನ್ನು ಸನ್ಮಾನಿಸುವ, ವೈಭವೀಕರಿಸುವ ಅಥವಾ ಸಾಂಸ್ಥಿಕವಾಗಿ ಮನ್ನಿಸುವ ಪ್ರಸಂಗಗಳು ಕಾಣುವುದು ವಿರಳ.

ವರ್ತಮಾನದ ಸಮಾಜದಲ್ಲಿ

ಈ ಚಾರಿತ್ರಿಕ ನೆಲೆಯಲ್ಲಿ ನಿಂತು, 21ನೆಯ ಶತಮಾನದ ಅತ್ಯಾಧುನಿಕ ಡಿಜಿಟಲ್‌ ಭಾರತವನ್ನು ನೋಡಿದಾಗ ನಮಗೆ ಕಾಣುತ್ತಿರುವುದೇನು ? ಆಹಾರ ಸೇವನೆ ದಂಡನಾರ್ಹ ಅಪರಾಧವಾಗಿ ಪರಿಣಮಿಸಿದೆ. ಮಹಿಳೆ ತನ್ನಿಚ್ಚೆಗನುಸಾರವಾಗಿ ಧರಿಸುವ ಉಡುಪು ಪ್ರಶ್ನಾರ್ಹವಾಗುತ್ತಿದೆ. ಅತ್ಯಾಚಾರ-ದೌರ್ಜನ್ಯಕ್ಕೊಳಗಾಗುವ ಮಹಿಳೆ ಸ್ವತಃ ಅಪರಾಧಿಯಾಗಿ ಕಾಣತೊಡಗಿದ್ದಾಳೆ. ಅತ್ಯಾಚಾರಕ್ಕೊಳಗಾಗಿ ಹತ್ಯೆಯಾಗುವ ಮಹಿಳೆ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿದ್ದಾಳೆ. ಮತ್ತೊಂದೆಡೆ ಅತ್ಯಾಚಾರಿಗಳು, ಹಂತಕರು ಸನ್ಮಾನಿಸಲ್ಪಡುತ್ತಿದ್ದಾರೆ, ವೈಭವೀಕರಿಸಲ್ಪಡುತ್ತಿದ್ದಾರೆ, ಅಧಿಕಾರ ಕೇಂದ್ರಗಳ ಫಲಾನುಭವಿಗಳಾಗುತ್ತಿದ್ದಾರೆ. ಕಾನೂನಾತ್ಮಕವಾಗಿ ಇಂತಹ ಅಪಸವ್ಯಗಳು ಅಮಾನ್ಯವಾದರೂ, ಸಮಾಜದಲ್ಲಿ ಇಂತಹ ವರ್ತನೆಗಳು ಢಾಳಾಗಿ ಕಾಣುತ್ತಿವೆ.

ಇತ್ತೀಚಿನ ಉದಾಹರಣೆಯಾಗಿ ಕೆಲವು ಘಟನೆಗಳನ್ನು ಗಮನಿಸಬಹುದು. ಹರಿಯಾಣದ ಚರ್ಖಿ ದಾದ್ರಿಯಲ್ಲಿ ರಸ್ತೆ ಬದಿಯಲ್ಲಿ ನಿಂತಿದ್ದ 26 ವರ್ಷದ ಪಶ್ಚಿಮ ಬಂಗಾಲದ ವಲಸೆ ಕಾರ್ಮಿಕನೊಬ್ಬನನ್ನು  ಅಮಾನುಷವಾಗಿ ಹತ್ಯೆ ಮಾಡಲಾಗುತ್ತದೆ. ಮುಸ್ಲಿಂ ಸಮುದಾಯಕ್ಕೆ ಸೇರಿದ ಈ ವ್ಯಕ್ತಿಯ ಅಪರಾಧ ಎಂದರೆ ಆತ ಗೊಮಾಂಸ ಸೇವಿಸಿದ್ದುದು. ಆತನ ಜೊತೆಗಾರನ ಮೇಲೆ ಹಲ್ಲೆ ನಡೆಸಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾನೆ. ಹತ್ಯೆಗೀಡಾದ ವ್ಯಕ್ತಿಯ ಮೃತದೇಹ ದೂರದ ಕಾಲುವೆಯ ಬಳಿ ದೊರೆಯುತ್ತದೆ. ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ನಡೆದ ಮತ್ತೊಂದು ಘಟನೆಯಲ್ಲಿ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ 72 ವರ್ಷದ ಮುಸ್ಲಿಂ ವೃದ್ಧನೊಬ್ಬನನ್ನು ಒಂದು ಗುಂಪು ಥಳಿಸುತ್ತದೆ. ಕಾರಣ ಅವನು ತನ್ನ ಡಬ್ಬಿಯಲ್ಲಿ ಗೋಮಾಂಸ ಒಯ್ಯುತ್ತಿದ್ದ ಎಂಬ ಶಂಕೆ.

