ಹಿಜಾಬ್ ಪ್ರಕರಣದ ವಿಷಯದಲ್ಲಿ ರಾಜ್ಯ ಹೈಕೋರ್ಟ್ ನೀಡಿದ ಮಧ್ಯಂತರ ಆದೇಶ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಹಿಜಾಬ್ ಧರಿಸುವ ತಮ್ಮ ಧಾರ್ಮಿಕ ಹಕ್ಕಿನ ರಕ್ಷಣೆಗೆ ಕೋರಿ ಮುಸ್ಲಿಂ ಯುವತಿಯರು ನ್ಯಾಯಾಲಯದ ಮೊರೆ ಹೋಗಿರುವಾಗ, ನ್ಯಾಯಾಲಯ ಮುಂದಿನ ಆದೇಶದವರೆಗೆ ಶಾಲಾ ಕಾಲೇಜುಗಳಲ್ಲಿ ಯಾವುದೇ ಧರ್ಮಕ್ಕೆ ಸಂಬಂಧಿಸಿದ ವಸ್ತ್ರ ಬಳಸದಂತೆ ಮಧ್ಯಂತರ ಆದೇಶ ನೀಡುವ ಮೂಲಕ, ಅವರು ಕೋರಿದ್ದ ಮೂಲ ಹಕ್ಕನ್ನೇ ನಿರಾಕರಿಸಲಾಯಿತೆ? ಎಂಬ ಜಿಜ್ಞಾಸೆ ಆರಂಭವಾಗಿದೆ.
ರಾಷ್ಟ್ರವ್ಯಾಪಿ ಇಂತಹ ಜಿಜ್ಞಾಸೆಗಳು ನಡೆಯುತ್ತಿದ್ದು, ‘ಲೈವ್ ಲಾ.ಇನ್’ ಸಂಪಾದಕ ಮನು ಸೆಬಾಸ್ಟಿಯನ್ ಅವರು ಈ ಕುರಿತು ತಮ್ಮ ಜಾಲತಾಣದಲ್ಲಿ ಬರೆದಿರುವ ಲೇಖನದಲ್ಲಿ ನ್ಯಾಯಾಲಯದ ಮಧ್ಯಂತರ ಆದೇಶದ ಕುರಿತು ಮಹತ್ವದ ಸಂಗತಿಗಳನ್ನು ಎತ್ತಿದ್ದಾರೆ.
ಸರ್ಕಾರಿ ಕಾಲೇಜಿನಲ್ಲಿ ಹಿಜಾಬ್ ಧರಿಸಲು ನಿರ್ಬಂಧ ಹೇರಿದ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಮುಸ್ಲಿಂ ಯುವತಿಯರು ಹೈಕೋರ್ಟ್ ಮೊರೆಹೋಗಿದ್ದರು. ಆದರೆ, ಆ ಕುರಿತು ಅರ್ಜಿಯ ವಿಚಾರಣೆ ನಡೆಸುತ್ತಿರುವ ನ್ಯಾಯಾಲಯ ನೀಡಿರುವ ಮಧ್ಯಂತರ ಆದೇಶ ನ್ಯಾಯಾಂಗದ ಇತಿಹಾಸದಲ್ಲೇ ಕಂಡುಕೇಳರಿಯದ ಆದೇಶವಾಗಿದ್ದು, ಪ್ರಕರಣದ ವಿಚಾರಣೆಯ ಪ್ರಗತಿಯಲ್ಲಿರುವಾಗಲೇ ತನ್ನ ಮುಂದೆ ಸಲ್ಲಿಕೆಯಾಗಿರುವ ಮನವಿಯ ಮೂಲ ಆಶಯಕ್ಕೆ ತದ್ವಿರುದ್ಧವಾದ ಮಧ್ಯಂತರ ಆದೇಶವನ್ನು ಮೂವರು ನ್ಯಾಯಮೂರ್ತಿಗಳನ್ನೊಳಗೊಂಡ ಪೀಠ ನೀಡಿದೆ ಎಂದು ಮನು ವಿಶ್ಲೇಷಿಸಿದ್ದಾರೆ.
