ಬಡ್ಡಿದರ ಏರಿಕೆ ಆಗಲಿದೆಯೇ? ಎಷ್ಟು ಏರಿಕೆ ಆಗಲಿದೆ? ಎಂಬುದು ಹಣಕಾಸು ಮಾರುಕಟ್ಟೆಯಲ್ಲೀಗ ಚಾಲ್ತಿಯಲ್ಲಿರುವ ಪ್ರಶ್ನೆಗಳು. ಭಾರತೀಯ ರಿಸರ್ವ್ ಬ್ಯಾಂಕಿನ ಹಣಕಾಸು ನೀತಿ ಸಮಿತಿಯ ದ್ವೈಮಾಸಿಕ ಸಭೆ ಫೆಬ್ರವರಿ 8-10ರವರೆಗೆ ಮೂರು ದಿನಗಳ ಕಾಲ ನಡೆಯಲಿದ್ದು, ಹಣಕಾಸು ನೀತಿ ಪರಾಮರ್ಶೆ ಮಾಡಲಿದೆ. ಬಡ್ಡಿದರ ಯಥಾಸ್ಥಿತಿ ಕಾಯ್ದುಕೊಳ್ಳಬೇಕೋ ಅಥವಾ ಏರಿಕೆ ಮಾಡಬೇಕೋ ಎಂಬ ನಿರ್ಧಾರವನ್ನು ಫೆ.10ರಂದು ಗವರ್ನರ್ ಶಕ್ತಿಕಾಂತ ದಾಸ್ ಪ್ರಕಟಿಸಲಿದ್ದಾರೆ.
ಸದ್ಯಕ್ಕೆ ಬಡ್ಡಿದರ ಇಳಿಯುವ ಯಾವುದೇ ಸಾಧ್ಯತೆಯಂತೂ ಇಲ್ಲವೇ ಇಲ್ಲ. ಏಕೆಂದರೆ ಕಳೆದ 21 ತಿಂಗಳಿಂದಲೂ ಬಡ್ಡಿದರ ಸಾರ್ವಕಾಲಿಕ ಕನಿಷ್ಠಮಟ್ಟದಲ್ಲೇ ಇದೆ. ಸುಧೀರ್ಘ ಅವಧಿಗೆ ಕನಿಷ್ಠ ಮಟ್ಟದ ಬಡ್ಡಿದರ ಕಾಯ್ದುಕೊಳ್ಳುವುದು ಅತ್ಯಪರೂಪ. ಈಗ ಕೋವಿಡ್ ಸಂಕಷ್ಟದಿಂದ ಆರ್ಥಿಕತೆ ಪಾರಾಗಲಿ ಎಂಬ ಕಾರಣಕ್ಕೆ ಕನಿಷ್ಠ ಮಟ್ಟದ ಬಡ್ಡಿದರ ಕಾಯ್ದುಕೊಳ್ಳಲಾಗಿದೆ.
ಈಗಾಗಲೇ ಕಡಮೆ ಬಡ್ಡಿದರದ ಪರಿಣಾಮ ಮಾರುಕಟ್ಟೆಯಲ್ಲಿ ನಗದು ಹರಿವು ಹೆಚ್ಚಿದ್ದು, ಹಣದುಬ್ಬರ ಏರುಹಾದಿಯಲ್ಲಿ ಸಾಗಿದೆ. ಚಿಲ್ಲರೆ ದರ ಹಣದುಬ್ಬರು ಶೇ.5.6ರಷ್ಟಿದ್ದು, ಸಗಟು ದರ ಹಣದುಬ್ಬರವು ಶೇ.13.5ರಷ್ಟಿದೆ. ಹಣದುಬ್ಬರ ಈ ಪ್ರಮಾಣದಲ್ಲಿ ಏರಿಕೆಯಾಗಿದ್ದಾಗಲೂ ಕನಿಷ್ಠ ಪ್ರಮಾಣದ ಬಡ್ಡಿದರ ಕಾಯ್ದುಕೊಳ್ಳುವುದು ಜಾಣತನವಲ್ಲ.