ಈ ಎರಡೂ ಘಟನೆಯನ್ನು ಮೀರಿಸುವ ಘಟನೆ ಹರಿಯಾಣದಲ್ಲಿ ನಡೆದಿದೆ. ಕಾರಿನಲ್ಲಿ ಹೋಗುತ್ತಿದ್ದ 12ನೇ ತರಗತಿಯ ವಿದ್ಯಾರ್ಥಿಯೊಬ್ಬನನ್ನು ಕೆಲವು ಗೊರಕ್ಷಕರು 30 ಕಿಲೋಮೀಟರ್‌ವರೆಗೂ ಅಟ್ಟಿಸಿಕೊಂಡು ಹೋಗಿ, ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ಆತನ ಕಾರಿನಲ್ಲಿ ಗೋಮಾಂಸ ಇಟ್ಟಿರುವ ಶಂಕೆಯಿಂದ ಕೊಂದಿರುವುದಾಗಿ ಬಂಧಿತ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಹತ್ಯೆಗೀಡಾದ ಯುವಕ ಹಿಂದೂ ಬ್ರಾಹ್ಮಣ ಸಮುದಾಯಕ್ಕೆ ಸೇರಿದನವಾಗಿದ್ದು, ಅವನನ್ನು ಮುಸ್ಲಿಂ ಎಂದು ಭಾವಿಸಿ ಹತ್ಯೆ ಮಾಡಿದೆ ಎಂದು ಹೇಳಿದ್ದಾನೆ. ಒಬ್ಬ ಬ್ರಾಹ್ಮಣನನ್ನು ಕೊಂದದ್ದಕ್ಕಾಗಿ ಪಶ್ಚಾತ್ತಾಪವಾಗುತ್ತಿದೆ ಎಂದು ಬಂಧಿತ ಆರೋಪಿ ಹೇಳಿದ್ದಾನೆ. ಅಂದರೆ ಹತ್ಯೆಗಾಗಿ ಯಾವುದೇ ಪರಿತಾಪ ಕಾಣುವುದಿಲ್ಲ. ಈ ಅಸೂಕ್ಷ್ಮತೆ ಒಂದು ಸಮಾಜದಲ್ಲಿ ಹೇಗೆ ಸೃಷ್ಟಿಯಾಗಲು ಸಾಧ್ಯ ? 