“ಈ ಕುರಿತ ಎಲ್ಲಾ ಅರ್ಜಿಗಳ ವಿಚಾರಣೆ ಬಾಕಿ ಇರುವ ಹಿನ್ನೆಲೆಯಲ್ಲಿ ಪ್ರಕರಣ ಇತ್ಯರ್ಥವಾಗುವವರೆಗೆ ಶಾಲಾ ತರಗತಿಯಲ್ಲಿ ಯಾವುದೇ ಧರ್ಮಕ್ಕೆ, ನಂಬಿಕೆಗೆ ಸಂಬಂಧಪಟ್ಟ ಕೇಸರಿ ಶಾಲು, ಹಿಜಾಬ್, ಧಾರ್ಮಿಕ ಧ್ವಜ ಸೇರಿದಂತೆ ಎಲ್ಲಾ ಬಗೆಯ ಧಾರ್ಮಿಕ ವಸ್ತ್ರಗಳನ್ನು ಬಳಸದಂತೆ ವಿದ್ಯಾರ್ಥಿಗಳಿಗೆ ಆದೇಶಿಸಲಾಗಿದೆ” ಎಂದು ಹೇಳಿರುವ ಪೀಠ, ಈ ಆದೇಶ ಸಮವಸ್ತ್ರ ನೀತಿ ಹೊಂದಿರುವ ಶಾಲಾ-ಕಾಲೇಜುಗಳಿಗೆ ಮಾತ್ರ ಅನ್ವಯ ಎಂದೂ ಹೇಳಿದೆ. ಆದರೆ, ಮೇಲ್ನೋಟಕ್ಕೆ ಈ ಆದೇಶ ಯಾವುದೇ ‘ಪಕ್ಷಪಾತಿಯಲ್ಲದ ನಿರ್ಲಿಪ್ತ’ ಆದೇಶವೆನಿಸಿದರೂ, ಇದರ ಪರಿಣಾಮಗಳನ್ನು ಎದುರಿಸಬೇಕಾದವರು ಯಾರು ನ್ಯಾಯಕ್ಕಾಗಿ ನ್ಯಾಯಾಲಯದ ಹೋಗಿದ್ದರೋ ಅದೇ ಮುಸ್ಲಿಂ ಯುವತಿಯರೇ ಎಂಬುದು ವಿಪರ್ಯಾಸ. ತಮ್ಮ ಧಾರ್ಮಿಕ ನಂಬಿಕೆಯ ಭಾಗವಾದ ಹಿಜಾಬ್ ಧರಿಸುವ ತಮ್ಮ ಹಕ್ಕನ್ನು ಕಿತ್ತುಕೊಳ್ಳಲಾಗಿದೆ ಎಂದು ಪರಿಹಾರ ಕೋರಿ ನ್ಯಾಯಾಂಗದ ಮೊರೆ ಹೋಗಿದ್ದ ಅವರೇ ಇದೀಗ ಈ ಮಧ್ಯಂತರ ಆದೇಶದ ಸಂತ್ರಸ್ತರಾಗಿದ್ದಾರೆ ಎಂಬುದು ಮನು ಸೆಬಾಸ್ಟಿನ್ ಅವರ ಅಭಿಪ್ರಾಯ.