ಈ ಕಾರಣಕ್ಕಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಇಕ್ಕಟ್ಟಿಗೆ ಸಿಲುಕಿದೆ. ತಕ್ಷಣ ಬಡ್ಡಿದರ ಏರಿಕೆ ಮಾಡಿದರೆ, ಚೇತರಿಕೆಯ ಹಾದಿಯಲ್ಲಿರುವ ಆರ್ಥಿಕತೆ ಮತ್ತೆ ತಟಸ್ಥವಾಗಬಹುದು ಅಥವಾ ಹಿಮ್ಮುಖವಾಗಿ ಚಲಿಸಲೂ ಬಹುದು. ಒಂದು ವೇಳೆ ಬಡ್ಡಿದರ ಏರಿಕೆ ಮಾಡದೇ ಹೋದರೆ, ಹಣದುಬ್ಬರ ಮತ್ತಷ್ಟು ಏರಬಹುದು. ಚಿಲ್ಲರೆ ದರ ಹಣದುಬ್ಬರ ಶೇ.6ರ ಗಡಿದಾಟಲೂ ಬಹುದು. ಸಗಟುದರ ಹಣದುಬ್ಬರ ಶೇ.15ರ ಆಜುಬಾಜಿಗೂ ಜಿಗಿಯಬಹುದು.

ಆರ್ಬಿಐ ಇಕ್ಕಟ್ಟಿನಲ್ಲಿ ಏಕೆ ಸಿಲುಕಿದೆ ಎಂದರೆ- ಕಳೆದ ಕಳೆದ ನವೆಂಬರ್ ತಿಂಗಳಿಂದ ಪೆಟ್ರೋಲ್, ಡಿಸೇಲ್ ದರ ತಟಸ್ಥವಾಗಿದೆ. ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳ ಚುನಾವಣೆ ಘೋಷಣೆಯಾಗುವ ಮುನ್ನವೇ ಕೇಂದ್ರದ ಮೋದಿ ಸರ್ಕಾರ ಪೆಟ್ರೋಲ್ ಮತ್ತು ಡಿಸೇಲ್ ದರ ಏರಿಕೆಗೆ ತಡೆಯೊಡ್ಡಿದೆ. ಚುನಾವಣೆ ಮುಗಿಯುವವರೆಗೂ ದರ ಏರಿಕೆಯಾಗುವುದಿಲ್ಲ. ಆದರೆ, ಚುನಾವಣೆ ಮುಗಿದ ನಂತರ ತೀವ್ರ ಪ್ರಮಾಣದಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ದರ ಏರಲಿದೆ.
ಏಕೆಂದರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದರ ಜಿಗಿದಿದೆ. ಈಗಾಗಲೇ ಪ್ರತಿ ಬ್ಯಾರೆಲ್ ಗೆ 80 ಡಾಲರ್ ಗಡಿದಾಟಿದೆ. ಹೀಗಾಗಿ ದರ ಏರಿಕೆ ಅನಿವಾರ್ಯವಾಗುತ್ತದೆ. ಮತ್ತು ಎಷ್ಟು ತೀವ್ರವಾಗಿ ಏರುತ್ತದೆ ಎಂದರೆ ಏಪ್ರಿಲ್ ತಿಂಗಳಲ್ಲಿ ಹಣದುಬ್ಬರ ಪ್ರಮಾಣ ಶೇ.6.5ರಷ್ಟಕ್ಕೆ ಜಿಗಿದರೂ ಅಚ್ಚರಿಯಿಲ್ಲ. ಈ ಕಾರಣಗಳಿಗಾಗಿ ಆರ್ಬಿಐ ಬಡ್ಡಿದರ ಏರಿಕೆ ಮಾಡಿ ಹಣದುಬ್ಬರ ನಿಯಂತ್ರಿಸಬೇಕೋ ಅಥವಾ ಬಡ್ಡಿದರ ಯಥಾಸ್ಥಿತಿ ಕಾಯ್ದುಕೊಂಡು ಆರ್ಥಿಕತೆ ಚೇತರಿಕೆಗೆ ಮತ್ತಷ್ಟು ಕಾಲವಕಾಶ ಕೊಡಬೇಕೋ ಎಂಬ ದ್ವಂದ್ವದಲ್ಲಿದೆ. ಈ ಹಂತದಲ್ಲಿ ಆರ್ಬಿಐ ಯಾವ ನಿರ್ಧಾರ ಕೈಗೊಂಡರೂ ಅದರಿಂದ ವ್ಯತಿರಿಕ್ತ ಪರಿಣಾಮಗಳಾಗುತ್ತವೆ.