ಈ ಮೂರೂ ಘಟನೆಗಳು ಕೆಲವು ವರ್ಷಗಳ ಹಿಂದೆ ಮನೆಯ ಫ್ರಿಡ್ಜ್‌ನಲ್ಲಿ ಗೋಮಾಂಸ ಇಟ್ಟಿರುವ ಶಂಕೆಯ ಮೇಲೆ ಹತ್ಯೆಗೊಳಗಾದ ಅಕ್ಲಾಖ್‌ನನ್ನು ನೆನಪಿಸುತ್ತವೆ. ದೇಶಾದ್ಯಂತ ಪಸರಿಸಿರುವ ಗೋರಕ್ಷಕ ಪಡೆಗಳಿಗೆ ಯಾವ ಕಾನೂನಿನ ಅಡಿಯಲ್ಲಿ ಪ್ರಯಾಣಿಕರನ್ನು ಶೋಧಿಸಲು, ವಾಹನಗಳನ್ನು ತಡೆಗಟ್ಟಲು, ಬಂಧಿಸಿ ಪೊಲೀಸರಿಗೆ ಒಪ್ಪಿಸಲು ಪರವಾನಗಿ ನೀಡಲಾಗಿದೆ ? ಈ ಪ್ರಶ್ನೆಗೆ ಸರ್ಕಾರಗಳೇ ಉತ್ತರಿಸಬೇಕಿದೆ. ಗೋಹತ್ಯೆ , ಗೋಮಾಂಸ ಸಂಗ್ರಹ ಕಾನೂನಾತ್ಮಕ ಅಪರಾಧ ಎಂದು ಕೆಲವು ರಾಜ್ಯಗಳಲ್ಲಿ ಪರಿಗಣಿಸಲಾಗಿದ್ದರೂ, ಇದನ್ನು ಗಮನಿಸಲು, ನಿಗ್ರಹಿಸಲು, ನಿಯಂತ್ರಿಸಲು ಕಾನೂನಾತ್ಮಕ ಆಡಳಿತ ಎನ್ನುವುದೊಂದು ಇದೆಯಲ್ಲವೇ ? ಈ ಕಾನೂನು ವ್ಯಾಪ್ತಿಯನ್ನೂ ಮೀರಿ ಜನರನ್ನು ಶಿಕ್ಷೆಗೊಳಪಡಿಸುವ ಹಕ್ಕು ಯಾರಿಗಿದೆ ? ಅಥವಾ ಇಂತಹ ನಿರ್ದಿಷ್ಟ ಆಹಾರ ಸೇವನೆ ಶಿಕ್ಷಾರ್ಹ ಅಪರಾಧ ಎಂಬ ನ್ಯಾಯಸಂಹಿತೆ ದೇಶದಲ್ಲಿ ಅಥವಾ ರಾಜ್ಯಗಳಲ್ಲಿ ಜಾರಿಯಲ್ಲಿದೆಯೇ ? ಈ ಪ್ರಶ್ನೆಗಳಿಗೆ ನಾಗರಿಕ ಪ್ರಜ್ಞೆ ಇರುವವರು ಉತ್ತರಿಸಬೇಕು.

ಆಧುನಿಕತೆಯೊಡನೆ ಸಂಘರ್ಷದಲ್ಲಿ

ಹಾಗಿದ್ದರೆ ನಾವು ಪ್ರಾಚೀನತೆಯತ್ತ ಹೊರಳುತ್ತಿದ್ದೇವೆ ಎನ್ನುವುದು ನಿಶ್ಚಿತ ಎನಿಸುವುದಿಲ್ಲವೇ ? ಸಾರ್ವಜನಿಕ ಜೀವನದಲ್ಲಿ ಜನರು ಸೇವಿಸುವ ಆಹಾರವನ್ನಾಗಲೀ, ಅನುಸರಿಸುವ ಆಹಾರ ಪದ್ಧತಿಯನ್ನಾಗಲೀ ಅಪರಾಧ ಸಂಹಿತೆಗಳಲ್ಲಿ ನಿರ್ವಚಿಸಲಾಗಿದೆಯೇ ? ಇಲ್ಲವಾದಲ್ಲಿ ಮೇಲೆ ಉಲ್ಲೇಖಿಸಲಾದ ಘಟನೆಗಳನ್ನು ಹೇಗೆ ನೋಡುವುದು ? ಇಲ್ಲಿ ನಾವು ಗಮನಿಸಬೇಕಿರುವುದು ನಾವೇ ಕಟ್ಟಿರುವ ಹೊಸ ಸಮಾಜವನ್ನು, ನಾವೇ ರೂಪಿಸಿಕೊಂಡಿರುವ ಸಂಸ್ಕೃತಿಯನ್ನು. ಕಳೆದ ಮೂರು ದಶಕಗಳಲ್ಲಿ ಎಂತಹ ಒಂದು ಸಮಾಜವನ್ನು ನಾವು ಕಟ್ಟಿಕೊಂಡಿದ್ದೇವೆ ಎಂದು ಯೋಚಿಸಬೇಕಲ್ಲವೇ ? ಇದಕ್ಕೆ ಕಾರಣಕರ್ತರಾದರೂ ಯಾರು ? ಹರಿಯಾಣದ ಘಟನೆಯಲ್ಲಿ ಹತ್ಯೆಗೈದ ಗುಂಪಿನಲ್ಲಿದ್ದವರೆಲ್ಲರೂ ಯುವಕರೇ. ಈ ಯುವಕರನ್ನು ನಿರ್ದೇಶಿಸುವ ತಾತ್ವಿಕ ನೆಲೆಗಳಾದರೂ ಯಾವುದು ?

