ಬೆಂಗಳೂರು :ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬ ತನ್ನ ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳಿಗೆ ಇಲಿ ಹಾಗೂ ತಿಗಣಿ ಪಾಷಾಣವನ್ನು ಹಾಕಿ ಕೊಲೆ ಮಾಡಿದ ದಾರುಣ ಘಟನೆಯು ಬೆಂಗಳೂರಿನ ಕೋಣನಕುಂಟೆಯಲ್ಲಿ ಸಂಭವಿಸಿದೆ. ಪತಿಗೆ ಕ್ಯಾನ್ಸರ್ ಕಾಯಿಲೆ ಇದೆ ಎಂದು ತಿಳಿದ ಬಳಿಕ ಪತ್ನಿಯೇ ಕುಟುಂಬ ನಿರ್ವಹಣೆ ಜವಾಬ್ದಾರಿ ಹೊತ್ತಿದ್ದರು ಎನ್ನಲಾಗಿದೆ. ಕೊಲೆಯಾದ ದುರ್ದೈವಿಗಳನ್ನು ವಿಜಯ(28) , ನಿಶಾ(7) ಹಾಗೂ ದೀಕ್ಷಾ ಎಂದು ಗುರುತಿಸಲಾಗಿದೆ. ಕೋಣನಕುಂಟೆ ನಿವಾಸಿ ನಾಗೇಂದ್ರ ಎಂಬಾತ ಈ ಕೃತ್ಯ ಎಸಗಿದ್ದಾನೆ.
ನಿನ್ನ ರಾತ್ರಿ ಕೆಲಸ ಮುಗಿಸಿ ಅಲ್ಲಿಯೇ ಪಕ್ಕದಲ್ಲಿದ್ದ ತವರು ಮನೆಗೆ ಆಗಮಿಸಿದ್ದ ವಿಜಯ ತನ್ನ ಇಬ್ಬರು ಮಕ್ಕಳೊಂದಿಗೆ ತಾಯಿಯ ಜೊತೆಯಲ್ಲಿಯೇ ಇದ್ದಳು ಎನ್ನಲಾಗಿದೆ. 8:30ರ ಸುಮಾರಿಗೆ ಮಕ್ಕಳೊಂದಿಗೆ ಮನೆಗೆ ತೆರಳಿದ್ದ ವಿಜಯ ಇಂದು ದುರಂತ ಅಂತ್ಯ ಕಂಡಿದ್ದಾರೆ. ಪತ್ನಿಯ ಬಳಿ ಹಣಕ್ಕಾಗಿ ಪೀಡಿಸುತ್ತಿದ್ದ ನಾಗೇಂದ್ರ ಈ ಕೃತ್ಯ ಎಸಗಿ ಬಳಿಕ ತಾನೂ ಚಾಕುವಿನಿಂದ ಕೈ ಕೊಯ್ದುಕೊಂಡಿದ್ದಾನೆ ಎನ್ನಲಾಗಿದೆ. ಬೆಳಗ್ಗೆ ಎಷ್ಟೊತ್ತಾದರೂ ಮಗಳು ಮನೆ ಬಾಗಿಲು ತೆಗೆಯದೇ ಇರೋದನ್ನು ಗಮನಿಸಿದ ವಿಜಯಾ ತಾಯಿ ಸಾಕವ್ವ ಸ್ಥಳೀಯರ ಸಹಾಯದಿಂದ ಮನೆ ಬಾಗಿಲು ಒಡೆದು ನೋಡಿದಾಗ ಈ ಕೃತ್ಯ ಬೆಳಕಿಗೆ ಬಂದಿದೆ. ಆರೋಪಿ ನಾಗೇಂದ್ರನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಮಗಳ ಸಾವಿಗೆ ನ್ಯಾಯ ಕೊಡಿಸಿ ಎಂದು ಬೇಡುತ್ತಾ ಮಾತನಾಡಿದ ತಾಯಿ ಸಾಕವ್ವ, ಆತ ಎಂದಿಗೂ ಹಣಕ್ಕಾಗಿ ನನ್ನ ಮಗಳ ಮೇಲೆ ಹಲ್ಲೆ ಮಾಡುತ್ತಿದ್ದ. ನಾನೇ ಮೂರು ಲಕ್ಷ ರೂಪಾಯಿ ನೀಡಿ ಆ ಮನೆಯನ್ನು ಭೋಗ್ಯಕ್ಕೆ ಹಾಕಿಸಿಕೊಟ್ಟಿದ್ದೆ. ವಿಜಯಾ ಕೂಡ ಪತಿಯ ಚಿಕಿತ್ಸೆಗಾಗಿ 4 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದಳು. 10 ಸಾವಿರ ರೂಪಾಯಿ ಸಂಬಳ ಪಡೆಯುತ್ತಿದ್ದ ವಿಜಯಾ ಅದೇ ಹಣದಲ್ಲಿ ಇಡೀ ಸಂಸಾರವನ್ನು ನೋಡಿಕೊಳ್ಳುತ್ತಿದ್ದಳು. ನಿನ್ನೆ ಮೊಮ್ಮಕ್ಕಳು ನನ್ನೊಂದಿಗೆ ಇರುತ್ತೇನೆ ಎಂದು ಹಠ ಮಾಡಿದ್ದರು. ಆದರೆ ನಾನೇ ಅವರನ್ನು ಮನೆಗೆ ಕಳುಹಿಸಿಕೊಟ್ಟಿದ್ದೆ. ಈಗ ನೋಡಿದರೆ ಈ ರೀತಿ ಆಗಿದೆ ಎಂದು ಕಣ್ಣೀರಿಟ್ಟಿದ್ದಾರೆ .