ಅರ್ಜಿದಾರರ ವಾದವನ್ನು ಪರಿಗಣನೆಗೆ ತೆಗೆದುಕೊಳ್ಳುವ ಮುನ್ನವೇ ನ್ಯಾಯ ಹಂಚಿಕೆಯ ಸಮಾನತೆಯ ತತ್ವಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ವಿಚಾರಣೆಯ ಹಂತದಲ್ಲೇ ಮೂಲಭೂತ ಹಕ್ಕುಗಳನ್ನು ಅಮಾನತಿನಲ್ಲಿಡುವಂತಹ ಹಿಂದೆಂದೂ ಕಂಡುಕೇಳರಿಯದ ಆದೇಶ ಇದಾಗಿದೆ. ಆ ಹಿನ್ನೆಲೆಯಲ್ಲಿ ಈ ಆದೇಶ ಅತ್ಯಂತ ಕಟು ಮಾತಿನ ವಿಮರ್ಶೆಗೆ ತಕ್ಕುದಾಗಿದೆ ಮತ್ತು ನ್ಯಾಯಾಂಗದ ಮೇಲಿನ ನಂಬಿಕೆಗೆ ದೊಡ್ಡ ಪೆಟ್ಟು ನೀಡಿದೆ ಎಂದು ಅವರು ಹೇಳಿದ್ದಾರೆ.
ಶಾಲಾ-ಕಾಲೇಜುಗಳಲ್ಲಿ ಯಾವುದೇ ಧಾರ್ಮಿಕ ವಸ್ತ್ರ, ಉಡುಪು ಧರಿಸದಂತೆ ಹೇಳಿರುವ ನ್ಯಾಯಾಲಯದ ಮಧ್ಯಂತರ ಆದೇಶ, ವಾಸ್ತವವಾಗಿ ಅರ್ಜಿದಾರರು ಪ್ರಶ್ನಿಸಿದ್ದ ಸರ್ಕಾರದ ಆದೇಶದ ಜಾರಿಯೇ ಆಗಿದೆ. ಆ ಮೂಲಕ ಮುಸ್ಲಿಂ ಯುವತಿಯರು ಶಿಕ್ಷಣ ಪಡೆಯುವುದಕ್ಕಾಗಿ ಹಿಜಾಬ್ ಧರಿಸುವ ತಮ್ಮ ಧಾರ್ಮಿಕ ಹಕ್ಕನ್ನು ತೊರೆಯಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸಿದೆ. ಅವರು ತಮ್ಮ ಅರ್ಜಿಯ ಮೂಲಕ ಎತ್ತಿದ್ದ ಭವಿಷ್ಯದ ಮೇಲೆ ಮಹತ್ವದ ಪರಿಣಾಮ ಬೀರಬಹುದಾದ ಮೂಲಭೂತ ಧಾರ್ಮಿಕ ಹಕ್ಕಿನ ಉಲ್ಲಂಘನೆಯ ಕುರಿತ ಪ್ರಶ್ನೆಗೆ ಯಾವುದೇ ಉತ್ತರ ಸಿಗುವ ಮುನ್ನವೇ ನ್ಯಾಯಾಲಯ ಆ ಹಕ್ಕನ್ನು ಮೊಟಕು ಮಾಡಿದೆ ಎಂಬುದು ಮನು ಅವರ ವಿಶ್ಲೇಷಣೆ.
ಯಾವುದೇ ಪ್ರಕರಣದಲ್ಲಿ ವಿವೇಚನಾಧಿಕಾರ ಬಳಸಿ ನ್ಯಾಯಪೀಠ ಮಧ್ಯಂತರ ಆದೇಶ ನೀಡುವಾಗ ಮೂರು ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳುತ್ತದೆ. ಅದರಲ್ಲಿ ಮೊದಲನೆಯದು ಮೇಲ್ನೋಟಕ್ಕೆ ಪ್ರಕರಣದ ಗಾಂಭೀರ್ಯತೆ ಏನು ಎಂಬುದು. ಬಳಿಕ ತನ್ನ ಆದೇಶದಿಂದ ಪರ- ವಿರೋಧಿ ಬಣದವರಿಗೆ ಆಗುವ ಅನಾನುಕೂಲತೆ ಮತ್ತು ಆದೇಶದ ದುರುಪಯೋಗದ ಸಾಧ್ಯತೆ ಮತ್ತು ಮೂರನೆಯದಾಗಿ ಆ ಆದೇಶದಿಂದಾಗಿ ಸಂವಿಧಾನಿಕ ಆಶಯಗಳಿಗೆ ಆಗಬಹುದಾದ ಹಾನಿಯನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ.