ಹಾಲಿ ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಕೇಂದ್ರ ಸರ್ಕಾರದ ಅಣತಿಯಂತೆಯೇ ನಿರ್ಧಾರ ಕೈಗೊಳ್ಳುವವರು. ಹೀಗಾಗಿ ಪ್ರಧಾನಿ ಸಚಿವಾಲಯ ಏನು ಸಂದೇಶ ನೀಡುತ್ತದೋ ಅದನ್ನಾಧರಿಸಿಯೇ ನಿರ್ಧಾರ ಕೈಗೊಳ್ಳುತ್ತಾರೆಂಬುದು ಗುಟ್ಟಾಗಿ ಏನೂ ಉಳಿದಿಲ್ಲ.
ಇವೆಲ್ಲದರ ನಡುವೆಯೂ ಬಡ್ಡಿದರ ಏರಿಕೆ ಕುರಿತಂತೆ ಹಣಕಾಸು ಮಾರುಕಟ್ಟೆಯಲ್ಲೇ ಭಿನ್ನ ಅಭಿಪ್ರಾಯಗಳಿವೆ. ಕೆಲವು ಅರ್ಥಶಾಸ್ತ್ರಜ್ಞರು ಆರ್ಥಿಕತೆ ಚೇತರಿಕೆಗಾಗಿ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂಬ ವಾದ ಮಂಡಿಸಿದರೆ, ಹಣದುಬ್ಬರ ಈಗಾಗಲೇ ಅಪಾಯಕಾರಿ ಮಟ್ಟ ಮುಟ್ಟಿರುವುದರಿಂದ ಬಡ್ಡಿದರ ಏರಿಸಿ ನಗದು ಹರಿವಿಗೆ ಕಡಿವಾಣ ಹಾಕಬೇಕು ಎಂದು ಮತ್ತೆ ಕೆಲವರು ವಾದಿಸುತ್ತಾರೆ.

ಕೆಲವರು ರೆಪೊದರ ಯಥಾಸ್ಥಿತಿ ಕಾಯ್ದುಕೊಂಡು ರಿವರ್ಸ್ ರೆಪೊ ದರವನ್ನು ಹೆಚ್ಚಿಸುವ ಸಾಧ್ಯತೆಯನ್ನು ಪ್ರತಿಪಾದಿಸುತ್ತಾರೆ. ಸದ್ಯದ ಪರಿಸ್ಥಿತಿಯಲ್ಲಿ ರಿವರ್ಸ್ ರೆಪೊದರ ಏರಿಕೆ ಮಾಡುವುದೇ ಸೂಕ್ತ ಎಂಬುದು ಇವರ ವಾದ. ಸದ್ಯ ರೆಪೊ ದರವು ಶೇ.4ರಷ್ಟಿದ್ದರೆ, ರಿವರ್ಸ್ ರೆಪೊ ದರವು ಶೇ.3.45 ರಷ್ಟಿದೆ. ಇದನ್ನು ಶೇ.3.75ಕ್ಕೆ ಏರಿಸುವ ಸಾಧ್ಯತೆಯೂ ಇದೆ.
ದೇಶದಲ್ಲಿ ಆರ್ಥಿಕತೆ ಚೇತರಿಕೆಯ ಹಾದಿಯಲ್ಲಿದೆ ಎಂಬ ಕಾರಣಕ್ಕೆ ಬಡ್ಡಿದರ ಏರಿಕೆ ಮಾಡುವ ನಿರೀಕ್ಷೆ ಹಣಕಾಸು ಮಾರುಕಟ್ಟೆಯಲ್ಲಿದೆ. ಬಡ್ಡಿದರ ಏರಿಕೆಯಾದರೆ ಮತ್ತೆ ಸಾಲದ ಮೇಲಿನ ಬೇಡಿಕೆ ತಗ್ಗಿ, ಆರ್ಥಿಕ ಚೇತರಿಕೆಗೆ ಹಿನ್ನಡೆಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಕೆಲ ಅರ್ಥಶಾಸ್ತ್ರಜ್ಞರು.
ಅಂತಿಮವಾಗಿ ಈಗಾಗಲೇ ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರು, ಬಡ್ಡಿದರ ಏರಿಕೆ ಮಾಡಿದರೆ, ಈಗಾಗಲೇ ಮಾಡಿರುವ ಸಾಲಗಳ ಮೇಲಿನ ಇಎಂಐ (ಮಾಸಿಕ ಸಮಾನ ಕಂತು) ಹೆಚ್ಚಳವಾಗಿ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದ್ದಾರೆ.