ಹಿಂದೂ-ಮುಸ್ಲಿಂ ಕುರಿತ ಯಾವುದೇ ವಿವಾದ ರಾಜ್ಯದಲ್ಲಿ ಮುನ್ನೆಲೆಗೆ ಬಂದರೂ ಒಂದು ಹೆಜ್ಜೆ ಮುಂದೇ ಬಂದು ಮಾತನಾಡುತ್ತಿದ್ದವರಲ್ಲಿ ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆ ಕೂಡ ಒಬ್ಬರು. ಈಗ ತಾವೇ ಸಂಸದರಾಗಿ ಆಯ್ಕೆಯಾದ ಉಡುಪಿ – ಚಿಕ್ಕಮಗಳೂರು ಕ್ಷೇತ್ರದಲ್ಲೇ ಹಿಜಾಬ್ ವಿವಾದ ಆರಂಭವಾಗಿ ದೇಶಾದ್ಯಂತ ಚರ್ಚೆ ನಡೆಯುತ್ತಿದ್ದರೂ ಈವರೆಗೂ ಶೋಭಾ ಮಾತ್ರ ತುಟಿ ಬಿಚ್ಚದಿರುವುದು ಆಶ್ಚರ್ಯ ಮೂಡಿಸಿದೆ.
ಶೋಭಾ ಅವರ ಕ್ಷೇತ್ರದಿಂದಲೇ ಈ ಹಿಜಾಬ್ ವಿವಾದ ಆರಂಭವಾಗಿ ಈಗ ರಾಜ್ಯವನ್ನು ಆವರಿಸಿದೆ. ಕೆಲವು ಜಿಲ್ಲೆಗಳಲ್ಲಿ ಹಿಜಾಬ್ ಹಾಗೂ ಕೇಸರಿ ಶಾಲು ಸತ್ತ ವಿದ್ಯಾರ್ಥಿಗಳ ಮಧ್ಯೆ ಘರ್ಷಣೆ ನಡೆದು, ಕಲ್ಲು ತೂರಾಟಗಳು ಕೂಡ ನಡೆದಿವೆ. ಇದರಿಂದ ಹಲವೆಡೆ ವಿದ್ಯಾರ್ಥಿಗಳಿಗೆ ಗಂಭೀರ ಗಾಯಗಳಾಗಿವೆ. ಇಷ್ಟೆಲ್ಲಾ ದುರ್ಘಟನೆ ನಡೆದಿದ್ದರೂ ಸಂಸದೆ ಶೋಭಾ ಮಾತ್ರ ಈ ವಿವಾದದ ಬಗ್ಗೆ ಈವರೆಗೂ ಮಾತನಾಡಿಲ್ಲ!
ಬಿಜೆಪಿಯಲ್ಲಿ ಮೊದಲ ಬಾರಿಗೆ ಒಂದು ರಾಜ್ಯದ ಉಸ್ತುವಾರಿಯಾಗಿ ಮಹಿಳೆಯನ್ನು ನೇಮಿಸಿದ್ದು ಸಂಸದೆ ಶೋಭಾ ಕರಂದ್ಲಾಜೆ ಅವರನ್ನು. ಅವರೀಗ ಉತ್ತರ ಪ್ರದೇಶ ಚುನಾವಣೆಯಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಕರ್ನಾಟಕದಲ್ಲಿ ಹಿಜಾಬ್ ವಿಚಾರ ಭುಗಿಲೆದ್ದು ತಮ್ಮ ಕ್ಷೇತ್ರದಲ್ಲೇ ಅಶಾಂತಿ ವಾತಾವರಣ ನಿರ್ಮಾಣವಾಗಿದೆ. ವಾಸ್ತವ ಹೀಗರಲೂ ಕೇಂದ್ರದಲ್ಲಿ ಕೃಷಿ ಮತ್ತು ರೈತ ಕಲ್ಯಾಣ ಕೇಂದ್ರದ ರಾಜ್ಯ ಸಚಿವೆಯಾಗಲು ಉಡುಪಿ – ಚಿಕ್ಕಮಗಳೂರು ಕ್ಷೇತ್ರದ ಮತದಾರರೇ ಕಾರಣ ಎಂಬ ಅಭಿಮಾನವನ್ನೇ ಶೋಭಾ ಮರೆತ್ರಾ? ಅಷ್ಟಕ್ಕೂ ಕರ್ನಾಟಕ ರಾಜ್ಯಕ್ಕಿಂತ ಅವರಿಗೆ ಉತ್ತರ ಪ್ರದೇಶವೇ ಮುಖ್ಯವಾಯಿತೇ?
ಒಂದು ಸಮಯದಲ್ಲಿ ಹಿಂದೂ – ಮುಸ್ಲಿಂ ಕುರಿತು ಯಾವುದೇ ವಿಚಾರ ಬಂದರೂ ತಕ್ಷಣವೇ ಶೋಭಾ ಪ್ರತಿಕ್ರಿಯಿಸುತ್ತಿದ್ದರು. ದೊಡ್ಡ ಮಟ್ಟದಲ್ಲಿ ಹಿಜಾಬ್ ರಾಜ್ಯದಲ್ಲಿ ವಿವಾದವಾಗಿ ಹೈಕೋರ್ಟ್ ಅಂಗಳಕ್ಕೆ ಬಂದಿದೆ. ಇಡೀ ದೇಶವೇ ಕರ್ನಾಟಕ ಹಿಜಾಬ್ ಸುತ್ತ ಚರ್ಚಿಸುತ್ತಿರುವಾಗ ಶೋಭಾ ಮಾತ್ರ ಮೌನವಾಗಿರುವುದು ವಿಪರ್ಯಾಸ! ಶೋಭಾ ಅವರ ಮೌನದ ನಡೆಕಂಡು ಉಡುಪಿ – ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಸಾರ್ವಜನಿಕರೇ ಶೋಭಾ ವಿರುದ್ಧ ಅಸಮಾಧಾನದ ಮಾತುಗಳನ್ನಾಡುತ್ತಿದ್ದಾರೆ.
ಮುಸ್ಲಿಂ ಹೆಣ್ಣು ಮಕ್ಕಳಿಗೆ ರಾಜ್ಯದಲ್ಲಿ ಶಿಕ್ಷಣ ವಂಚಿತರನ್ನಾಗಿ ಮಾಡಲಾಗುತ್ತಿದೆ ಎನ್ನುವ ಆರೋಪಗಳು ಹಿಜಾಬ್ ಸುತ್ತ ಹರಡಿಕೊಂಡಿವೆ. ಒಬ್ಬ ಮಹಿಳಾ ಪ್ರತಿನಿಧಿಯಾಗಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಧ್ವನಿ ಎತ್ತಬೇಕಾಗಿರುವುದು ಶೋಭಾ ಕರಂದ್ಲಾಜೆ ಅವರ ಜವಾಬ್ದಾರಿ. ಇನ್ನಾದರೂ ತಮ್ಮ ಮೌನ ಮುರಿಯುತ್ತಾರಾ ಎಂಬುದನ್ನು ಕಾದುನೋಡಬೇಕು.