ಈ ಪ್ರಕರಣದಲ್ಲಿ ತಮ್ಮ ವಾದ ನ್ಯಾಯಸಮ್ಮತ ಎಂದು ಮೇಲ್ನೋಟಕ್ಕೆ ಮನವರಿಕೆಯಾಗುವಂತೆ ಅರ್ಜಿದಾರರು ಎರಡು ಹೈಕೋರ್ಟುಗಳ ಹಿಂದಿನ ತೀರ್ಪುಗಳನ್ನು ಉಲ್ಲೇಖಿಸಿದ್ದರು. ಆ ಪೈಕಿ ಒಂದು ಕೇರಳ ಹೈಕೋರ್ಟ್ ಆದೇಶವಾಗಿದ್ದರೆ, ಮತ್ತೊಂದು ಮದ್ರಾಸ್ ಹೈಕೋರ್ಟ್ ಆದೇಶ. ಆ ಎರಡೂ ಹೈಕೋರ್ಟ್ ತೀರ್ಪುಗಳಲ್ಲಿಯೂ ಹಿಜಾಬ್ ಎಂಬುದು ಧಾರ್ಮಿಕ ಮೂಲಭೂತ ಆಚರಣೆಯ ಭಾಗ ಎಂದು ವ್ಯಾಖ್ಯಾನಿಸಿದ್ದವು. ಆ ಎರಡೂ ಹೈಕೋರ್ಟ್ ತೀರ್ಪುಗಳು ಬಿಜು ಇಮ್ಯಾನುವಲ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪನ್ನು ಉಲ್ಲೇಖಿಸಿದ್ದವು. ಹಿಜಾಬ್ ಧರಿಸುವುದನ್ನು ಕಡ್ಡಾಯಗಳಿಸಿರುವ ಕುರಿತ ಪವಿತ್ರ ಕುರಾನ್ ಮತ್ತು ಹದಿತ್ ನ ಸಾಲುಗಳನ್ನು ಕೂಡ ಆ ತೀರ್ಪುಗಳಲ್ಲಿ ಪ್ರಸ್ತಾಪಿಸಲಾಗಿತ್ತು. ಸಂವಿಧಾನದ 25ನೇ ಪರಿಚ್ಛೇಧದ ಧಾರ್ಮಿಕ ಸ್ವಾತಂತ್ರ್ಯದ ಉಲ್ಲೇಖದ ಹೊರತಾಗಿಯೂ ಅರ್ಜಿದಾರರು, ಸಂವಿಧಾನದ 19(1)(ಎ) ಪರಿಚ್ಚೇಧದ ಅಡಿಯಲ್ಲಿ ಹಿಜಾಬ್ ತಮ್ಮ ವ್ಯಕ್ತಿತ್ವದ ವೈಶಿಷ್ಟ್ಯ ಎಂಬುದನ್ನು ಕೂಡ ಪ್ರಸ್ತಾಪಿಸಿದ್ದರು. ಹಾಗೇ 21ನೇ ಪರಿಚ್ಛೇಧದಡಿ ತಮಗೆ ಬೇಕಾದ ಉಡುಪು ತೊಡುವುದು ತಮ್ಮ ಖಾಸಗೀತನದ ಹಕ್ಕು. ಹಾಗಾಗಿ ಈ ವಿಷಯದಲ್ಲಿ ಸರ್ಕಾರ ತಮ್ಮ ಮೇಲೆ ಒತ್ತಡ ಹೇರುವಂತಿಲ್ಲ ಎಂಬುದನ್ನು ಪ್ರಸ್ತಾಪಿಸಿದ್ದರು.