ಮತ್ತೊಂದು ನೆಲೆಯಲ್ಲಿ ಕೊಲ್ಕತ್ತಾದ ಆರ್‌ಜಿ ಕಾರ್‌ ಆಸ್ಪತ್ರೆಯಲ್ಲಿ ನಡೆದ ಭೀಕರ ಅತ್ಯಾಚಾರ-ಹತ್ಯೆಯ ನಂತರದ ಕೆಲವೇ ದಿನಗಳಲ್ಲಿ ದೇಶದ ಮೂಲೆ ಮೂಲೆಯಲ್ಲೂ ಮಹಿಳಾ ದೌರ್ಜನ್ಯಗಳು ನಡೆಯುತ್ತಲೇ ಇವೆ. ಕೊಪ್ಪಳದ ಗ್ರಾಮವೊಂದರಲ್ಲಿ ದಲಿತ ಮಹಿಳೆ ವಿಷಪ್ರಾಶನದಿಂದ ಹತ್ಯೆಗೀಡಾದರೆ, ನಂಜನಗೂಡಿನ ಕವಲಂದೆಯಲ್ಲಿ ಓರ್ವ ಮಹಿಳೆಯನ್ನು ಹತ್ಯೆ ಮಾಡಿ ನೇಣಿಗೆ ಹಾಕಿರುವುದು ವರದಿಯಾಗಿದೆ.  ಉತ್ತರಪ್ರದೇಶದ ಲಖನೌನಲ್ಲಿ ನಡೆದ ಘಟನೆಯೊಂದರಲ್ಲಿ, ಅನಾರೋಗ್ಯ ಪೀಡಿತ ಪತಿಯನ್ನು ಆಸ್ಪತ್ರೆಯಿಂದ ಮನೆಗೆ ಕರೆದೊಯ್ಯುತ್ತಿದ್ದ ಮಹಿಳೆಗೆ ದುಷ್ಕರ್ಮಿಗಳು ಆಂಬುಲೆನ್ಸ್‌ನಲ್ಲೇ ಲೈಂಗಿಕ ಕಿರುಕುಳ ನೀಡಿರುವುದೇ ಅಲ್ಲದೆ ಅತ್ಯಾಚಾರಕ್ಕೆ ಯತ್ನಿಸಿರುವುದು ವರದಿಯಾಗಿದೆ. ಆಕೆಯ ಪ್ರತಿಭಟನೆಯ ಪರಿಣಾಮ ಪತಿಗೆ ಅಳವಡಿಸಿದ್ದ ಆಮ್ಲಜನಕ ಪೂರೈಕೆಯನ್ನೂ ಕಿತ್ತುಹಾಕಿ ದಂಪತಿಗಳನ್ನು ಹೊರಗೆಸೆದಿರುವುದಾಗಿ ವರದಿಯಾಗಿದೆ .(ಪ್ರಜಾವಾಣಿ 6-9-24).

ಒಂದು ಮುಂದುವರೆದ ಆಧುನಿಕ ಸಮಾಜದಲ್ಲಿ ಈ ರೀತಿಯ ಕ್ರೌರ್ಯವನ್ನು ಹೇಗೆಂದು ವ್ಯಾಖ್ಯಾನಿಸುವುದು ? ಆಹಾರ ಸೇವನೆ ಯಾವುದೇ ನಾಗರಿಕತೆಯಲ್ಲೂ ಶಿಕ್ಷಾರ್ಹವಾಗುವುದಿಲ್ಲ. ಆದರೆ ಭಾರತದಲ್ಲಿ ಗೋಮಾಂಸ ಸೇವನೆಗೆ ನ್ಯಾಯಿಕ ವ್ಯವಸ್ಥೆಯಿಂದ ಹೊರಗೆ ಶಿಕ್ಷೆ ವಿಧಿಸಲಾಗುತ್ತಿದೆ. ಸಮಾಜದಲ್ಲಿ, ಅದರಲ್ಲೂ ಯುವಸಮೂಹದ ನಡುವೆ ಈ ದ್ವೇಷಾಸೂಯೆಗಳನ್ನು, ಹಿಂಸಾತ್ಮಕ ಮನಸ್ಥಿತಿಯನ್ನು ಬಿತ್ತುವುದೇ ಅಲ್ಲದೆ ಅದನ್ನು ಪೋಷಿಸುವ ಮತೀಯ ಮೂಲಭೂತವಾದಿ, ಮತಾಂಧತೆಯ ಸಾಂಸ್ಥಿಕ ನೆಲೆಗಳನ್ನು 21ನೆಯ ಶತಮಾನದ ಭಾರತೀಯ ಸಮಾಜ ಪ್ರಶ್ನಿಸಲೇಬೇಕಿದೆ. ಹತ್ಯೆಗೊಳಗಾದವರನ್ನೂ, ಹಂತಕರನ್ನೂ, ಅತ್ಯಾಚಾರಕ್ಕೀಡಾದವರನ್ನೂ-ಅತ್ಯಾಚಾರಿಗಳನ್ನೂ ಜಾತಿ-ಧರ್ಮಗಳ ಅಸ್ಮಿತೆಗಳ ಆಧಾರದಲ್ಲಿ ಸಾಪೇಕ್ಷವಾಗಿ ನೋಡುವ ಒಂದು ವಿಕೃತ ಮನಸ್ಥಿತಿಯನ್ನು ಇದೇ ಸಮಾಜದ ಒಳಗೇ ಸಾಂಸ್ಥಿಕವಾಗಿ ಪೋಷಿಸಲಾಗಿರುವುದನ್ನೂ ಪ್ರಶ್ನಿಸಬೇಕಿದೆ.

ಕ್ರೌರ್ಯ-ಹಿಂಸೆ ಮತ್ತು ನಾಗರಿಕ ಮೌನ

ಪ್ರಾಚೀನ-ಮಧ್ಯಕಾಲೀನ ಭಾರತದಲ್ಲೂ ಕಾಣಲಾಗದಂತಹ ಕ್ರೌರ್ಯ-ಹಿಂಸೆ ಮತ್ತು ಅಮಾನುಷ ಪ್ರವೃತ್ತಿಗಳನ್ನು ಅತ್ಯಾಧುನಿಕ ಡಿಜಿಟಲ್‌ ಯುಗದಲ್ಲಿ ನಾವು ಕಾಣುವಂತಾಗಿದೆ. ಐದು ದಶಕಗಳ ಹಿಂದೆ ಭಾರತ ಹೀಗಿರಲಿಲ್ಲ ಎಂದು ಖಂಡಿತವಾಗಿಯೂ ಎದೆತಟ್ಟಿಕೊಂಡು ಹೇಳಬಹುದು. ಅಂದರೆ ಈ ಸಮಾಜವನ್ನು ಅಥವಾ ಈ ವಿಕೃತ ಮೌಲ್ಯಗಳನ್ನು ಮೌನವಾಗಿ ಸಮ್ಮತಿಸುವ ಸಾಮಾಜಿಕ ಪರಿಸರವನ್ನು ಕಟ್ಟಿದವರು ಯಾರು ಎಂಬ ಪ್ರಶ್ನೆ ನಮ್ಮನ್ನು ಕಾಡಬೇಕಿದೆ. ಪ್ರಾಚೀನ ಸಮಾಜದ ಪಳೆಯುಳಿಕೆಗಳಾಗಿ ಇಂದಿಗೂ ಜೀವಂತವಾಗಿರುವ ಪಿತೃಪ್ರಧಾನತೆ, ಜಾತಿ ಶ್ರೇಷ್ಠತೆ ಮತ್ತು ಮತೀಯ ಶ್ರೇಷ್ಠತೆಯ ಭಾವನೆಗಳಿಂದಾಚೆಗೂ ಒಂದು ಮಾನವೀಯ ಸಮಾಜ ಭಾರತದಲ್ಲಿ ಈಗಲೂ ಜೀವಂತವಾಗಿದೆ. ಈ ಸಮಾಜವನ್ನು ಪ್ರತಿನಿಧಿಸುವ ಪ್ರತಿ ವ್ಯಕ್ತಿಯೂ ಈ ಪ್ರಶ್ನೆಯನ್ನು ಹಾಕಿಕೊಳ್ಳಬೇಕಿದೆ.

ಹಿಂದೂ-ಮುಸ್ಲಿಂ-ಕ್ರೈಸ್ತ ಎಂಬ ಸಾಂಸ್ಥಿಕ ಚೌಕಟ್ಟುಗಳಿಂದ ಹೊರಬಂದು, ಒಂದು ಮಾನವೀಯ ಸಮಾಜದ ಭಾಗವಾಗಿ ನಮ್ಮನ್ನು ನಾವು ಪ್ರಶ್ನಿಸಿಕೊಂಡಾಗ, ಈ ಘಟನೆಗಳಿಗೆ ಮೌನ ವಹಿಸುವುದೂ ಘಟನೆಯಷ್ಟೇ ಕ್ರೂರ ಎನಿಸುವುದು ಸಹಜ. ಆಡಳಿತ ವ್ಯವಸ್ಥೆಯಲ್ಲಿ ಬೇರೂರಿರುವ ಹಣಕಾಸು ಭ್ರಷ್ಟಾಚಾರದೊಡನೆ ಬದುಕಬಹುದು ಆದರೆ ಮಾನವೀಯ ಮೌಲ್ಯಗಳನ್ನೇ ಕಳೆದುಕೊಂಡು, ಅಮಾನುಷ ಪ್ರವೃತ್ತಿಗಳನ್ನು ಸಮ್ಮಾನಿಸುವ ಅಥವಾ ಮೌನವಾಗಿ ಸಹಿಸಿಕೊಳ್ಳುವ ಸಾಮಾಜಿಕ ವಿಕೃತಿಯೊಡನೆ ಸಮಾಜ ಬದುಕುವುದಿಲ್ಲ. ದೇಶದ ಕಾನೂನು, ನ್ಯಾಯ ವ್ಯವಸ್ಥೆ ಈ ಘಟನೆಗಳನ್ನು ಗಮನಿಸಿ, ನಿಯಂತ್ರಿಸಿ, ನಿರ್ವಹಿಸುತ್ತದೆ. ಆದರೆ ಪ್ರಜ್ಞಾವಂತ ನಾಗರಿಕರಾಗಿ ನಮ್ಮ ಭಾದ್ಯತೆ ಏನು ? ಮಾನವ ಸಮಾಜದ ಅಭ್ಯುದಯ ಮತ್ತು ಸಾಮಾಜಿಕ ಮುನ್ನಡೆಯ ಹಾದಿಯಲ್ಲಿ ಉದಾತ್ತ ಗುರಿಯತ್ತ ಸಾಗುವುದೋ ಅಥವಾ ಪ್ರಾಚೀನತೆಯತ್ತ ಹೊರಳಿ ನೈತಿಕ ಅವನತಿಯತ್ತ ಕುಸಿಯುವುದೋ ?

ಭಾರತ ಎತ್ತ ಸಾಗುತ್ತಿದೆ ಎಂಬ ಪ್ರಶ್ನೆ ಎದುರಾದಾಗ, ಮುಂಬೈ ಷೇರು ಮಾರುಕಟ್ಟೆ ಮತ್ತು ಜಿಡಿಪಿ ಸೂಚ್ಯಂಕಗಳತ್ತ ಮಾತ್ರ ನೋಡುವುದರ ಬದಲು, ಸುಳ್ಳು ಸುದ್ದಿಗಳನ್ನು ಹರಡುವ 50-60 ಸೆಕಂಡುಗಳ ರೀಲುಗಳತ್ತ ಗಮನಹರಿಸುವುದರ ಬದಲು, ನಮ್ಮ ಕಣ್ಣೆದುರಿನಲ್ಲೇ ಅನಾವರಣವಾಗುತ್ತಿರುವ ಸಾಮಾಜಿಕ ಕ್ರೌರ್ಯ, ಹಿಂಸೆ, ಅಸಹನೆ, ಅಸ್ಪೃಶ್ಯತೆ, ದೌರ್ಜನ್ಯ, ಅತ್ಯಾಚಾರ, ಹತ್ಯೆ ಮತ್ತು ಅಸ್ಪೃಶ್ಯತೆಯಂತಹ ಹೀನಾಚರಣೆಗಳತ್ತ ನಾವು ಕಣ್ತೆರೆದು ನೋಡಬೇಕಿದೆ. ಹಾಗೆಯೇ ಇದನ್ನು ಪೋಷಿಸುವ-ಮೌನವಾಗಿ ಸಹಿಸಿಕೊಳ್ಳುವ ಮತಾಂಧತೆಯ ಸಾಂಸ್ಥಿಕ ನೆಲೆಗಳನ್ನೂ ಪ್ರಶ್ನಿಸಬೇಕಿದೆ.  ಇಲ್ಲಿ ಅಪರಾಧಿ ಯಾರು ಎಂಬ ಪ್ರಶ್ನೆ ಎದುರಾದಾಗ, ಕಳೆದ ನಾಲ್ಕು ದಶಕಗಳಲ್ಲಿ ನಾವೇ ಕಟ್ಟಿರುವ ಅಥವಾ ಕಟ್ಟಲು ಅವಕಾಶ ನೀಡಿರುವ ಸಮಾಜ ಎಂಬ ಉತ್ತರ ಖಂಡಿತವಾಗಿಯೂ ಹೊಳೆಯುತ್ತದೆ. ಈ ಸಮಾಜದ ಪ್ರಗತಿ ಮತ್ತು ಅವನತಿ ಎರಡೂ ನಮ್ಮ ಕೈಯ್ಯಲ್ಲೇ ಇದೆ. ನಾಗರಿಕ ಜವಾಬ್ದಾರಿಯನ್ನು ನಿರ್ಲಕ್ಷಿಸುವ ಒಂದು ಸಮಾಜವು ಮೌಲಿಕವಾಗಿ ಅವನತಿಯತ್ತ ಸಾಗುವ ಸಾಧ್ಯತೆಗಳೇ ಹೆಚ್ಚು. ಈ ಎಚ್ಚರಿಕೆ ನಮ್ಮೊಳಗಿರಬೇಕು.

Tags: IndiaNaa DivakaraPratidhvani
Previous Post

ಜೋಡ್‌ ಎತ್ತಿನ ಹಾಗೆ ಇರುವ ಸಿದ್ದು,ಡಿಕೆಗೆ ಜೋಡಿ ಎತ್ತಿನ ಬಂಡಿ ಗಿಫ್ಟ್‌..!

Next Post

ಸ್ಟೇಜ್‌ ಮೇಲೆ ಸಚಿವರು ಏನ್‌ ಸ್ಟೆಪ್ ಹಾಕ್ತಾರೆ ನೋಡಿ..!

Related Posts

ಅಂದು ಸಿಎಂ ಸಿದ್ದರಾಮಯ್ಯ ಇಂದು ಮಹೇಶ್ ಶೆಟ್ಟಿ ತಿಮರೋಡಿ. ತನಿಕೆಗೆ ಸ್ನೇಹಮಹಿ ಕೃಷ್ಣ ಆಗ್ರಹ..!
Top Story

ಅಂದು ಸಿಎಂ ಸಿದ್ದರಾಮಯ್ಯ ಇಂದು ಮಹೇಶ್ ಶೆಟ್ಟಿ ತಿಮರೋಡಿ. ತನಿಕೆಗೆ ಸ್ನೇಹಮಹಿ ಕೃಷ್ಣ ಆಗ್ರಹ..!

by ಪ್ರತಿಧ್ವನಿ
August 21, 2025
0

ಅಂದು ಮೈಸೂರಿನ ಮೂಡಾ ( MUDA ) ಭೂ ಹಗರಣಕ್ಕೆ ಸಿದ್ದರಾಮಯ್ಯ ಗೆ ಸಂಕಷ್ಟ ತಂದಿದ್ದ ಸ್ನೇಹಮಹಿ ಕೃಷ್ಣ ಇದೀಗ ಧರ್ಮಸ್ಥಳ ಗ್ರಾಮದ ಪ್ರಕರಣಕ್ಕೆ ಮತ್ತೆ ಎಂಟ್ರಿ...

Read moreDetails

ಸದನದಲ್ಲಿ ಶರಣಗೌಡ ಕಂದಕುರ್ ಗಂಭೀರ ಆರೋಪ..!

August 21, 2025

ದರ್ಶನ್‌ ಮತ್ತೆ ಜೈಲ್‌ಗೆ ಹೋಗಲು ಆ ಪ್ರಭಾವಿ ಮಂತ್ರಿಗಳು ಕಾರಣ..?