ಮೇಲ್ನೋಟಕ್ಕೆ ಪ್ರಕರಣದಲ್ಲಿ ಹುರುಳಿದೆ ಎನ್ನಲು ಎರಡು ಹೈಕೋರ್ಟ್ ಗಳ ತೀರ್ಪಿನ ಉಲ್ಲೇಖಕ್ಕಿಂತ ಇನ್ನಾವ ಅಂಶ ಬೇಕಿತ್ತು? ಜೊತೆಗೆ ಪವಿತ್ರ ಧರ್ಮಗ್ರಂಥಗಳ ಸಾಲು ಮತ್ತು ಸಂವಿಧಾನದ ವಿವಿಧ ಪರಿಚ್ಛೇದಗಳ ಸಹಿತ ಹಕ್ಕುಗಳನ್ನು ಕೂಡ ಪ್ರಸ್ತಾಪಿಸುವ ಮೂಲಕ ತಮ್ಮ ಹಕ್ಕುಗಳ ಉಲ್ಲಂಘನೆ ಎಂಬುದನ್ನು ಅರ್ಜಿದಾರರು ತಮ್ಮ ಮನವಿಯಲ್ಲಿ ಮನವರಿಕೆ ಮಾಡಿದ್ದರು. ಹಾಗಿದ್ದರೂ ಕೋರ್ಟ್ ನೀಡಿರುವ ಮಧ್ಯಂತರ ಆದೇಶ ಈ ಯಾವ ಅಂಶಗಳನ್ನೂ ಪರಿಗಣಿಸಿಯೇ ಇಲ್ಲ ಎಂಬುದು ಆಘಾತಕಾರಿ ಸಂಗತಿ ಎಂದು ಮನು ಉಲ್ಲೇಖಿಸಿದ್ದಾರೆ.
ಇನ್ನು ಮಧ್ಯಂತರ ಆದೇಶದಿಂದಾಗಿ ಅರ್ಜಿದಾರರು ಮತ್ತು ಎದುರುದಾರರ ಮೇಲೆ ಆಗುವ ಪೂರಕ ಮತ್ತು ಮಾರಕ ಪರಿಣಾಮಗಳ ತುಲನೆ. ಈ ಪ್ರಕರಣದಲ್ಲಿ, ಡಿಸೆಂಬರಿನಲ್ಲಿ ವಿರೋಧ ವ್ಯಕ್ತವಾಗುವವರೆಗೆ, ಶೈಕ್ಷಣಿಕ ವರ್ಷದ ಆರಂಭದಿಂದಲೂ ತಾವು ಹಿಜಾಬ್ ಧರಿಸಿಯೇ ತರಗತಿಗಳಿಗೆ ಹೋಗುತ್ತಿದ್ದೆವು ಎಂದು ಅರ್ಜಿದಾರರು ಹೇಳಿದ್ದಾರೆ. ಅಲ್ಲದೆ ಕೆಲವು ಇತರೆ ಕಾಲೇಜುಗಳಲ್ಲಿ ಸಮವಸ್ತ್ರದ ಬಣ್ಣದ ಹಿಜಾಬ್ ಧರಿಸಿ ಬರಲು ಅನುಮತಿ ನೀಡಲಾಗಿದೆ ಎಂದು ಹೇಳಲಾಗಿದೆ. ಇದೀಗ ಶೈಕ್ಷಣಿಕ ವರ್ಷ ಮುಕ್ತಾಯವಾಗಲು ಎರಡು ತಿಂಗಳು ಮಾತ್ರ ಇರುವಾಗ ಅರ್ಜಿದಾರರನ್ನು ಹಿಜಾಬ್ ತೆಗೆದು ತರಗತಿಗೆ ಹಾಜರಾಗುವಂತೆ ನಿರ್ಬಂಧಿಸಲಾಗಿದೆ. ರಾಜ್ಯ ಸರ್ಕಾರ, ಶೈಕ್ಷಣಿಕ ವಾತಾವರಣದಲ್ಲಿ ಸಹೋದರತೆ ಮತ್ತು ಸಮಾನತೆ ತರಲು ಎಲ್ಲಾ ಧಾರ್ಮಿಕ ಅಸ್ಮಿತೆ(ಚಹರೆ)ಗಳನ್ನು ನಿರ್ಬಂಧಿಸಿರುವುದಾಗಿ ಹೇಳಿದೆ. ಆದರೆ, ಸರ್ಕಾರ ಹೇಳುವ ಈ ಸುಧಾರಣೆ ಜಾರಿಗೆ ಎರಡು ತಿಂಗಳಲ್ಲಿ ಮುಗಿಯಲಿರುವ ಈ ಶೈಕ್ಷಣಿಕ ವರ್ಷದ ಅಂತ್ಯದವರೆಗೆ ಕಾಯಲಾಗುವುದಿಲ್ಲವೆ? ಧಾರ್ಮಿಕ ಸೂಕ್ಷ್ಮ ವಿಷಯದಲ್ಲಿ ಚರ್ಚೆ, ಸಂವಾದ ಮತ್ತು ಯೋಚನೆಗೆ ಸಮಯಾವಕಾಶ ನೀಡದೆ ಏಕಾಏಕಿ ನಿರ್ಬಂಧ ಹೇರುವ ಸರ್ಕಾರದ ಕ್ರಮ ವಿದ್ಯಾರ್ಥಿಗಳಲ್ಲಿ ಆಘಾತ-ಗೊಂದಲಕ್ಕೆ ಕಾರಣವಾಗುವುದಿಲ್ಲವೆ? ಆದರೆ, ನ್ಯಾಯಾಲಯ ಈ ಆಯಾಮದಿಂದ ತನ್ನ ಮಧ್ಯಂತರ ಆದೇಶ ಸಾಧಕ-ಬಾಧಕವನ್ನು ತೂಗಿ ನೋಡಲೇ ಇಲ್ಲ!
ಹಾಗೇ ಈ ಆದೇಶದಿಂದಾಗಿ ಧಾರ್ಮಿಕ ಹಕ್ಕು ಮತ್ತು ಶಿಕ್ಷಣದ ಹಕ್ಕಿನ ಕುರಿತು ಮುಸ್ಲಿಂ ಯುವತಿಯರಿಗೆ ಆಯ್ಕೆಯ ಸಂದಿಗ್ಧತೆ ಸೃಷ್ಟಿಯಾಗಿದೆ. ಇದು ದೀರ್ಘಕಾಲೀನ ವ್ಯವಸ್ಥೆ ಮತ್ತು ನಂಬಿಕೆಗೆ ಆದ ಸರಿಪಡಿಸಲಾಗದ ಘಾಸಿ. ಮಧ್ಯಂತರ ಆದೇಶದಿಂದಾಗಿ ಮುಸ್ಲಿಂ ಯುವತಿಯರು ಹಿಜಾಬ್ ಮತ್ತು ಶಿಕ್ಷಣದ ನಡುವೆ ಎರಡರಲ್ಲಿ ಒಂದನ್ನು ಆಯ್ಕೆಮಾಡಿಕೊಳ್ಳಬೇಕಾಗಿದೆ. ಒಂದು ಹಕ್ಕು ಬೇಕಾದರೆ ಮತ್ತೊಂದು ಹಕ್ಕನ್ನು ತ್ಯಜಿಸಬೇಕಾದ ಸಂವಿಧಾನಿಕ ಹಕ್ಕಿನ ಆಯ್ಕೆ ಮತ್ತು ಬಿಟ್ಟುಕೊಡುವ ಪ್ರಶ್ನೆ ಅದು. ಈ ನಡುವೆ ತ್ರಿಸದಸ್ಯ ಪೀಠದ ನೇತೃತ್ವ ವಹಿಸಿದ್ದ ಮುಖ್ಯನ್ಯಾಯಮೂರ್ತಿಗಳು ವಿಚಾರಣೆಯ ವೇಳೆ ಮೌಖಿಕವಾಗಿ, “ಇದು ಕೆಲವೇ ದಿನಗಳ ಮಟ್ಟಿನ ವಿಷಯ” ಎಂದಿದ್ದಾರೆ. ಶಿಕ್ಷಣ ಪಡೆಯಬೇಕು ಎಂದರೆ ನೀವು ತಲತಲಾಂತರದಿಂದ ಅನುಸರಿಸಿಕೊಂಡುಬಂದಿರುವ ಆಚರಣೆ, ನಂಬಿಕೆಯನ್ನು ಕೆಲವು ದಿನಗಳ ಮಟ್ಟಿಗೆ ಬಿಟ್ಟುಬಿಡು ಎನ್ನಲಾದೀತೆ? ಸರ್ಕಾರಿ ಅನುದಾನಿತ ಶಿಕ್ಷಣ ಸೌಲಭ್ಯ ಪಡೆಯಬೇಕು ಎಂದರೆ ನೀವು ನಿಮ್ಮ ಧಾರ್ಮಿಕ ಮತ್ತು ಸಾಂಸ್ಕೃತಿಕ ಅಸ್ಮಿತೆಯನ್ನು ಒತ್ತೆ ಇಡಿ ಎಂದು ಹೇಳಬಹುದೆ? ಸಂವಿಧಾನ ಖಾತರಿಪಡಿಸಿರುವ ಹಕ್ಕುಗಳ ರಕ್ಷಣೆ ಮಾಡುವುದು ಮತ್ತು ಸಮತೋಲನ ಕಾಯುವುದು ಸಂವಿಧಾನಿಕ ಸಂಸ್ಥೆಯಾಗಿ ನ್ಯಾಯಾಂಗದ ಕರ್ತವ್ಯ. ಆದರೆ, ‘ಇಲ್ಲಿ ಇದು. ಇಲ್ಲವೇ ಅದು’ ಎಂದು ಎರಡು ಹಕ್ಕುಗಳ ನಡುವೆ ಆಯ್ಕೆಯ ಅನಿವಾರ್ಯತೆಯನ್ನು ನ್ಯಾಯಾಲಯವೇ ಸೃಷ್ಟಿಸಿದೆ ಎಂದು ಅವರು ವಿಶ್ಲೇಷಿಸಿದ್ದಾರೆ.
ಇನ್ನು ಶೈಕ್ಷಣಿಕ ಸಂಸ್ಥೆಗಳಲ್ಲಿ ಸಹಜ ಸ್ಥಿತಿ ಮರುಸ್ಥಾಪನೆ, ಶಾಂತಿಸುವ್ಯವಸ್ಥೆ ಮತ್ತಿತರ ಅಂಶಗಳನ್ನೂ ಮಧ್ಯಂತರ ಆದೇಶದ ವೇಳೆ ಕೋರ್ಟ್ ಪ್ರಸ್ತಾಪಿಸಿದೆ. ಆದರೆ, ಹಿಜಾಬ್ ಎಂಬುದು ಹೊಸದಾಗಿ ಬಂದ ಆಚರಣೆಯಲ್ಲ. ಹಾಗಾಗಿ ಹಿಜಾಬ್ ಧರಿಸಿಬರಲು ವಿದ್ಯಾರ್ಥಿನಿಯರಿಗೆ ಅವಕಾಶ ನೀಡಿಯೂ ಶಾಲಾ-ಕಾಲೇಜುಗಳಲ್ಲಿ ಸಹಜ ಸ್ಥಿತಿ ಕಾಯ್ದುಕೊಳ್ಳುವಂತೆ ಸರ್ಕಾರಕ್ಕೆ ನ್ಯಾಯಾಲಯ ಸೂಚನೆ ನೀಡಲಿಲ್ಲ. ಹಾಗೇ ಹಿಜಾಬ್ ನಿಷೇಧದ ರಾಜ್ಯ ಸರ್ಕಾರದ ಆದೇಶ ಮುಸ್ಲಿಮರು ಹಕ್ಕುಗಳನ್ನು ಮೊಟಕುಗೊಳಿಸುವ ಮತ್ತು ಅವರನ್ನು ಸದಾ ಭಯ ಮತ್ತು ಬೀತಿಯಲ್ಲೇ ಬದುಕುವಂತೆ ಮಾಡುವ ಹಿಂದುತ್ವ ರಾಜಕಾರಣದ ಅಜೆಂಡಾದ ಭಾಗಗಳಾಗಿ ಜಾರಿಗೆ ಬಂದ ಸಿಎಎ, ಲವ್ ಜಿಹಾದ್, ಗೋಹತ್ಯೆ ನಿಷೇಧದಂತಹ ಕಾನೂನುಗಳ ಮುಂದುವರಿದ ಭಾಗವಾಗಿದೆ. ಆ ಹಿನ್ನೆಲೆಯಲ್ಲಿಯೂ ಈ ಮಧ್ಯಂತರ ಆದೇಶ ಆಘಾತಕಾರಿ ಎಂದು ಅವರು ಹೇಳಿದ್ದಾರೆ.
ಒಟ್ಟಾರೆಯಾಗಿ, ಸಂವಿಧಾನದ ನೆಲೆಯಲ್ಲಿ ಪ್ರಶ್ನಿಸಿದ್ದ ಸರ್ಕಾರ ಮತ್ತು ಕಾಲೇಜು ಸಮಿತಿಯ ಆದೇಶವನ್ನು ಜಾರಿಗೊಳಿಸುವ ಕೆಲಸ ಮಾಡುವ ಮೂಲಕ ವಿದ್ಯಾರ್ಥಿಗಳು ತನ್ನ ಮೇಲೆ ಇಟ್ಟ ನಂಬಿಕೆ ಮತ್ತು ವಿಶ್ವಾಸವನ್ನು ನ್ಯಾಯಾಲಯ ಹುಸಿ ಮಾಡಿದೆ. ಸರ್ಕಾರಕ್ಕೆ ಕೇಳಬೇಕಾದ ಪ್ರಶ್ನೆಗಳನ್ನು ಕೇಳುವಲ್ಲಿ ಮತ್ತು ಪ್ರಕರಣದ ವಿಷಯದಲ್ಲಿ ಪರಿಗಣಿಸಬೇಕಾದ ಅಂಶಗಳನ್ನು ಪರಿಗಣಿಸುವಲ್ಲಿ ವಿಫಲವಾಗುವ ಮೂಲಕ ನ್ಯಾಯಾಲಯ, ತನ್ನ ಈ ಮಧ್ಯಂತರ ಆದೇಶದ ಮೂಲಕ ವ್ಯಕ್ತಿಗಳ ಮೌಲಭೂತ ಹಕ್ಕುಗಳನ್ನೇ ಶೈತ್ಯಾಗಾರಕ್ಕೆ ತಳ್ಳಿದೆ. ಈ ಆದೇಶವನ್ನು ಆದಷ್ಟು ಬೇಗ ಸರಿಪಡಿಸದೇ ಹೋದರೆ, ನಮ್ಮ ಇಡೀ ನ್ಯಾಯಾಂಗ ವ್ಯವಸ್ಥೆಯ ಮೇಲೆ ಅಳಿಸಲಾಗದ ಕಪ್ಪು ಚುಕ್ಕೆಯಾಗಿ ಉಳಿಯಲಿದೆ ಎಂದು ಮನು ಸಬಾಸ್ಟಿಯನ್ ಆತಂಕ ವ್ಯಕ್ತಪಡಿಸಿದ್ದಾರೆ.