August 21, 2025

ಮಾತ್ನಾಡಲು ಅವಕಾಶ ಕೊಡದಿದ್ದಕ್ಕೆ ಸ್ಪೀಕರ್ ಮೇಲೆನೇ ಸಿಡಿದ ಶಿವಲಿಂಗೇಗೌಡ

August 21, 2025
ಪ್ರತಿಭಾವಂತ ವಿದ್ಯಾರ್ಥಿಗಳೊಂದಿಗೆ ಶಾಲಾ ಶಿಕ್ಷಣ ಸಚಿವ ಎಸ್. ಮಧು ಬಂಗಾರಪ್ಪ ಸಂವಾದ

ಪ್ರತಿಭಾವಂತ ವಿದ್ಯಾರ್ಥಿಗಳೊಂದಿಗೆ ಶಾಲಾ ಶಿಕ್ಷಣ ಸಚಿವ ಎಸ್. ಮಧು ಬಂಗಾರಪ್ಪ ಸಂವಾದ

August 21, 2025
Next Post

ಸ್ಟೇಜ್‌ ಮೇಲೆ ಸಚಿವರು ಏನ್‌ ಸ್ಟೆಪ್ ಹಾಕ್ತಾರೆ ನೋಡಿ..!

Recent News

ಅಂದು ಸಿಎಂ ಸಿದ್ದರಾಮಯ್ಯ ಇಂದು ಮಹೇಶ್ ಶೆಟ್ಟಿ ತಿಮರೋಡಿ. ತನಿಕೆಗೆ ಸ್ನೇಹಮಹಿ ಕೃಷ್ಣ ಆಗ್ರಹ..!
Top Story

ಅಂದು ಸಿಎಂ ಸಿದ್ದರಾಮಯ್ಯ ಇಂದು ಮಹೇಶ್ ಶೆಟ್ಟಿ ತಿಮರೋಡಿ. ತನಿಕೆಗೆ ಸ್ನೇಹಮಹಿ ಕೃಷ್ಣ ಆಗ್ರಹ..!

by ಪ್ರತಿಧ್ವನಿ
August 21, 2025
Top Story

ಸದನದಲ್ಲಿ ಶರಣಗೌಡ ಕಂದಕುರ್ ಗಂಭೀರ ಆರೋಪ..!

by ಪ್ರತಿಧ್ವನಿ
August 21, 2025
Top Story

ದರ್ಶನ್‌ ಮತ್ತೆ ಜೈಲ್‌ಗೆ ಹೋಗಲು ಆ ಪ್ರಭಾವಿ ಮಂತ್ರಿಗಳು ಕಾರಣ..?

by ಪ್ರತಿಧ್ವನಿ
August 21, 2025
Top Story

ಮಾತ್ನಾಡಲು ಅವಕಾಶ ಕೊಡದಿದ್ದಕ್ಕೆ ಸ್ಪೀಕರ್ ಮೇಲೆನೇ ಸಿಡಿದ ಶಿವಲಿಂಗೇಗೌಡ

by ಪ್ರತಿಧ್ವನಿ
August 21, 2025
ಪ್ರತಿಭಾವಂತ ವಿದ್ಯಾರ್ಥಿಗಳೊಂದಿಗೆ ಶಾಲಾ ಶಿಕ್ಷಣ ಸಚಿವ ಎಸ್. ಮಧು ಬಂಗಾರಪ್ಪ ಸಂವಾದ
Top Story

ಪ್ರತಿಭಾವಂತ ವಿದ್ಯಾರ್ಥಿಗಳೊಂದಿಗೆ ಶಾಲಾ ಶಿಕ್ಷಣ ಸಚಿವ ಎಸ್. ಮಧು ಬಂಗಾರಪ್ಪ ಸಂವಾದ

by ಪ್ರತಿಧ್ವನಿ
August 21, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಅಂದು ಸಿಎಂ ಸಿದ್ದರಾಮಯ್ಯ ಇಂದು ಮಹೇಶ್ ಶೆಟ್ಟಿ ತಿಮರೋಡಿ. ತನಿಕೆಗೆ ಸ್ನೇಹಮಹಿ ಕೃಷ್ಣ ಆಗ್ರಹ..!

ಅಂದು ಸಿಎಂ ಸಿದ್ದರಾಮಯ್ಯ ಇಂದು ಮಹೇಶ್ ಶೆಟ್ಟಿ ತಿಮರೋಡಿ. ತನಿಕೆಗೆ ಸ್ನೇಹಮಹಿ ಕೃಷ್ಣ ಆಗ್ರಹ..!

August 21, 2025

ಸದನದಲ್ಲಿ ಶರಣಗೌಡ ಕಂದಕುರ್ ಗಂಭೀರ ಆರೋಪ..!

August 21, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada